ಜೆಜೆಎಂ ಕರ್ಮಕಾಂಡ: ನೀರಿನ ಹೆಸರಲ್ಲಿ ನೂರಾರು ಕೋಟಿ ಗೋಲ್ಮಾಲ್!
– ಎಲ್ಲೆಲ್ಲೂ ಅಗೆದ ಹೊಂಡಗಳು… ಕಾಮಗಾರಿ ಕಳಪೆ..!?
– ಮಲೆನಾಡನ್ನು ಮಳೆಗಾಲ ಬಂದ್ರೆ ದೇವರೇ ಕಾಪಾಡಬೇಕು!
– ಕೋಟಿ ಕೋಟಿ ಹಣ ನೀರುಪಾಲು: ಜನರ ಹಣಕ್ಕೆ ಬೆಲೆ ಇಲ್ವೇ?
ವಿಶೇಷ ವರದಿ: ಸಚಿನ್ ಶೃಂಗೇರಿ
NAMMMUR EXPRESS NEWS
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿ ಕೇಂದ್ರ ಸರ್ಕಾರ ರೂಪಿಸಿದ ಯೋಜನೆ ಜಲ್ ಜೀವನ್ ಮಿಷನ್ (ಜೆಜೆಎಮ್) ಈಗ ಎಲ್ಲೆಡೆ ಹಳ್ಳ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.
ಕೇಂದ್ರದ ಮಹಾತ್ವಕಾಂಕ್ಷಿ ಈ ಯೋಜನೆಯಡಿ ಪ್ರತಿ ಮನೆಗಳಿಗೆ ಶುದ್ಧ ನಲ್ಲಿ ನೀರು ಒದಗಿಸಲು ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಊರಲ್ಲೂ ಚರಂಡಿ ಅಗೆಯಲಾಗುತ್ತಿದೆ. ಪೈಪ್ ಲೈನ್ ಮಾಡಲಾಗುತ್ತಿದೆ. ಆದಾಗ್ಯೂ, ಕೆಲವು ವರದಿಗಳ ಪ್ರಕಾರ, ಕಾಮಗಾರಿಯಲ್ಲಿ ಗುಣಮಟ್ಟದ ಸಮಸ್ಯೆಗಳು ಮತ್ತು ಅನುಷ್ಠಾನದಲ್ಲಿನ ವಿಳಂಬಗಳ ಬಗ್ಗೆ ದೂರುಗಳಿವೆ ಹಾಗೂ ಕಾಮಗಾರಿ ಕಳಪೆಯಾಗಿದ್ದು ರಸ್ತೆ ಮಧ್ಯೆ ಹೊಂಡ ಗುಂಡಿ ಬಿದ್ದಿರುವ ಆರೋಪಗಳಿವೆ. ಗುತ್ತಿಗೆದಾರರು ಕಳಪೆ ವಸ್ತು ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಭವಿಷ್ಯದಲ್ಲಿ ಈ ಯೋಜನೆ ಹಳ್ಳ ಹಿಡಿಯುವ ಜತೆಗೆ ಸ್ಥಳೀಯ ಆಡಳಿತಕ್ಕೆ ಹೊರೆ ಆಗುವ ಸಾಧ್ಯತೆ ದಟ್ಟವಾಗಿದೆ.
ಹಳ್ಳಿ ಹಳ್ಳಿಯಲ್ಲೂ ಗುಂಡಿ ಬಿದ್ದ ರಸ್ತೆಗಳು..!
ಡಿಪಿಆರ್ನಂತೆ 2.5 ಅಡಿಗಳಷ್ಟು ಆಳದಲ್ಲಿಪೈಪ್ಗಳನ್ನು ಹಾಕಬೇಕು. ಆದರೆ, ಅನೇಕ ಗ್ರಾಮಗಳಲ್ಲಿ ಅರ್ಧ, 1 ರಿಂದ 1.5 ಅಡಿಗಳಿಗೆ ಮಾತ್ರ ಪೈಪ್ಗಳನ್ನು ಅಳವಡಿಸಲಾಗಿದೆ. ಅನೇಕ ಗುತ್ತಿಗೆದಾರರು ಹಣ ಉಳಿಸಲು ರಸ್ತೆಗಳಲ್ಲಿ ಕೇವಲ 1.5 ಅಡಿಗೆ ಸೀಮಿತ ಮಾಡಿದ್ದು ಸರಿಯಾಗಿ ಮುಚ್ಚದ ಪರಿಣಾಮ ಗ್ರಾಮೀಣ ಪ್ರದೇಶದ ಬಹುಪಾಲು ರಸ್ತೆಗಳಲ್ಲಿ ಗುಂಡಿ ಬಿದ್ದು ಓಡಾಡಲು ಸಾಧ್ಯವಾಗಿಲ್ಲ. ವಾಹನಗಳು ಅಪಘಾತ ಆಗುತ್ತಿದೆ. ರಸ್ತೆ ಹದಗೆಡುತ್ತಿದೆ. ಜನರಿಗೆ ತೊಂದರೆ ಆಗುತ್ತಿದೆ.
ಮತ್ತೊಂದು ನೀರಿನ ಯೋಜನೆಗೆ ಅಡ್ಡಿ!?
ಕೆಲವು ಗ್ರಾಮಗಳಲ್ಲಿ ಹರ್ ಘರ್ ಜಲ್ ಪೂರ್ಣ ಮಾಡಿದ್ದರೂ ಸಹ ಜೆಜೆಎಂ ಕಾಮಗಾರಿಯಿಂದ ಉಂಟಾಗಿರುವ ಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯ ಮಾಡಿದ್ದಾರೆ.ಈ ಮಧ್ಯೆ ಮಳೆಗಾಲದಲ್ಲಿ ಇಂತಹ ಗುಂಡಿ ಬಿದ್ದ ರಸ್ತೆಗಳಲ್ಲಿ ಓಡಾಡೋದು ಅಂದ್ರೆ ದೇವರೆ ಕಾಪಾಡಬೇಕಾಗಿದೆ.
* ಕೋಟಿ ಕೋಟಿ ಹಣ ನೀರು ಪಾಲು: ಜನರ ಹಣಕ್ಕೆ ಬೆಲೆ ಇಲ್ವೇ ?
ಕೆಲವು ಕಡೆಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಸರಿಯಾಗಿ ಕ್ಯೂರಿಂಗ್ (ನೀರು ಹಾಕುವುದು) ಮಾಡದಿರುವುದು ಕಂಡುಬಂದಿದೆ. ಇದರಿಂದ ಓವರ್ ಹೆಡ್ ಟ್ಯಾಂಕ್ ಗುಣಮಟ್ಟ ಕುಸಿತವಾಗಿದ್ದು ಸ್ಥಳೀಯರು ದೂರು ನೀಡಿದರೂ ಅಧಿಕಾರಿಗಳು ಮಾತ್ರ ಗುತ್ತಿಗೆದಾರರ ಪರ ನಿಂತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ದೊಡ್ಡ ಮಟ್ಟದ ಗೋಲ್ಮಾಲ್ ಆಗುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಪ್ರತ್ಯಕ್ಷವಾಗಿ ಇಲ್ಲಿ ಶಾಮೀಲಾಗಿರುವುದು ಕಾಣುತ್ತಿದೆ. ಕಾಮಗಾರಿ ವಿಳಂಬ, ಕಳಪೆ ಕಾಮಗಾರಿ ಬಗ್ಗೆ ಯಾವುದೇ ರಾಜಕಾರಣಿ, ಅಧಿಕಾರಿಗಳು ಮಾತು ಎತ್ತದೆ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಗ್ರಾಮಗಳ ಯೋಜನಾ ವರದಿ ಲೆಕ್ಕಕ್ಕಿಲ್ಲ!
ಸರ್ಕಾರ ಪ್ರತಿ ಗ್ರಾಮಗಳಿಗೆ ರೂಪಿಸಿರುವ ಯೋಜನಾ ವರದಿಗಳಂತೆ ಕೆಲಸ ಮಾಡದೆ ಮನಸೋ ಇಚ್ಚೆ ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಸ್ಥಳೀಯರು, ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದರೂ ಸಹ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಗುತ್ತಿಗೆದಾರರ ಪರ ನಿಂತು ಮನೆಮನೆಗಳಿಗೆ ವ್ಯವಸ್ಥಿತವಾಗಿ ನೀರು ಸರಬರಾಜು ಆಗದಿದ್ದರೂ ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಬಹುಪಾಲು ಗ್ರಾಮಗಳಲ್ಲಿ ಡಿಪಿಆರ್ನಂತೆ ಕೆಲಸಗಳು ನಡೆಯದಿದ್ದರೂ ಸಹ ಹರ್ಘರ್ ಜಲ್ ಕೆಲಸ ಮಾಡಿ ಸಂಪೂರ್ಣ ಅನುದಾನದ ಹಣವನ್ನು ಗುತ್ತಿಗೆದಾರರಿಗೆ ನೀಡುತ್ತಿರುವುದು ಕಂಡುಬಂದಿದೆ. ಡಿಪಿಆರ್ನಂತೆ ಕೆಲಸವಾಗಿಲ್ಲ, ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರೂ ಸ್ಥಳ ಭೇಟಿ ಮಾಡಲು ಮಾತ್ರ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಒಟ್ಟಾರೆಯಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿ ಯೋಜನೆ ಜಾರಿಯಾದ ಜೆಜೆಎಮ್ ಕಾಮಗಾರಿಯಲ್ಲಾಗುತ್ತಿರುವ ಬೇಜವಾಬ್ದಾರಿತನ ನೋಡಿದರೆ ಜನರ ಹಣಕ್ಕೆ ಬೆಲೆ ಇಲ್ವೇ ಎಂಬ ಪ್ರಶ್ನೆ ಮೂಡಿದೆ.
ನಮ್ಮೂರ್ ಎಕ್ಸ್ ಪ್ರೆಸ್ ಈ ಬಗ್ಗೆ ವಿಶೇಷ ವರದಿ ಪ್ರಕಟ ಮಾಡಿದ್ದು ಜನರು ತಮ್ಮ ಊರಿನಲ್ಲಾದ ಅವ್ಯವಸ್ಥೆ ಹಾಗೂ ಅವ್ಯವಹಾರ ಬಗ್ಗೆ ಮಾಹಿತಿ ನೀಡಬಹುದಾಗಿದೆ.
