ಧರ್ಮಸ್ಥಳ ಅನನ್ಯ ಕೇಸ್: 22 ವರ್ಷಗಳ ಬಳಿಕ ಮತ್ತೆ ದೂರು!
– ಮಗಳ ಅಸ್ತಿ ಪಂಜರ ಬೇಕು ಎಂದು ಪೊಲೀಸ್ ಠಾಣೆಗೆ ದೂರು
– ಮಗಳ ಹುಡುಕಿ ಬಂದ ನನ್ನ ತಲೆಗೆ ಹೊಡೆದು ಕೋಮಾಕ್ಕೆ ಹೋಗಿದ್ದೆ
NAMMUR EXPRESS NEWS
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದೆ. 22 ವರ್ಷಗಳ ಹಿಂದಿನ ಕೇಸ್ ಇದೀಗ ಮತ್ತೆ ಚಾಲನೆಗೆ ಬರುವ ಸಾಧ್ಯತೆ ಇದ್ದು ಆಕೆಯ ತಾಯಿ ನನ್ನ ಮಗಳ ಅಸ್ತಿ ಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
2003ರಲ್ಲಿ ತನ್ನ ಸ್ನೇಹಿತರೊಂದಿಗೆ ಬಂದಿದ್ದ ಹುಡುಗಿ ಸಿಗಲೇ ಇಲ್ಲ!
ಸುಜಾತ ಭಟ್ ಎಂಬ ಮಹಿಳೆಯು 22 ವರ್ಷಗಳ ಹಿಂದೆ ಅಂದರೆ 2003ರಲ್ಲಿ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿದ್ದ, ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳು ಅನನ್ಯ ಭಟ್ ಆ ಬಳಿಕ ಮನೆಗೆ ಮರಳಿ ಬಾರದೆ, ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ, ಬಳಿಕ ತಮ್ಮ ವಕೀಲರಾದ ಮಂಜುನಾಥ್ ಎನ್ನುವವರೊಂದಿಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ವರಿಷ್ಠಾಧಿಕಾರಿಗಳ ಬಳಿ ತಮ್ಮ ಮಗಳ ನಾಪತ್ತೆಗೆ ಸಂಬಂಧಿಸಿದಂತೆ ವಿವರವನ್ನು ನೀಡಿ, ನ್ಯಾಯವನ್ನು ಕೋರಿದರು. ಅವರ ಆದೇಶದ ಮೇರೆಗೆ ಧರ್ಮಸ್ಥಳದ ಸಬ್ ಇನ್ಸ್ಪೆಕ್ಟರ್ ಆದ ಸಮರ್ಥ್ ಗಾಣಿಗೇರ್ ಅವರ ಬಳಿ ದೂರು ನೀಡಿದರು. ದೂರನ್ನು ಸ್ವೀಕರಿಸಿದ ಪೊಲೀಸರು ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ತಮ್ಮ ಮಗಳ ಅಸ್ತಿ ಬೇಕು ಎಂದ ತಾಯಿ!
ಧರ್ಮಸ್ಥಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳನ್ನು ಸುಜಾತ ಭಟ್ ಕೂಡ ವೀಕ್ಷಿಸಿದರು. ಅಲ್ಲಿ ಹೂತು ಹಾಕಲಾಗಿದ್ದ ಕಳೆಬರಗಳನ್ನು ಕಂಡು ಅವರಿಗೆ ತಮ್ಮ ಮಗಳ ನೆನಪು ಕಾಡಿದೆ. ಜೊತೆಗೆ ಆಕೆಗೂ ಈ ಸ್ಥಿತಿಗೆ ಎದುರಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಿ ತನ್ನ ಮಗಳ ಅಸ್ಥಿಪಂಜರ ಸ್ಥಿತಿಯಲ್ಲಿರುವ ದೇಹವನ್ನು ಡಿಎನ್ಎ ಪರೀಕ್ಷೆಯ ಮೂಲಕ ದೃಢಪಡಿಸಿ, ತನಗೆ ಒಪ್ಪಿಸಬೇಕು. ನರಳಿರುವ ಆಕೆಯ ಆತ್ಮಕ್ಕೆ ನಮ್ಮ ಸಂಪ್ರದಾಯದಂತೆ ಸರಿಯಾದ ರೀತಿಯಲ್ಲಿ ಸಂಸ್ಕಾರವನ್ನು ನಡೆಸಿ ಮುಕ್ತಿ ಕಾಣಿಸಬೇಕು, ನಾನು ಯಾರ ಮೇಲೂ ಅನುಮಾನ ಪಡುತ್ತಿಲ್ಲ, ಯಾರನ್ನು ದ್ವೇಷಿಸುತ್ತಿಲ್ಲ ನನಗೆ ನನ್ನ ಮಗಳ ಮೃತ ದೇಹ ದೊರೆತರೆ ಸಾಕು ಎಂದು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮಗಳ ಹುಡುಕಿ ಬಂದ ನನ್ನ ತಲೆಗೆ ಹೊಡೆದು ಕೋಮಾಕ್ಕೆ ಹೋಗಿದ್ದೆ
2003ರಲ್ಲಿ ನಾನು ಕೊಲ್ಕತ್ತಾದಲ್ಲಿದ್ದೆ. ಮಗಳನ್ನು ಕಷ್ಟ ಪಟ್ಟುಓದಿಸಿ ಮಣಿಪಾಲದಲ್ಲಿ ವೈದ್ಯಕೀಯ ಪದವಿ ಮಾಡುತ್ತಿದ್ದಳು. ಆಕೆ ಧರ್ಮಸ್ಥಳದಲ್ಲಿ ನಾಪತ್ತೆ ಆದಳು. ಆಕೆಯನ್ನು ಹುಡುಕಿ ಬಂದಾಗ ನನ್ನ ಮೇಲೆ ಅಟ್ಯಾಕ್ ಆಯಿತು. ನಾನು 3 ತಿಂಗಳು ಕೋಮಾಕ್ಕೆ ಹೋಗಿದ್ದೆ. ಈಗ ನನ್ನ ಮಗಳಿದ್ದರೆ ನನ್ನ ನೋಡಿಕೊಳ್ಳುತ್ತಿದ್ದಳು. ಈಗ ನನಗೆ ನ್ಯಾಯ ಬೇಕು ಎಂದರು.