ಎಚ್ಚರ ಜನರೇ! ಇದು ಕಾಳಿಂಗ, ನಾಗರ ಹಾವುಗಳ ಮಿಲನ ಕಾಲ
– ಹಾವುಗಳು ಮನೆಯೊಳಗೆ ಬಂದಾವು ಹುಷಾರು!
– ಹಾವುಗಳ ಜಾಗೃತಿ ಏನೇನ್ ಇರಬೇಕು?
– ಮಾರ್ಚ್ ಮೊದಲ ವಾರದಿಂದ ಜೂನ್ ವರೆಗೆ ಕಾಳಿಂಗ ಸರ್ಪಗಳ ಓಡಾಟ ಹೆಚ್ಚಳ
NAMMUR EXPRESS NEWS
ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಾಳಿಂಗ ಸರ್ಪಗಳ ಹಾಗೂ ನಾಗರ ಹಾವುಗಳ ಓಡಾಟ ಹೆಚ್ಚು.ಕಾಳಿಂಗ ಸರ್ಪಗಳು ವಿಷಹೊಂದಿರುವ ಹಾವುಗಳು.ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಿಂದ ಜೂನ್ ಮೊದಲವಾರದವರೆಗೂ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಮಯವಾಗಿದ್ದು ಇದಕ್ಕೂ ಮುಂಚೆ ತನ್ನ ಆಹಾರವನ್ನು ಹುಡುಕಿ ದೇಹವನ್ನು ಮಿಲನಕ್ಕೆ ಅಣಿಗೊಳಿಸುವ ಪ್ರಕ್ರಿಯೆ ಮುಗಿಸಿರುತ್ತವೆ.ಮನುಷ್ಯರಿಗೆ ಋತುಚಕ್ರವಿದೆ ಆದರೆ ಪ್ರಾಣಿಗಳಿಗೆ ಬೆದೆ ಚಕ್ರವಿದೆ. ವಯಸ್ಸಿಗೆ ಬಂದ ಹೆಣ್ಣು ಹಾವು ತಾನು ಸಂತಾನೋತ್ಪತ್ತಿಗೆ ಸಿದ್ದ ಎಂದು ತನ್ನ ಜನನಾಂಗದಿಂದ ಲೈಂಗಿಕ ಸಂಕೇತವನ್ನು ಹೊರಸೂಸುವ ರಾಸಾಯನಿಕ (ಸೆಕ್ಸ್ ಫೆರಮೋನ್) ಅಂಶವನ್ನು ಹೊರಹಾಕುವುದರ ಮೂಲಕ ವ್ಯಕ್ತ ಪಡಿಸುತ್ತದೆ. ಈ ರಾಸಾಯನಿಕಕ್ಕೆ ಆಕರ್ಷಿತವಾದ ಗಂಡುಗಳು ಮಿಲನಕ್ಕಾಗಿ ಹೆಣ್ಣಿನ ಹುಡುಕಾಟದಲ್ಲಿ ತೊಡಗುತ್ತವೆ.
ಸರ್ಪಗಳ ಸೀಮಾ ವ್ಯಾಪ್ತಿ ಏನು?
ಕಾಳಿಂಗ ಹೆಣ್ಣು ಹಾವುಗಳು 5 ಕಿಮೀ ಸೀಮಾ ವ್ಯಾಪ್ತಿಯಲ್ಲಿ ಬದುಕುತ್ತವೆ.ಗಂಡು ಕಾಳಿಂಗಗಳು 8 ಕಿಮೀ ವ್ಯಾಪ್ತಿಯ ಸೀಮಾ ವಲಯದಲ್ಲಿ ವಾಸಿಸಬಲ್ಲವು ಆದರೆ ಬೆದೆಯ ಕಾಲದಲ್ಲಿ ಗಂಡು ತನ್ನ12 ಕಿಮೀ ದೂರದವರೆಗೂ ಕ್ರಮಿಸಿ ಮೂಲ ನೆಲೆಗೆ ವಾಪಾಸಾಗಬಲ್ಲವು..ಹೆಣ್ಣುಗಳು ಸಾಮಾನ್ಯವಾಗಿ 9 ಅಡಿಗಳಷ್ಟು, ಗಂಡು 12 ಅಡಿಗಳಿಗಿಂತ ಉದ್ದ ಬೆಳೆಯಬಲ್ಲವು. ಬೆದೆಗೆ ಬಂದ ಹೆಣ್ಣು ಹಾವು ತಾನು ಸಂಚರಿಸುವಾಗ ಲೈಂಗಿಕ ಸಂಕೇತವನ್ನು ಹೊರಸೂಸುವ ರಾಸಾಯನಿಕ ಬಿಡುಗಡೆಗೊಳಿಸುತ್ತಾ ಸಾಗುತ್ತವೆ.ಈ ರಾಸಾಯನಿಕ 11 ದಿನಗಳವರೆಗೂ ಕ್ರಿಯಾಶೀಲವಾಗಿರಬಲ್ಲದು.
ಹವಾಮಾನ ವೈಪರೀತ್ಯದ ಎಫೆಕ್ಟ್!
ಸಾಮಾನ್ಯವಾಗಿ ಬೇಸಿಗೆ ಎಂದರೆ ನೀರಿನ ಅಭಾವ ಹಾಗೂ ಹೆಚ್ಚು ಬಿಸಿಲು ಎಲ್ಲೆಡೆ ಇರುತ್ತದೆ, ಹಾಗಾಗಿ ಕಾಳಿಂಗಗಳು ಮಲೆನಾಡಿನ ಅಡಿಕೆ ತೋಟ, ಮನೆಯ ಅಕ್ಕಪಕ್ಕದಲ್ಲೆ ಹೆಚ್ಚು ಮಿಲನ ಕ್ರಿಯೆ ನಡೆಸುತ್ತವೆ, (ಕೆಲವು ಸಲ ಕಾಡಿನಲ್ಲೂ ನಡೆಯುತ್ತದೆ). ಇಂತಹ ಸಮಯದಲ್ಲಿ ಕಾಳಿಂಗ ಜೋಡಿಗಳನ್ನು ಹಿಡಿದು ಸ್ಥಳಾಂತರ ಮಾಡಲೇಬಾರದು. ಕಾರಣ ಒಂದು ಹೆಣ್ಣಿಗಾಗಿ ಸುತ್ತಲಿನ ಗುಂಡು ಕಾಳಿಂಗಗಳು ಪೈಪೋಟಿ ನಡೆಸಿ ಗೆದ್ದ ಗಂಡಿಗೆ ಅವಕಾಶ ಸಿಕ್ಕಿರುತ್ತದೆ, ಇಂತಹ ಸಮಯದಲ್ಲಿ ಸ್ಥಳಾಂತಗೊಳಿಸಿದರೆ ಕಾಳಿಂಗಗಳ ಸಂತಾನೋತ್ಪತ್ತಿಗೆ ತೊಂದರೆಯಾಗಬಹುದು, ಹೆಣ್ಣಿನ ಬೆದೆ ಚಕ್ರ ಅವಧಿ ಮುಗಿದು ಗಂಡು ಮತ್ತೊಮ್ಮೆ ಸೇರಲು ಸಾಧ್ಯವಾಗದೇ ಇರಬಹುದು. ಮಳೆಕಾಡುಗಳ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಕಾಳಿಂಗ ಸರ್ಪಗಳು ಕಾಣಸಿಗುವ ಕಾರಣ ಬಿಸಿ ವಾತಾವರಣ ಪ್ರಾಣಿ ಸಂಕುಲಕ್ಕೆ ನೇರ ಪರಿಣಾಮ ಬೀಳಬಹುದು.
ಹಾವು ಹಿಡಿಯುವಾಗ ಹುಷಾರ್..!
ಕಾಳಿಂಗ ಹಾವುಗಳು ಕಟ್ಟಿಗೆ ಮನೆಯೊಳಗೆ ಬಂದರೆ ಅರಣ್ಯ ‘ಇಲಾಖೆಯ ಸಂಪರ್ಕಿಸಿ ಮಾಹಿತಿ ಪಡೆದು ಉರಗತಜ್ಞರನ್ನು ಸಂಪರ್ಕಿಸಿ. ಹಾವು ಹಿಡಿಯುವುದು ಅಪಾಯಕಾರಿ ಸುರಕ್ಷಾ ವಿಧಾನಗಳು ಮುಖ್ಯ ಮದ್ಯಪಾನ ಮಾಡಿ ಹಾವು ಹಿಡಿಯಲು ಪ್ರಯತ್ನಿಸಬೇಡಿ. ರಸ್ತೆ ಅಗಲೀಕರಣ, ಅರಣ್ಯನಾಶಗಳಿಂದ ಕಾಳಿಂಗ ಸರ್ಪಗಳು ತೋಟಗಳಲ್ಲಿ ಕಾಣಸಿಗುತ್ತಿವೆ.ಬೆದೆಗೆ ಬಂದಹೆಣ್ಣು ಕಾಳಿಂಗಕ್ಕಾಗಿ ನಾಲೈದು ಗಂಡು ಕಾಳಿಂಗ ಹಾವುಗಳು ಕಾಣಸಿಗಬಹುದು.ಆದ್ದರಿಂದ ಹಾವು ಹಿಡಿಯಲು ಉರಗತಜ್ಞರನ್ನೇ ಸಂಪರ್ಕಿಸುವುದು ಮುಖ್ಯ.
ಹಾವು ಮನೆಗೆ ಬರದಂತೆ ಮಾಡುವುದು ಹೇಗೆ?
ಕಾಡು ಪ್ರದೇಶ, ಮನೆ, ದನದ ಹಟ್ಟಿ ಹೀಗೆ ನಾನಾ ಕಡೆಗಳಲ್ಲಿ ಹಾವು ಬರುವ ಸಾಧ್ಯತೆ ಹೆಚ್ಚುರುತ್ತದೆ.ಆದ್ದರಿಂದ ಈ ಸಮಯದಲ್ಲಿ ನಿಗಾ ವಹಿಸುವುದು ಮುಖ್ಯ.ಮಾರ್ಚ್ ನಿಂದ ಜೂನ್ ತಿಂಗಳ ವರೆಗೆ ಮಿಲನ ಪ್ರಕ್ರಿಯೆ ನಡೆಯುತ್ತದೆ.ಗೂಡು ಕಟ್ಟಿಕಟ್ಟಿ ಮೊಟ್ಟೆಯಿಟ್ಟು ಜನ್ಮನೀಡುವ ಅಪರೂಪದ ಹಾವುಗಳು.ಕಾಳಿಂಗ ಸರ್ಪಗಳನ್ನು ಹಿಡಿಯಲು ಪ್ರಯತ್ನಿಸಬೇಡಿ.ವಿಷಕಾರಿ ಹಾವುಗಳ ಮುಖ್ಯಾಹಾರ, ಇಲಿ ಹೆಗ್ಗಣಗಳು. ಅವುಗಳನ್ನು ಮನೆಯೊಳಗೆ ಬರದಂತೆ ನೋಡಿಕೊಂಡರೆ ಹಾವುಗಳು ಮನೆಯೊಳಗೆ ಬರುವುದಿಲ್ಲ.
ಹಾವುಗಳ ಜೀವನ ಶೈಲಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಹಾವುಗಳ ರಕ್ಷಣೆ ಮಾಡುವ ಎಲ್ಲರೂ ಮಿಲನದ ತಿಂಗಳುಗಳಲ್ಲಿ ಕಾಳಿಂಗ ಜೋಡಿಗಳನ್ನು ಸ್ಥಳಾಂತರ ಮಾಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಹಾವುಗಳ ಚಲನವಲನದ ಮೇಲೆ ನಿಗಾ ವಹಿಸಬೇಕು.ಕಾಳಿಂಗ ಜೋಡಿಗಳು 2-3 ದಿನ ಮಿಲನ ಕ್ರಿಯೆ ಮುಗಿಸಿ ನಂತರ ಜನವಸತಿಯಿಂದ ದೂರ ಹೋಗುತ್ತವೆ.
