ಶೃಂಗೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿತ
* ರಾತ್ರಿ ಇಡೀ ಸುರಿದ ಮಳೆ ಗಾಳಿ ಸೃಷ್ಠಿಸಿದ ಅವಾಂತರ
* ಎಲ್ಲೆಡೆ ಇನ್ನಷ್ಟು ಗುಡ್ಡ ಕುಸಿತದ ಭೀತಿ
NAMMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರಿನ ಮೂಡಿಗೆರೆ,ಕಳಸ,ಎನ್.ಆರ್ ಪುರ,ಕೊಪ್ಪ,ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿದ್ದು ಜೊತೆಗೆ ಗಾಳಿ ಕೂಡ ಹೆಚ್ಚಾಗಿದೆ. ಪರಿಣಾಮ ರಾತ್ರಿ ಇಡೀ ಸುರಿದ ಮಳೆ ಗಾಳಿಗೆ ಶೃಂಗೇರಿ ತಾಲೂಕಿನ ನೆಮ್ಮಾರ್ ಬಳಿಯಲ್ಲಿ ಶೃಂಗೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ – 169 ರಲ್ಲಿ ಗುಡ್ಡ ಕುಸಿತವಾಗಿದ್ದು ಸಂಚಾರ ಬಂದ್ ಆಗಿತ್ತು.
ಶೃಂಗೇರಿ ತಾಲೂಕಿನ ನೆಮ್ಮಾರ್ ಬಳಿಯ ಸಾಲ್ಮರದಲ್ಲಿ ಉಂಟಾಗಿರುವ ಗುಡ್ಡ ಕುಸಿತದಿಂದ ಮಣ್ಣು ಹಾಗೂ ಮರಗಳು ಸಂಪೂರ್ಣ ರಸ್ತೆ ಮೇಲೆ ಬಂದಿದೆ ಇದರಿಂದ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ತಕ್ಷಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡು ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
* ಹಲವು ಕಡೆಗಳಲ್ಲಿ ಗುಡ್ಡ ಕುಸಿತದ ಭೀತಿ
ಈ ಘಟನೆ ಬೆನ್ನಲ್ಲೇ ಹೆದ್ದಾರಿಯ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಶೃಂಗೇರಿಯ ಆನೆಗುಂದದಿಂದ ತನಿಕೋಡು ಚೆಕ್ ಪೋಸ್ಟ್‌ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದ್ದು ಅನೇಕ ಕಡೆಗಳಲ್ಲಿ ರಸ್ತೆಯ ಪಕ್ಕದಲ್ಲಿನ ಧರೆಯನ್ನು ತೆರವುಗೊಳಿಸಿ ಅಗಲೀಕರಣ ಮಾಡಲಾಗಿದೆ ಈಗ ಈ ಎಲ್ಲಾ ಪ್ರದೇಶದಲ್ಲೂ ಕುಸಿತದ ಭೀತಿ ಎದುರಾಗಿದೆ. ಸದ್ಯ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು ಉಡುಪಿಗೆ ಬದಲಿ ಮಾರ್ಗವನ್ನಾಗಿ ಶೃಂಗೇರಿ – ಎಸ್.ಕೆ ಬಾರ್ಡರ್ – ಮಾಳ – ಕಾರ್ಕಳ- ಉಡುಪಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ. ಈ ಮಧ್ಯೆ ಇಂತಹ ಘಟನೆಗಳಾದಲ್ಲಿ ಪ್ರಯಾಣಿಕರು ಎಚ್ಚರದಿಂದಿರಬೇಕಿದೆ.