ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್ ಕೊಟ್ಟ ಸರ್ಕಾರ
* ದರ ಏರಿಕೆ ಮಾಡಿದ KERC
* ಯಾರಿಗೆ ಅನ್ವಯ? ಇಲ್ಲಿದೆ ಮಾಹಿತಿ
NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ದರ ಏರಿಕೆ ಸರಣಿ ಮುಂದುವರೆದಿದ್ದು, ಮತ್ತೆ ವಿದ್ಯುತ್ ದರ ಏರಿಕೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಗ್ರಾಹಕರಿಗೆ ಶಾಕ್ ನೀಡಿದೆ.
ಬೆಲೆ ಏರಿಕೆಯ ಹೊಡೆತದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಕೂಡ ಶಾಕ್ ನೀಡಿದ್ದು, ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ‌್ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆ.ಇ.ಆರ್.ಸಿ ಮುಂದಾಗಿದ್ದು, ದರ ಹೆಚ್ಚಳದ ಆದೇಶ ಹೊರಡಿಸಿದೆ. ಎಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಲಿದೆ. ಸರ್ಕಾರದ ಈ ಆದೇಶದ ವಿರುದ್ಧ ಬಿ.ಜೆ.ಪಿ ಆಕ್ರೋಶ ವ್ಯಕ್ತಪಡಿಸಿದೆ.
ವಿದ್ಯುತ್ ಬೆಲೆ ಏರಿಕೆ ಯಾರಿಗೆ ಅನ್ವಯ?
‘ಗೃಹಜ್ಯೋತಿ ನಷ್ಟದಿಂದ ವಿದ್ಯುತ್ ದರ ಏರಿಕೆ ಮಾಡಲಾಗಿಲ್ಲ. ನಾವು 200 ಯೂನಿಟ್ ವಿದ್ಯುತ್ ಉಚಿತ ಕೊಟ್ಟಿದ್ದೇವೆ. 200 ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯವಾಗುತ್ತದೆ. ಬಿಜೆಪಿಯವರು ಶ್ರೀಮಂತರ ಪರವಾಗಿ ಮಾತನಾಡುತ್ತಿದ್ದಾರೆ. ಸರ್ಕಾರ ದರ ಏರಿಕೆ ಮಾಡುವುದಿಲ್ಲ. ಸ್ವಾಯತ್ತ ಸಂಸ್ಥೆ ದರ ಏರಿಕೆ ಮಾಡುತ್ತದೆ. ಈ ವಿಚಾರದಲ್ಲಿ ಬಿಜೆಪಿ ಆರೋಪ ಸರಿಯಲ್ಲ’ ಎಂದು ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ದರವೂ ಹೆಚ್ಚಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಆಟೋ ದರ ಏರಿಕೆಗೂ ಸರ್ಕಾರ ಸಮ್ಮತಿ ನೀಡಿತ್ತು. ಇದೀಗ ವಿದ್ಯುತ್ ದರ ಹೆಚ್ಚಳ ಆದೇಶ ಹೊರಡಿಸಲಾಗಿದ್ದು, ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಎಳೆದಂತಾಗಿದೆ.