Categories
ಬೆಂಗಳೂರು ಸಿನಿಮಾ

ದರ್ಶನ್ ಕೇಸ್ ಈಗ ಭಾರೀ ಸಸ್ಪೆನ್ಸ್!

ದರ್ಶನ್ ಕೇಸ್ ಈಗ ಭಾರೀ ಸಸ್ಪೆನ್ಸ್!

– ಸಂತ್ರಸ್ತ ವ್ಯಕ್ತಿಯ ಕುಟುಂಬದ ಪರ ನಿಂತ ನಟಿ ರಮ್ಯಾ
– ನಾನು ಬೆದರಿಸುವಂತೆ ಹೇಳಿದ್ದೆ ಅಷ್ಟೇ: ದರ್ಶನ್
– 13 ಮಂದಿಗೆ 6 ದಿನ ಜೈಲು
– 15 ದಿನದೊಳಗೆ ದರ್ಶನ್ ಸಾಯಲಿ: ರೇಣುಕಾಸ್ವಾಮಿ ಕುಟುಂಬ

NAMMUR EXPRESS NEWS
ಬೆಂಗಳೂರು: ನಟ ದರ್ಶನ್ ಮತ್ತು ಸಹಚರರಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರ ಮನವಿ ಮೇರೆಗೆ ಆರೋಪಿಗಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ.

ದರ್ಶನ್ ಹಾಗೂ ಸಹಚರರನ್ನು 14 ದಿನ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಕರೆದುಕೊಂಡು ಹೋಗಿದ್ದು,. ಕೊಲೆಯಾದ ಸ್ಥಳ, ಶವ ಎಸೆದ ಜಾಗದಲ್ಲಿ ಮಹಜರು ನಡೆಸಬೇಕಿದೆ. ಮೊಬೈಲ್ ಡೇಟಾ ಸಂಗ್ರಹಿಸಬೇಕು. ಆಯುಧ ಜಪ್ತಿ ಮಾಡಬೇಕಿದೆ. ದರ್ಶನ್ ಸೆಲೆಬ್ರಿಟಿ ಆಗಿರುವುದರಿಂದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದ್ದು, ಅವರನ್ನು 14 ದಿನ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದರು

ಕೊಲೆಯಾದವನ ಪರ ನಿಂತ ರಮ್ಯಾ!

ರೇಣುಕಾ ಸ್ವಾಮಿ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅನ್ನು ಪೊಲೀಸರು ಬಂಧಿಸಿದ್ದಾರೆ. . ಸೆಕ್ಷನ್ 302 (ಕೊಲೆ), 369 (ಅಪಹರಣ) ಇನ್ನೂ ಕೆಲವು ಸೆಕ್ಷನ್​ಗಳನ್ನು ಹೇರುವುದು ಖಾಯಂ ಎನ್ನಲಾಗುತ್ತಿದೆ. ಇದರ ನಡುವೆ ನಟಿ ರಮ್ಯಾ, ದರ್ಶನ್​ಗೆ ಯಾವ ರೀತಿಯ ಶಿಕ್ಷೆ ಆಗಲಿದೆ ಎಂಬ ಬಗ್ಗೆ ಮಾಡಲಾಗಿರುವ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿದ್ದಾರೆ. ಕರ್ನಾಟಕ ಬಾಕ್ಸ್ ಆಫೀಸ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ‘ದರ್ಶನ್​ಗೆ ಸೆಕ್ಷನ್ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಒಂದೊಮ್ಮೆ ಈ ಪ್ರಕರಣದಲ್ಲಿ ದರ್ಶನ್​ಗೆ ಶಿಕ್ಷೆ ಆಗದಿದ್ದಲ್ಲಿ ಹಣದ ಪ್ರಭಾವ ಕೆಲಸ ಮಾಡಿದೆ ಎಂದರ್ಥ ಹಾಗೂ ಭಾರತೀಯ ಕಾನೂನು ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂದು ತೋರಿದಂತಾಗುತ್ತದೆ. ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ಸಿಗುತ್ತದೆ ಎಂದು ಆಶಿಸುತ್ತೇವೆ’ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಅನ್ನು ನಟಿ ರಮ್ಯಾ ರೀಟ್ವೀಟ್ ಮಾಡಿದ್ದಾರೆ.

ರಮ್ಯಾ ಹಾಗೂ ದರ್ಶನ್ ‘ದತ್ತ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಆದರೆ ದರ್ಶನ್ ಹಾಗೂ ರಮ್ಯಾ ಒಳ್ಳೆಯ ಸ್ನೇಹಿತರೇನೂ ಆಗಿರಲಿಲ್ಲ. ದರ್ಶನ್​ರ ಅಭಿಮಾನಿಗಳ ಅತಿರೇಕದ ವರ್ತನೆಯನ್ನು, ಆ ಅತಿರೇಕದ ವರ್ತನೆಗೆ ದರ್ಶನ್ ನೀಡುವ ಬೆಂಬಲವನ್ನು ಪರೋಕ್ಷವಾಗಿ ಟೀಕಿಸಿದ್ದರು ನಟಿ ರಮ್ಯಾ. ಈಗ ದರ್ಶನ್ ಮೇಲೆ ಕೊಲೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ದರ್ಶನ್​ಗೆ ತಪ್ಪಿಗೆ ಶಿಕ್ಷೆಯಾಗಲಿ ಎಂಬ ಸಂದೇಶವನ್ನು ರೀಟ್ವೀಟ್ ಮಾಡಿ, ಸಂತ್ರಸ್ತನ ಕುಟುಂಬದ ಪರವಾಗಿ ನಿಂತಿದ್ದಾರೆ.

ನಾನು ಬೆದರಿಸುವಂತೆ ಹೇಳಿದ್ದೆ ಅಷ್ಟೇ..!

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ಇದೀಗ ತಮ್ಮ ಮೊದಲ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದು, ನಾನು ಕೇವಲ ಬೆದರಿಸಲು ಹೇಳಿದ್ದೆ ಎಂದು ಹೇಳಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ರವಾನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಟ ದರ್ಶನ್ ಅವರು ರೇಣುಕಾಸ್ವಾಮಿಗೆ ಕೊಲೆ ಮಾಡುವಂತೆ ಹೇಳಿಲ್ಲ, ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಅವರನ್ನು ಮೈಸೂರಿನ ಹೋಟೆಲ್‌ನಲ್ಲಿ ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ನಂತರ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ದರ್ಶನ್‌ಗೆ 300 ಪದಗಳ ಪ್ರಬಂಧ ಬರೆಸಿ ಬಿಟ್ಟುಬಿಡಿ: ಟ್ರೋಲ್ಸ್

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ, ಇತ್ತೀಚೆಗೆ ಕಾಟೇರ ಸಿನಿಮಾದ ಮೂಲಕ ಮತ್ತೆ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ದರ್ಶನ್ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆದರ್ಶನ್ ವಿಚಾರಣೆ ನಡೆಯುತ್ತಿದೆ.
ಇದೇ ಸಮಯದಲ್ಲಿ ದರ್ಶನ್ ಅಭಿಮಾನಿಗಳು, ಡಿಬಾಸ್ ಇಷ್ಟಪಡದೆ ಇರುವವರು ಸೋಷಿಯಲ್‌ ಮೀಡಿಯಾದಲ್ಲಿ ನಾನಾ ಬಗೆಯ ಪೋಸ್ಟ್‌ಗಳನ್ನು ಹಾಕುತ್ತ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ಕೆಲವೊಂದು ಟ್ರೋಲ್‌ಗಳು, ಮೀಮ್ಸ್‌ಗಳು ವೈರಲ್ ಆಗುತ್ತಿವೆ.

ಪುಣೆಯಲ್ಲಿ ಇತ್ತೀಚೆಗೆ ದುಬಾರಿ ಕಾರು ಡಿಕ್ಕಿ ಹೊಡೆಸಿ ಇಬ್ಬರ ಸಾವಿಗೆ ಕಾರಣವಾದ ಅಪ್ರಾಪ್ತ ವ್ಯಕ್ತಿಗೆ ಕೋರ್ಟ್‌ ಪ್ರಬಂಧ ಬರೆಯುವ ಶಿಕ್ಷೆ ನೀಡಿತ್ತು. ಇದೀಗ ದರ್ಶನ್ ಬಂಧನದ ಸಮಯದಲ್ಲೂ ಟ್ವಿಟ್ಟರ್‌ನಲ್ಲಿ ಇದೇ ರೀತಿಯ ಟ್ರೋಲ್ ಆಗುತ್ತಿದೆ. ದರ್ಶನ್‌ಗೆ ಜಲಗಾರದ ಕುರಿತು 300 ಪದಗಳ ಪ್ರಬಂಧ ಬರೆಸಿ ಬಿಟ್ಟುಬಿಡಿ ಎಂದು ಕೆಲವು ಟ್ರೋಲ್ ಪೇಜ್‌ಗಳಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ, ಅವರಿಗೆ 300 ಪದದ ಪ್ರಬಂಧ ಬರೆಯಲು ಕಷ್ಟವಾಗಬಹುದು ಎಂದೆಲ್ಲ ಕಾಮೆಂಟ್‌ಗಳನ್ನು ಮಾಡಲಾಗಿದೆ.

15 ದಿನದೊಳಗೆ ದರ್ಶನ್ ಸಾಯಲಿ: ರೇಣುಕಾಸ್ವಾಮಿ ಅಮ್ಮ

ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು. ಪವಿತ್ರಾ ಗೌಡಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕೊಲೆಯಾದ ರೇಣುಕಾಸ್ವಾಮಿ ತಾಯಿ ರತ್ನಮ್ಮ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ದರ್ಶನ್ ಎಂಡ್ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಅಂತ್ಯಕ್ರಿಯೆ ಬಳಿಕ ರುದ್ರಭೂಮಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 15 ದಿನದೊಳಗೆ ದರ್ಶನ್ ಸಾಯಲಿ. ನಮ್ ವಂಶ ನಿರ್ವಂಶ ಮಾಡಿದ ದರ್ಶನ್‌ಗೆ ತಕ್ಕ ಶಾಸ್ತಿ ಆಗಲಿ. ನನ್ನ ಮಗನನ್ನು ಕೊಂದಂತೆ ಅವನನ್ನು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಂಡ ಬರುತ್ತಾನೆ ಎಂದು ನನ್ನ ಸೊಸೆ ಕಾದು ಕುಳಿತಿದ್ದಳು. ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಪವಿತ್ರಾಗೌಡ ವಿರುದ್ಧ ರೇಣುಕಾಸ್ವಾಮಿ ತಾಯಿ ಹರಿಹಾಯ್ದಿದ್ದಾರೆ. ದರ್ಶನ್ ಎಂಡ್ ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ನೀಡಲಾಯಿತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಿದ್ದು ರೇಣುಕಾಸ್ವಾಮಿ ಪೋಷಕರನ್ನು ಆಸ್ಪತ್ರೆಯ ಶವಗಾರಕ್ಕೆ ಕರೆತಂದಿದ್ದರು. ಈ ವೇಳೆ ಮಗನ ಮುಖ ಗುರುತು ಹಿಡಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ, ದರ್ಶನ್ ಆಗಿರಲಿ ಯಾರೇ ಆಗಿರಲಿ. ನನ್ನ ಮಗ ಒದ್ದಾಡಿ ಸತ್ತಂತೆ ಆತನೂ ಸಾಯಬೇಕು ಎಂದು ತಂದೆ, ತಾಯಿ ಹಾಗೂ ಸಹೋದರಿ ಕಣ್ಣೀರಿಟ್ಟರು. ಚಿತ್ರದುರ್ಗದಲ್ಲಿ ಅಂತ್ಯಕ್ರಿಯೆ ಕೂಡ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.