ಅತಿಯಾದ ಮಳೆ ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ
* ಶ್ರೀಶಾರದಾ ಪೀಠದ ಜಗದ್ಗುರುಗಳ ಅಪ್ಪಣೆಯಂತೆ 3 ದಿನಗಳ ವಿಶೇಷ ಪೂಜೆ
* ಮಳೆ ದೇವರೆಂದೇ ಪ್ರಸಿದ್ಧಿಯಾದ ಶ್ರೀಋಷ್ಯಶೃಂಗೇಶ್ವರನಿಗೆ ಅಗಿಲು ಸೇವೆ,ಸೇವೆಯ ಬಗ್ಗೆ ಮಾಹಿತಿ ಇಲ್ಲಿದೆ
NAMMMUR EXPRESS NEWS
ಶೃಂಗೇರಿ: ಕಳೆದ ನಾಲ್ಕೈದು ದಿನಗಳಿಂದ ಮಲೆನಾಡಿನಾದ್ಯಂತ ಅಬ್ಬರಿಸುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದ್ದು,ಕೃಷಿ ಚಟುವಟಿಕೆಗಂತೂ ತೀವ್ರ ತೊಂದರೆಯುಂಟಾಗಿದೆ.
ಮಳೆಯ ಅಬ್ಬರ ಕಡಿಮೆ ಮಾಡಲು ಶೃಂಗೇರಿ ಶ್ರೀಶಾರದಾ ಪೀಠದ ಉಭಯ ಜಗದ್ಗುರುಗಳು ತಾಲೂಕಿನ ಕಿಗ್ಗಾದ ಶ್ರೀಶಾಂತಾ ಸಮೇತ ಋಷ್ಯಶೃಂಗೇಶ್ವರನಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸುವಂತೆ ಸೂಚಿಸಿದ್ದಾರೆ. ಅದರಂತೆ ಮಳೆದೇವ ಋಷ್ಯಶೃಂಗೇಶ್ವರನಿಗೆ ಮೂರು ದಿನ ವಿಶೇಷ ಪೂಜೆ,ಅಗಿಲು ಸೇವೆ ನಡೆಯುತ್ತಿದೆ.
* ಏನಿದು ಅಗಿಲು ಸೇವೆ
ಕಳೆದ ನಾಲ್ಕೈದು ದಿನಗಳಿಂದ ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ಭಾರೀ ಮಳೆ ಜನರ ದೈನಂದಿನ ಜೀವನಕ್ಕೆ ತೊಂದರೆಯುಂಟು ಮಾಡಿದ್ದು, ಈ ಮಳೆಯ ಆರ್ಭಟ ಕಡಿಮೆಯಾಗಿ ಎಲ್ಲರಿಗೂ ಕೆಲಸ ಕಾರ್ಯಗಳಿಗೆ ಅನುಕೂಲವಾಗಲು ಮಳೆ ದೇವರೆಂದೇ ಪ್ರಸಿದ್ಧಿಯಾದ ಶೃಂಗೇರಿ ತಾಲೂಕಿನ ಕಿಗ್ಗಾ ಶ್ರೀಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಅಗಿಲು ಸೇವೆಯನ್ನು ಸಮರ್ಪಿಸಲು ಶೃಂಗೇರಿ ಶ್ರೀಶಾರದಾ ಪೀಠದ ಉಭಯ ಜಗದ್ಗುರುಗಳು ಸೂಚಿಸಿದ್ದಾರೆ. ಈ ಅಗಿಲು ಸೇವೆ ಎಂದರೇನು ಇದು ಹೇಗೆ ನಡೆಯುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಪವಿತ್ರ ಅಷ್ಟಗಂಧಗಳಲ್ಲಿ ಒಂದಾದ ಅಗಿಲು ಇದು ಉಷ್ಣ ಸ್ವಭಾವದ ಗಂಧವಾಗಿದ್ದು ಇದನ್ನು ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗುರುಗಳು ಅತಿವೃಷ್ಠಿಯಾದಾಗ ತೀವ್ರ ಪ್ರಕೃತಿ ವಿಕೋಪಕ್ಕೆ ಹೋಗುವ ಸಂದರ್ಭದಲ್ಲಿ ಪರಿಸ್ಥಿಯನ್ನು ಮನಗಂಡು ಜಗದ್ಗುರುಗಳು ಸಮರ್ಪಿಸುತ್ತಾರೆ. ಪವಿತ್ರ ಅಗಿಲನ್ನು ಶೃಂಗೇರಿ ಜಗದ್ಗುರುಗಳನ್ನು ಹೊರತು ಪಡಿಸಿ ಬೇರಾರು ಕಳಿಸಿಕೊಡುವಂತಿಲ್ಲ ಹಾಗೂ ಋಷ್ಯಶೃಂಗೇಶ್ವರ ಸನ್ನಿಧಿಯಲ್ಲಿ ಬೇರಾವ ಸಂಧರ್ಭದಲ್ಲೂ ಬಳಸುವಂತಿಲ್ಲ.
ಜಗದ್ಗುರುಗಳಿಂದ ಸಮರ್ಪಿತವಾದ ಪವಿತ್ರ ಅಗಿಲನ್ನು ಶ್ರೀಋಷ್ಯಶೃಂಗೇಶ್ವರನ ಮುಂದಿಟ್ಟು ಪ್ರಾರ್ಥಿಸಿ ಅದನ್ನು ತೇಯ್ದು ಶ್ರೀಸ್ವಾಮಿಯ ಪೀಠದ ಮುಂದಿಟ್ಟು ಸಮರ್ಪಿಸಲಾಗುವುದು. ಹೀಗೆ ಮೂರು ದಿನಗಳ ಕಾಲ ಲೇಪಿಸಿ,ವಿಶೇಷ ಪೂಜೆ ಅಭಿಷೇಕಗಳನ್ನು ನಡೆಸಲಾಗುವುದು ಇದರ ಪರಿಣಾಮ ಪವಿತ್ರ ಅಗಿಲಿನ ಉಷ್ಣ ಸ್ವಭಾವದಿಂದ ಪ್ರಕೃತಿಯಲ್ಲಿನ ಶೀತ ಸ್ವಭಾವ ಕಡಿಮೆಯಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಇದೇ ಸೇವೆ ಕಳೆದ ಎಂಟು ವರ್ಷಗಳ ಹಿಂದೆ ಮಳೆಯು ಅತಿಯಾದಾಗ ಜಗದ್ಗುರುಗಳ ಅಪ್ಪಣೆ ಮೇರೆಗೆ ಶ್ರೀಋಷ್ಯಶೃಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಡೆದಿತ್ತು ಆಗಲೂ ಮಳೆಯ ಪ್ರಮಾಣ ಕಡಿಮೆಯಾಗಿ,ಎಲ್ಲರಿಗೂ ಅನೂಕಲವಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಅಗಿಲು ಸೇವೆಯೊಂದಿಗೆ ನಿತ್ಯ ಏಕಾದಶ ರುದ್ರಾಭಿಷೇಕ, ತೈಲಾಭಿಷೇಕ,ರುದ್ರಾಭಿಷೇಕ,ನೈವೇದ್ಯ ಹಾಗೂ ಅದಕ್ಕೆ ಪೂರಕವಾದ ಪೂಜಾ ವಿಧಿವಿಧಾನಗಳು ನೆರವೇರುತ್ತಿದೆ ಎಂದು ಪೂಜಾ ವಿಧಿವಿಧಾನಗಳ ಬಗ್ಗೆ ದೇವಾಲಯದ ಶಾನುಭೋಗರಾದ ಅರುಣಾಚಲರವರು ನಮ್ಮೂರ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದರು.
