Categories
ಬೆಂಗಳೂರು

ರಾಜ್ಯದ ಜನತೆಗೆ ಯುಗಾದಿ ಹಬ್ಬದ ವೇಳೆ ಹೊಸ ಶಾಕ್…!!

ರಾಜ್ಯದ ಜನತೆಗೆ ಯುಗಾದಿ ಹಬ್ಬದ ವೇಳೆ ಹೊಸ ಶಾಕ್…!!
– ಹಾಲು, ಮೊಸರು ಬೆಲೆ ಲೀಟರ್‌ಗೆ ₹4 ಏರಿಕೆ.

ರಾಜ್ಯದ ಜನತೆಗೆ ಕರೆಂಟ್ ಶಾಕ್, ನಿಗದಿತ ಶುಲ್ಕ ಏರಿಕೆ..!!
– ಫಿಕ್ಸೆಡ್ ಚಾರ್ಜ್ ದರ 25 ರೂ. ಏರಿಕೆ
– ವಿದ್ಯುತ್‌ ಶುಲ್ಕದ ಹೊರೆ ಗೃಹ ಜ್ಯೋತಿಗೆ ಇಲ್ಲ

NAMMUR EXPRESS NEWS
ಬೆಂಗಳೂರು: ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಯುಗಾದಿ ಹಬ್ಬದ ವೇಳೆ ಹೊಸ ಶಾಕ್ ನೀಡಿದೆ. ಎಲ್ಲಾ ಮಾದರಿಯ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 4 ರು.ಹೆಚ್ಚಳಮಾಡಿದೆ. ಈ ದರ ಹೆಚ್ಚಳ ಏ.1 ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಕಳೆದ ವರ್ಷದ ಜುಲೈ ತಿಂಗಳಿಂದ ಪ್ರತಿ ಲೀಟರ್ ಹಾಲಿಗೆ 50 ಮಿ.ಲೀ. ಹೆಚ್ಚುವರಿ ನೀಡಿ 2 ರು. ಹೆಚ್ಚಿಗೆ ವಸೂಲಿ ಮಾಡುತ್ತಿದ್ದ ನಿರ್ಧಾರ ಹಿಂಪಡೆದು ಇದೀಗ ಒಂದು ಲೀಟರ್ ಗೆ 4 ರು. ದರ ಪರಿಷ್ಕರಣೆ ಮಾಡಲಾಗಿದೆ. ಅಂದರೆ ಇನ್ನು ಮುಂದೆ ಹಾಲಿನ ಪ್ಯಾಕೆಟ್ ಗಳಲ್ಲಿ 50 ಮಿ.ಲೀ. ಹೆಚ್ಚು ಹಾಲು ಸಿಗುವುದಿಲ್ಲ, ಅದಕ್ಕೆ 2 ರು. ಅಧಿಕವಾಗಿಯೂ ನೀಡಬೇಕಿಲ್ಲ. ಒಂದು ಲೀಟರ್‌ಗೆ 4 ರು. ಹೆಚ್ಚುವರಿ ನೀಡಬೇಕು. ತಾಂತ್ರಿಕವಾಗಿ ದರ 4 ರು. ಹೆಚ್ಚಳವಾಗಿದೆಯಂತೆ ಕಂಡುಬಂದರೂ, 50 ಎಂಎಲ್ ಬದಿಗಿಟ್ಟರೆ ಜನರು ಒಂದು ಲೀಟರ್ ಹಾಲಿಗೆ 2 ರು. ಹೆಚ್ಚು ಪಾವತಿಸಬೇಕಾಗುತ್ತದೆ.
ಗುರುವಾರ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ನಂದಿನಿ ಹಾಲಿನ ದರ ಹೆಚ್ಚಳ ಕುರಿತು ವಿವರ ನೀಡಿದರು.

– ರಾಜ್ಯದ ಜನತೆಗೆ ಕರೆಂಟ್ ಶಾಕ್, ನಿಗದಿತ ಶುಲ್ಕ ಏರಿಕೆ..!!

ಬೆಂಗಳೂರು : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಏ.1ರಿಂದ ಅನ್ವಯವಾಗುವಂತೆ ವಾರ್ಷಿಕ ವಿದ್ಯುತ್‌ ದರ ಪರಿಷ್ಕರಣೆ ಮಾಡಿದ್ದು, ಗೃಹ ಬಳಕೆ ಗ್ರಾಹಕರಿಗೆ ವಿದ್ಯುತ್‌ ದರ, ನಿಗದಿತ ಶುಲ್ಕ ಹೆಚ್ಚಳ ಮೂಲಕ ಬರೆ ಹಾಕಿದೆ. ಇದೇ ವೇಳೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಶುಲ್ಕ ಕಡಿತದ ಯುಗಾದಿ ಕೊಡುಗೆ ನೀಡಿದೆ. ಕೆಇಆರ್‌ಸಿ ಆದೇಶದ ಪರಿಣಾಮ ಏ.1ರಿಂದ ಅನ್ವಯವಾಗುವಂತೆ 2025-26ನೇ ಸಾಲಿಗೆ ಗೃಹ ಬಳಕೆದಾರರಿಗೆ ವಿದ್ಯುತ್ ದರ ಪ್ರತಿ ಯುನಿಟ್‌ಗೆ 26 ಪೈಸೆ ಹಾಗೂ ನಿಗದಿತ ಶುಲ್ಕ ಪ್ರತಿ ಕಿ.ವ್ಯಾಟ್‌ಗೆ ಬರೋಬ್ಬರಿ 25 ರು. ಹೆಚ್ಚಳ ಆಗಲಿದೆ. ಮತ್ತೊಂದೆಡೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯುನಿಟ್‌ಗೆ 64 ಪೈಸೆಯಿಂದ 1.75 ರು.ವರೆಗೆ ವಿದ್ಯುತ್‌ ದರದಲ್ಲಿ ಭಾರಿ ಕಡಿತ ಆಗಲಿದೆ. ನಿಗದಿತ ಶುಲ್ಕವೂ 5 ರು.ಹಾಗೂ 10 ರು.ಮಾತ್ರ ಹೆಚ್ಚಳ ಮಾಡಲಾಗಿದೆ. ತನ್ಮೂಲಕ ಕೆಇಆರ್‌ಸಿಯು ಯುಗಾದಿ ಹಬ್ಬಕ್ಕೆ ಗೃಹ ಬಳಕೆ ಗ್ರಾಹಕರಿಗೆ ಬೇವು ಹಾಗೂ ವಾಣಿಜ್ಯ, ಕೈಗಾರಿಕಾ ಗ್ರಾಹಕರಿಗೆ ಬೆಲ್ಲ ಹಂಚಿದೆ. ವಾಸ್ತವವಾಗಿ ವಾರ್ಷಿಕ ದರ ಪರಿಷ್ಕರಣೆಯಲ್ಲಿ ಗೃಹ ಬಳಕೆ ವಿದ್ಯುತ್‌ ದರ ಪ್ರತಿ ಯುನಿಟ್‌ಗೆ 10 ಪೈಸೆ ಕಡಿಮೆ ಮಾಡಲಾಗಿದೆ. ಆದರೆ, ಮಾ.18 ರಂದು ಕೆಇಆರ್‌ಸಿಯು ಪಿಟಿಸಿಎಲ್‌, ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿ ಹೊರೆ ಗ್ರಾಹಕರ ಮೇಲೆ ಹಾಕಿ ರೀತಿಯ ಸಂಪರ್ಕಗಳಿಗೂ ಏ.1ರಿಂದ ಅನ್ವಯವಾಗುವಂತೆ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿತ್ತು. ಹೀಗಾಗಿ ವಾರ್ಷಿಕ ದರ ಪರಿಷ್ಕರಣೆಯಲ್ಲಿ ಕೆಇಆರ್‌ಸಿಯು ಗೃಹ ಬಳಕೆ ದರ 10 ಪೈಸೆ ಕಡಿಮೆ ಮಾಡಿದ್ದರೂ ಏ.1ರಿಂದ ಅನ್ವಯವಾಗುವಂತೆ 26 ಪೈಸೆ ಹೊರೆ ಬೀಳಲಿದೆ. ಇನ್ನು ಪ್ರತಿ ಕಿ.ವ್ಯಾಟ್‌ಗೆ 120 ರು. ಇದ್ದ ನಿಗದಿತ ಶುಲ್ಕವನ್ನು 145 ರು.ಗೆ ಹೆಚ್ಚಳ ಮಾಡುವುದರಿಂದ ನಿಗದಿತ ಶುಲ್ಕ ತೀವ್ರ ಹೊರೆಯಾಗಲಿದೆ.

– ಗೃಹ ಜ್ಯೋತಿಗೆ ಹೊರೆ ಇಲ್ಲ:

ಶೂನ್ಯ ಬಿಲ್‌ ಪಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ವಿದ್ಯುತ್‌ ಶುಲ್ಕ ಸರ್ಕಾರವೇ ಭರಿಸುವುದರಿಂದ ಅಂತಹ ಗ್ರಾಹಕರಿಗೆ ಹೊರೆ ಆಗುವುದಿಲ್ಲ. ಆದರೆ ಗೃಹಜ್ಯೋತಿ ವ್ಯಾಪ್ತಿಗೆ ಬಾರದ ಗ್ರಾಹಕರು ಹಾಗೂ ಗೃಹಜ್ಯೋತಿ ಫಲಾನುಭವಿಗಳಾಗಿದ್ದರೂ ಅರ್ಹತೆ ಪಡೆದಿರುವ ಉಚಿತ ಮಿತಿಗಿಂತ ಹೆಚ್ಚು ಬಳಸುತ್ತಿರುವ ಗ್ರಾಹಕರಿಗೆ ಕಹಿ ಅನುಭವ ಆಗಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.