Categories
Uncategorized

ಸಂಘಟಕ ಮಧುಸೂದನ್ ಅವರಿಗೆ ಒಲಿದ ಸೂಡಾ ಅಧ್ಯಕ್ಷ ಹುದ್ದೆ! – ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ(ಸೂಡಾ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ – ವಿದ್ಯಾರ್ಥಿ ದೆಸೆಯಿಂದಲೇ ಎನ್ಎಸ್ ಯುಐ ಸಂಘಟನೆ

ಶಿವಮೊಗ್ಗ: ಎನ್ಎಸ್ ಯುಐ ಮಧುಸೂದನ್ ಎಂದೇ ಖ್ಯಾತಿ ಪಡೆದಿರುವಂತಹ ಕಾಂಗ್ರೆಸ್ ನಾಯಕರಾದ ಮಧುಸೂಧನ್ ಸಿ.ಜೆ. ಅವರು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಧಿಕಾರ ಸ್ವೀಕಾರ ಮಾಡಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿರುವ ಮಧುಸೂದನ್, ಎನ್ಎಸ್ ಯುಐ ಮತ್ತು ಯುವ ಕಾಂಗ್ರೆಸ್ ನ ವಿವಿಧ ಹಂತಗಳಲ್ಲಿ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿದ ಅನುಭವ ಉಳ್ಳವರಾಗಿದ್ದಾರೆ.
ಎಸ್ಎಸ್ಎಲ್ ಸಿ ವ್ಯಾಸಂಗದ ಸಮಯದಲ್ಲಿಯೇ ದೇವೇಂದ್ರಪ್ಪನವರ ಪ್ರಭಾವದಿಂದ ಎನ್ಎಸ್ ಯುಐ ಗೆ ಮಧುಸೂದನ್ ಅವರು ಸೇರ್ಪಡೆಗೊಂಡರು. ಬಳಿಕ ಶಿವಮೊಗ್ಗದಲ್ಲಿ ಹಲವಾರು ವಿದ್ಯಾರ್ಥಿಗಳ ಸಂಘಟನೆಗಳನ್ನು ಪ್ರಬಲಗೊಳಿಸುವ ಮೂಲಕ ಎನ್ಎಸ್ ಯುಐ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಹೀಗೆ ಸಾಮಾನ್ಯ ವಿದ್ಯಾರ್ಥಿಯಾಗಿ ಸಂಘಟನೆಗೆ ಪದಾರ್ಪಣೆ ಮಾಡಿದ ಮಧುಸೂದನ್ ಅವರು ಎನ್ಎಸ್ ಯುಐ ನ ರಾಜ್ಯ ಮಟ್ಟದ ನಾಯಕರಾಗಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಹಾಗೂ ರಾಜ್ಯ ಸಂಯೋಜಕರಾಗಿ ನಿರಂತರ ಸೇವೆಯನ್ನು ಸಲ್ಲಿಸಿದರ ಫಲವಾಗಿ ಇಂದು ಸೂಡಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಂದು ಆಡಳಿತಾತ್ಮಕ ಜವಾಬ್ದಾರಿಯತ್ತ ಮುಖ ಮಾಡಿದ್ದಾರೆ.
ಮಧು ಸೂಧನ್ ಅವರಿಗೆ ಪಕ್ಷದ ಪ್ರಮುಖರು, ಯುವ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Categories
Uncategorized

•ನರಸಿಂಹರಾಜಪುರ: ಶಿಕಾರಿಗೆ ತೆರಳಿದ್ದ ವೇಳೆ ಗುಂಡು ಸಾವು •ಸಾಗರ: ಕೆಲಸವಿಲ್ಲ, ಸಾಲದ ಒತ್ತಡ; ವ್ಯಕ್ತಿ ಆತ್ಮಹತ್ಯೆಗೆ ಶರಣು •ಶಿವಮೊಗ್ಗ: ನೀರಿನ ಡ್ರಮ್ ಕೆಳಗೆ ಅಡಗಿದ್ದ ವಿಷಪೂರಿತ ಹಾವು – ಸಾಗರ: ಲಗೇಜ್ ಆಟೋ ಡಿಕ್ಕಿ: 8 ವರ್ಷದ ಬಾಲಕ ಸಾವು

ಚಿಕ್ಕಮಗಳೂರು: ಶಿಕಾರಿಗೆಂದು ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ, ಕಡೇಮನೆ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಅದೇ ಗ್ರಾಮದ ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ. ಚೇತನ್ ತನ್ನ ಆರು ಮಂದಿ ಸ್ನೇಹಿತರೊಂದಿಗೆ ರಾತ್ರಿಯ ಸಮಯ ಶಿಕಾರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಯಾರೋ ಶಿಕಾರಿಗೆಂದು ಹೊಡೆದ ಗುಂಡು ಆಕಸ್ಮಿಕವಾಗಿ ಚೇತನ್ ಅವರಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ತಕ್ಷಣ ಅವರ ಜೊತೆಗಿದ್ದ ಸ್ನೇಹಿತರು ಚೇತನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ, ಆಸ್ಪತ್ರೆ ತಲುಪುವುದರೊಳಗಾಗಿ ಚೇತನ್ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದರು ಎನ್ನುವ ಸಂಗತಿ ತಿಳಿದುಬಂದಿದೆ. ಚೇತನ್ ಅವರನ್ನು ಆಸ್ಪತ್ರೆಗೆ ಕರೆದು ತಂದ ಮೂವರು ಸ್ನೇಹಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಉಳಿದ ಮೂವರು ಸ್ನೇಹಿತರು ಘಟನೆ ನಡೆದ ಕೂಡಲೇ ಗಾಬರಿಯಿಂದ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

•ಸಾಗರ: ಕೆಲಸವಿಲ್ಲ, ಸಾಲದ ಒತ್ತಡ; ವ್ಯಕ್ತಿ ಆತ್ಮಹತ್ಯೆಗೆ ಶರಣು

ಸಾಗರ: ನಿರುದ್ಯೋಗ, ಸಾಲದ ಒತ್ತಡದಿಂದ ಮಾನಸಿಕವಾಗಿ ನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಆನಂದಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಹೊಸಕೊಪ್ಪ ಗ್ರಾಮದ ಚಾಂದ್ ಪಾಷಾ ಎಂದು ಗುರುತಿಸಲಾಗಿದೆ. ಚಾಂದ್ ಪಾಷಾ ಅವರು ಜೀವನ ನಿರ್ವಹಣೆಗಾಗಿ ಕೆಲವು ಕಡೆ ಕೈಸಾಲ ಮಾಡಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಸೂಕ್ತವಾಗಿ ಕೆಲಸವು ಇಲ್ಲದ ಕಾರಣ ಆದಾಯದ ಕೊರತೆಯ ಕಾರಣದಿಂದಾಗಿ ಸಾಲವನ್ನು ತೀರಿಸಲು ಕೂಡ ಸಾಧ್ಯವಾಗದೆ ಮಾನಸಿಕವಾಗಿ ನೊಂದಿದ್ದರು ಎನ್ನುವ ಮಾಹಿತಿ ಲಭಿಸಿದೆ. ಸೆಪ್ಟೆಂಬರ್ 30ರ ಬುಧವಾರದಂದು ಮನೆಯಿಂದ ಹೊರಟ ಚಾಂದ್ ಪಾಷಾ ಅವರು, ರಾತ್ರಿಯಾದರೂ ಮನೆಗೆ ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ, ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಗುರುವಾರ ಬೆಳಿಗ್ಗೆ ಚಂಪಕರಸ ಕೆರೆಯ ಬಳಿ ಚಾಂದ್ ಪಾಷಾ ಅವರ ಮೃತದೇಹ ಪತ್ತೆಯಾಗಿದೆ.

•ಶಿವಮೊಗ್ಗ: ನೀರಿನ ಡ್ರಮ್ ಕೆಳಗೆ ಅಡಗಿದ್ದ ವಿಷಪೂರಿತ ಹಾವು

ಶಿವಮೊಗ್ಗ: ನೀರಿನ ಡ್ರಮ್ ಕೆಳಗೆ ವಿಷಪೂರಿತ ಹಾವೊಂದು ಸೇರಿಕೊಂಡ ಘಟನೆ, ಗಾಡಿಕೊಪ್ಪದಲ್ಲಿನ ಮನೆಯೊಂದರಲ್ಲಿ ನಡೆದಿದೆ. ಮನೆಯವರು ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು 4 ಅಡಿ ಉದ್ದದ ವಿಷಪೂರಿತ ಕೊಳಕುಮಂಡಲ ಹಾವನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಅದನ್ನು ಸೆರೆಹಿಡಿದು, ಕಾಡಿಗೆ ತೆಗೆದುಕೊಂಡು ಹೋಗಿ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಬೇಸಿಗೆ ಹೆಚ್ಚಾಗಿರುವುದರಿಂದ ಹಾವುಗಳ ಬಗ್ಗೆ ಜಾಗೃತಿ ಇರಲಿ.

ಸಾಗರ: ಲಗೇಜ್ ಆಟೋ ಡಿಕ್ಕಿ: 8 ವರ್ಷದ ಬಾಲಕ ಸಾವು

ಸಾಗರ: ರಸ್ತೆ ಬದಿಯಲ್ಲಿ ನಿಂತಿದ್ದ 8 ವರ್ಷದ ಬಾಲಕನಿಗೆ ಲಗೇಜ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದಾರುಣ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪ ನಡೆದಿದೆ.
ಸೆಪ್ಟೆಂಬರ್ 27ರಂದು ಸಂಜೆ ಆನಂದಪುರ–ಶಿಕಾರಿಪುರ ರಸ್ತೆಯ ದಾಸಕೊಪ್ಪ ಗ್ರಾಮದ ಪಾಂಡುರಂಗ ದೇವಾಲಯದ ಬಳಿ ಈ ಅಪಘಾತ ಸಂಭವಿಸಿತ್ತು. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ರಸ್ತೆ ಬದಿಯಲ್ಲಿದ್ದ ಅಂಗಡಿ ಬಳಿ ನಿಂತಿದ್ದ ತನ್ಮಯ್ (8), ತಂದೆ ಪ್ರಶಾಂತ್ ಕೃಷ್ಣಮೂರ್ತಿ ಎಂಬ ಬಾಲಕನಿಗೆ ಆಟೋದ ಗ್ರಿಲ್ ತಾಗಿ ಗಂಭೀರ ಗಾಯಗಳಾಗಿತ್ತು. ಅಪಘಾತದಲ್ಲಿ ಬಾಲಕನ ಬಲ ಹಣೆಯ ಭಾಗ ಹಾಗೂ ಬಲಕೈಗೆ ಗಂಭೀರ ಗಾಯಗಳಾಗಿದ್ದು, ಹಣೆಯ ಭಾಗದಲ್ಲಿ ತೆರೆದ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣ ಬಾಲಕನನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕನ ಚಿಕಿತ್ಸೆಗಾಗಿ ಆನಂದಪುರ ಪೊಲೀಸರು ಹಾಗೂ ಸಾರ್ವಜನಿಕರು ತಮ್ಮಿಂದಾದಷ್ಟು ಆರ್ಥಿಕ ನೆರವು ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

 

.

Categories
Uncategorized

•ಕಡಬ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ •ಸುಳ್ಯ: ತಲೆಮರೆಸಿಕೊಂಡಿದ್ದ ಆರೋಪಿ ಸಿಕ್ಕಿ ಬಿದ್ದ! •ಬೆಳ್ತಂಗಡಿ: ಕೃಷಿ ತೋಟಕ್ಕೆ ಕಾಡಾನೆ ದಾಳಿ •ಬೈಂದೂರು: ಕಾರಿನಲ್ಲಿ ದನಗಳನ್ನು ತುಂಬಿ ಸಾಗಾಟ!

ಕಡಬ: ಕಾಣೆಯಾಗಿದ್ದ ಯುವಕನೊಬ್ಬ ಬುಧವಾರದಂದು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಸುಬ್ರಹ್ಮಣ್ಯ ಗ್ರಾಮದ ಕಲ್ಲಪಣೆ ನಿವಾಸಿ ರಾಮು ಎಂದು ಗುರುತಿಸಲಾಗಿದೆ. ರಾಮು ಅವರು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಅವರ ಪತ್ನಿ, ಸೆಪ್ಟೆಂಬರ್ 26ರ ಶನಿವಾರದಂದು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ರಾಮು ಪಿಟ್ಸ್ ಕಾಯಿಲೆಗೆ ತುತ್ತಾಗಿದ್ದು, ಕುಡಿತದ ಚಟವನ್ನು ಸಹ ಹೊಂದಿದ್ದರು ಎನ್ನಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ನಡೆಸಿದಾಗ ಸೆಪ್ಟೆಂಬರ್ 30ರ ಬುಧವಾರದಂದು ದರ್ಪಣತೀರ್ಥ ನದಿಯಲ್ಲಿ ರಾಮು ಅವರ ಶವ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಇದರಿಂದಾಗಿ ನದಿಗೆ ಬಿದ್ದು ಸಾವನ್ನಪ್ಪಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ಆ್ಯಂಬುಲೆನ್ಸ್ ಅಚ್ಚು ಸೇರಿದಂತೆ ಇತರರ ಸಹಕಾರದೊಂದಿಗೆ ರಾಮು ಅವರ ಶವವನ್ನು ಮೇಲಕ್ಕೆ ತರಲಾಯಿತು.

•ಸುಳ್ಯ: ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆ

ಸುಳ್ಯ: 2021ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ವ್ಯಕ್ತಿಯು ತಲೆಮರಿಸಿಕೊಂಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಕನಕಮಜಲು ನಿವಾಸಿ ಸುರೇಂದ್ರ ಎಂದು ಗುರುತಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಸುರೇಂದ್ರನನ್ನು ಪೊಲೀಸರು ಆಲಟ್ಟಿ ಎನ್ನುವಲ್ಲಿ ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.

•ಬೆಳ್ತಂಗಡಿ: ಕೃಷಿ ತೋಟಕ್ಕೆ ಕಾಡಾನೆ ದಾಳಿ

ಬೆಳ್ತಂಗಡಿ: ಕಾಡಾನೆಗಳು ಕೃಷಿ ತೋಟಕ್ಕೆ ನುಗ್ಗಿ ದಾಳಿ ನಡೆಸಿದ ಘಟನೆ, ಶಿಶಿಲ ಗ್ರಾಮದ ಒಟ್ಲಾ ಪ್ರದೇಶದಲ್ಲಿ ನಡೆದಿದೆ. ಪರಿಣಾಮವಾಗಿ ಭತ್ತ, ತೆಂಗು, ಅಡಿಕೆ ಮತ್ತು ಬಾಳೆ ನಾಶವಾಗಿ ರೈತರಿಗೆ ಅಪಾರ ನಷ್ಟವನ್ನುಂಟು ಮಾಡಿದೆ. ಹಗಲಿರುಳೆನ್ನದೆ ಆನೆಗಳು ಸಂಚಾರ ನಡೆಸುತ್ತಿರುವುದು ಸ್ಥಳೀಯರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಆನೆಗಳ ಉಪಟಳದಿಂದ ತಮಗೆ ಮುಕ್ತಿ ದೊರಕಿಸಿ ಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಶಿಲ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

•ಬೈಂದೂರು: ಕಾರಿನಲ್ಲಿ ದನಗಳನ್ನು ತುಂಬಿ ಸಾಗಾಟ!

ಬೈಂದೂರು: ಮೂವರು ವ್ಯಕ್ತಿಗಳು ರಸ್ತೆ ಬದಿಯಲ್ಲಿದ್ದ ದನವನ್ನು ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ತೆರಳಿದ ಘಟನೆ, ಬುಧವಾರದಂದು ನಸುಕಿನ ಜಾಗ ಚಿತ್ತೂರು ಗ್ರಾಮದ ಮಾರಣಕಟ್ಟೆ ಎನ್ನುವಲ್ಲಿ ನಡೆದಿದೆ. ಮನೆಯ ಹೊರಗಡೆ ನಾಯಿ ಜೋರಾಗಿ ಬೊಗಳುತ್ತಿರುವುದನ್ನು ಕೇಳಿ, ಶ್ರೀನಿವಾಸ ಮಂಜ ಅವರು ಹೊರಗೆ ಬಂದು ನೋಡಿದಾಗ ಮೂವರು ಆರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ದನವನ್ನು ಬಲವಂತವಾಗಿ ಮತ್ತು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಪರಾರಿಯಾಗುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಮಂಜ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Categories
Uncategorized

ಗಾಂಧೀ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಜನ್ಮ ದಿನ – ಸತ್ಯ, ಶಾಂತಿ ಮತ್ತು ಅಹಿಂಸಾ ತತ್ವದ ಮೂಲಕ ವಿಶ್ವಕ್ಕೆ ಮಾದರಿಯಾದ ಮಹಾತ್ಮ – ಮಹಾನ್ ನಾಯಕರ ಶ್ರಮ, ತ್ಯಾಗಕ್ಕೆ ಗೌರವವನ್ನು ಅರ್ಪಿಸೋಣ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಅಕ್ಟೋಬರ್ 2 ಭಾರತೀಯರ ಪಾಲಿಗೆ ಎರಡು ಅತ್ಯಂತ ಮಹತ್ವದ ದಿನವಾಗಿದೆ.‌ ಮೊದಲನೆಯದು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ.
ಮೋಹನದಾಸ ಕರಮಚಂದ ಗಾಂಧಿ ಅವರು 1869ರ ಅಕ್ಟೋಬರ್ 2ರಂದು ಗುಜರಾತ್ ರಾಜ್ಯದ ಪೋರಬಂದರಿನಲ್ಲಿ ಕರಮಚಂದ ಗಾಂಧಿ ಮತ್ತು ಪುತಲೀಬಾಯಿ ಅವರ ಮಗನಾಗಿ ಜನಿಸಿದರು.

ವಕೀಲರಾಗಿ ಇಡೀ ದೇಶ ಸುತ್ತಿದರು…!

ವೃತ್ತಿಯಲ್ಲಿ ವಕೀಲರಾಗಿದ್ದು, ತಮ್ಮ ವಿದ್ಯಾಭ್ಯಾಸ ಮತ್ತು ವೃತ್ತಿಗೆ ಸಂಬಂಧಿಸಿದ ತರಬೇತಿಗಳನ್ನು ಮುಗಿಸಿ ತಾಯ್ನಾಡಿಗೆ ಹಿಂತಿರುಗಿದ ಬಳಿಕ, ತನ್ನವರು ಗುಲಾಮಗಿರಿಗೆ ಒಳಗಾಗಿ ಸಂಕಟಪಡುತ್ತಿರುವುದನ್ನು ಕಂಡು, ಎಲ್ಲವನ್ನು ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಬಿಳಿ ಬಣ್ಣದ ಖಾದಿ ತುಂಡುಡುಗೆ, ಸತ್ಯ ಮತ್ತು ಅಹಿಂಸೆ ಇವರ ಸ್ವಾತಂತ್ರ್ಯ ಹೋರಾಟದ ಅಸ್ತ್ರವಾಯಿತು. ‘ಮಾಡು ಇಲ್ಲವೇ ಮಡಿ’ ಎನ್ನುವಂತಹ ಅದ್ಭುತವಾದ ಆತ್ಮಾಭಿಮಾನದ ಕರೆಯನ್ನು ನೀಡಿ, ಭಾರತೀಯರು ತಮ್ಮ ನೆಲಕ್ಕಾಗಿ ಹೋರಾಡುವಂತೆ ಪ್ರೇರಣೆ ನೀಡಿದರು. ಫಲವಾಗಿ 1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರಿಂದ ಮುಕ್ತಿ ಪಡೆದುಕೊಂಡು ಸ್ವತಂತ್ರವಾಯಿತು.

ಇಡೀ ವಿಶ್ವಕ್ಕೆ ಮಾದರಿಯಾದಂತವರು ಗಾಂಧಿ!

ಮಹಾತ್ಮ ಗಾಂಧೀಜಿಯವರು ಕೇವಲ ಭಾರತೀಯರಿಗೆ ಅಷ್ಟೇ ಅಲ್ಲದೆ ತಮ್ಮ ಸತ್ಯ, ಶಾಂತಿ ಮತ್ತು ಅಹಿಂಸಾ ತತ್ವದ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾದಂತವರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2 ಅಂದರೆ ಮಹಾತ್ಮ ಗಾಂಧಿಯವರ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಘೋಷಿಸಿ ಆಚರಿಸಲಾಗುತ್ತಿದೆ. ಅಂದು ಶಾಲಾ ಕಾಲೇಜು ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿ ಶ್ರಮಾದಾನವನ್ನು ಮಾಡುವ ಮೂಲಕ ಮಹಾತ್ಮ ಗಾಂಧೀಜಿಯವರನ್ನು ಸ್ಮರಿಸಲಾಗುತ್ತದೆ.

ಸ್ವಾತಂತ್ರ್ಯಗೊಂಡ ಕೇವಲ ಐದೇ ತಿಂಗಳಿನಲ್ಲಿ ಗುಂಡೇಟಿಗೆ ಬಲಿ

1948ರ ಜನವರಿ 30ರಂದು ಸಬರಮತಿ ಆಶ್ರಮದಲ್ಲಿ ನಾಥೋರಾಮ್ ಗೋಡ್ಸೆ ಗುಂಡೇಟಿಗೆ ಬಲಿಯಾಗಿ ಮಹಾತ್ಮ ಗಾಂಧೀಜಿಯವರು ಪ್ರಾಣವನ್ನು ತ್ಯಜಿಸಿದ್ದು, ಭಾರತವು ಸ್ವಾತಂತ್ರ್ಯಗೊಂಡ ಕೇವಲ ಐದೇ ತಿಂಗಳಿನಲ್ಲಿ ಈ ರೀತಿಯ ದುರಂತ ನಡೆದಿದ್ದು ವಿಪರ್ಯಾಸವೇ ಸರಿ. ಜನವರಿ 30 ಅನ್ನು ಕೂಡ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ಮೋಹನದಾಸ ಕರಮಚಂದ ಗಾಂಧಿ ಅವರನ್ನು ರವೀಂದ್ರನಾಥ್ ಟಾಗೋರ್ ಅವರು ಮಹಾತ್ಮ ಗಾಂಧಿ ಎಂದು ಕರೆದರೆ ಸುಭಾಷ್ ಚಂದ್ರ ಬೋಸ್ ಅವರು ರಾಷ್ಟ್ರಪಿತ ಎಂದರು.

ಸರಳ ಪ್ರಾಮಾಣಿಕ ನಾಯಕ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮ ದಿನ

ಭಾರತ ದೇಶದ ಎರಡನೇ ಪ್ರಧಾನಮಂತ್ರಿಯಾಗಿ ತಮ್ಮ ಸರಳ ಜೀವನ ಮತ್ತು ಪ್ರಾಮಾಣಿಕತೆಯಿಂದ ರಾಜಕೀಯ ವ್ಯಕ್ತಿಗಳಿಗೆ ಮಾದರಿಯಾದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಕೂಡ ಆಗಿದೆ.
ಲಾಲ್ ಬಹುದ್ದೂರ್ ಶಾಸ್ತ್ರಿಯವರು 1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮುಘಲ್ಸರಾಯ್ ಎನ್ನುವಲ್ಲಿ ಶಾರದಾ ಪ್ರಸಾದ್ ಶ್ರೀವಾಸ್ತವ್ ಮತ್ತು ರಾಮದುಲಾರಿದೇವಿ ಅವರ ಪುತ್ರರಾಗಿ ಜನಿಸಿದರು.
1921ರಲ್ಲಿ ನಡೆದ ಅಸಹಕಾರ ಚಳುವಳಿಯಲ್ಲಿ ಗಾಂಧೀಜಿಯವರ ಕರೆಗೆ ಓಗೊಟ್ಟು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಪರಿಣಾಮವಾಗಿ 9 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಮತ್ತು ಭಾರತದಲ್ಲಿ ಬರಗಾಲ ಎದುರಾದಂತಹ ಸಂದರ್ಭದಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಸೋಮವಾರದಂದು ರಾತ್ರಿ ಒಂದು ಹೊತ್ತು ಊಟವನ್ನು ಬಿಡುವ ಮೂಲಕ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಿದರು. ಜೊತೆಗೆ ಸಾರ್ವಜನಿಕರಿಗೂ ಈ ರೀತಿ ಅನುಸರಿಸುವಂತೆ ಕರೆ ನೀಡಿದರು. ಅಂದರೆ ನಮ್ಮ ಒಂದು ಹೊತ್ತಿನ ಊಟವನ್ನು ಬಿಡುವುದರಿಂದ ಹಲವಾರು ದಿನಗಳಿಂದ ಉಪವಾಸವಿದ್ದು, ಹಸಿವಿನಿಂದ ನರಳುತ್ತಿರುವವರಿಗೆ ಆಹಾರ ಲಭಿಸಿದಂತಾಗುತ್ತದೆ ಎನ್ನುವುದು ಇವರ ಉದ್ದೇಶವಾಗಿತ್ತು.
1926ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಕಾಶಿಯ ವಿದ್ಯಾಪೀಠದಿಂದ ಶಾಸ್ತ್ರಿ ಎನ್ನುವ ಬಿರುದನ್ನು ಪಡೆದುಕೊಂಡರು.
1964ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಸ್ವತಂತ್ರ ಭಾರತದ ಎರಡನೇ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ಅದಕ್ಕೂ ಮೊದಲು ಇವರು ಸ್ವತಂತ್ರ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ, ಗೃಹ ಸಚಿವರಾಗಿ ಮತ್ತು ರೈಲ್ವೆ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿದ್ದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1966ರ ಜನವರಿ 11ರಂದು ಉಜೆಕಿಸ್ತಾನದಲ್ಲಿ ಮರಣ ಹೊಂದಿದರು. 1966ರ ಜನವರಿ 10ರಂದು ಟಾಶ್ಕೆಂಟ್ ಒಪ್ಪಂದ ನಡೆದು, ಪ್ರಧಾನಮಂತ್ರಿಗಳಾಗಿ ಅವರು ಸಹಿ ಹಾಕಿದ್ದರು. ಅದರ ಮರುದಿನವೇ ಅವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿತು. ಇಂದಿಗೂ ಅವರಿಗೆ ವಿಷಪ್ರಾಷನ ಮಾಡಿಸಿ ಪಾಕಿಸ್ತಾನದವರು ಕೊಂದರೆಂಬ ಅಭಿಪ್ರಾಯಗಳಿವೆ.
ದೇಶದ ಪ್ರಮುಖ ಆಧಾರ ಸ್ತಂಬಗಳು ಸೈನಿಕ ಮತ್ತು ರೈತ ಎನ್ನುವುದನ್ನು ಸೂಚಿಸುವುದಕ್ಕಾಗಿ ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವಾಕ್ಯವನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತೀಯರಿಗೆ ನೀಡಿದರು. ಹಲವಾರು ವರ್ಷಗಳ ಹಿಂದೆ ಘೋಷಿಸಿದ ಈ ವಾಕ್ಯವು ಇಂದಿಗೂ ಪ್ರಸ್ತುತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎನ್ನುವ ದಾಖಲೆ ಕೂಡ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರಿನಲ್ಲಿದೆ.
ಹೀಗೆ ಭಾರತಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಇಬ್ಬರು ಮಹನೀಯರು ಒಂದೇ ದಿನಾಂಕದಂದು ಜನ್ಮತಾಳಿದ್ದು, ಭಾರತ ದೇಶದ ಪ್ರಜೆಗಳಿಗೆ ಒಂದೇ ದಿನದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ ಉತ್ತಮ ಅವಕಾಶ ದೊರಕಿರುವುದು ಒಂದು ಹೆಮ್ಮೆಯ ಸಂಗತಿಯಾಗಿದೆ. ಈ ಇಬ್ಬರು ಪ್ರೇರಣಾದಾಯಕ ವ್ಯಕ್ತಿತ್ವಗಳನ್ನು ಕೇವಲ ಒಂದು ದಿನ ಮಾತ್ರವಲ್ಲದೆ ಸದಾ ಸ್ಮರಿಸುತ್ತಾ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು, ದೇಶದ ಪ್ರಜೆಗಳಾದ ನಾವು ಉತ್ತಮ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ದೇಶಕ್ಕೆ ಕಿಂಚಿತ್ತು ಸೇವೆಯನ್ನು ಸಲ್ಲಿಸಿ, ಅವರ ಶ್ರಮ ಮತ್ತು ತ್ಯಾಗಕ್ಕೆ ಗೌರವವನ್ನು ಅರ್ಪಿಸೋಣ.

Categories
Uncategorized

ಪೈಲಟ್‌ ಸ್ಮಿತ್ ಮಚ್ಛಾರ್‌ ರಿಯಲ್ ಹೀರೋ..! – ರಾಜ್ಯ ಪ್ರಶಸ್ತಿ ಘೋಷಿಸಿದ ಗುಜರಾತ್ ಸರ್ಕಾರ – 174 ಜನರ ಪ್ರಾಣ ಉಳಿಸಿದ ಸಾಹಸಿ ಜತೆ ಮೋದಿ ಮಾತುಕತೆ

ಫ್ಲೈದುಬೈ ವಿಮಾನದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು 9/11 ಮಾದರಿಯ ಭಯೋತ್ಪಾದನಾ ದಾಳಿಯನ್ನು ತಡೆದು ನೂರಾರು ಜೀವಗಳನ್ನು ರಕ್ಷಿಸಿದ ಗುಜರಾತ್ ಮೂಲದ ಸಾಹಸಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಅದಮ್ಯ ಶೌರ್ಯಕ್ಕೆ ಇಡೀ ಜಗತ್ತೇ ಶ್ಲಾಘನೆ ವ್ಯಕ್ತಪಡಿಸುತ್ತಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕ್ಯಾಪ್ಟನ್ ಸ್ಮಿತ್ ಅವರಿಗೆ ರಾಜ್ಯದ ಅತ್ಯುನ್ನತ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ ನೀಡಿ ಗೌರವಿಸುವುದಾಗಿ ಘೋಷಿಸಿದ್ದಾರೆ.
174 ಜನರ ಪ್ರಾಣ ಉಳಿಸಿದ ಈ ಸಾಹಸಿ ಪೈಲಟ್ ಸ್ಮಿತ್ ಮಚ್ಛಾರ್ ಅವರ ಅಸಾಧಾರಣ ಶೌರ್ಯವನ್ನು ಗೌರವಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಸ್ಮಿತ್ ಅವರಿಗೆ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ ನೀಡಿ ಗೌರವಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸ್ಮಿತ್ ಜತೆ ಮಾತುಕತೆ ನಡೆಸಿದ್ದಾರೆ.

ರಕ್ತದ ಮಡವಿನಲ್ಲಿ ಬಿದ್ದರೂ ಜನರ ರಕ್ಷಿಸಿದರು!

ಇಸ್ರೇಲ್‌‌ಗೆ ತೆರಳುತ್ತಿದ್ದ ವಿಮಾನದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ತೋರಿಸಿದ ಸಾಹಸವನ್ನು ಇಂದು ಇಡೀ ಜಗತ್ತು ಗೌರವಿಸುತ್ತಿದೆ. ದಾಳಿಯಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ, 174 ಪ್ರಯಾಣಿಕರ ಪ್ರಾಣ ಉಳಿಸಲು ಅವರು ತೋರಿದ ಅದಮ್ಯ ಧೈರ್ಯ ಅತ್ಯಂತ ಪ್ರೇರಣಾದಾಯಿಕ. ಗುಜರಾತ್‌ನ ಈ ಧೀರ ಪುತ್ರ ತನ್ನ ಶೌರ್ಯದ ಮೂಲಕ ಇಡೀ ಜಗತ್ತಿನಲ್ಲಿ ಭಾರತ ಮತ್ತು ಗುಜರಾತ್‌ನ ಹೆಸರನ್ನು ಎತ್ತಿ ಹಿಡಿದಿದ್ದಾರೆ” ಎಂದು ಸಿಎಂ ಭೂಪೇಂದ್ರ ಪಟೇಲ್ ಶ್ಲಾಘಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಸ್ಮಿತ್ ಅವರನ್ನು ‘ರಿಯಲ್ ಹೀರೋ’ ಎಂದು ಬಣ್ಣಿಸಿದ್ದು, ಭಾರೀ ದುರಂತವನ್ನು ತಪ್ಪಿಸಿದ ಅವರ ಶೌರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

Categories
Uncategorized

ಪೂರ್ತಿ ಹಣ ಇಲ್ಲದಿದ್ರೂ ಗ್ಯಾಸ್ ಸಿಗುತ್ತೆ! – ಎಲ್‌ಪಿಜಿಗೆ ಇನ್ನು ಮುಂದೆ ಇಎಂಐ ಸೌಲಭ್ಯ – ಎಲ್‌ಪಿಜಿ ರೀಫಿಲ್ ಗಾಗಿ 600 ರೂಪಾಯಿವರೆಗೆ ಬಡ್ಡಿರಹಿತ ಸಾಲ

ನವದೆಹಲಿ: ಸಿಲಿಂಡರ್ ಬೆಲೆ ಏರಿಕೆಯಿಂದ ಮತ್ತು ಬುಕಿಂಗ್ ಸಮಯದಲ್ಲಿ ಪೂರ್ಣ ಪ್ರಮಾಣದ ಹಣ ಬಾರದೆ ಆತಂಕಿತರಾಗಿದ್ದ ಗ್ರಾಹಕರಿಗೆ ಭಾರತ್ ಗ್ಯಾಸ್ ಸಿಹಿಸುದ್ಧಿಯೊಂದನ್ನು ನೀಡಿದೆ.
ಎಲ್‍ಪಿಜಿ ಸಿಲಿಂಡರ್ ಮರುಪೂರಣಕ್ಕೆ ಬಡ್ಡಿರಹಿತವಾಗಿ ಸಾಲ ಸೌಲಭ್ಯ ನೀಡುವುದಾಗಿ ಭಾರತ್ ಗ್ಯಾಸ್ ಘೋಷಿಸಿದ್ದು, ತಕ್ಷಣ ಹಣ ಕೊಟ್ಟು ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಇಎಂಐ ರೀತಿಯಲ್ಲಿ ಕಂತುಗಳಲ್ಲಿ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ನ ಬೆಲೆ 950 ರೂಪಾಯಿಗಳಷ್ಟಿವೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಭಾರತ್ ಗ್ಯಾಸ್ “ಸಿಲಿಂಡರ್ ಮರುಭರ್ತಿಗೆ ಬಡ್ಡಿರಹಿತ ಮೈಕ್ರೋ ಸಾಲ ಸೌಲಭ್ಯವನ್ನು ಘೋಷಿಸುತ್ತಿದ್ದೇವೆ. ಈ ಸೌಲಭ್ಯದ ಮೂಲಕ ಗ್ರಾಹಕರು ಎಲ್‌ಪಿಜಿ ರೀಫಿಲ್ ಗಾಗಿ 600 ರೂಪಾಯಿವರೆಗೆ ಬಡ್ಡಿರಹಿತ ಸಾಲವನ್ನು ಪಡೆಯಬಹುದಾಗಿದೆ. 600 ರೂಪಾಯಿ ಸಾಲಕ್ಕೆ ತಲಾ 100 ರೂಪಾಯಿಯಂತೆ ಪ್ರತಿವಾರ ಕಂತುಗಳಲ್ಲಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಮೊತ್ತದ ಮೇಲೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ಪ್ರತಿವಾರ 100ರೂಪಾಯಿ ಇಎಂಐ ಕಟ್ಟಿ ಮುಂಚಿತವಾಗಿ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ” ಎಂದು ತಿಳಿಸಿದೆ.‌ ಮತ್ತು ಹೆಚ್ಚಿನ ಮಾಹಿತಿಗಾಗಿ ಸಮೀಪದ ಭಾರತ್ ಗ್ಯಾಸ್ ವಿತರಕರನ್ನು ಸಂಪರ್ಕಿಸಿ, ಅಗತ್ಯವಾಗಿ ಬೇಕಾಗಿರುವಂತಹ ದಾಖಲೆಗಳನ್ನು ನೀಡಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಸೂಚಿಸಲಾಗಿದೆ.

Categories
Uncategorized

ಮಾನಸಿಕ ಅಸ್ವಸ್ಥನಿಂದ ಒಂಟಿ ಮನೆಗೆ ನುಗ್ಗಿ ಕಿರಿಕಿರಿ: ಧರ್ಮದೇಟು! – ತೀರ್ಥಹಳ್ಳಿ ತಾಲೂಕು ನಾಲೂರು ಬಳಿ ಮಧ್ಯ ರಾತ್ರಿ ಘಟನೆ – ಮದ್ಯ ಕುಡಿದವನಿಂದ ದಾoಧಲೆ: ಪೊಲೀಸರಿಗೆ ಒಪ್ಪಿಸಿದ ಜನ – ತೀರ್ಥಹಳ್ಳಿಯಲ್ಲಿ ಹೆಚ್ಚಾದ ಕಳ್ಳರು: ಅನಾಮಿಕರ ಬಗ್ಗೆ ಅಲರ್ಟ್!

ತೀರ್ಥಹಳ್ಳಿ: ಕಳ್ಳನೊಬ್ಬ ಒಂಟಿ ಮನೆಯನ್ನು ಟಾರ್ಗೆಟ್ ಮಾಡಿ ನೀರು ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನಿಸಿ ಜನರಿಂದ ಧರ್ಮದೇಟು ತಿಂದ ಘಟನೆ ಬುಧವಾರ ರಾತ್ರಿ ತೀರ್ಥಹಳ್ಳಿ ತಾಲೂಕು ನಾಲೂರು ಬಳಿ ನಡೆದಿದೆ. ಮದ್ಯ ಸೇವಿಸಿದ್ದು ಆತ ಮಾನಸಿಕ ಅಸ್ವಸ್ತ ಎಂದು ಹೇಳಲಾಗಿದೆ.
ಅಜ್ಜ ಅಜ್ಜಿ ಇದ್ದ ಮನೆಯ ಬಾಗಿಲು ಬಡಿದ ಹಿಂದಿ ಮಾತನಾಡುವ ವ್ಯಕ್ತಿ ಬಗ್ಗೆ ಸಂಶಯಗೊಂಡ ಅಜ್ಜ ಅಜ್ಜಿ ಕೂಗಿಕೊಂಡಿದ್ದಾರೆ. ಅಕ್ಕ ಪಕ್ಕದ ಗ್ರಾಮಸ್ಥರು ಕೂಡಲೇ ಧಾವಿಸಿ ಆತನ ಹಿಂದೆ ಬಿದ್ದಿದ್ದಾರೆ. ಸುಮಾರು 3 ಕಿಮಿ ಓಡಿದ ಆತ ಜನರ ಮೇಲೆ ಕಲ್ಲು ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ನಾಲೂರು ಸೇತುವೆ ಬಳಿ ಜನರ ಕೈಗೆ ಸಿಕ್ಕಿದ್ದು ಧರ್ಮದೇಟು ತಿಂದಿದ್ದಾನೆ.
ಕಳ್ಳನನ್ನು ಸುಮಾರು 30 ಮಂದಿ ಸೇರಿ ಹಿಡಿದು ಪೊಲೀಸರಿಗೆ ಕರೆ ಮಾಡಿದರೂ ಬರಲಿಲ್ಲ. ಬಳಿಕ 3 ಗಂಟೆಗೆ ಬಂದು ಆತನ ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಅಜ್ಜ ಅಜ್ಜಿ ತಡ ರಾತ್ರಿ ದೂರು ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದು ಕೊಳ್ಳಬೇಕಿದೆ.

ಮಲೆನಾಡಲ್ಲಿ ಹೆಚ್ಚಿದ ಅನಾಮಿಕರ ಆಗಮನ: ಪೊಲೀಸರೇ ಅಲರ್ಟ್!

ಮಲೆನಾಡಲ್ಲಿ ಬೆಡ್ ಶೀಟ್, ಪ್ಲಾಸ್ಟಿಕ್ ಇತರೆ ವಸ್ತು ಮಾರಾಟಕ್ಕೆ ಪರ ಊರಿನವರ ಆಗಮನ ಹೆಚ್ಚಿದೆ. ನಕಲಿ ಐಡಿ ಕಾರ್ಡ್ ಬಳಸಲಾಗುತ್ತಿದೆ.
ಅಸ್ಸಾಂ, ಬಿಹಾರ ಸೇರಿದಂತೆ ಹೊರ ಭಾಗದ ಹಿಂದಿ ಮಾತನಾಡುವ ಜನರ ಬಗ್ಗೆ ಜಾಗೃತಿ ಇರಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಡಿಕೆ ಕೊಯ್ಲು ಸಮಯ ಆದ್ದರಿಂದ ಈ ಬಗ್ಗೆ ಪೊಲೀಸ್ ಇಲಾಖೆ ಗಮನಿಸಬೇಕು ಎಂದು ಅಗ್ರಹಿಸಲಾಗಿದೆ.

ತೀರ್ಥಹಳ್ಳಿಯಲ್ಲಿ ಹೆಚ್ಚಾದ ಬೈಕ್, ಹೆಲ್ಮೆಟ್ ಕಳ್ಳತನ!

ತೀರ್ಥಹಳ್ಳಿಯಲ್ಲಿ ಬೈಕ್, ಹೆಲ್ಮೆಟ್ ಕಳ್ಳರ ಸಂಖ್ಯೆ ಹೆಚ್ಚಿದೆ. ತಿಂಗಳಿಗೆ ಒಂದಲ್ಲ ಒಂದು ಬೈಕ್, ಹೆಲ್ಮೆಟ್ ಕಳ್ಳತನ ಪ್ರಕರಣ ದಾಖಲಾಗುತ್ತಿದೆ.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಮುಂದೆ ನಡೆದಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Categories
Uncategorized

ಬಸ್‌ ಟಿಕೆಟ್‌ ದರ ಸದ್ಯದಲ್ಲೇ ಏರಿಕೆ…!! – ಸಾರಿಗೆ ಸಚಿವ ಬೈರತಿ ಸುರೇಶ್‌ ಸುಳಿವು – ಶೀಘ್ರದಲ್ಲೇ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಕಾರ್ಡ್‌

ಬೆಂಗಳೂರು: ಕರ್ನಾಟಕದಲ್ಲಿ ಹಾಲಿನ ದರ ಏರಿಕೆಗೆ ಬೇಡಿಕೆ ಬೆನ್ನಲ್ಲೇ, ಬಸ್‌ ಪ್ರಯಾಣವೂ ದುಬಾರಿಯಾಗಲಿದೆ ಎಂಬ ಮಾತುಗಳಿಗೆ ಸ್ವತಃ ಸಾರಿಗೆ ಸಚಿವರೇ ಪುಷ್ಟಿ ನೀಡಿದ್ದಾರೆ. ಸಾರಿಗೆ ನಿಗಮಗಳ ಬಸ್‌ ದರ ಹೆಚ್ಚಳ ಸಂಬಂಧ ರಚಿಸಿದ ನಿವೃತ್ತ ಐಎಎಸ್‌ ಅಧಿಕಾರಿ ಅತುಲ್‌ ತಿವಾರಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಒಂದೆರಡು ದಿನಗಳಲ್ಲಿ ವರದಿ ಸಲ್ಲಿಸಲಿದ್ದು, ಸಂಪುಟದ ಅನುಮೋದನೆ ಪಡೆದು ಶೀಘ್ರ ದರ ಪರಿಷ್ಕರಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌ ತಿಳಿಸಿದ್ದಾರೆ. ಸಾರಿಗೆ ನಿಗಮಗಳು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವುದರಿಂದ ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ನಾಲ್ಕು ಬಾರಿ ಡೀಸೆಲ್‌ ಬೆಲೆ ಹೆಚ್ಚಳ ಮಾಡಿದೆ. ಇದರ ಪರಿಣಾಮ ಪ್ರತಿ ಲೀಟರ್‌ ಡೀಸೆಲ್‌ ಬೆಲೆ 15ರಿಂದ 16 ರೂ. ಹೆಚ್ಚಳವಾಗಿದ್ದು, ನಮ್ಮ ಸಾರಿಗೆ ನಿಗಮಗಳಿಗೆ ವಾರ್ಷಿಕ 8 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ,” ಎಂದು ಹೇಳಿದರು.

”ಅತುಲ್‌ ತಿವಾರಿ ಅವರು ಎಲ್ಲಾ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿ, ಮುಖ್ಯಮಂತ್ರಿಗಳ ಅನುಮೋದನೆ ಪಡೆದ ನಂತರ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ,” ಎಂದು ಸ್ಪಷ್ಟ ಪಡಿಸಿದರು.

– ಮಹಿಳೆಯರಿಗೆ ಶಕ್ತಿ ಕಾರ್ಡ್‌ ವಿತರಣೆ

”ಅನ್ಯ ರಾಜ್ಯಗಳ ಮಹಿಳೆಯರೂ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯದ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಲು ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ. ಮೊದಲ ಹಂತದಲ್ಲಿ 1 ಕೋಟಿ ಮಹಿಳೆಯರಿಗೆ ನೀಡುವ ದಿಸೆಯಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಎರಡು ತಿಂಗಳಲ್ಲಿ ಸ್ಮಾರ್ಟ್‌ ಕಾರ್ಡ್‌ ಸಿದ್ಧವಾಗಲಿವೆ,” ಎಂದು ಬೈರತಿ ಸುರೇಶ್‌ ತಿಳಿಸಿದರು. ಕೇಂದ್ರ ಸರ್ಕಾರದ ಸಹಯೋಗದಲ್ಲಿ 4500 ಎಲೆಕ್ಟ್ರಿಕ್‌ ಬಸ್‌ಗಳನ್ನು ಬಿಎಂಟಿಸಿಗೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಬಸ್‌ಗಳು ಹಂತ-ಹಂತವಾಗಿ ರಾಜಧಾನಿಯ ನಾಗರಿಕರ ಸೇವೆಗೆ ಲಭ್ಯವಾಗಲಿವೆ. ಇವುಗಳ ಸಂಚಾರದಿಂದ ನಗರದ ಸಾರಿಗೆ ದಟ್ಟಣೆ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ,” ಎಂದು ಸಾರಿಗೆ ಸಚಿವರು ತಿಳಿಸಿದರು.

Categories
Uncategorized

• ಮಂಗಳೂರು: ಎಂಆರ್ ಪಿಎಲ್ ಸ್ಫೋಟ: ಕೇಸ್ ದಾಖಲು • ಬಂಟ್ವಾಳ: ಕೂಲಿ ಕಾರ್ಮಿಕನೀಗ ಕೊಟ್ಯಧಿಪತಿ..! • ಸುಳ್ಯ: ಹೊಟ್ಟೆ ನೋವಿನಿಂದ ಯುವಕ ಸಾವು • ಮಂಗಳೂರು: ಅಕ್ರಮ ದನ ಸಾಗಣೆ; ಪೊಲೀಸರ ವಶ • ಬಂಟ್ವಾಳ: ರಸ್ತೆ ಅಪಘಾತ; ಪಾದಚಾರಿ ಸಾವು • ಕಾಪು: ಟೆಂಪೋ, ಆಟೋ ಡಿಕ್ಕಿಯಾಗಿ ಮಗು ಸಾವು – ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ: ತನಿಖೆ

ಮಂಗಳೂರು: ಎಂಆರ್ ಪಿಎಲ್ ಸ್ಫೋಟ ಪ್ರಕರಣ ಸಂಬಂಧಪಟ್ಟ ಹಾಗೆ ಕೇಸ್ ದಾಖಲು ಆಗಿದೆ. ಸೆಪ್ಟೆಂಬರ್ 30ರ ಬುಧವಾರದಂದು ಮಧ್ಯಾಹ್ನದ ಹೊತ್ತಿಗೆ ಎಂಆರ್ ಪಿಎಲ್ ನ ಫೇಸ್-3ರ ಕುಕ್ಕರ್ ಹೈಡ್ರೋ ಟ್ರೇಟರ್ ಯೂನಿಟ್ ಭೀಕರ ರೀತಿಯಲ್ಲಿ ಸ್ಫೋಟಗೊಂಡಿದೆ. ಎಂಆರ್ ಪಿಎಲ್ ನ ಉದ್ಯೋಗಿಗಳಿಗೆ ಊಟ, ಉಪಹಾರ ಮತ್ತು ನೀರು ಸರಬರಾಜು ಮಾಡುವ ಕೆ ಸ್ಟಾರ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವೀಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲಸಗಾರರು ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದರು. ಅದರಲ್ಲೂ ಮನೀಶ್ ಕರ್ಕಡ ಅವರು ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ, ರಾಜೇಶ್ ಪೂಜಾರಿ ಸೇರಿ ಹಲವರು ಗಾಯಗೊಂಡಿದ್ದಾರೆ. ಕುಕ್ಕರ್ ಹೈಡ್ರೋ ಟ್ರೇಟರ್ ಯೂನಿಟ್ ನ ಉಪಕರಣಗಳನ್ನು ಘಟಕದ ಮುಖ್ಯಸ್ಥರು ಮತ್ತು ಎಂಆರ್ ಪಿಎಲ್ ಸಂಸ್ಥೆಯವರು ಸಮರ್ಪಕವಾಗಿ ಪರಿಶೀಲಿಸದೆ ನಿರ್ಲಕ್ಷ್ಯ ವಹಿಸಿದುದೇ ಈ ದುರಂತಕ್ಕೆ ಕಾರಣವಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಬಂಟ್ವಾಳ: ಕೂಲಿ ಕಾರ್ಮಿಕನೀಗ ಕೊಟ್ಯಧಿಪತಿ..!

ಬಂಟ್ವಾಳ: ಕೇರಳ ಮೂಲದ ತಿರುವೋಣಂ ಲ್ಯಾಟರಿಯ ಎರಡನೇ ಬಹುಮಾನ ಕರ್ನಾಟಕಕ್ಕೆ ಬಂದಿದ್ದು, ಅದರಲ್ಲೂ ಕೂಲಿ ಕಾರ್ಮಿಕರೊಬ್ಬರಿಗೆ ಲಭಿಸಿರುವುದು ವಿಶೇಷವಾಗಿದೆ. ನಗರಿ ಸಮೀಪದ ಕೇಪುಳಗುಡ್ಡೆ ನಿವಾಸಿಯಾದ ರೋಹಿತ್ ನಾಯ್ಕ ಅವರು ಕಾಸರಗೋಡಿನ ನ್ಯೂ ಲಕ್ಕಿ ಸೆಂಟರ್ ಏಜೆನ್ಸಿಯಲ್ಲಿ ಲ್ಯಾಟರಿ ಟಿಕೆಟ್ ಅನ್ನು ಖರೀದಿಸಿದ್ದು, ಎರಡನೇ ಬಹುಮಾನ ಬರುವ ಮೂಲಕ 1ಕೋಟಿ ರೂಪಾಯಿ ಹಣವನ್ನು ಗಳಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ರೋಹಿತ್ ನಾಯ್ಕ ಅವರು ತಮಗೆ ಅದೃಷ್ಟವನ್ನು ತಂದುಕೊಟ್ಟ ಸಂಸ್ಥೆಯ ಸಿಬ್ಬಂದಿಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

•ಸುಳ್ಯ: ಹೊಟ್ಟೆ ನೋವಿನಿಂದ ಯುವಕ ಸಾವು

ಸುಳ್ಯ: ಹೊಟ್ಟೆ ನೋವಿನಿಂದ ನರಳುತ್ತಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಪಂಜದ ಕಂರ್ಬು ನಿವಾಸಿ, ನಿಂತಿಕಲ್ಲಿನಲ್ಲಿ ‘ಅಜಯ್ ಪಾದರಕ್ಷೆ’ ಎನ್ನುವ ಹೆಸರಿನ ಮಳಿಗೆಯನ್ನು ನಡೆಸುತ್ತಿದ್ದ ಅಜಯ್ ಎಂದು ಗುರುತಿಸಲಾಗಿದೆ. ಹೊಟ್ಟೆ ನೋವಿನ ಹಿನ್ನೆಲೆಯಿಂದಾಗಿ ಸೆಪ್ಟೆಂಬರ್ 29ರ ಮಂಗಳವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅಜಯ್, ಚಿಕಿತ್ಸೆಗೆ ಸ್ಪಂದಿಸದೆ ಅದೇ ದಿನ ರಾತ್ರಿ ಮೃತಪಟ್ಟಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

•ಮಂಗಳೂರು: ಅಕ್ರಮ ದನ ಸಾಗಣೆ; ಪೊಲೀಸರ ವಶ

ಮಂಗಳೂರು: ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಕಾರ್ಯಾಚರಣೆ ಕೈಗೊಂಡು ದಾಳಿ ನಡೆಸಿದ ಘಟನೆ, ಬುಧವಾರದಂದು ಕಲ್ಲಡ್ಕ ಮೇಲ್ಸೇತುವೆ ಬಳಿ ನಡೆದಿದೆ. ಗುಂಡ್ಯ ಕಡೆಯಿಂದ ಆಗಮಿಸುತ್ತಿದ್ದ ಬೃಹತ್ ಗಾತ್ರದ ಲಾರಿಯೊಂದನ್ನು ಪೊಲೀಸರು ತಡೆಗಟ್ಟಿ ಪರಿಶೀಲಿಸಿದಾಗ, 20ಕ್ಕೂ ಹೆಚ್ಚು ದನಗಳನ್ನು ಮಂಗಳೂರಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರನ್ನು ಕಂಡೊಡನೆ ಲಾರಿ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ದನಗಳನ್ನು ರಕ್ಷಿಸಿದ್ದು, ಅಕ್ರಮ ಸಾಗಾಟಕ್ಕೆ ಬಳಸಿದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

•ಬಂಟ್ವಾಳ: ರಸ್ತೆ ಅಪಘಾತ; ಪಾದಚಾರಿ ಸಾವು

ಬಂಟ್ವಾಳ: ರಸ್ತೆ ಅಪಘಾತದಲ್ಲಿ ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ, ಬುಧವಾರದಂದು ದಾಸಕೋಡಿ ಎನ್ನುವಲ್ಲಿ ನಡೆದಿದೆ. ವ್ಯಕ್ತಿಯು ಸಂಜೆ ಕೆಲಸವನ್ನು ಮುಗಿಸಿ, ಕಲ್ಲಡ್ಕ ಕಡೆಯಿಂದ ಬಸ್ ನಲ್ಲಿ ಮನೆಗೆ ತೆರಳುತ್ತಿದ್ದು, ದಾಸಕೋಡಿಯಲ್ಲಿ ಬಸ್ ನಿಂದ ಇಳಿದು, ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಬಾಳ್ತಿಲ ನಿವಾಸಿ ಹರೀಶ್ ನಾಯ್ಕ ಎಂದು ಗುರುತಿಸಲಾಗಿದೆ.

•ಕಾಪು: ಟೆಂಪೋ, ಆಟೋ ಡಿಕ್ಕಿಯಾಗಿ ಮಗು ಸಾವು

ಕಾಪು: ಫ್ಲೈ ಓವರ್ ಮೇಲಿನ ಭೀಕರ ಅಪಘಾತದಲ್ಲಿ ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದ್ದು , ತಡವಾಗಿ ಬೆಳಕಿಗೆ ಬಂದಿದೆ. ಉಚ್ಚಿಲಾದಿಂದ ಉಡುಪಿಯ ಕಡೆಗೆ ತೆರಳುತ್ತಿದ್ದ ಆಟೋ, ಬ್ಯಾನರ್ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ, ಪುರಸಭೆಗೆ ಸೇರಿದ ಟೆಂಪೊಗೆ ಹಿಂಬದಿಯಿಂದ ಬಲವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಉಚ್ಚಿಲ ನಿವಾಸಿ ಸಂಧ್ಯಾ ಮತ್ತು ಅವರ ಮಕ್ಕಳಾದ ಗಯಾನ್ ಮತ್ತು ಸುಮಿತ್ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಗೆ ತಲುಪಿದ್ದ ಸುಮಿತ್ ನನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಯಿತಾದರೂ, ಮಗು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರದಂದು ಮೃತಪಟ್ಟಿದೆ.

ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ: ತನಿಖೆ

ಪುತ್ತೂರು: ಕೂರ್ನಡ್ಕದ ಮಹಿಳೆಯೊಬ್ಬರಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ಪ್ರಕರಣದ ಕುರಿತು ಸೂಕ್ತ ವಿಚಾರಣೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ತಿಳಿಸಿದ್ದಾರೆ.
ಕೂರ್ನಡ್ಕದ ಮಹಿಳೆ ಸೆ.16ರಂದು ಮಧುಮೇಹಕ್ಕೆ ಸಂಬಂಧಿಸಿದ ಔಷಧಿಗಳನ್ನು ಪಡೆಯಲು ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿದ್ದರು. ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಮಧುಮೇಹದ ಮಾತ್ರೆ ಸೇರಿದಂತೆ ಇತರ ಔಷಧಿಗಳನ್ನು ನೀಡಲಾಗಿತ್ತು. ಆದರೆ ನೀಡಲಾದ ಮಾತ್ರೆಗಳ ಪೈಕಿ ಕೆಲವು ಮಾತ್ರೆಗಳ ಬಳಕೆಯ ಅವಧಿ ಆಗಸ್ಟ್ ತಿಂಗಳಲ್ಲೇ ಮುಕ್ತಾಯಗೊಂಡಿತ್ತು ಎಂದು ಎಸ್‌ಡಿಪಿಐ ಮುಖ೦ಡ ತಾಜುದ್ದೀನ್ ಆರೋಪಿಸಿದ್ದಾರೆ. ಈ ಬಗ್ಗೆ ಅರಿವಿಲ್ಲದೆ ಮಹಿಳೆ ಸುಮಾರು 10 ದಿನಗಳ ಕಾಲ ಮಾತ್ರೆಗಳನ್ನು ಸೇವಿಸಿದ್ದರು. ಎರಡು ದಿನಗಳ ಹಿಂದೆ ಮಹಿಳೆಯ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಮನೆಯವರು ಆಕೆಗೆ ನೀಡಲಾಗಿದ್ದ ಔಷಧಿಗಳನ್ನು ಪರಿಶೀಲಿಸಿದಾಗ ಅವುಗಳ ಅವಧಿ ಮುಗಿದಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಲಾಗಿದೆ. ಈ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದು, ಔಷಧಿ ವಿತರಣೆಯಲ್ಲಿ ಲೋಪವಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

Categories
Uncategorized

ಜೆ.ಎನ್.ಎನ್ ಇಂಜಿನಿಯರ್ ಕಾಲೇಜಿನ ಸಾಧನೆ – ಧನ್ಯಶ್ರೀ ರಾಜ್ಯಕ್ಕೆ ಪ್ರಥಮ ಸ್ಥಾನ: ವಿವಿಧ ವಿಭಾಗಗಳಲ್ಲಿ ಒಟ್ಟು 8 ರ‍್ಯಾಂಕ್‌ – ಶಿವಮೊಗ್ಗದ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜು

ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025-26ನೇ ಸಾಲಿನ ಇಂಜಿನಿಯರಿಂಗ್ ರ‍್ಯಾಂಕ್‌ ಗಳನ್ನು ಪ್ರಕಟಿಸಿದ್ದು, ಶಿವಮೊಗ್ಗದ ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಒಟ್ಟು 8 ರ‍್ಯಾಂಕ್‌ ಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಧನ್ಯಶ್ರೀ ಬಿ.ಎಂ. ಅವರು ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆಯುವುದರ ಜೊತೆಗೆ 7 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದಲ್ಲಿ ಹರ್ಷಿಕ ಎನ್. ಅವರು 4ನೇ ರ‍್ಯಾಂಕ್‌ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ನಯ್ಯರ್ ಫಾತೀಮ ಅಫ್ರಿನ್ 3ನೇ ರ‍್ಯಾಂಕ್‌, ಯಶಸ್ಕರ ಟಿ.ಜಿ. 4ನೇ ರ‍್ಯಾಂಕ್‌, ಭೂಮಿಕ ಎಂ. 5ನೇ ರ‍್ಯಾಂಕ್‌, ಜಾರ್ಜ್ ಟಿ. ಪೌಲ್ 6ನೇ ರ‍್ಯಾಂಕ್‌, ನಿತ್ಯಶ್ರೀ ಹೆಗಡೆ ಕೆ.ಎನ್. 8ನೇ ರ‍್ಯಾಂಕ್‌ ಹಾಗೂ ಸ್ವಾತಿ ಎಸ್.ಜಿ. 10ನೇ ರ‍್ಯಾಂಕ್‌ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯು ಕಾಲೇಜಿನ ಶೈಕ್ಷಣಿಕ ಶ್ರೇಷ್ಠತೆ, ಗುಣಮಟ್ಟದ ಬೋಧನೆ ಹಾಗೂ ವಿದ್ಯಾರ್ಥಿಗಳ ನಿರಂತರ ಪರಿಶ್ರಮಕ್ಕೆ ದೊರೆತ ಮತ್ತೊಂದು ಪ್ರತಿಷ್ಠಿತ ಮನ್ನಣೆಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ತಿಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.