Categories
ಕೃಷಿ

ತೆಂಗಿನ ಸಿಪ್ಪೆಗೆ ಈಗ ಭಾರೀ ಡಿಮ್ಯಾಂಡ್..!

ತೆಂಗಿನ ಸಿಪ್ಪೆಗೆ ಈಗ ಭಾರೀ ಡಿಮ್ಯಾಂಡ್..!
– ಬೇರೆ ರಾಜ್ಯಗಳಲ್ಲಿ ಸಾವಿರ ಸಿಪ್ಪೆಗೆ 3000 ರೂ. ಬೆಲೆ
– ತೆಂಗಿನ ಸಿಪ್ಪೆಗೆ ಚೀನಾದಲ್ಲಿ ಬಹು ಬೇಡಿಕೆ

NAMMUR EXPRESS NEWS
ಮೈಸೂರು ಮಲ್ಲಿಗೆ, ಬೆಳಗಾವಿ ಕುಂದ, ಧಾರವಾಡ ಪೇಡ, ಚನ್ನಪಟ್ಟಣ ಗೊಂಬೆ ಹೀಗೆ ಒಂದೊಂದು ಊರಿನ ಹೆಸರು ಹೇಳಿದೊಡನೆ, ಅಲ್ಲಿನ ವಿಶೇಷತೆಗಳು ಕಣ್ಣ ಮುಂದೆ ಒಮ್ಮೆ ಬಂದು ಹೋಗುತ್ತದೆ. ಅದೇ ರೀತಿ ತಿಪಟೂರು ಎಂದೊಡನೆ ಎಲ್ಲರ ಬಾಯಲ್ಲಿ ಮೊದಲಿಗೆ ಬರುವುದು ತೆಂಗಿನ ಕಾಯಿ..!.
ತುಮಕೂರು ಜಿಲ್ಲೆಯನ್ನು ಕಲ್ಪತರು ನಾಡು ಎಂದೇ ಕರೆಯಲಾಗುತ್ತದೆ. ಇಲ್ಲಿ ತೆಂಗಿನ ಇಳುವರಿ ಅಧಿಕ ಪ್ರಮಾಣದಲ್ಲಿದೆ. ಅದೇ ಜಿಲ್ಲೆಯ ವ್ಯಾಪ್ತಿಗೆ ಬರುವ ತಿಪಟೂರು ತೆಂಗಿನಕಾಯಿಗೆ ಹೆಸರುವಾಸಿಯಾಗಿದೆ.
ತೆಂಗಿನಕಾಯಿಗೆ ಬೆಲೆ ಬರುವುದು ಸಹಜ. ಪ್ರತಿದಿನ ಅಡುಗೆಯ ಒಂದು ಭಾಗವಾಗುವುದರ ಜೊತೆಗೆ, ದೇವಾಲಯಗಳಲ್ಲಿ ಪೂಜಾ ಕಾರ್ಯಕ್ಕೆ, ಶುಭಸಮಾರಂಭಗಳಿಗೆ ತೆಂಗಿನಕಾಯಿ ಬೇಕೇ ಬೇಕು ನಿಜ. ಹೀಗಾಗಿ ಅಗತ್ಯಕ್ಕೆ ಅನುಗುಣವಾಗಿ ಬೇಡಿಕೆ ಬರುತ್ತದೆ. ಆದರೆ, ತೆಂಗಿನ ಒಣ ಸಿಪ್ಪೆಗೂ ಅಂದರೆ ಮಟ್ಟೆಗೆ ಎಲ್ಲೆಡೆ ಬಹು ಬೇಡಿಕೆ ಇದೆ ಎನ್ನುವುದು ಅಚ್ಚರಿಯ ಸಂಗತಿ.
ಗದ್ದೆ, ತೋಟ, ಮನೆಯ ಹಿಂಭಾಗದಲ್ಲಿ ಒಟ್ಟಾಗಿರುತ್ತಿದ್ದ ಒಣ ಸಿಪ್ಪೆಯನ್ನು ತೆಂಗಿನ ಬೆಳೆಗಾರರು ಸುಮ್ಮನೆ ತೆಗೆದುಕೊಂಡು ಹೋಗಿ, ನಾರು‌ ಕೇಂದ್ರಕ್ಕೆ ಹಾಕಿ ಬರುತ್ತಿದ್ದರು. ಈಗ ಅದಕ್ಕೂ ಸಾವಿರಗಟ್ಟಲೆ ಬೆಲೆ ಬಂದಿದೆ ಎಂಬ ವಿಚಾರ ತಿಳಿದು ತೆಂಗು ಬೆಳೆಗಾರರಲ್ಲಿ ಸಂತಸ ಉಂಟಾಗಿದೆ.
ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳವರು ತಿಪಟೂರಿನ ತೆಂಗಿನ ಒಣ ಸಿಪ್ಪೆಗೆ ಮೂರು ಸಾವಿರದಷ್ಟು ಬೆಲೆಯನ್ನು ತೆತ್ತು, ಮುಗಿಬಿದ್ದು ಖರೀದಿಸುತ್ತಿದ್ದಾರೆ ಎನ್ನಲಾಗಿದೆ.
ತೆಂಗಿನ ಸಿಪ್ಪೆಗೆ ಚೀನಾದಲ್ಲಿ ಬಹುಬೇಡಿಕೆ ಇದ್ದು, ಇಲ್ಲಿ ಖರೀದಿಸಿದ ಬಳಿಕ ಚೀನಾಕ್ಕೆ ರಫ್ತು ಮಾಡಲಾಗುತ್ತಿದೆ. ತುಮಕೂರು ಆಸುಪಾಸಿನ ತೆಂಗಿನ ಸಿಪ್ಪೆಗಳು ದಪ್ಪ ಮತ್ತು ಉತ್ತಮ ನಾರನ್ನು ಹೊಂದಿರುವ ಕಾರಣ ಬೇಡಿಕೆ ಅಧಿಕವಾಗಿದೆ.ಇದರ ಪರಿಣಾಮವಾಗಿ ಈಗ ತುಮಕೂರು ಜಿಲ್ಲೆಯ ಸುತ್ತಮುತ್ತ ಒಣಗಿದ ಸಿಪ್ಪೆಯಿಂದ ತೆಂಗಿನ ನಾರು ತೆಗೆಯುವ ಘಟಕಗಳು ಅಣಬೆಗಳಂತೆ ತಲೆ ಎತ್ತುತ್ತಿದ್ದು, ಸಾವಯವ ಕೃಷಿ ಪದ್ಧತಿಯ ಜನಪ್ರಿಯತೆಯ ಪರಿಣಾಮವಾಗಿ ತೆಂಗಿನ ನಾರಿಗೆ ಮಹತ್ವ ಬಂದಿದೆ ಎಂಬ ಮಾಹಿತಿ ದೊರಕಿದೆ. ಇದನ್ನು ಗಮನಿಸಿದರೆ ಕುವೆಂಪು ಅವರ ಯಾರೂ ಅಮುಖ್ಯರಲ್ಲ ಎಂಬ ಸಾಲು ನೆನಪಾಗುವುದು ಸತ್ಯ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.