Categories
ದಕ್ಷಿಣ ಕನ್ನಡ

*ಧರ್ಮಸ್ಥಳ ಪ್ರಕರಣ: ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ*

*ಧರ್ಮಸ್ಥಳ ಪ್ರಕರಣ: ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ* 

**“ಏನನ್ನೂ ಮುಚ್ಚಿಟ್ಟಿಲ್ಲ, ವ್ಯವಸ್ಥಿತ ಪಿತೂರಿ ನಡೆಯುತ್ತಿದೆ”**

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೆಗ್ಗಡೆ ಅವರು, “ಧರ್ಮಸ್ಥಳದ ಬಗ್ಗೆ ಗೊಂದಲ ಮೂಡಿಸಲಾಗುತ್ತಿದೆ. ಎಸ್‌ಐಟಿ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಸತ್ಯ ಹೊರಬರುತ್ತದೆ ಎಂಬ ವಿಶ್ವಾಸವಿದೆ,” ಎಂದು ಸ್ಪಷ್ಟಪಡಿಸಿದರು.

ಅವರು ಮುಂದುವರೆದು, **“ಸೌಜನ್ಯ ಪ್ರಕರಣದಲ್ಲಿ ಸರ್ಕಾರಕ್ಕೆ ತಕ್ಷಣ ಮಾಹಿತಿ ನೀಡಿದ್ದೇ ಅಪರಾಧಿಯನ್ನು ಪತ್ತೆಹಚ್ಚುವಂತೆ ಮಾಡಿತು. ಆದರೆ, ನಮ್ಮ ಕುಟುಂಬದವರು ದೇಶದಲ್ಲೇ ಇಲ್ಲದಿದ್ದಾಗಲೂ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು. ನಮಗೆ ಅನಾವಶ್ಯಕವಾಗಿ ಈ ಪ್ರಕರಣಕ್ಕೆ ಎಳೆದು ತರಲಾಗಿದೆ,”** ಎಂದು ಬೇಸರ ವ್ಯಕ್ತಪಡಿಸಿದರು.

ತನಿಖೆಗೆ ಸಂಪೂರ್ಣ ಸಹಕರಿಸಲು ತಾವು ಸಿದ್ಧರಿರುವುದಾಗಿ ಹೆಗ್ಗಡೆ ಹೇಳಿದರು. “ನಾವು ಏನನ್ನೂ ಮುಚ್ಚಿಟ್ಟಿಲ್ಲ. ಯಾವುದೇ ತನಿಖೆಯನ್ನು ಸ್ವಾಗತಿಸುತ್ತೇವೆ. ಅಂತಿಮ ವರದಿ ಹೊರಬರುವ ತನಕ ಕಾಯುತ್ತಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದರು.

**ಅಪಪ್ರಚಾರದ ವಿರುದ್ಧ ಆಕ್ರೋಶ**
ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಸುಳ್ಳು ಪ್ರಚಾರದ ವಿರುದ್ಧ ಹೆಗ್ಗಡೆ ಆಕ್ರೋಶ ವ್ಯಕ್ತಪಡಿಸಿದರು. “ಕೆಲವರು ಸಾಮಾಜಿಕ ಜಾಲತಾಣಗಳನ್ನು ಬಳಸಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ದೇವಸ್ಥಾನ ಹಾಗೂ ಧಾರ್ಮಿಕ ನಂಬಿಕೆಗಳಿಂದ ಅವರನ್ನು ದೂರ ಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸುಳ್ಳು ಸಂದೇಶಗಳಿಂದ ಯುವಕರ ಮನಸ್ಸು ಕಲುಷಿತಗೊಳ್ಳುತ್ತಿದೆ, ಇದು ಅತ್ಯಂತ ಖೇದಕರ,” ಎಂದು ಅಭಿಪ್ರಾಯಪಟ್ಟರು.

**ಬೆಂಬಲದ ಹೆಜ್ಜೆ ಹಿಂದೆ ಹಾಕುವಂತೆ ಕರೆ**
ರಾಜ್ಯಾದ್ಯಂತದಿಂದ ಸಾವಿರಾರು ಜನ ಧರ್ಮಸ್ಥಳಕ್ಕೆ ಬರಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯಿಸಿದ ಹೆಗ್ಗಡೆ, “ನಾನು ಬೇಡವೆಂದು ಹೇಳುತ್ತಿದ್ದೇನೆ. ಪ್ರಕರಣದ ಸತ್ಯ ಶೀಘ್ರದಲ್ಲೇ ಬಹಿರಂಗವಾಗಲಿದೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸವಿದೆ,” ಎಂದು ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.