Categories
ಉಡುಪಿ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಕಾರ್ಕಳ: ವ್ಯಕ್ತಿ ಸತ್ತ ಹತ್ತು ದಿನಗಳ ಬಳಿಕ ಬೆಳಕಿಗೆ ಬಂದ ಸಂಗತಿ
• ಬಂಟ್ವಾಳ: ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ; ಆರೋಪಿಗಳ ವಿರುದ್ಧ ಪ್ರಕರಣ ದಾಖಲು
• ಉಡುಪಿ: ಮದ್ಯಪಾನ ಚಟಕ್ಕೆ ವ್ಯಕ್ತಿ ಆತ್ಮಹತ್ಯೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಕಾರ್ಕಳ: ವ್ಯಕ್ತಿ ಸತ್ತ ಹತ್ತು ದಿನಗಳ ಬಳಿಕ ಬೆಳಕಿಗೆ ಬಂದ ಪ್ರಕರಣ

ಕಾರ್ಕಳ: ವ್ಯಕ್ತಿಯೊಬ್ಬರು ಮೃತಪಟ್ಟು 10 ದಿನಗಳ ನಂತರ ವಿಚಾರ ತಿಳಿದ ಘಟನೆ, ನಂದಳಿಕೆಯಲ್ಲಿ ನಡೆದಿದೆ. ಮರದ ಕೆಲಸ ಮಾಡಿಕೊಂಡಿದ್ದ ನಂದಳಿಕೆಯ ನಿವಾಸಿಯಾದ ವಾಸುದೇವ ಆಚಾರ್ಯ ಅವರು ಮನೆಯ ಬಾಗಿಲು ಹಾಕಿಕೊಂಡಿದ್ದು, ಅವರು ಮೃತಪಟ್ಟ ಘಟನೆ ಯಾರಿಗೂ ತಿಳಿದಿಲ್ಲ. ಕೆಲವು ದಿನಗಳ ಬಳಿಕ ಅವರ ಮನೆಯಿಂದ ವಾಸನೆ ಬರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಮೃತದೇಹ ಕೊಳೆತು ಹೋಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಬಂಟ್ವಾಳ: ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ; ಪ್ರಕರಣ ದಾಖಲು

ಬಂಟ್ವಾಳ: ಕರ್ತವ್ಯಕ್ಕೆ ಅಡ್ಡಿಪಡಿಸಿ, ಜಾತಿ ನಿಂದನೆ ಮಾಡಿರುವ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ. ನೇರಳೆಕಟ್ಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಣಿ ಶಾಖ ಸಿಬ್ಬಂದಿ ಹಾಗೂ ನೆಟ್ಲ ಮುಡ್ನೂರು ನಿವಾಸಿ ಸೇಸಮ್ಮ ಅವರು ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ಪ್ರಭಾರ ವ್ಯವಸ್ಥಾಪಕರಾದ ಯತೀಶ್ ಡಿ. ಗೌಡ ಅವರು ಸೇಸಮ್ಮ ಅವರಿಗೆ ಕರ್ತವ್ಯ ನಿರ್ವಹಿಸದಂತೆ ಸೂಚಿಸಿದ್ದಾರೆ. ಇದನ್ನು ಕುರಿತು ಸೇಸಮ್ಮ ಅವರು ಪ್ರಶ್ನಿಸಿದಾಗ ಯತೀಶ್ ಅವರನ್ನು ಕೈಯಿಂದ ತಳ್ಳಿ, ಜಾತಿ ನಿಂದನೆ ಮಾಡಿದ್ದಾರೆ.

ಇದರಿಂದ ಆಘಾತಗೊಂಡ ಸೇಸಮ್ಮ ಅವರನ್ನು ಉಳಿದ ಸಿಬ್ಬಂದಿಗಳು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದರು ಎಂದು ಸೇಸಮ್ಮ ಅವರು ಪೊಲೀಸರಿಗೆ ದೂರು ನೀಡುತ್ತಾರೆ. ಸೇಸಮ್ಮ ಅವರು ನೀಡಿರುವ ದೂರಿನ ಆಧಾರದ ಮೇಲೆ ಸಹಕಾರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ, ಶಾಖೆಯ ಪ್ರಭಾರ ವ್ಯವಸ್ಥಾಪಕ ಯತೀಶ್ ಡಿ ಗೌಡ ಅವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಉಡುಪಿ: ಮದ್ಯಪಾನ ಚಟಕ್ಕೆ ವ್ಯಕ್ತಿ ಆತ್ಮಹತ್ಯೆ

ಉಡುಪಿ: ವಿಪರೀತ ಕುಡಿತದ ಚಟ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಸೋಮವಾರದಂದು ಶಿರ್ವಾದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಟ್ಟಾರು ನಿವಾಸಿ ಪ್ರಕಾಶ್ ಆಚಾರ್ಯ ಎಂದು ಗುರುತಿಸಲಾಗಿದೆ. ಜೀವನದಲ್ಲಿ ಜುಗುಪ್ಸೆಗೊಂಡ ಪ್ರಕಾಶ್ ಆಚಾರ್ಯ ಅವರು ಮನೆಯ ಸಮೀಪದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕರಾವಳಿ ಕಾರ್ಕಳ ಪ್ರತಿಭೆಗಳು ರಾಜ್ಯ

ಡ್ಯಾನ್ಸ್ ಮಾಡಿ ಮಕ್ಕಳಿಗೆ ಪಾಠ ಕಲಿಸುವ ಟೀಚರ್ ವಂದನಾ ರೈ!

ಡ್ಯಾನ್ಸ್ ಮಾಡಿ ಮಕ್ಕಳಿಗೆ ಪಾಠ ಕಲಿಸುವ ಟೀಚರ್ ವಂದನಾ ರೈ!
ಕಾರ್ಕಳದ ವಂದನಾ ಟೀಚರ್ ಈಗ ಎಲ್ಲೆಡೆ ಫೇಮಸ್
ಕರೋನಾ ವೇಳೆ ಹುಟ್ಟಿದ ಹೊಸ ಬಗೆಯ ಶಿಕ್ಷಣ ಕಲೆ

ಹಿಂದೆ ಗುರು ಇದ್ದು ,ಮುಂದೆ ಗುರಿ ಇದ್ದಲ್ಲಿ ಯಶಸ್ಸು ನಿಶ್ಚಿತ ಎಂಬಂತೆ, ವಿದ್ಯಾರ್ಥಿಗಳಲ್ಲಿ ನಿರ್ಧಿಷ್ಟ ಗುರಿ ಇದ್ದು, ಆ. ಗುರಿಯೆಡೆಗೆ ತಲುಪಲು ಹೊಸ ಬೆಳಕು ನೀಡಿ, ಅವರ ಭವಿಷ್ಯ ಉಜ್ವಲಗೊಳಿಸಲು ಸಾಕಾರ ನೀಡುವ ಗುರುವಿದ್ದರೆ ಮಕ್ಕಳ ಬಾಳು ಬಂಗಾರವಲ್ಲವೇ?

ಹೌದು. ಇದೇ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ಪಾಠ ಹೇಳುವ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡು , ಮಕ್ಕಳನ್ನು ಮುಂದಿನ ರುವಾರಿಗಳನ್ನಾಗಿ ಮಾಡುವತ್ತ ಸಾಗುತ್ತಿರುವ ಈ ಬಹುಮುಖ ಪ್ರತಿಭೆ ಕಾರ್ಕಳದ ವಂದನಾ ರೈ. ಇವರ ಪಾಠ, ಡ್ಯಾನ್ಸ್, ಮಕ್ಕಳ ಪ್ರೇರಣಾ ಶಕ್ತಿ ಎಲ್ಲೆಡೆ ಫೇಮಸ್. ಲಾಕ್‌ಡೌನ್ ಹೇರಿಕೆ ನಂತರ, ಕೋವಿಡ್-19 ವಿರುದ್ಧ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳನ್ನು ಮುಚ್ಚಲಾಯಿತು. ಇದರಿಂದಲೇ ಶಿಕ್ಷಣದಲ್ಲಿ ಹೊಸ ಮಾರ್ಗಗಳು ಹುಟ್ಟಿಕೊಂಡವು. ಮುಖ್ಯವಾಗಿ ಆನ್‌ಲೈನ್ ಕ್ಲಾಸುಗಳು, ಅಂದರೆ ಶಿಕ್ಷಣ ಡಿಜಿಟಲ್ ಆಗಿ ಸಾಗಿತು. ಈ ಅಸಾಧಾರಣ ಪರಿಸ್ಥಿತಿಗಳು ಶಾಲಾ ಶಿಕ್ಷಕರನ್ನು ಆನ್‌ಲೈನ್ ಶಿಕ್ಷಣವನ್ನು ರಚನಾತ್ಮಕ ಹಾಗೂ ಹೊಸ ತಂತ್ರಗಳಿಂದ ನಡೆಸಲು ಪ್ರೇರೇಪಿಸಿತು. ವಿಶೇಷವಾಗಿ ಚಿಕ್ಕ ಮಕ್ಕಳ ಗಮನವನ್ನು ಆಕರ್ಷಿಸಲು ಹೊಸ ತಂತ್ರಗಳನ್ನು ಅನುಸರಿಸಲು ಇದು ತುಂಬಾ ಸವಾಲಿನದ್ದಾಗಿತ್ತು.

ಶಿಕ್ಷಕರು ಆನ್‌ಲೈನ್ ತರಗತಿಗಳನ್ನು ರಮಣೀಯವಾಗಿಸಲು ಹೊಸ ಮಾರ್ಗಗಳನ್ನು ಅನುಸರಿಸುತ್ತಿರುವಾಗ, ಜೇಸಿಸ್ ಇಂಗ್ಲಿಷ್ ಮೀಡಿಯಮ್ ಶಾಲೆಯ ಶಿಕ್ಷಕಿ ವಂದನಾ ರೈ, ರವರು “ವಂದನಾ ರೈ ಕಾರ್ಕಳ’ ಯುಟ್ಯೂಬ್ ಚಾನೆಲ್ ಆರಂಭಿಸಿದರು. ಇದು ಉಡುಪಿ ಜಿಲ್ಲೆ ಕಾರ್ಕಳದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಇವರ ಚಾನೆಲ್‌ನಲ್ಲಿ ಅಭಿನಯ ಗೀತೆಗಳು ಸೇರಿದಂತೆ ಮಕ್ಕಳ ಪಾಠ ಕುರಿತು ಅನೇಕ ವಿಡಿಯೋ ಅಪ್‌ಲೋಡ್ ಆಗಿವೆ. ಆ ಆನ್‌ಲೈನ್ ತರಗತಿಗಳಿಗೆ ಮಕ್ಕಳನ್ನು ಫೋನಿಕ್ಸ್ ಬಳಸಿ ಆಕರ್ಷಿಸುವ ಸೃಜನಾತ್ಮಕ ತಂತ್ರವನ್ನು ಪ್ರಯತ್ನಿಸಿದರು.
ಈ ಪರಿಕಲ್ಪನೆ ವಂದನಾ ರೈ ಮತ್ತು ಇತರ ಶಿಕ್ಷಕರಿಂದ ಅಭಿವೃದ್ಧಿಪಡಿಸಲಾಯಿತು. ವಂದನಾ ರೈ ಜೊತೆಗೆ ಆಶಾ ಗೋಖಲೆ, ರಜನಿ ಮತ್ತು ಶ್ರೀದೇವಿ ಕೂಡ ಈ ವಿಡಿಯೋದಲ್ಲಿ ಭಾಗವಹಿಸಿದ್ದರು. ಅವರು ಮಕ್ಕಳಿಗೆ ಇಂಗ್ಲಿಷ್ ಮತ್ತು ಕನ್ನಡ ಅಕ್ಷರಗಳು ಮತ್ತು ಪಠ್ಯಪುಸ್ತಕಗಳಲ್ಲಿ ಉಲ್ಲೇಖಿಸಲಾದ ವಿವಿಧ ಕನ್ನಡ ಹಾಡುಗಳನ್ನು ವಿಡಿಯೋಗಳ ಮೂಲಕ ಕಲಿಸಿದರು. ಶಿಕ್ಷಕರು ಕಲಿಸುವ ಪಾಠಗಳು ಮಕ್ಕಳಿಗೆ ಇನ್ನೂ ಸುಲಭವಾಗಿ ಅರ್ಥವಾಗಲು ಹಾಗೂ ಅವರ ಮನಸ್ಸಿನಾಳಕ್ಕೆ ಇಳಿಯುವಂತೆ ಮಾಡಲು ಪದ್ಯಕ್ಕೆ ತಕ್ಕ ನೃತ್ಯ ಮತ್ತು ಪಾಠಕ್ಕೆ ತಕ್ಕ ಹಾವಭಾವಗಳನ್ನು ನಟಿಸಿ ತೋರಿಸಿದ್ದಾರೆ.

ಪುಟ್ಟ ಪುಟ್ಟ ಮಕ್ಕಳಿಗೂ ಇಷ್ಟ!
ವಂದನಾ ಕಳೆದ ಮೂರು ವರ್ಷಗಳಿಂದ ಕಾರ್ಕಳದ ಜೇಸಿಸ್ ಇಂಗ್ಲಿಷ್ ಮೀಡಿಯಮ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಮೊದಲ ಸಲ ಶಾಲೆಗೆ ಬಂದ ಮಕ್ಕಳನ್ನು ಸುಧಾರಿಸುವುದು ಹೇಗೆ? ಅವರು ಕಲಿಯಬೇಕಾದ ವಾಕ್ಯಗಳೇನು ಎನ್ನುವುದನ್ನು ಇವರ ಚಾನೆಲ್‌ನಲ್ಲಿ ನೋಡಬಹುದು. ಪುಟ್ಟ ಪುಟ್ಟ ಮಕ್ಕಳಿಗೆ ಇವರ ಚಾನೆಲ್ ಒಂದು ಎನ್‌ಸೈಕ್ಲೋಪಿಡಿಯ ರೀತಿ ಆಗಿದೆ. ಮಕ್ಕಳು ಕಲಿಯಬೇಕಾದ ಹಾಡು, ನೃತ್ಯಗಳನ್ನು ಅದ್ಭುತವಾದ ಅಭಿನಯ ಗೀತೆಗಳಿಂದ ಕಲಿಸುವುದು ಇವರ ವಿಶೇಷತೆ.

ಮಕ್ಕಳಿಗೆ ಶಿಶು ಗೀತೆ ಕಲಿಸುವುದು ಹೇಗೆ? ಕನ್ನಡ ವರ್ಣಮಾಲೆಯನ್ನು ಎರಡು ಗೆರೆಯಲ್ಲಿ ಬರೆಯುವುದು ಹೇಗೆ? ಜ್ಞಾನೇಂದ್ರಿಯಗಳನ್ನು ಕುರಿತ ಹಾಡು, ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಅಕ್ಷರ ಮಾಲೆ, ರಜೆಯಲ್ಲಿ ಕಲಿಯಬೇಕಾದ ಹಾಡುಗಳು, ತರಕಾರಿಗಳ ಹಾಡು, ಹೂಗಳ ಹಾಡು, ಪ್ರಾರ್ಥನೆಗಳು, ಪರಿಸರ ಗೀತೆ, ಕಾಗುಣಿತದ ಹಾಡು, ಶಾಲೆಯಲ್ಲಿ ಆಚರಿಸುವ ದಿನಾಚರಣೆಗಳಿಗೆ ಹೊಂದುವ ದೇಶಭಕ್ತಿ ಗೀತೆಗಳು. ಹೀಗೆ ಮುದ್ದು ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸುವ ಸಾಕಷ್ಟು ವಿಡಿಯೋಗಳನ್ನು ಈ ಚಾನೆಲ್‌ನಲ್ಲಿ ಕಾಣಬಹುದು.

ನೃತ್ಯ ಕೇಂದ್ರದಲ್ಲೂ ಟೀಚರ್!
ಕಾರ್ಕಳ ಮತ್ತು ಬಜೆಗೋಳಿಯಲ್ಲಿ ಮಯೂರಿ ನೃತ್ಯ ತರಗತಿಯನ್ನು ಸ್ಥಾಪಿಸಿದ್ದಾರೆ. ವಂದನಾ ಬೆಂಗಳೂರಿನ ಕಿಡ್ಜೀ ಶಾಲೆಯಲ್ಲಿ 10 ವರ್ಷಗಳ ಕಾಲ ನೃತ್ಯ ತರಬೇತುದಾರರಾಗಿದ್ದಾರೆ. ಅವರು ಜೀ ಕನ್ನಡ, ಕಸ್ತೂರಿ ಮತ್ತು ಈಟಿವಿ ಚಾನಲ್‌ನಲ್ಲಿ ನಡೆದ ರಿಯಾಲಿಟಿ ಶೋಗಳಲ್ಲಿ ಗೆಲುವು ಸಾಧಿಸಿದ್ದಾರೆ. 4.46 ಲಕ್ಷ ಜನರ ಮನ ಗೆದ್ದ ಶಿಕ್ಷಕಿ! ವಂದನಾ ರೈ ಕಾರ್ಕಳ ಯುಟ್ಯೂಬ್ ಚಾನೆಲ್ ಪ್ರಸ್ತುತ 4.46 ಲಕ್ಷ ಚಂದಾದಾರರು ಮತ್ತು 644 ಅಪ್ಪ್ಲೋಡೆಡ್ ವಿಡಿಯೋ ಹೊಂದಿದೆ. ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಿ ಪಾಠ ಕಲಿಸಿದಾಗ ಅವರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದು ವಂದನಾ ರೈ ಅವರ ಮಾತು.

Categories
ಕರಾವಳಿ ಕಾರ್ಕಳ ಪುತ್ತೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಪುತ್ತೂರು: ಮಾದಕ ವಸ್ತು ಸಾಗಾಟ; ಪತ್ನಿ ಸೇರಿ ಇಬ್ಬರ ಬಂಧನ
• ಕಾರ್ಕಳ: ಬೆಂಕಿಯನ್ನು ನಂದಿಸಲು ಹೋದ ವೃದ್ಧನಿಗೆ ಗಾಯ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಪುತ್ತೂರು: ಮಾದಕ ವಸ್ತು ಸಾಗಾಟ; ಪತ್ನಿ ಸೇರಿ ಇಬ್ಬರ ಬಂಧನ

ಪುತ್ತೂರು: ಜನವರಿ ತಿಂಗಳಿನಲ್ಲಿ ನಡೆದ ಎಂಡಿಎಂ ಮಾದಕ ವಸ್ತು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಯ ಪತ್ನಿ ಜೊತೆಗೆ ಮತ್ತೊಬ್ಬರು ಕೂಡ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮಹಮ್ಮದ್ ಹರ್ಷದ್, ಇರ್ದೆಯ ಮಹಮ್ಮದ್ ಆರೀಸ್, ಮುಸ್ತಫಾ ಹಾಗೂ ಇತರರನ್ನು ಬಂಧಿಸಿದ್ದರು. ಪ್ರಮುಖ ಆರೋಪಿಯಾದ ಬಂಟ್ವಾಳದ ಪೆರಾಜೆಯ ಅಶ್ರಫ್ ನನ್ನು ಕಳೆದ ತಿಂಗಳು ಪೊಲೀಸರು ಬಂಧಿಸಿ, ವಿಚಾರಣೆಯನ್ನು ನಡೆಸಿದಾಗ ಆತನ ಪತ್ನಿ ಶಮೀಮ ಮತ್ತು ಬಂಟ್ವಾಳದ ಪೆರಾಜೆ ನಿವಾಸಿ ಮಹಮ್ಮದ್ ಶಮೀಜ್ ಕೂಡ ಭಾಗಿಗಳಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕಳೆದೆರಡು ದಿನಗಳ ಹಿಂದೆ ಶಮೀಮ ಮತ್ತು ಮಹಮ್ಮದ್ ಶಮೀಜ್ ರನ್ನು ಸಹ ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎನ್ನಲಾಗಿದೆ. ಅಲ್ಲದೆ ಎಸ್ ಪಿ ನೇತೃತ್ವದ ತಂಡವೊಂದು ಪ್ರಕರಣದ ಮೂಲವನ್ನು ಹುಡುಕಿಕೊಂಡು ದೆಹಲಿಯತ್ತ ಪ್ರಯಾಣ ಬೆಳೆಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.

•ಕಾರ್ಕಳ: ಬೆಂಕಿಯನ್ನು ನಂದಿಸಲು ಹೋದ ವೃದ್ಧನಿಗೆ ಗಾಯ

ಕಾರ್ಕಳ: ತೋಟಕ್ಕೆ ಬೆಂಕಿ ಹತ್ತಿಕೊಂಡಿದ್ದರಿಂದ ಅದನ್ನು ನಂದಿಸಲು ಹೋದ ವೃದ್ಧರೊಬ್ಬರು ಗಾಯಗೊಂಡ ಘಟನೆ, ನಿಟ್ಟೆ ಗ್ರಾಮದ ಬಜೆಕ್ಕಳದಲ್ಲಿ ನಡೆದಿದೆ. ಗಾಯಾಳುವನ್ನು ಬಜೆಕ್ಕಳದ ಶಿವಪೂಜೆ ಮನೆಯ ನಿವಾಸಿ ಜಯಕರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಕಾರ್ಕಳದ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಶ್ ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಅಚ್ಯುತ್ ಕರ್ಕೆರ, ಹರಿಪ್ರಸಾದ, ಬಸವರಾಜ್, ಲೋಕೇಶ್ ಅವರು ರಕ್ಷಣಾ ಕಾರ್ಯಚರಣೆ ನಡೆಸಿ, ಜಯಕರ್ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

Categories
ಕರಾವಳಿ ಕಾರ್ಕಳ ರಾಜ್ಯ ಶಿಕ್ಷಣ

ರಾಜ್ಯದಲ್ಲಿ ಕ್ರಿಯೇಟಿವ್ ಕಾಲೇಜು ಬೆಸ್ಟ್ ರಿಸಲ್ಟ್!

ರಾಜ್ಯದಲ್ಲಿ ಕ್ರಿಯೇಟಿವ್ ಕಾಲೇಜು ಬೆಸ್ಟ್ ರಿಸಲ್ಟ್!
– ರಾಜ್ಯಕ್ಕೆ 2,3ನೇ ರ‍್ಯಾಂಕ್‌ ಪಡೆದ ಕ್ರಿಯೇಟಿವ್ ಕಾಲೇಜು
– ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನಾ ಶೆಟ್ಟಿ 2ನೇ ರ‍್ಯಾಂಕ್‌, ವಾಣಿಜ್ಯ ವಿಭಾಗದಲ್ಲಿ ಪ್ರೇರಣಾ ಹೆಗ್ಡೆ 3ನೇ ರ‍್ಯಾಂಕ್‌

– ರಾಜ್ಯದ ಟಾಪ್ 10 ರ‍್ಯಾಂಕ್‌ ಒಳಗೆ ಕ್ರಿಯೇಟಿವ್ ಕಾಲೇಜಿನ 56 ವಿದ್ಯಾರ್ಥಿಗಳು
– ಪರೀಕ್ಷೆ ಕುಳಿತ ಎಲ್ಲಾ ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲಿ ಪಾಸ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಸಾಧನೆ ಮಾಡುವ ಮೂಲಕ ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ಮೊದಲ ಪಂಕ್ತಿ ಕಾಲೇಜು ಪೈಕಿ ಒಂದಾದ ಕಾರ್ಕಳ ಕ್ರಿಯೇಟಿವ್ ಕಾಲೇಜು ಈ ವರ್ಷ 2 ಮತ್ತು 3ನೇ ರ‍್ಯಾಂಕ್‌ ಸಾಧನೆ ಮಾಡಿದೆ. ರಾಜ್ಯದ ಟಾಪ್ 10 ರ‍್ಯಾಂಕ್‌ ಒಳಗೆ ಕ್ರಿಯೇಟಿವ್ ಕಾಲೇಜಿನ 56 ವಿದ್ಯಾರ್ಥಿಗಳು ಇದ್ದು ಇದೊಂದು ಅಪ್ರತಿಮ ಸಾಧನೆಯಾಗಿದೆ. ಈ ಮೂಲಕ ಮತ್ತೆ ರಾಜ್ಯದ ಟಾಪ್ ಶಿಕ್ಷಣ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಪ್ರಾರ್ಥನಾ ಶೆಟ್ಟಿ 600ಕ್ಕೆ 597 ಅಂಕ ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ 2ನೇ ರ‍್ಯಾಂಕ್‌, ಪ್ರೇರಣಾ ಹೆಗ್ಡೆ ವಾಣಿಜ್ಯ ವಿಭಾಗದಲ್ಲಿ 3ನೇ ರ‍್ಯಾಂಕ್‌ ಸಾಧನೆ ಮಾಡಿದ್ದಾರೆ. ಕಾರ್ಕಳ, ಉಡುಪಿ, ಹಾಸನ ಎಲ್ಲಾ ಕಾಲೇಜಲ್ಲಿ ಶೇ. 100 ಫಲಿತಾಂಶ ದಾಖಲು ಮಾಡಿದ್ದು, ಪರೀಕ್ಷೆ ಕುಳಿತ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿದ್ದಾರೆ.

ಕಾರ್ಕಳ, ಉಡುಪಿ, ಹಾಸನ ಸಾವಿರಾರು ವಿದ್ಯಾರ್ಥಿಗಳ ಸಾಧನೆ

ಕಾರ್ಕಳ, ಉಡುಪಿ, ಹಾಸನ ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ನೀಡಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಈ ವರ್ಷವೂ ರಾಜ್ಯದಲ್ಲಿ ಅಮೋಘ ಸಾಧನೆ ಮಾಡಿದೆ. ಎಲ್ಲಾ ವಿದ್ಯಾರ್ಥಿಗಳೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ವರ್ಷದಿಂದ ಶಿವಮೊಗ್ಗದಲ್ಲಿ ಕೂಡ ಶಿಕ್ಷಣ ಸೇವೆ ಸಂಸ್ಥೆ ಶುರು ಮಾಡಿದೆ. ಸಾಧನೆ ಮಾಡಿದ ಎಲ್ಲಾ ಮಕ್ಕಳಿಗೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಹಾಗೂ ಪೋಷಕ ವರ್ಗ ಅಭಿನಂದನೆಗಳನ್ನು ಸಲ್ಲಿಸಿದೆ.

Categories
ಕಾರ್ಕಳ ಕೊಡಗು ಬೆಂಗಳೂರು ರಾಜ್ಯ ಶಿವಮೊಗ್ಗ

ಟಾಪ್ 5 ನ್ಯೂಸ್ ಕರ್ನಾಟಕ

ಟಾಪ್ 5 ನ್ಯೂಸ್ ಕರ್ನಾಟಕ

ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ವೇದಿಕೆಯಲ್ಲಿ ಅಸ್ವಸ್ಥ!
– ಕೊಡಗು: ಟ್ರೆಕ್ಕಿಂಗ್ ತೆರಳಿದ ಯುವತಿ ನಾಪತ್ತೆ: ಆನೆ ದಾಳಿ?
– ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಫೋಟೋ, ಕೊಳೆತ ಪಾರ್ಸೆಲ್!
– ಶಿವಮೊಗ್ಗ: ಚರ್ಚ್ ಪ್ರಾರ್ಥನೆಯ ವೇಳೆ ಹೆಜ್ಜೇನು ದಾಳಿ!
– ಶಾಸಕ ಸುನಿಲ್ ಕುಮಾರ್ ನಿಂದನೆ: ಓರ್ವನ ಬಂಧನ?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಏಪ್ರಿಲ್ 3ರ ಶುಕ್ರವಾರದಂದು ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕದ ನಿವೃತ್ತ ಲೋಕಾಯುಕ್ತರಾದ ಎನ್ ಸಂತೋಷ್ ಹೆಗ್ಡೆ ಅವರು ವೇದಿಕೆಯಲ್ಲಿ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕಡಿಮೆ ಸಕ್ಕರೆಯ ಮಟ್ಟ ಮತ್ತು ಹೆಚ್ಚು ರಕ್ತದೊತ್ತಡದಿಂದ ಅವರು ಕುಸಿದುಬಿದ್ದರು ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಅವರನ್ನು ಮಣಿಪಾಲ್ (ವಿಕ್ರಂ) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಪ್ರಸ್ತುತ ನ್ಯಾಯಮೂರ್ತಿಗಳು ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೊಡಗು: ಟ್ರೆಕ್ಕಿಂಗ್ ತೆರಳಿದ ಯುವತಿ ನಾಪತ್ತೆ

ಕೊಡಗು: ಕರ್ನಾಟಕದ ಕಾಶ್ಮೀರ ಎಂದು ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಗೆ ಟ್ರಕಿಂಗ್ ಗೆ ತೆರಳಿದ್ದ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ, ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕೇರಳ ಮೂಲದ ಶರಣ್ಯ ಜಿ.ಎಸ್ ಅವರು ತಡಿಯಂಡಮೋಲ್ ಬೆಟ್ಟದ ಚಾರಣಕ್ಕೆ ತೆರಳಿದ್ದು, ಅಲ್ಲಿನ ಖಾಸಗಿ ಹೋಮ್ ಸ್ಟೇ ನಲ್ಲಿ ತಂಗಿದ್ದರು ಎನ್ನಲಾಗಿದೆ. ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೋಮ್ ಸ್ಟೇ ಸಿಬ್ಬಂದಿಯೊಬ್ಬರು ಇವರ ಜೊತೆಗೆ ಇತರರನ್ನು ಕಳಿಸಿಕೊಟ್ಟಿದ್ದರು.

ಆದರೆ ಶುಕ್ರವಾರ ಮಧ್ಯಾಹ್ನ 2:30ರ ಸುಮಾರಿಗೆ ಶರಣ್ಯ ಅವರು ನಾಪತ್ತೆಯಾಗಿರುವ ಮಾಹಿತಿ ಲಭಿಸಿದೆ. ಶರಣ್ಯ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಶರಣ್ಯ ಅವರು 9 ಜನರ ತಂಡದೊಂದಿಗೆ ಚಾರಣಕ್ಕೆ ತೆರಳಿದ್ದರು, ಆಗ ಅಲ್ಲಿ ಸಿಕ್ಕಿದ ನಾಯಿಗಳ ಜೊತೆ ಆಟವಾಡುತ್ತಾ ಇದ್ದುದರಿಂದ ತಂಡದಿಂದ ದೂರ ಉಳಿದಿದ್ದಾರೆ. ಬಳಿಕ ಸಂಪರ್ಕದಿಂದ ವಂಚಿತರಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಫೋಟೋ, ಕೊಳೆತ ಪಾರ್ಸೆಲ್!

ಬೆಂಗಳೂರು: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ವಿದೇಶಿ ಪ್ರಜೆಯೊಬ್ಬ ಅಸಹ್ಯಕರ ಮತ್ತು ಕೊಳೆತ ವಸ್ತುಗಳು, ಅಶ್ಲೀಲ ಚಿತ್ರಗಳನ್ನು ಪಾರ್ಸೆಲ್ ಕಳುಹಿಸಿ, ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಆಡಳಿತ ಕಛೇರಿಗೆ ಕಳೆದ ಕೆಲವು ದಿನಗಳಿಂದ ಅನುಮಾನಾಸ್ಪದ ಪಾರ್ಸೆಲ್ ನಿರಂತರವಾಗಿ ಬರುತ್ತಿದ್ದು, ಅವುಗಳನ್ನು ಅಧಿಕಾರಿಗಳು ತೆರೆದು ನೋಡಿದಾಗ ದುರ್ವಾಸನೆಯೊಂದಿಗೆ ಅಸಹ್ಯಕರ ವಸ್ತುಗಳು ಎದುರಾಗಿದೆ. ಕೊಳೆತ ತರಕಾರಿಗಳು, ಬಾಡಿದ ಹೂವಿನ ಹಾರ, ಈಗಾಗಲೇ ಬಳಸಿ ಎಸೆಯಲ್ಪಡಬೇಕಾದ ವಸ್ತುಗಳು ಮತ್ತು ಅಶ್ಲೀಲ ಚಿತ್ರಗಳು ಪತ್ತೆಯಾಗಿವೆ.

ಇದಕ್ಕೆ ಸಂಬಂಧಿಸಿದಂತೆ ಕಛೇರಿಯ ಸಿಬ್ಬಂದಿಗಳು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ವ್ಯಕ್ತಿಯ ಮೇಲೆ ಗಮನಹರಿಸಿದ ಪೊಲೀಸರು ತಕ್ಷಣ ಅವನನ್ನು ಸೆರೆಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯು ಭಾರತೀಯ ಮೂಲದ ಸುಭಾಷ್ ಜೈ ಅಜೀಜ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ನೆದರ್ ಲ್ಯಾಂಡ್ ನ ಪೌರತ್ವವನ್ನು ಹೊಂದಿದ್ದಾನೆ ಎನ್ನಲಾಗಿದೆ.

•ಶಿವಮೊಗ್ಗ: ಚರ್ಚ್ ಪ್ರಾರ್ಥನೆಯ ವೇಳೆ ಹೆಜ್ಜೇನು ದಾಳಿ!

ಶಿವಮೊಗ್ಗ: ಶಿವಮೊಗ್ಗ ನಗರದ ಜಿಲ್ಲೆಯ ಪ್ರಸಿದ್ಧ ಚರ್ಚ್ ಆಗಿರುವ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಹೆಜ್ಜೇನು ದಾಳಿ ನಡೆದ ಘಟನೆ, ಶುಕ್ರವಾರದಂದು ನಡೆದಿದೆ. ಗುಡ್ ಫ್ರೈಡೆ ಪ್ರಯುಕ್ತ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತಿದ್ದು, ಚರ್ಚ್ ನ ಆವರಣದಲ್ಲಿ ಶಿಲುಬೆ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹೆಜ್ಜೇನು ಏಕಾಏಕಿ ದಾಳಿ ನಡೆಸಿದೆ. ಇದರಿಂದ ಭಯಭೀತರಾದ ಕ್ರೈಸ್ತ ಬಾಂಧವರು ಚರ್ಚ್ ನ ಒಳಗೆ ತೆರಳಿ, ಬಾಗಿಲು ಹಾಕಿಕೊಂಡು ರಕ್ಷಣೆ ಪಡೆದುಕೊಂಡಿದ್ದಾರೆ. ಒಳಗೆ ಹೋಗುವ ಮೊದಲೇ ನೂರಾರು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿತ್ತು ಎನ್ನಲಾಗಿದೆ. ತಕ್ಷಣ ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಚರ್ಚ್ ನ ಸಮೀಪದಲ್ಲಿರುವ ಅಶೋಕ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತು ಎನ್ನುವ ಮಾಹಿತಿ ಲಭಿಸಿದೆ. ಚರ್ಚ್ ನ ಫಾದರ್ ಮೇಲೆ ಕೂಡ ಹೆಜ್ಜೇನು ದಾಳಿ ನಡೆದಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿರುವ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

•ಶಾಸಕ ಸುನಿಲ್ ಕುಮಾರ್ ನಿಂದನೆ: ಓರ್ವನ ಬಂಧನ?

ಕಾರ್ಕಳ: ಶಾಸಕರಾದ ವಿ.ಸುನಿಲ್ ಕುಮಾರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ಇನ್ನಾ ಗ್ರಾಮದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಯೋಗೀಶ್ ನವನ್ ಅವರನ್ನು ಬಂಧಿಸುವಂತೆ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ. ಕರೋನಾ ಸಂದರ್ಭದಲ್ಲಿ ಗೇರುಬೀಜ ಕಂಪನಿಯ ಪರವಾಗಿ ಶಾಸಕ ಸುನಿಲ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಇದ್ದು, ಆ ಸಂದರ್ಭದಲ್ಲಿ ಕಾರ್ಖಾನೆಯನ್ನು ತೆರೆಯಲು ಸಹಾಯ ಮಾಡಿದ್ದರು. ಇದಕ್ಕೆ ಚಿಕ್ಕಲ್ ಬೆಟ್ಟು ನಿವಾಸಿಯಾದ ರಾಧಾಕೃಷ್ಣ ನಾಯಕ್ ಮತ್ತು ಯೋಗೀಶ್ ನವನ್ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಬಂಡವಾಳ ಶಾಹಿಗಳ ಪರವಾಗಿದ್ದಾರೆ, ಊಟಕ್ಕೆ ಬೆಲೆಬಾಳುವ ಗೋಡಂಬಿಯನ್ನು ಬಳಸುತ್ತಿದ್ದಾರೆ, ತಮಗೆ ಯಾರು ಏನನ್ನು ನೀಡುತ್ತಾರೋ ಅವರ ಪರವಾಗಿರುತ್ತಾರೆ ಎನ್ನುವಂತಹ ಬರಹಗಳನ್ನು ಹಾಕಿದ್ದರು.

ಇದರಿಂದ ಆಕ್ರೋಶಗೊಂಡ ಸುನಿಲ್ ಕುಮಾರ್ ಅವರು ತಮ್ಮ ಘನತೆ, ಭಾವನೆ ಮತ್ತು ಹೆಸರಿಗೆ ಧಕ್ಕೆಯಾಗುತ್ತಿದೆ. ಇದನ್ನು ನಿರ್ಬಂಧಿಸಬೇಕು ಮತ್ತು ನಷ್ಟವನ್ನು ಭರಿಸಬೇಕು ಎಂದು ಬೆಂಗಳೂರಿನ 12ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಿನಲ್ಲಿ ನ್ಯಾಯಾಲಯವು ತೀರ್ಪು ನೀಡಿತ್ತು. ರಾಧಾಕೃಷ್ಣ ನಾಯಕ್ ಬೇಷರತ್ ಕ್ಷಮಾಪಣೆ ಕೇಳಿ ಭಾಗಶಃ ಪರಿಹಾರ ಮೊತ್ತವನ್ನು ನ್ಯಾಯಾಲಯಕ್ಕೆ ಜಮೆ ಮಾಡಿದ್ದರು. ಯೋಗೀಶ್ ನವನ್ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳದಿರುವ ಕಾರಣ ಕಾರ್ಕಳದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಕೋಮಲ ಆರ್‌.ಸಿ ಅವರು ಯೋಗೀಶ್ ನವನ್ ಅವರನ್ನು ಬಂಧಿಸಿ ತರುವಂತೆ ಪೊಲೀಸರಿಗೆ ಆದೇಶವನ್ನು ನೀಡಿದ್ದಾರೆ.

Categories
ಕರಾವಳಿ ಕಾರ್ಕಳ ಶಿಕ್ಷಣ

ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಅಲ್ಲಿ ಚಿಲಿಪಿಲಿ-2026

ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಅಲ್ಲಿ ಚಿಲಿಪಿಲಿ-2026
– ಬೇಸಿಗೆ ರಜೆಯ ಪ್ರಯುಕ್ತ ವಿಶೇಷ ಶಿಬಿರ: ಮಕ್ಕಳ ಜ್ಞಾನಕ್ಕೆ ಅವಕಾಶ
– 90ರ ದಶಕದ ಜೀವನಶೈಲಿ, ಕೌಶಲ್ಯ ಮತ್ತು ಚಟುವಟಿಕೆಗಳ ಶಿಬಿರ

ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಅಲ್ಲಿ ಚಿಲಿಪಿಲಿ-2026 ಬೇಸಿಗೆ ರಜೆಯ ಪ್ರಯುಕ್ತ ವಿಶೇಷ ಶಿಬಿರ ಆಯೋಜನೆ ಮಾಡಲಾಗಿದೆ. ಇಂದಿನ ದಿನಮಾನದಲ್ಲಿ ಮಕ್ಕಳು ತಮ್ಮ ರಜಾ ಸಮಯವನ್ನು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಸುವ ಬದಲಾಗಿ ಕೇವಲ ಮೊಬೈಲ್ ನೋಡಿಕೊಂಡು ವ್ಯರ್ಥ ಕಾಲಹರಣ ಮಾಡಿ, ಬಾಲ್ಯದ ಅಮೂಲ್ಯ ಕ್ಷಣಗಳಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳ ಈ ರೀತಿಯ ವರ್ತನೆ ಅವರ ಹೆತ್ತ ತಂದೆ ತಾಯಿಯರಿಗೂ ಕೂಡ ಬಗೆಹರಿಸಲಾಗದ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ.

ಈ ಎಲ್ಲಾ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮತ್ತು ಮಕ್ಕಳು ತಮ್ಮ ರಜಾ ದಿನಗಳನ್ನು ಸದುಪಯೋಗಪಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ 2 ಏಪ್ರಿಲ್ 2026ರ ಗುರುವಾರ, 3 ಏಪ್ರಿಲ್ 2026ರ ಶುಕ್ರವಾರ ಮತ್ತು 4 ಏಪ್ರಿಲ್ 2026ರ ಶನಿವಾರದಂದು ‘ಚಿಲಿಪಿಲಿ-2026’ ಎನ್ನುವ ಶೀರ್ಷಿಕೆಯಡಿಯಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ನೆನಪುಗಳನ್ನು ಮೆಲುಕು ಹಾಕಲು, ಸೃಜನಶೀಲತೆಯನ್ನು ಹೆಚ್ಚಿಸಲು ಮತ್ತು ಹೊಸ ಸ್ನೇಹಿತರನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ.

ವಿಭಿನ್ನ ಹೇಗೆ?

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಬೇಸಿಗೆ ಶಿಬಿರವು ಅತ್ಯಂತ ಮಹತ್ವದಾಗಿದ್ದು, 90ರ ದಶಕದ ಜೀವನಶೈಲಿ, ಕೌಶಲ್ಯ ಮತ್ತು ಚಟುವಟಿಕೆಗಳು ಇಂದಿನ ಮಕ್ಕಳಿಗೆ ನೂತನ ಅನುಭವ ಮತ್ತು ಅರಿವನ್ನು ನೀಡಲಿದ್ದು, ಅವರು ಕೂಡ ಪ್ರಯತ್ನಿಸಲು ಮುಕ್ತ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಲು ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಇದು ತರಗತಿ,ಸ್ಪರ್ಧೆ, ಅಂಕ ಮತ್ತು ತರಬೇತಿಯ ಯಾಂತ್ರಿಕ ಸಂಗತಿಗಳನ್ನೇ ಪುನರಾವರ್ತಿಸದೆ ಮುಗ್ಧ ಮನಸುಗಳ ಸೃಜನಶೀಲತೆಯನ್ನು ಬೆಳೆಸುವ ಸುಂದರವಾದ, ಸ್ವಚ್ಛಂದವಾದ ವಾತಾವರಣವನ್ನು ಕಲ್ಪಿಸಿಕೊಡಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9036854942

Categories
ಕರಾವಳಿ ಕಾರ್ಕಳ ಮಂಗಳೂರು ಮಲ್ನಾಡ್ ರಾಜ್ಯ

ಕಾರ್ಕಳದ ಹಿರ್ಗಾನದಲ್ಲಿ ಅದ್ಧೂರಿ ನೇಮೋತ್ಸವ!

ಕಾರ್ಕಳದ ಹಿರ್ಗಾನದಲ್ಲಿ ಅದ್ಧೂರಿ ನೇಮೋತ್ಸವ!
– ಶ್ರೀಕ್ಷೇತ್ರ ಪೆಲತ್ತಿಜೆಯ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಧಾರ್ಮಿಕ ರಂಗು
– ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರಿಂದ ಹರಕೆ ನೇಮೋತ್ಸವ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಪರಶುರಾಮನ ಊರು ಕಾರ್ಕಳ ಪಟ್ಟಣ ಸಮೀಪದ ಹಿರ್ಗಾನ ಗ್ರಾಮದ ಶ್ರೀಕ್ಷೇತ್ರ ಪೆಲತ್ತಿಜೆಯ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಮಾ. 22 ಭಾನುವಾರ ರಾತ್ರಿ ಹರಕೆಯ ಸಿರಿ ಸಿಂಗಾರದ ನೇಮೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಧರ್ಮದೈವ ಅಣ್ಣಪ್ಪ ಪಂಜುರ್ಲಿ ಗಗ್ಗರ ಸೇವೆ ನಡೆದಿದ್ದು, ಸೇವೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಗಗ್ಗರ ಸೇವೆಯಲ್ಲಿ ಪಾಲ್ಗೊಂಡ ಭಕ್ತಾದಿಗಳು ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸುವ ಮೂಲಕ, ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ಕೃಪೆಗೆ ಪಾತ್ರರಾಗಿ ಕೃತಾರ್ಥರಾದರು.

ನೇಮೋತ್ಸವ ಹರಕೆದಾರರಾದ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ವಿಮಲ್ ರಾಜ್, ಗಣಪತಿ ಕೆ. ಎಸ್ ಮತ್ತು ಕುಟುಂಬದವರು ಹಾಗೂ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಗಣನಾಥ ಶೆಟ್ಟಿ, ಆದರ್ಶ, ಅಮೃತ್ ಮತ್ತು ಕುಟುಂಬದವರು, ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣ್ಯರು, ಕಾರ್ಕಳ ಪಟ್ಟಣದ ಗಣ್ಯರು, ಗ್ರಾಮಸ್ಥರು, ಭಕ್ತರು, ಸಂಘ ಸಂಸ್ಥೆಗಳ ಪ್ರಮುಖರು, ಕ್ರಿಯೇಟಿವ್ ಕಾಲೇಜಿನ ಸಿಬ್ಬಂದಿ, ಪೋಷಕರು ಹಾಜರಿದ್ದರು. ದೇವಸ್ಥಾನವನ್ನು ವಿಶೇಷ ಹೂವು ಹಾಗೂ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಹಿರ್ಗಾನ, ಕಾರ್ಕಳ ಸುತ್ತಮುತ್ತಲಿನ ಗ್ರಾಮಸ್ಥರು, ಧಾರ್ಮಿಕ ಗಣ್ಯರು, ಸ್ಥಳೀಯ ಭಜನಾ ಕುಣಿತ ತಂಡ ಗಮನ ಸೆಳೆಯಿತು. ಮುಂಜಾನೆವರೆಗೆ ಕೋಲಾ ನಡೆಯಿತು.

Categories
ಉಡುಪಿ ಕರಾವಳಿ ಕಾರ್ಕಳ

ರಾಷ್ಟ್ರ ಮಟ್ಟದಲ್ಲಿ ಕ್ರಿಯೇಟಿವ್ ವಿದ್ಯಾರ್ಥಿ ನಂಬರ್ 1

ರಾಷ್ಟ್ರ ಮಟ್ಟದಲ್ಲಿ ಕ್ರಿಯೇಟಿವ್ ವಿದ್ಯಾರ್ಥಿ ನಂಬರ್ 1
– ಜೆಇಇ ಪೇಸ್ 1 ಪರೀಕ್ಷೆಯಲ್ಲಿ ನಾಗದೇವ್ ಎಂ ಜಿ ದೇಶಕ್ಕೆ ಪ್ರಥಮ
– ಜೆಇಇ-ಬಿ ಪ್ಲಾನಿಂಗ್ ನಲ್ಲಿ ಸಾಧನೆ: ಶುಭಾಶಯಗಳು
– ರಾಜ್ಯದಲ್ಲಿ ಮಾತ್ರವಲ್ಲ… ದೇಶದಲ್ಲೂ ಕ್ರಿಯೇಟಿವ್ ಹೆಸರು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಇದೀಗ ರಾಷ್ಟ್ರ ಮಟ್ಟದಲ್ಲಿ ಜೆಇಇಯಲ್ಲಿ ಸ್ಥಾನ ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಕ್ರಿಯೆಟಿವ್ ಪಿಯು ಕಾಲೇಜು ಸಾಧನೆ ಮಾಡಿದೆ.

ನಂಜನಗೂಡಿನ ಗುರುಸ್ವಾಮಿ ಎಂ.ಡಿ ಹಾಗೂ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ನೇತ್ರಾವತಿಯವರ ಪುತ್ರ ನಾಗದೇವ್ ಎಂ ಜಿ ಅವರು ಜೆಇಇ ಪೇಸ್ 1 ಪರೀಕ್ಷೆಯಲ್ಲಿ ಶೇಕಡ 99.45 ರಷ್ಟು ಹಾಗೂ ಜೆಇಇ-ಬಿ ಪ್ಲಾನಿಂಗ್ ನಲ್ಲಿ ಶೇಕಡ 99.97 ಅಂಕಗಳನ್ನು ಗಳಿಸುವುದರ ಜೊತೆಗೆ, ಅಖಿಲ ಭಾರತ ಮಟ್ಟದಲ್ಲಿ ಇಡಬ್ಲುಎಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಕ್ರಿಯೇಟಿವ್ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿದ್ದು, ಸಂಸ್ಥೆಯ ಸಂಸ್ಥಾಪಕರು, ಉಪನ್ಯಾಸಕರಲ್ಲಿ ಹೆಮ್ಮೆಯನ್ನು ಮೂಡಿಸಿದ್ದಾರೆ.

ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳುವಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ನಾಗದೇವ್ ಅವರ ಯಶಸ್ಸಿನ ಪಯಣ ಮುಂದುವರಿಯಲಿ ಎಂದು ಸಂಸ್ಥೆಯ ಮುಖ್ಯಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕ್ರಿಯೇಟಿವ್ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಸ್ಪರ್ಧಾತ್ಮಕ ಪರೀಕ್ಷೆ ಎಲ್ಲದರಲ್ಲೂ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಕಾರ್ಕಳ, ಉಡುಪಿ, ಹಾಸನ, ಶಿವಮೊಗ್ಗದಲ್ಲಿ ಕ್ರಿಯೇಟಿವ್ ಶಾಖೆ ಇದೆ.

Categories
ಉಡುಪಿ ಕರಾವಳಿ ಕಾರ್ಕಳ ಶಿಕ್ಷಣ

ಜೆಇಇ ಮೈನ್ಸ್ ಫಲಿತಾಂಶದಲ್ಲಿ ಕ್ರಿಯೇಟಿವ್ ಕಾಲೇಜು ಮೇಲುಗೈ

ಜೆಇಇ ಮೈನ್ಸ್ ಫಲಿತಾಂಶದಲ್ಲಿ ಕ್ರಿಯೇಟಿವ್ ಕಾಲೇಜು ಮೇಲುಗೈ
– 102 ಮಂದಿ ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ ಅಧಿಕ ಅಂಕ
– ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಆಡಳಿತ ಮಂಡಳಿ ಅಭಿನಂದನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ ಅತಿ ಕ್ಲಿಷ್ಟಕರವೆನಿಸಿದ ಪರೀಕ್ಷೆಗಳಲ್ಲೊಂದಾದ ಜೆಇಇ ಮೈನ್ಸ್ (ಸೆಷನ್-1) 2026 ನೇ ಸಾಲಿನ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 102 ಮಂದಿ ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ ಅಧಿಕ ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಗೈದು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ತೇರ್ಗಡೆಯನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳಾದ ನಮಿತ್ ಕೃಷ್ಣಮೂರ್ತಿ ಹೆಗಡೆ – 99.4981217 ಪರ್ಸೆಂಟೈಲ್, ನಾಗದೇವ್ ಎಂ.ಜಿ. – 99.3310617 ಪರ್ಸೆಂಟೈಲ್, ಪ್ರಥಮ್ ತಮ್ಮಣ್ಣ ಗೌಡರ್ – 99.1416986 ಪರ್ಸೆಂಟೈಲ್ ಪಡೆದುಕೊಳ್ಳುವ ಮೂಲಕ ವಿಶಿಷ್ಟ ಶ್ರೇಣಿಗಳಿಸಿದ್ದಾರೆ.

ತೇಜಸ್ ಆರ್. ಬಿ.- 98.9615457
ನಿನಾದ್ ರಾಜೇಶ್ ನಾಯ್ಕ್- 98.9463580
ಧನುಷ್ ಹೆಚ್. ಎ.- 98.5706065
ಸಂವಿತ್‌ ಅಮಿತ್ ಗೋಕರ್ಣ- 98.5706065
ದೃಶ್ಯ್‌- 98.4130581
ಸುಕ್ಷಿತ್ ಗಿರೀಶ್ ಗೌಡ- 98.3503880
ತೇಜಸ್ ಎನ್. ಇ. – 98.3227894
ತೇಜಸ್ ಹೆಗಡೆ ಎಚ್. ಡಿ.- 98.1925416
ಅಕ್ಷತಾ ಮೋಹನ್ ಹೆಗಡೆ – 98.1682710
ಪ್ರಜ್ವಲ್ ಭಟ್- 98.0498968
ವಿಶ್ವೇಶ್ ಎನ್. ಎಚ್.- 98.0348799 ಪರ್ಸೆಂಟೈಲ್ಗಳನ್ನು ಪಡೆದುಕೊಂಡಿದ್ದಾರೆ.

99 ಪರ್ಸೆಂಟೈಲ್ ಗಿಂತ ಅಧಿಕ 03 ಮಂದಿ ವಿದ್ಯಾರ್ಥಿಗಳು, 98 ಪರ್ಸೆಂಟೈಲ್ ಗಿಂತ ಅಧಿಕ 14 ವಿದ್ಯಾರ್ಥಿಗಳು, 95 ಪರ್ಸೆಂಟೈಲ್ಗಿಂತ ಅಧಿಕ 45 ವಿದ್ಯಾರ್ಥಿಗಳು, 90 ಪರ್ಸೆಂಟೈಲ್ ಗಿಂತ ಅಧಿಕ 102 ವಿದ್ಯಾರ್ಥಿಗಳು ಅಂಕಗಳನ್ನು ಪಡೆದುಕೊಂಡು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಸಂಸ್ಥೆಯ ಜೆಇಇ ಪರೀಕ್ಷೆಯ ಸಂಯೋಜಕರಾದ ಶ್ರೀ ನಂದೀಶ್ ಅಭಿನಂದಿಸಿ ಮುಂದಿನ ಹಂತದ ಪರೀಕ್ಷೆಗೆ ಶುಭ ಹಾರೈಸಿದ್ದಾರೆ.

Categories
ಕರಾವಳಿ ಕಾರ್ಕಳ ಕುಂದಾಪುರ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಕುಂದಾಪುರ: ಆವೆಮಣ್ಣಿನ ವ್ಯವಹಾರದಲ್ಲಿ ವ್ಯಕ್ತಿಗೆ ಜೀವ ಬೆದರಿಕೆ

• ಕಾರ್ಕಳ: ಅಪಘಾತ ನಡೆಸಿ ಬುಲೆಟ್ ಸವಾರ ಪರಾರಿ

• ಬಂಟ್ವಾಳ: ವಿದ್ಯಾರ್ಥಿಗಳ ನಡುವೆ ಘರ್ಷಣೆ; ಓರ್ವನಿಗೆ ಚೂರಿ ಇರಿತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಕುಂದಾಪುರ: ಆವೆಮಣ್ಣಿನ ವ್ಯವಹಾರದಲ್ಲಿ ವ್ಯಕ್ತಿಗೆ ಜೀವ ಬೆದರಿಕೆ

ಕುಂದಾಪುರ: ಆವೆಮಣ್ಣು ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಘಟನೆ, ಕೋಟದಲ್ಲಿ ನಡೆದಿದೆ. ಮಣೂರಿನ ಸಂದೀಪ್ ಕುಮಾರ್ ಹೆಗ್ಡೆ ಎನ್ನುವವರು 2021 ರಿಂದ ಆವೆಮಣ್ಣಿನ ವ್ಯಾಪಾರ ಮಾಡುತ್ತಿದ್ದು, ಇತ್ತೀಚೆಗೆ ವಡ್ಡರ್ಸೆ ಯಾಳಕ್ಲುವಿನ ನಿವಾಸಿಯಾದ ಅಜಿತ್ ಶೆಟ್ಟಿ ಎನ್ನುವ ವ್ಯಕ್ತಿ ಸಂದೀಪ್ ಅವರೊಂದಿಗೆ ವ್ಯವಹಾರ ಸಂಪರ್ಕ ಹೊಂದಿದ್ದು, ಸಂದೀಪ್ ಅವರ ಬಳಿ ಪದೇ ಪದೇ ಹಣವನ್ನು ಕೇಳುತ್ತಿದ್ದ. ಅಲ್ಲದೆ ವಾಟ್ಸ್ ಆಪ್ ಸಂದೇಶವನ್ನು ಕಳುಹಿಸಿ ಪ್ರತಿ ತಿಂಗಳ ವ್ಯವಹಾರದಲ್ಲಿ ತನಗೆ 35.000 ರೂಪಾಯಿ ನೀಡಬೇಕೆಂದು ಒತ್ತಾಯ ಪಡಿಸುತ್ತಿದ್ದ ಎನ್ನಲಾಗಿದೆ. ಇದನ್ನು ಸಂದೀಪ್ ಅವರು ನಿರಾಕರಿಸಿದ್ದರಿಂದ ಸಂದೀಪ್ ಅವರ ಮನೆಯ ಹತ್ತಿರವೇ ಬಂದು ಅಜಿತ್ ಶೆಟ್ಟಿ ಜೀವ ಬೆದರಿಕೆ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಕಾರ್ಕಳ: ಅಪಘಾತ ನಡೆಸಿ, ಬುಲೆಟ್ ಸವಾರ ಪರಾರಿ

ಕಾರ್ಕಳ: ಮಡಾಮಕ್ಕಿ ಗ್ರಾಮದ ನಿವಾಸಿಯಾದ ಉಮೇಶ್ ಶೆಟ್ಟಿ ಅವರು ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಬುಲೇಟ್ ಸವಾರನೊಬ್ಬ ಸ್ಕೂಟಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ, ಕಳೆದೆರಡು ದಿನಗಳ ಹಿಂದೆ ಮಾಂಡಿ ಮೂರು ಕೈ ರಸ್ತೆಯ ಹಾಲೆಕೊಡ್ಲು ಎನ್ನುವಲ್ಲಿ ನಡೆದಿದೆ. ಉಮೇಶ್ ಶೆಟ್ಟಿ ಅವರು ತಮ್ಮ ಬಾವನಾದ ಸಂತೋಷ್ ಶೆಟ್ಟಿ ಅವರನ್ನು ಸ್ಕೂಟಿಯಲ್ಲಿ ಕುಳ್ಳಿರಿಸಿಕೊಂಡು ಹೆಬ್ರಿಯತ್ತ ತೆರಳುತ್ತಿದ್ದಾಗ, ಹೆಬ್ರಿ ಕಡೆಯಿಂದ ಬಂದ ಬುಲೆಟ್ ಗಾಡಿಯೊಂದು ಸ್ಕೂಟಿಗೆ ಢಿಕ್ಕಿ ಹೊಡೆದು, ಅಲ್ಲಿಂದ ಪರಾರಿಯಾಗಿದ್ದಾನೆ. ಪರಿಣಾಮವಾಗಿ ಸಂತೋಷ್ ಶೆಟ್ಟಿ ಅವರು ಗಾಯಗೊಂಡಿದ್ದು, ತಕ್ಷಣ ಅವರನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಬಂಟ್ವಾಳ: ವಿದ್ಯಾರ್ಥಿಗಳ ನಡುವೆ ಘರ್ಷಣೆ; ಓರ್ವನಿಗೆ ಚೂರಿ ಇರಿತ

ಬಂಟ್ವಾಳ: ಖಾಸಗಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟು, ಓರ್ವ ವಿದ್ಯಾರ್ಥಿಗೆ ಚೂರಿ ಇರಿದ ಘಟನೆ ಬುಧವಾರದಂದು ವಿಟ್ಲದಲ್ಲಿ ನಡೆದಿದೆ. ಸಣ್ಣದೊಂದು ಕಾರಣಕ್ಕಾಗಿ ಖಾಸಗಿ ಐಟಿಐ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಇಬ್ಬರ ವಾಗ್ವಾದದ ನಡುವೆ ಓರ್ವ ವಿದ್ಯಾರ್ಥಿಗೆ ಚೂರಿ ಇರಿತ ಸಂಭವಿಸಿದೆ. ಕಲಹವನ್ನು ನಿಲ್ಲಿಸಲು ಮುಂದೆ ಬಂದ ಬೇರೊಬ್ಬ ವಿದ್ಯಾರ್ಥಿಯೂ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ವಿಟ್ಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ವಿಟ್ಲದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದ ಪ್ರಕಾಶ್ ದೇವಾಡಿಗ ಮತ್ತವರ ನೇತೃತ್ವದ ತಂಡವು ಸ್ಥಳಕ್ಕೆ ಆಗಮಿಸಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಿ, ಕ್ರಮವನ್ನು ಕೈಗೊಂಡಿದ್ದಾರೆ.