ಎನ್ ಆರ್ ಪುರ ಕಾಡಾನೆ ಸೆರೆಗೆ ಆದೇಶ,ಇಂದಿನಿಂದ ಕಾರ್ಯಾಚರಣೆ
* ಶಾಸಕ ರಾಜೇಗೌಡ ಹಾಗೂ ಡಾ.ಕೆ ಪಿ ಅಂಶುಮಂತ್ರಿಂದ ಸರ್ಕಾರಕ್ಕೆ ಮನವಿ
* ಸಿಬ್ಬಂದಿಗಳಿಗೆ ಧೈರ್ಯ ತುಂಬಿದ ಅಂಶುಮಂತ್,ಗ್ರಾಮಸ್ಥರಿಂದ ಸಹಕಾರದ ಮನವಿ
* ಕಾಡುಪ್ರಾಣಿಗಳಿಂದ ಶಾಶ್ವತ ಪರಿಹಾರ ಕಲ್ಪಿಸುವಂತೆ ಜೀವರಾಜ್ ಮನವಿ
NAMMMUR EXPRESS NEWS
ಎನ್ ಆರ್ ಪುರ: ಶೃಂಗೇರಿ ಕ್ಷೇತ್ರದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ರೈತರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಬಾಳೆಹೊನ್ನೂರು ಭಾಗದಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟ ಘಟನೆಯೂ ನಡೆಯಿತು.ನಂತರ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ ಅಷ್ಟಕ್ಕೆ ಮುಗಿಯದ ಸಮಸ್ಯೆ ಈಗ ಎನ್ ಆರ್ ಪುರ,ಕೊಪ್ಪ ಭಾಗದಲ್ಲಿ ಮುಂದುವರೆದಿದೆ ರೈತರ ಜಮೀನಿಗೆ ನಿರಂತರ ದಾಳಿ ಮಾಡುತ್ತಿರುವ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದ್ದು,ರೈತರು ಕಂಗಾಲಾಗಿದ್ದಾರೆ.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಕೆ ಪಿ ಅಂಶುಮಂತ್ ಅರಣ್ಯ ಸಚಿವರಿಗೆ ತೊಂದರೆ ಕೊಡುತ್ತಿರುವ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಅರಣ್ಯ ಸಚಿವರು ತಾಲೂಕಿನ ಮಡಬೂರು ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಒಂದು ಕಾಡಾನೆಯನ್ನು ಸೆರೆ ಹಿಡಿಯುವಂತೆ ಆದೇಶಿದ್ದು ಅದರಂತೆ ತಾಲೂಕಿನ ಮಡಬೂರು ಗ್ರಾಮದ ಕಪ್ಪೂರಿನಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಲಿದ್ದು, ಭಾನುವಾರ ಸಂಜೆ 5:00 ಗಂಟೆಗೆ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿಗ್ರಾಮಕ್ಕೆ ಸಕ್ರೇಬೈಲಿನ ನಾಲ್ಕು ಆನೆಗಳು ಆಗಮಿಸಿದ್ದು,ಇನ್ನೂ ಮೂರು ಆನೆಗಳ ತಂಡ ಮಡಿಕೇರಿಯಿಂದ ಬರಲಿದ್ದು ಕಾರ್ಯಚರಣೆಯಲ್ಲಿ ಒಟ್ಟು ಏಳು ಆನೆಗಳು ಭಾಗವಹಿಸಲಿವೆ ಎಂದು ಕಡಹಿನಬೈಲ್ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಗಾಂಧಿ ಗ್ರಾಮದ ಕೆ ಎನ್ ನಾಗರಾಜ್ ರವರ ಮನೆಯ ಪಕ್ಕದ ಆವರಣದಲ್ಲಿ ಕರೆತಂದಿರುವ ಆನೆಗಳನ್ನು ಕಡಹಿನಬೈಲು ಗ್ರಾಮ ಪಂಚಾಯಿತಿ ವತಿಯಿಂದ ಬರಮಾಡಿಕೊಳ್ಳಲಾಗಿದೆ.
ಇಂದು ಬೆಳಿಗ್ಗೆಯಿಂದ ಕಾರ್ಯಾಚರಣೆಗೆ ಇಳಿಯುವ ಅರಣ್ಯ ಇಲಾಖೆ ಕಾಡಾನೆ ಇರುವ ಸ್ಥಳ ಗುರುತಿಸಿ ಕಾರ್ಯಾಚರಣೆಯನ್ನು ಮುಂದುವರಿಸಲಿದ್ದಾರೆ, ಕಾರ್ಯಾಚರಣೆ ಯಶಸ್ವಿಯಾಗಲಿ ಹಾಗೂ ಒಂಟಿ ಸಲಗವನ್ನು ಶೀಘ್ರ ಹಿಡಿದು ಸ್ಥಳಾಂತರಿಸಲಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಕಾರ್ಯಾಚರಣೆಯು ಕೊಪ್ಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ರವರು ಸ್ಥಳದಲ್ಲೇ ಮೊಕ್ಕಾಮ್ ಹೂಡಿದ್ದಾರೆ. ಅವರೊಂದಿಗೆ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಬು ರಾಜೇಂದ್ರ ಪ್ರಸಾದ್, ನರಸಿಂಹರಾಜಪುರದ ವಲಯ ಅರಣ್ಯಾಧಿಕಾರಿ ಪ್ರವೀಣ್, ಚಿಕ್ಕಅಗ್ರಹಾರ ವಲಯ ಅರಣ್ಯಧಿಕಾರಿ ಆದರ್ಶ್, ಆನೆ ಕಾರ್ಯಾಚರಣೆ ತಂಡ ಹಾಗೂ ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
* ಶೀಘ್ರವೇ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ- ಡಿ ಎನ್ ಜೀವರಾಜ್
ಭಾನುವಾರ ಸಂಜೆ ಗಾಂಧಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಸಚಿವ ಡಿ ಎನ್ ಜಿವರಾಜ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡುವಂತೆ ಹಾಗೂ ರೈತರ ತೋಟ ಜಮೀನುಗಳನ್ನು ಆನೆಯಿಂದ ರಕ್ಷಿಸಲು ರೈಲ್ವೆ ಬ್ಯಾರಿಕೇಡ್ ನಂತಹ ತಡೆಗೋಡೆಗಳನ್ನು ನಿರ್ಮಾಣ ಮಾಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಹೇಳಿದರು. ಅಲ್ಲದೆ ಈ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿಯೂ ಅವರು ತಿಳಿಸಿದರು.
* ಕಾರ್ಯಾಚರಣೆ ಸಿಬ್ಬಂದಿಗಳಿಗೆ ಧೈರ್ಯ ತುಂಬಿದ ಡಾ.ಅಂಶುಮಂತ್
ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಕೆ ಪಿ ಅಂಶುಮಂತ್ ಗಾಂಧಿ ಗ್ರಾಮಕ್ಕೆ ಆಗಮಿಸಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ಮಾತನಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದು, ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಇಲಾಖೆ ಅಧಿಕಾರಿಗಳಿಗೆ ಭರವಸೆ ನೀಡಿದರು. ಸ್ಥಳದಲ್ಲಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಇಲಾಖೆಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಒಂಟಿ ಸಲಗವನ್ನು ಹಿಡಿಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಮುಖಂಡರುಗಳು ಉಪಸ್ಥಿತರಿದ್ದರು.
