ಶೃಂಗೇರಿಯಲ್ಲಿ 2 ಬಾಳೆಹೊನ್ನೂರಿನಲ್ಲಿ 3 ಕಾಡಾನೆ ಪ್ರತ್ಯಕ್ಷ
* ಆನೆ ನಡೆದಿದ್ದೆ ದಾರಿ ಎಂಬಂತೆ ರೈತರ ಜಮೀನಿಗೆ ನುಗ್ಗಿ ಅಪಾರ ಬೆಳೆ ನಾಶ
* ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕಾಡಾನೆಗಳ ಸಂಖ್ಯೆ
* ಏನ್ ಮಾಡ್ತಿದೆ ಅರಣ್ಯ ಇಲಾಖೆ,ಎಲ್ಲಿದ್ದಾರೆ ಶಾಸಕರು ಜನರ ಆಕ್ರೋಶ
NAMMMUR EXPRESS NEWS
ಶೃಂಗೇರಿ/ಬಾಳೆಹೊನ್ನೂರು: ಕಳೆದ ಐದು ದಿನಗಳ ಹಿಂದೆ ಶೃಂಗೇರಿ ಮತ್ತು ಕೊಪ್ಪ ಗಡಿ ಭಾಗದ ನೇತ್ರವಳ್ಳಿ ಹೊನಗೋಡು ಕಾಣಿಸಿಕೊಂಡಿದ್ದ ಒಂಟಿಸಲಗ ಆನೆ ನಡೆದದ್ದೇ ದಾರಿ ಎಂಬಂತೆ ಸಿಕ್ಕಸಿಕ್ಕಲ್ಲೆಲ್ಲಾ ಓಡಾಡಿ ರೈತರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದೆ. ನಾಟಿಯಾದ ಗದ್ದೆ,ತೋಟದಲ್ಲಿ ಫಸಲು ಹಿಡಿದ ಅಡಿಕೆ ಮರ,ತೆಂಗಿನ ಮರಗಳನ್ನು ನಾಶ ಮಾಡಿದೆ. ಸದ್ಯ ಆನೆ ನೇತ್ರವಳ್ಳಿ,ಅಣ್ಣುಕೊಡಿಗೆ,ಕವಿಲುಕೊಡಿಗೆ,ಮೇಲುಕೊಪ್ಪ, ಬೇಗಾನೆ,ಹಿಂಬ್ರವಳ್ಳಿ ಭಾಗದಲ್ಲಿ ಓಡಾಡಿ ಧರೆಕೊಪ್ಪ ಪಂಚಾಯ್ತಿ ವ್ಯಾಪ್ತಿಯ ಹಳಕ,ಗುಣಿತಲು ಭಾಗದಲ್ಲಿ ಕಾಣಿಸಿಕೊಂಡಿದ್ದು,ಸದ್ಯ ಗಾಳಿಗುಡ್ಡ ಎಂಬಲ್ಲಿ ನಾಗಭೂಷಣ್ ಎಂಬುವರ ಮನೆ ಸಮೀಪದ ಕಾಡಿನಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೊಂದೆಡೆ ಬೇಗಾರು ಗ್ರಾ ಪಂ ವ್ಯಾಪ್ತಿ ತಾರೊಳ್ಳಿಕೊಡಿಗೆಯಲ್ಲಿ ಕಳೆದೊಂದು ವಾರದಿಂದ ಒಂಟಿಸಲಗವೊಂದು ಓಡಾಡುತ್ತಿದ್ದು ಗ್ರಾಮಸ್ಥರ ನಿದ್ದೆಗೆಡಿಸಿದೆ. 26 ಮನೆಗಳಿರುವ ಈ ಗ್ರಾಮದಲ್ಲಿ ಆದಿವಾಸಿ ಗಿರಿಜನರೇ ವಾಸಿಸುತ್ತಿದ್ದಾರೆ. ಸದ್ಯ ಆನೆ ದಾಳಿಯಿಂದ ರೈತರ ಜಮೀನಿನಲ್ಲಿ ನಾಟಿ ಮಾಡಿದ ಭತ್ತ,ಅಡಿಕೆ ಮರ,ಬಾಳೆ,ಏಲಕ್ಕಿ ಬೆಳೆಗಳು ಸಂಪೂರ್ಣ ನಾಶವಾಗಿವೆ.
ಆನೆದಾಳಿಯಿಂದ ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಅರಣ್ಯ ಇಲಾಖೆ ಕೂಡಲೇ ಆನೆಗಳನ್ನು ಸ್ಥಳಾಂತರಿಸುವಂತೆ ಈ ಬಗ್ಗೆ ಜನಪ್ರತಿನಿಧಿಗಳು,ಶಾಸಕರು ಸರ್ಕಾರಕ್ಕೆ ತಿಳಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದೇ ರೀತಿ ಮುಂದುವರೆದು,ಜೀವಹಾನಿ ಸಂಭಿಸಿದಲ್ಲಿ,ರೈತರಿಗೆ ತೊಂದರೆಯಾದಲ್ಲಿ ಅರಣ್ಯ ಇಲಾಖೆ ಎದುರು ಉಗ್ರಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.
ಬಾಳೆಹೊನ್ನೂರು: ಎನ್ ಆರ್ ಪುರ ತಾಲೂಕು ಬಾಳೆಹೊನ್ನೂರು ಸಮೀಪದ ತುಪ್ಪೂರಿನಲ್ಲಿ ಕಳೆದ ಒಂದು ವಾರದಿಂದ ಎರಡು ಆನೆಗಳು ಬೀಡುಬಿಟ್ಟಿದ್ದು ಅಲ್ಲಿನ ರೈತರ ಗದ್ದೆ,ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆನಾಶ ಮಾಡಿದೆ. ಎರಡು ಆನೆಗಳ ಓಡಾಟವನ್ನು ಗಮನಿಸಿದ್ದ ಗ್ರಾಸ್ಥರು ಕಳೆದ ಮೂರು ದಿನಗಳಿಂದ ಮೂರು ಆನೆಗಳು ಜಮೀನಿಗೆ ಬರುತ್ತಿವೆ ಎಂದು ತಿಳಿಸಿದ್ದಾರೆ. ತುಪ್ಪೂರಿನ ಹೊಸಮನೆ ಮಂಜಪ್ಪಗೌಡ ಎಂಬುವರ ಜಮೀನಿಗೆ ನುಗ್ಗಿ ಭತ್ತ,ಅಡಿಕೆ,ಬಾಳೆ,ತೆಂಗು ಸೇರಿದಂತೆ ಅಪಾರ ಪ್ರಮಾಣದ ಬೆಳೆನಾಶ ಮಾಡಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾನಿ ಪ್ರದೇಶಗಳಿಗೆ ಬಂದು ಪರಿಶೀಲನೆ ನಡೆಸಿದ್ದು,ಅಧಿಕಾರಿಗಳನ್ನು ಕೇಳಿದರೆ ಆನೆ ಓಡಿಸುತ್ತೇವೆ ಪಟಾಕಿ ಹೊಡಿಬೇಡಿ ಆನೆಗಳು ಗಾಬರಿಗೊಳ್ಳುತ್ತವೆ,ನಾವು ಟಾಸ್ಕ್ ಫೋರ್ಸ್‌ನ್ನು ಕಳಿಸುತ್ತೇವೆ ಎಂದು ಹೇಳಿರುತ್ತಾರೆ ಆದರೆ ಈ ವರೆಗೂ ಆನೆಗಳ ಸ್ಥಳಾಂತರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲೇ ಸಮೀಪದಲ್ಲಿರುವ ಅರಳಿಕೊಪ್ಪ ಪೂರ್ಣೇಶ್ ಎಂಬುವರ ಅಡಿಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಸುಮಾರು 100 ಕ್ಕೂ ಅಧಿಕ ಅಡಿಕೆ ಮರಗಳನ್ನು ಉರುಳಿಸಿವೆ ಇದರಿಂದ ಗ್ರಾಮದ ರೈತರೆಲ್ಲರು ಕಂಗಾಲಾಗಿದ್ದು ಅರಣ್ಯ ಇಲಾಖೆ ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳು ಇಲಾಖೆಯ ಬೇಜಾವಾಬ್ದಾರಿಗೆ ಬೇಸತ್ತ ಗ್ರಾಮಸ್ಥರು ಇಂದು ತಾವೇ ಆನೆಗಳನ್ನು ಓಡಿಸಲು ಮುಂದಾಗಿದ್ದು ತುಪ್ಪೂರು,ಅರಳಿಕೊಪ್ಪ,ಕಾಡುಸಿಗಸೆ ಭಾಗಗಳಲ್ಲಿ ಸಂಚರಿಸಿ ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಶೃಂಗೇರಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು ಕ್ಷೇತ್ರದ ಜನರಲ್ಲಿ ಆತಂಕ ಸೃಷ್ಠಿಸಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆನೆಗಳನ್ನು ಜನವಸತಿ ಪ್ರದೇಶಗಳಿಂದ ಸ್ಥಳಾಂತರಿಸಿ ಮಾನವ ಕಾಡು ಪ್ರಾಣಿಗಳ ಸಂಘರ್ಷ ತಪ್ಪಿಸಬೇಕಾಗಿದೆ.
