ಶಮಿತಾ ಸಾವಿನ ಕುರಿತು ಪೋಸ್ಟ್ ಮಾಡಿದ್ದಕ್ಕೆ ಪೊಲೀಸರಿಂದ ನೋಟಿಸ್
* ಘಟನೆ ನಡೆದು 22 ದಿನಗಳಾದರೂ ಬಾರದ ಮರಣೋತ್ತರ ಪರೀಕ್ಷೆ ವರದಿ
* ಅನುಮಾನ ಮೂಡಿಸಿದ ಪೊಲೀಸರ ನೋಟಿಸ್
NAMMMUR EXPRESS NEWS
ಕೊಪ್ಪ: ತಾಲೂಕಿನ ಮೊರಾರ್ಜಿ ವಸತಿ ಶಾಲಾ ವಿದ್ಯಾರ್ಥಿನಿ ಶಮಿತಾ ಅನುಮಾನಾಸ್ಪದ ಸಾವು ಸಂಭವಿಸಿ 22 ದಿನ ಕಳೆದರೂ ಪ್ರಕರಣದ ತನಿಖೆ ಬಗ್ಗೆ ಮಾಹಿತಿ ಇಲ್ಲವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಅಭಿಯಾನ ನಡೆಸುತ್ತಿದ್ದ ಇಬ್ಬರಿಗೆ ಪೊಲೀಸರಿಂದ ನೋಟಿಸ್ ನೀಡಲಾಗಿದೆ.
ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಿದ್ದರೂ ತನಿಖೆ ಯಾವ ಹಂತಕ್ಕೆ ತಲುಪಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಘಟನೆ ನಡೆದು 22 ದಿನಗಳಾದರೂ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
* ನೋಟಿಸ್‌ನಲ್ಲಿ ಏನಿದೆ ?
ಕುಮಾರಿ ಶಮಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಹಾಗೂ ವಾಟ್ಸಾಪ್ ಸ್ಟೇಟಸ್ ಹಾಕುತ್ತಿರುವುದು ಕಂಡುಬಂದಿದ್ದು, ಈ ಅನುಮಾನಾಸ್ಪದ ಸಾವಿಗೆ ಸಂಬಂಧಪಟ್ಟಂತೆ ತಮ್ಮ ಬಳಿ ಯಾವುದಾದರೂ ಸಾಕ್ಷ್ಯಾಧಾರಗಳು, ದಾಖಲೆಗಳು ಇದ್ದಲ್ಲಿ ಖುದ್ದು ಹಾಜರಾಗಿ ನೀಡುವಂತೆ ಅನಿಲ್ ಶಿವಪುರ ಹಾಗೂ ವಿನಯ್ ಶಿವಪುರ ಅವರಿಗೆ ಕೊಪ್ಪ ಠಾಣೆ ಸಬ್ ಇನ್ಸ್ಪೆಕ್ಟರ್ ನೋಟಿಸ್ ನೀಡಿದ್ದಾರೆ. ಇದಲ್ಲದೆ ಶಮಿತಾ ಸಾವಿನ ಕುರಿತು ಇನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡದಂತೆ ಮೌಖಿಕವಾಗಿ ಸೂಚನೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರ ಈ ನೋಟಿಸ್ ಸಾರ್ವಜನಿಕ ವಲಯದಲ್ಲಿ ಈಗ ಅನುಮಾನ ಮೂಡಿಸಿದೆ.