ಧರ್ಮಸ್ಥಳ ಶವಗಳ ಪತ್ತೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ!
– ಧರ್ಮಸ್ಥಳ ಪ್ರಕರಣ ಪರಿಶೀಲನೆಗೆ ವಿಶೇಷ ತಂಡದ ರಚನೆ ಸಾಧ್ಯತೆ
– ಮಹಿಳಾ ಆಯೋಗದಿಂದ ದೂರು: ದಿನೇ ದಿನೇ ಕುತೂಹಲ
– ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಲರ್ಟ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್, ಬೆಳ್ತಂಗಡಿ
ಬೆಳ್ತಂಗಡಿ: ಧರ್ಮಸ್ಥಳ ಶವಗಳ ಪತ್ತೆ ಪ್ರಕರಣ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಭೀಮ ಎಂಬ ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನ್ಯಾಯಾಲಯಕ್ಕೆ ಹಾಜರಾಗಿ 1 ಗಂಟೆಗೂ ಹೆಚ್ಚು ಕಾಲ ಮಾಹಿತಿ ನೀಡಿದ್ದಾನೆ.
ಮಹಿಳಾ ಆಯೋಗದಿಂದ ದೂರು ನೀಡಲಾಗಿದ್ದು, ಪ್ರಕರಣ ದಿನೇ ದಿನೇ ಕುತೂಹಲ ಮೂಡಿಸುತ್ತಿದೆ. ಧರ್ಮಸ್ಥಳ ಪ್ರಕರಣ ಪರಿಶೀಲನೆಗೆ ವಿಶೇಷ ತಂಡದ ರಚನೆ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌದರಿಯವರು ಕಳೆದ ಇಪ್ಪತ್ತು ವರ್ಷಗಳಿಂದ ಧರ್ಮಸ್ಥಳ ಸುತ್ತಮುತ್ತಲ ವ್ಯಾಪ್ತಿಗೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಸಾವಿನ ವಿಚಾರ ಕುರಿತು ಹಾಗೂ ಎಷ್ಟು ಅಸಹಜ ಸಾವು, ಕೊಲೆ ಮತ್ತು ಅತ್ಯಾಚಾರಗಳು ನಡೆದಿವೆ ಎಂಬುದನ್ನು ಪರಿಶೀಲಿಸಲು ವಿಶೇಷ ತಂಡವನ್ನು ಸರ್ಕಾರವು ರಚಿಸಬೇಕೆಂದು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು, ಆ ಮೂಲಕ ನಿಜವಾದ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. “ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ದೂರನ್ನು ತೆಗೆದುಕೊಂಡು ಹೋದರೂ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಅಸ್ವಾಭಾವಿಕ ಸಾವು, ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ವರದಿ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.