Categories
ಬೆಂಗಳೂರು

ಆರ್​ಸಿಬಿ ಗೆಲುವು: 18 ವರ್ಷದ ಬಳಿಕ ವಿಜಯ್ ಮಲ್ಯ ಹೀರೋ!

ಆರ್​ಸಿಬಿ ಗೆಲುವು: 18 ವರ್ಷದ ಬಳಿಕ ವಿಜಯ್ ಮಲ್ಯ ಹೀರೋ!
– ಸೋಶಿಯಲ್ ಮೀಡಿಯಾದಲ್ಲಿ ಮಲ್ಯ ಪರ ಅನುಕಂಪ
– ಭಾರತಕ್ಕೆ ಬನ್ನಿ ಎಂಬ ಕರೆ: ಅಚ್ಚರಿ ಮೂಡಿಸಿದ SBI ವೈರಲ್ ಫೋಟೋ!

NAMMUR EXPRESS NEWS,
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಐಪಿಎಲ್ ಚಾಂಪಿಯನ್ ಆಗಿದೆ. ಬರೋಬ್ಬರಿ 18 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದಿದೆ. ಆರ್​ಸಿಬಿಗೆ ಇಡೀ ಕ್ರಿಕೆಟ್ ಜಗತ್ತೇ ಶುಭಾಶಯಗಳ ಮಳೆಗರೆಯುತ್ತಿದೆ. ಭಾರತ ಮಾತ್ರವಲ್ಲ, ವಿದೇಶಿ ಕ್ರಿಕೆಟಿಗರು ಕೂಡ ಆರ್​ಸಿಬಿಗೆ ಶುಭ ಹಾರೈಸಿದ್ದಾರೆ. ಹೀಗಿರುವಾಗ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರಿಂದ ಶುಭಾಶಯ ಕೂಡ ಬಂದಿದೆ. ಜತೆಗೆ 18 ವರ್ಷಗಳ ಬಳಿಕ ವಿಜಯ್ ಮಲ್ಯ ಪರ ಅನುಕಂಪ ಶುರುವಾಗಿದೆ.
ಮದ್ಯದ ದೊರೆ ಖ್ಯಾತಿಯ ವಿಜಯ ಮಲ್ಯ ತನ್ನ ಮಾಜಿ ತಂಡಕ್ಕೆ ತಮ್ಮ ಎಕ್ಸ್​ ಖಾತೆಯಲ್ಲಿ ಶುಭಾಶಯ ಕೋರಿದ್ದಾರೆ. ಇದೀಗ ವಿಜಯ್ ಮಲ್ಯ ಅವರ ಪೋಸ್ಟ್​ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಮೆಂಟ್ ಮಾಡಿದೆ ಎಂಬ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮಲ್ಯ, SBI ಸೇರಿದಂತೆ ಇತರ ಬ್ಯಾಂಕುಗಳಲ್ಲಿ ಸುಮಾರು 9,000 ಕೋಟಿ ರೂ.ಗಳಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿರುವ ಮಲ್ಯ, ತಮ್ಮ X ನಲ್ಲಿ ಆರ್​ಸಿಬಿಗೆ ಶುಭಾಶಯ ತಿಳಿಸಿದ್ದಾರೆ.

ಮಲ್ಯ ಟ್ವೀಟ್​ನಲ್ಲಿ ಇದ್ದಿದ್ದೇನು?
‘ಕೊನೆಗೂ, 18 ವರ್ಷಗಳ ನಂತರ ಆರ್‌ಸಿಬಿ ಐಪಿಎಲ್ ಚಾಂಪಿಯನ್ ಆಗಿದೆ. 2025 ರ ಟೂರ್ನಮೆಂಟ್‌ನಲ್ಲಿ ಐಪಿಎಲ್ ತಂಡದ ಪ್ರದರ್ಶನ ಬಲಿಷ್ಠವಾಗಿತ್ತು. ಈ ತಂಡವು ಪಂದ್ಯಾವಳಿಯ ಉದ್ದಕ್ಕೂ ಜವಾಬ್ದಾರಿಯುತ ಆಟವನ್ನು ಆಡಿದ್ದು ಕಂಡುಬಂದಿದೆ. ಆಟಗಾರರಲ್ಲಿ ಸರಿಯಾದ ತರಬೇತಿ ಮತ್ತು ಸಮನ್ವಯ ಕಂಡುಬಂದಿದೆ. ಇಡೀ ತಂಡವಾಗಿ ಆಟವನ್ನು ಆಡಿದರು. ಈ ತಂಡಕ್ಕೆ ನನ್ನ ಶುಭಾಶಯಗಳು’ ಎಂದು ವಿಜಯ್ ಮಲ್ಯ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತಕ್ಕೆ ಬನ್ನಿ ಸರ್ ಎಂದ ಎಸ್​ಬಿಐ!

ವಿಜಯ್ ಮಲ್ಯ ಅವರ ಈ ಪೋಸ್ಟ್ ಅನ್ನು ಸುಮಾರು 6 ಲಕ್ಷ ಜನರು ವೀಕ್ಷಿಸಿದ್ದು, ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಮೆಂಟ್ ಮಾಡಿದೆ ಎನ್ನಲಾಗಿರುವ ಫೋಟೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ, ‘ಸರ್, ಭಾರತಕ್ಕೆ ಹಿಂತಿರುಗಿ. ಒಟ್ಟಿಗೆ ಆಚರಿಸೋಣ’ ಎಂದು ಬರೆಯಲಾಗಿದೆ. ಆದರೆ ಈ ವೈರಲ್ ಫೋಟೋದ ಹಿಂದಿರುವ ಸತ್ಯಾಂಶದ ಹಿಂದೆ ಬಿದ್ದಾಗ ತಿಳಿದಿದ್ದು, ಇದು ಕೇವಲ ಎಡಿಟೆಡ್ ಫೋಟೋ ಆಗಿದೆ. ಎಸ್​ಬಿಐ ಆ ರೀತಿಯಾಗಿ ಯಾವುದೇ ಕಾಮೆಂಟ್ ಮಾಡಿರುವುದು ಅಧಿಕೃತವಾಗಿ ತಿಳಿದುಬಂದಿಲ್ಲ. ಇದರರ್ಥ ವೈರಲ್ ಫೋಟೋದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದನ್ನು ಅರಿಯಬಹುದಾಗಿದೆ.
ಭಾರತಕ್ಕೆ ಕಿಂಗ್ ಫಿಷರ್ ಏರ್ಲೈನ್ಸ್, ಟಿಪ್ಪು ಖಡ್ಗ, ರೇಸ್ ಸೇರಿ ಅನೇಕ ಹಿರಿಮೆ ತಂದ ಮಲ್ಯ ಭಾರತಕ್ಕೆ ವಾಪಾಸ್ ಬರಲಿ ಎಂಬ ದೊಡ್ಡ ಟ್ರೆಂಡ್ ಸೆಟ್ ಆಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.