ಕರಾವಳಿ ಯ ಯಾವ ತಾಲೂಕಲ್ಲಿ ಏನೇನ್ ಆಯ್ತು!
– ಇಲ್ಲಿದೆ ನಮ್ಮೂರ್ ಎಕ್ಸ್ ಪ್ರೆಸ್ ಅಪ್ಡೇಟ್
* ಕಾರ್ಕಳ: ಹಾಸ್ಟೆಲ್ ಗೋಡೆಯ ಮೇಲೆ ಅಶ್ಲೀಲ ಬರಹ!
• ಕಾಪು: ಬಸ್ ಗಾಗಿ ಕಾಯುತ್ತಿದ್ದಾಗ ಹೃದಯಾಘಾತ..!
* ಬ್ರಹ್ಮಾವರ: ಸೈಬರ್ ಅಪರಾಧಿಗಳಿಂದ ಮಹಿಳೆಗೆ ವಂಚನೆ
– ಕುಂದಾಪುರ: ದನಗಳ್ಳರು ಅರೆಸ್ಟ್..!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜ್ ನಿಟ್ಟಿಯ ವಿದ್ಯಾರ್ಥಿಯರ ನಿಲಯದಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿಯೊಬ್ಬಳು ಶೌಚಾಲಯದ ಕೊಠಡಿಯ ಗೋಡೆಗಳ ಮೇಲೆ ಎರಡು ಸಮುದಾಯಗಳ ನಡುವೆ ವಿಷಬೀಜ ಬಿತ್ತುವಂತಹ ಪ್ರಚೋದನಕಾರಿ ಬರಹವನ್ನು ಬರೆದ ಹಿನ್ನೆಲೆಯಲ್ಲಿ, ಅಲ್ಲಿನ ಮ್ಯಾನೇಜರ್ ಕಾರ್ಕಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ವಿದ್ಯಾರ್ಥಿನಿಯನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಪೊಲೀಸರು ವಿದ್ಯಾರ್ಥಿನಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಕೆ ಈ ಘಟನೆಯಲ್ಲಿ ತಾನು ಭಾಗಿಯಾಗಿಲ್ಲ ಎಂದೆ ವಾದಿಸುತ್ತಿದ್ದಳು. ಇದನ್ನು ತಿಳಿಯಲು ಶೌಚಾಲಯದ ಗೋಡೆಯ ಮೇಲಿನ ಕೈಬರಹ ಮತ್ತು ವಿದ್ಯಾರ್ಥಿನಿಯ ಟಿಪ್ಪಣಿ ಪುಸ್ತಕದಲ್ಲಿನ ಅಕ್ಷರಗಳ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ಕಾಪು: ಬಸ್ ಗಾಗಿ ಕಾಯುತ್ತಿದ್ದಾಗ ಹೃದಯಾಘಾತ..!
ಕಾಪು: ತಾಲ್ಲೂಕಿನ ಪಣಿಯೂರು ಗ್ರಾಮದ ಜಗದೀಶ್ ಶೆಟ್ಟಿ ಉಡುಪಿ ಮಣಿಪಾಲದ ಕನ್ಸ್ಟ್ರಕ್ಷನ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಕೆಲಸಕ್ಕೆ ತೆರಳಲು ಬಸ್ ಗೆ ಕಾಯುತ್ತಿದ್ದ ಸಂದರ್ಭದಲ್ಲಿ ಕುಸಿದುಬಿದ್ದು, ಸಾವನ್ನಪ್ಪಿರುವ ಘಟನೆ ಉಚಿಲದಲ್ಲಿ ನಡೆದಿದೆ. ಇವರು ಮೂಲತಃ ಕುರ್ಕಾಲು ನೂಜಿ ಹೊಸಮನೆಯವರಾಗಿದ್ದು, ಪತ್ನಿಯೊಂದಿಗೆ ಪಣಿಯೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಕುಸಿದುಬಿದ್ದೊಡನೆ ಸುತ್ತಮುತ್ತಲಿದ್ದ ಸ್ಥಳೀಯರು ಮತ್ತು ಆಟೋ ಚಾಲಕರು ಅವರನ್ನು ಉಪಚರಿಸಿ, ಎಸ್ ಡಿಪಿಐ ಆಂಬುಲೆನ್ಸ್ ಮೂಲಕ ಉಡುಪಿಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.
ಬ್ಯಾಂಕ್ ಹೆಸರಲ್ಲಿ ವಂಚನೆ: ಮಹಿಳೆ ಹಣ ಕನ್ನ!
ಬ್ರಹ್ಮಾವರ: ಆಕ್ಸಿಸ್ ಬ್ಯಾಂಕಿನ ಹೆಸರಿನಲ್ಲಿ ಸೈಬರ್ ಅಪರಾಧಿಗಳು ನೀಲಾವರ ಗ್ರಾಮದ ಶೈಲಜಾ ಎನ್ನುವವರಿಗೆ ಕರೆ ಮಾಡಿ, ನಮ್ಮ ಬ್ಯಾಂಕಿನ ನಿಮ್ಮ ಖಾತೆಯಲ್ಲಿ ಹಣ ಇಲ್ಲದಿರುವುದರಿಂದ ಅದನ್ನು ರದ್ದು ಮಾಡುವುದಾಗಿ ತಿಳಿಸಿದರು. ಆಗ ಶೈಲಜಾ ಇದನ್ನು ನಿಜವೆಂದು ನಂಬಿ, ತಮ್ಮ ಇನ್ನೊಂದು ಖಾತೆಯಾದ ಸ್ಟೇಟ್ ಬ್ಯಾಂಕ್ ನ ಮೂಲಕ ಸ್ವಲ್ಪ ಹಣವನ್ನು ಆಕ್ಸಿಸ್ ಬ್ಯಾಂಕಿನ ಖಾತೆಗೆ ವರ್ಗಾಯಿಸಿದರು. ಆಗ ಸೈಬರ್ ಅಪರಾಧಿಗಳು ಎರಡೂ ಖಾತೆಗಳಿಂದ ಒಟ್ಟು 1.22.392 ರೂಪಾಯಿಯಷ್ಟು ಹಣವನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಶೈಲಜಾ ಅವರಿಗೆ ವಂಚಿಸಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
* ಕುಂದಾಪುರದಲ್ಲಿ ದನಗಳ್ಳರು ಅರೆಸ್ಟ್!
ಕುಂದಾಪುರ: ನಾಡಾ ಎಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ, ಶಾನ್ ಮೆಡಿಕಲ್ ಸಮೀಪದಲ್ಲಿ ಮಲಗಿದ್ದ ದನಗಳನ್ನು ಜುಲೈ 6ರಂದು ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಬಿಳಿ ಬಣ್ಣದ ಕಾರಿನಲ್ಲಿ ಆಗಮಿಸಿದ ವ್ಯಕ್ತಿಗಳು ಆ ದನಗಳನ್ನು ಅಕ್ರಮ ಸಾಗಾಟ ಮಾಡುವ ಉದ್ದೇಶದಿಂದ ಎತ್ತಿಕೊಂಡು, ತಮ್ಮ ಕಾರಿನಲ್ಲಿ ತುರುಕುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಕಂಡು ಪರಾರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ, ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಿಶೇಷ ತಂಡವನ್ನು ರಚಿಸಿ, ಪರಿಶೀಲನೆ ನಡೆಸಿದ್ದರು. ಇದರ ಫಲವಾಗಿ ಜುಲೈ 14ರ ಸೋಮವಾರದಂದು ಆರೋಪಿಗಳಾದ ನೌಫಲ್, ನಿಶಾದ್ ಪೊಲೀಸರ ಅತಿಥಿಗಳಾಗಿದ್ದಾರೆ. ಅಷ್ಟೇ ಅಲ್ಲದೆ ದನಗಳನ್ನು ಅಪಹರಿಸಲು ಬಳಸಿದ್ದ ಸುಮರು ಐದು ಲಕ್ಷದಷ್ಟು ಬೆಲೆಬಾಳುವ ಬಿಳಿ ಬಣ್ಣದ ಸ್ವಿಫ್ಟ್ ಕಾರ್, ಸುಮಾರು ಒಂಭತ್ತು ಸಾವಿರ ಮೌಲ್ಯದ ಎರಡು ಮೊಬೈಲ್ ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಮಂಗಳವಾರದಂದು ಅಪರಾಧಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.