ಬಾಳೆಹೊನ್ನೂರಿನ ಬನ್ನೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ
* ಕಾಡಾನೆ ದಾಳಿಯಿಂದ ಕಳೆದ ಹತ್ತು ತಿಂಗಳಲ್ಲಿ ಇದು 4ನೇ ಬಲಿ
* ಸಾಕು ಪ್ರಾಣಿಗಳು ಕಾಡಿಗೆ ಹೋಗಬಾರದು ಎಂದಾದರೆ ಕಾಡು ಪ್ರಾಣಿಗಳು ಊರಿಗೆ ಬರಬಹುದಾ?
NAMMMUR EXPRESS NEWS
ಬಾಳೆಹೊನ್ನೂರು: ಬಾಳೆಹೊನ್ನೂರು ಸಮೀಪದ ಬನ್ನೂರು ಎಂಬಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬರು ಮಹಿಳೆ ಬಲಿಯಾಗಿದ್ದಾರೆ. ಕೂಲಿ ಕಾರ್ಮಿಕ ಮಹಿಳೆ ಅನಿತಾ ಕಾಡಾನೆ ದಾಳಿಗೆ ಬಲಿಯಾದವರು.
ಎನ್ ಆರ್. ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಕೂಲಿಕಾರ್ಮಿಕ ಮಹಿಳೆ ಅನಿತಾ ಕೆಲಸ ಮುಗಿಸಿ ಮನೆಗೆ ಬರುವಾಗ ಕಾಡಾನೆ ದಾಳಿ ನಡೆಸಿದೆ.
ಶಶಿಶೇಖರ ಎಂಬುವವರ ತೋಟದಲ್ಲಿ ಅನಿತಾ ಕುಟುಂಬ ಕೆಲಸಕ್ಕೆ ಬಂದಿತ್ತು. ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಗಾಯಗೊಂಡ ಅನಿತಾರವರನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು,ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
* ಸಾಕು ಪ್ರಾಣಿಗಳು ಕಾಡಿಗೆ ಹೋಗಬಾರದು ಎಂದಾದರೆ ಕಾಡು ಪ್ರಾಣಿಗಳು ಊರಿಗೆ ಬರಬಹುದಾ?
ರಾಜ್ಯ ಅರಣ್ಯ ಸಚಿವರ ಆದೇಶದಂತೆ ಸಾಕು ಪ್ರಾಣಿಗಳು,ದನಕರುಗಳು ಸರ್ಕಾರಿ ಜಾಗ ಅರಣ್ಯಕ್ಕೆ ಮೇಯಲು ಹೋಗುವಂತಿಲ್ಲ ಎಂಬ ಆದೇಶ ಮಾಡಿದ್ದಾರೆ ಇದರ ಬೆನ್ನಲ್ಲೇ ನಿನ್ನೆ ಕೊಪ್ಪ ಪಟ್ಟಣದ ಸಮೀಪ ಶಾಲೆಯ ಎದುರು ಒಂಟಿಸಲಗ ಕಾಣಿಸಿಕೊಂಡಿದ್ದು, ನಿನ್ನೆ ಬನ್ನೂರಿನಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಕೂಲಿ ಕಾರ್ಮಿಕ ಮಹಿಳೆ ಮೇಲೆ ಆನೆ ದಾಳಿ ನಡೆದಿದೆ. ಸಚಿವರ ಆದೇಶದಂತೆ ರೈತರು ತಮ್ಮ ಜಾನುವಾರುಗಳನ್ನು ಅರಣ್ಯಕ್ಕೆ ಬಿಡದಿದ್ದರೂ ಕಾಡು ಪ್ರಾಣಿಗಳು ಖಾಸಗಿ ಜಾಗಗಳಿಗೆ ಬಂದು ದಾಳಿ ಮಾಡುತ್ತಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಕಾಫಿ ತೋಟದಲ್ಲಿ ಮರಗಸಿ ಮಾಡಿದಾಗ ಜೀಪ್ನಲ್ಲಿ ಬಂದು ತಡೆಯೋ ಅರಣ್ಯಾಧಿಕಾರಿಗಳು ಆನೆ ಇತರೆ ಕಾಡು ಪ್ರಾಣಿಗಳು ಬಂದಿವೆ ಎಂದು ವಿಷಯ ತಿಳಿಸಿದರೂ ಒಬ್ಬನೂ ಬರೋದಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
* ಕಾಡಾನೆಗಳನ್ನು ಶಾಸಕರು ಹಾಗೂ ಅರಣ್ಯ ಸಚಿವರು ಬಂದು ಕರೆದೊಯ್ಯಲಿ – ಡಿ ಎನ್ ಜೀವರಾಜ್
ರೈತರು ಪರಿಸರ ಅರಣ್ಯ ಈ ಸಂಬಂಧಗಳು ಇಂದು ನಿನ್ನೆಯದಲ್ಲ ಅನಾದಿಕಾಲದಿಂದ ನಡೆದು ಬಂದಿದ್ದು,ಒಂದನ್ನ ಬಿಟ್ಟು ಒಂದು ಇರೋದಿಲ್ಲ ಅದರಲ್ಲೂ ಮಲೆನಾಡಿಗರು ಪ್ರಕೃತಿ ಅರಣ್ಯದೊಂದಿಗೆ ಉತ್ತಮ ಸಂಬಂಧ ಹೊಂದಿದವರು ಇಂತಹ ಸಂದರ್ಭದಲ್ಲಿ ಅರಣ್ಯ ಸಚಿವರ ಆದೇಶ ತೀರಾ ಕೆಟ್ಟದ್ದಾಗಿದೆ. ಸಚಿವರೇ ಹೇಳಿದಂತೆ ಜಾನುವಾರುಗಳು ಸರ್ಕಾರಿ ಅರಣ್ಯ ಪ್ರದೇಶಕ್ಕೆ ಹೋಗಬಾರದು ಎಂದಾದರೆ ಕಾಡು ಪ್ರಾಣಿಗಳು ಖಾಸಗಿ ಜಾಗಕ್ಕೆ ಬರುವುದು ಎಷ್ಟುಸರಿ, ಇದರ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಕ್ಷೇತ್ರದ ಶಾಸಕರು ಹೊತ್ತು ತಮ್ಮ ಕಾಡಾನೆಗಳನ್ನು ಹಗ್ಗ ಹಾಕಿ ಹೊಡೆದುಕೊಂಡು ಹೋಗಬೇಕು ಮತ್ತು ನಮ್ಮ ಜಾನುವಾರುಗಳು ಕಾಡಿಗೆ ಹೋದರೆ ನಮ್ಮ ಮೇಲೆ ಕೇಸ್ ದಾಖಲಾಗುತ್ತವೆ ಅಂತಾದರೆ, ಕಾಡು ಪ್ರಾಣಿಗಳು ಖಾಸಗಿ ಜಾಗಗಳಿಗೆ ಬಂದರೆ ಯಾರ ಮೇಲೆ ಕ್ರಮವಾಗಬೇಕು ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಅಥವಾ ಶಾಸಕರ ಮೇಲೆ ಅಥವಾ ಅರಣ್ಯ ಸಚಿವರ ಮೇಲೆ ದೂರು ನೀಡಬೇಕಾ ತಿಳಿಸಬೇಕು ಎಂದು ಮಾಜಿ ಶಾಸಕ ಡಿ.ಎನ್ ಜೀವರಾಜ್ ಪ್ರಶ್ನಿಸಿದ್ದಾರೆ.
* ಬಾಳೆಹೊನ್ನೂರು ಅರಣ್ಯ ಇಲಾಖೆ ಎದುರು ಪ್ರತಿಭಟನೆಗೆ ಕರೆ
ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಅರಣ್ಯ ಇಲಾಖೆಯ ಹಾಗೂ ಶಾಸಕರು,ಸಚಿವರ ಜನವಿರೋಧಿ ಧೋರಣೆಗಳ ವಿರುದ್ಧ ಪ್ರತಿಭಟನೆಗೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಹಾಗು ಕ್ಷೇತ್ರದ ಎಲ್ಲಾ ರೈತ ಕಾರ್ಮಿಕ ಸಂಘಟನೆಗಳ ಸಹಯೋಗದೊಂದಿಗೆ
ಇಂದು ಬೆಳಿಗ್ಗೆ 11:30 ಕ್ಕೆ ಬಾಳೆಹೊನ್ನೂರು ಅರಣ್ಯ ಇಲಾಖೆಯ ಎದುರು ಎಲ್ಲರೂ ಬರುವಂತೆ ಕರೆನೀಡಲಾಗಿದೆ.
