Categories
ರಾಜ್ಯ

ಸಿಗಂದೂರು ಬ್ರಿಡ್ಜ್ ನೋಡಲು ಜನವೋ ಜನ..!!

ಸಿಗಂದೂರು ಬ್ರಿಡ್ಜ್ ನೋಡಲು ಜನವೋ ಜನ..!!
– ಕಾನೂನು ಸುವ್ಯವಸ್ಥೆಗೆ ಭಾರೀ ದೊಡ್ಡ ಸವಾಲು
– ಮೂಲಸೌಕರ್ಯ ಶೌಚಾಲಯ ಮತ್ತು ಪಾರ್ಕಿಂಗ್ ಕೊರತೆ

NAMMUR EXPRESS NEWS
ಶಿವಮೊಗ್ಗ: ಕಳಸವಳ್ಳಿ-ಅಂಬಾರಗೊಡ್ಲು ನಡುವೆ ಶರಾವತಿ ಹಿನ್ನೀರಿಗೆ ನಿರ್ಮಾಣಗೊಂಡ ಸೇತುವೆಯಿಂದಾಗಿ ಆರು ದಶಕದ ಕನಸು ನನಸಾದ ಖುಷಿ ಒಂದೆಡೆಯಾದರೆ, ಸೇತುವೆ ವೀಕ್ಷಣೆ ಜತೆಗೆ ಸಿಗಂದೂರು ದೇವಾಲಯಕ್ಕೆ ಜನಸಾಗರವೇ ಹರಿದು ಬರುತ್ತಿರುವುದರಿಂದ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲು ಎದುರಾಗಿದೆ. ಸರಕಾರಿ ರಜೆ ಮತ್ತು ಅಮಾವಾಸ್ಯೆ-ಹುಣ್ಣಿಮೆಯಲ್ಲಿ ಸಿಗಂದೂರು ದೇವಿ ದರ್ಶನಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಈಗ ಸೇತುವೆ ಉದ್ಘಾಟನೆ ನಂತರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಟ್ರಾಫಿಕ್‌ ಸಮಸ್ಯೆ ತೀವ್ರವಾಗಿದೆ. ಕಳೆದ ವಾರದಿಂದ ಆಗಮಿಸುತ್ತಿರುವ ಬಹುತೇಕ ಜನರು ಸೇತುವೆ ವೀಕ್ಷಣೆಗಾಗಿಯೇ ಬರುತಿದ್ದು, ಸೇತುವೆಯ ತಡೆಗೋಡೆ ಮೇಲೆ ನಿಂತು ಫೋಟೊ, ಸೆಲ್ಫಿ ತೆಗೆಸಿಕೊಳ್ಳುವುದು, ಮೋಜು ಮಸ್ತಿ ಮಾಡುವುದು ಹೆಚ್ಚಾಗಿದ್ದು, ಸ್ಥಳೀಯರಲ್ಲಿಆತಂಕ ಮೂಡಿಸಿದೆ.

– ಸಿಗಂದೂರು ದೇಗುಲಕ್ಕೆ ಆಗಮಿಸುವ ಭಕ್ತರ ನಿಯಂತ್ರಿಸುವಲ್ಲಿ ತೊಂದರೆ

ಸಿಗಂದೂರು ದೇಗುಲಕ್ಕೆ ಆಗಮಿಸುವ ಭಕ್ತರ ವಾಹನಗಳನ್ನು ಪಾರ್ಕಿಂಗ್‌ ಮಾಡಲು ದೇವಾಲಯದ ಸುತ್ತಮುತ್ತ ಸ್ಥಳಾವಕಾಶದ ಕೊರತೆಯಿದ್ದು, ಕಿ.ಮೀ.ಗಟ್ಟಲೆ ರಸ್ತೆಯ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವಂತಾಗಿದೆ. ಆಗಮಿಸುವ ಭಕ್ತರಿಗೆ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಿಕೊಡುವತ್ತ ಗ್ರಾಮಾಡಳಿತ ಮತ್ತು ಜಿಲ್ಲಾಡಳಿತ ಸಹಕಾರದೊಂದಿಗೆ ದೇವಾಲಯ ಆಡಳಿತ ಮಂಡಳಿ ಕೈಜೋಡಿಸಬೇಕಿದೆ. ಕಾರ್ಗಲ್‌ ಪೊಲೀಸ್‌ ಠಾಣೆ ವ್ಯಾಪ್ತಿಗೆ ದೇವಾಲಯ ಬರಲಿದ್ದು, ಠಾಣೆಯಿಂದ ಸಾಕಷ್ಟು ದೂರದಲ್ಲಿದೆ. ಬ್ಯಾಕೋಡಿನ ಉಪಠಾಣೆಯಲ್ಲಿ ಕೇವಲ ಒಬ್ಬ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಹೋಬಳಿಯ ನಾಲ್ಕು ಪಂಚಾಯಿತಿ ಜತೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರನ್ನು ನಿಭಾಯಿಸುವುದು ಸಾಧ್ಯವೇ? ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಒಬ್ಬ ಎಎಸ್‌ಐ, ಒಬ್ಬ ಹೆಡ್‌ ಕಾನ್ಸ್‌ಟೆಬಲ್‌ ಸೇರಿದಂತೆ ನಾಲ್ಕು ಕಾನ್ಸ್‌ಟೆಬಲ್‌ ಹುದ್ದೆಗಳಿದ್ದು, ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಬ್ಯಾಕೋಡು ಉಪಠಾಣೆಯನ್ನು ಮೇಲ್ದರ್ಜೆಗೇರಿಸಿ, ಪಿಎಸ್‌ಐ ಹುದ್ದೆ ಸೃಷ್ಟಿಸಿ, ಠಾಣೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕೆಂಬ ಬೇಡಿಕೆ ನನೆದು ಬಿದ್ದಿದೆ. ಬ್ಯಾಕೋಡು ಉಪ ಠಾಣೆಯನ್ನು ತುಮರಿಗೆ ಸ್ಥಳಾಂತರಿಸುವ ಪ್ರಸ್ತಾವನೆ ಕಳಿಸಲಾಗಿದೆ ಎಂಬ ಮಾಹಿತಿಯು ಲಭ್ಯವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.