Categories
ಮಾಹಿತಿ ಸುದ್ದಿ

ನೀವೂ ಗೊಂಬೆಯಂತೆ ಕಾಣುವಂತೆ ಮಾಡುತ್ತೆ ಜಿಬ್ಲಿ!

ನೀವೂ ಗೊಂಬೆಯಂತೆ ಕಾಣುವಂತೆ ಮಾಡುತ್ತೆ ಜಿಬ್ಲಿ!
– ಎಐ ಚಮತ್ಕಾರ: ಸೋಷಿಯಲ್ ಮೀಡಿಯಾದಲ್ಲಿ ಜಿಬ್ಲಿ ಹವಾ!
– ಕಲಾ ಕ್ಷೇತ್ರಕ್ಕೆ ಹೊಡೆತ ಕೊಡಲು ಸಿದ್ಧವಾಯ್ತಾ ಈ ಆಪ್..?!

ವಿಶೇಷ ಅಂಕಣ: ಪ್ರಸ್ತುತ
NAMMUR EXPRESS NEWS
ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ ಮನುಷ್ಯರು ಬೊಂಬೆಗಳಂತೆ ಕಾಣುವ ಚಿತ್ರಗಳು ಹರಿದಾಡುತ್ತಿರುವುದನ್ನು ಗಮನಿಸಿರಬಹುದು. ಇದು ಜಿಬ್ಲಿಯ ಪರಿಣಾಮವಾಗಿದೆ.
ಜಿಬ್ಲಿ ಎಂದರೆ ಒಂದು ಹೊಸ ತಾಂತ್ರಿಕ ಆವಿಷ್ಕಾರವಾಗಿದೆ. ಮನುಷ್ಯರನ್ನು ಕಾರ್ಟೂನ್ ಗಳಂತೆ, ಬೊಂಬೆಗಳಂತೆ ರೂಪಿಸುವುದು ಇದರ ವೈಶಿಷ್ಟ್ಯ. ಖ್ಯಾತನಾಮರಿಂದ ಹಿಡಿದು, ಗ್ರಾಮೀಣ ಭಾಗದ ಸಾಮಾನ್ಯ ಜನರ ತನಕ ಇದರ ವ್ಯಾಪ್ತಿ ಹಬ್ಬಿದೆ. ಜಿಬ್ಲಿಯಲ್ಲಿ ತಾವು, ತಮ್ಮ ಕುಟುಂಬದವರು ಹೇಗೆ ಕಾಣಿಸಿಕೊಳ್ಳುತ್ತೀವಿ ನೋಡೋಣ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ಓಪನ್ ಎಐ ಕಂಪನಿ ತನ್ನ ಚಾಟ್ ಜಿಪಿಟಿ ಮೂಲಕ ಜಿಬ್ಲಿ ಶೈಲಿಯ ಚಿತ್ರಗಳನ್ನು ಸೃಷ್ಟಿಸುತ್ತಿದೆ. ಈ ಹಿಂದೆ ಎಐ ಉಪಕರಣಗಳನ್ನು ಬಳಸಿಕೊಂಡು ಸಾಕಷ್ಟು ಜನರು ಹಲವು ಚಿತ್ರಗಳನ್ನು, ವೀಡಿಯೋಗಳನ್ನು ರೂಪಿಸಿದ್ದಾರೆ. ಇದು ಅದರ ಮುಂದುವರಿದ ಭಾಗ ಎನ್ನಲಾಗಿದೆ. ಹಿಂದೆ ಎಐ ತನಗೆ ತೋಚಿದಂತೆ ಚಿತ್ರಗಳನ್ನು ಸೃಷ್ಟಿಸುತ್ತಿತ್ತು. ಆದರೆ ಈಗ ಜಿಬ್ಲಿ ಶೈಲಿಯಲ್ಲಿ ಎಂದು ಮಾರ್ಗ ತೋರಿದರೆ ಸಾಕು, ಬೊಂಬೆಯ ರೂಪದಲ್ಲಿ, ನಾವು ಕೇಳಿದ ರೀತಿಯಲ್ಲಿ ಬಿಡಿಸಿಕೊಡುತ್ತದೆ. ಅಂದರೆ ನಮ್ಮ ಭಾವಚಿತ್ರಗಳನ್ನು ನೀಡಿದರೆ, ಇಲ್ಲವೇ ನಾವಿರುವ ರೀತಿಯನ್ನು ತಿಳಿಸಿದರೆ ಸಾಕು ಕಲ್ಪನೆ ಮಾಡಿಕೊಂಡು ರೂಪಿಸಿಕೊಡುತ್ತದೆ.
ಜಿಬ್ಲಿಯಲ್ಲಿ ಮನುಷ್ಯರು ಕಾರ್ಟೂನ್ ಅಥವಾ ಗೊಂಬೆಗಳಂತೆ ಕಂಡುಬರುತ್ತಾರೆ. ನಮ್ಮನ್ನು ನಾವು ಬೊಂಬೆಗಳಂತೆ ನೋಡಿಕೊಳ್ಳುವುದು ಮುದ ನೀಡುವ ಸಂಗತಿ. ಹೀಗಾಗಿ ಜನ ಈ ಶೈಲಿಗೆ ಮುಗಿಬಿದ್ದಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ ಸ್ವತಃ ಎಐ ಮುಖ್ಯಸ್ಥ ‘ನಿಮ್ಮ ಬೇಡಿಕೆಗಳನ್ನು ಕಡಿಮೆಗೊಳಿಸಿ ನಮಗೆ ವಿಶ್ರಾಂತಿ ಬೇಕಿದೆ’ ಎಂದು ಬೇಡಿಕೊಳ್ಳುವಂತಾಗಿದೆ. ಅಲ್ಲದೆ ಅತಿಯಾದ ಬಳಕೆಯಿಂದ ಎಐನ ಜಿಪಿಯುಗಳು ಶಾಖದಿಂದ ಕರಗುವಂತಾಗಿದೆಯಂತೆ.
ಎಐನ ಉಪಕರಣಗಳಾದ ಚಾಟ್ ಜಿಪಿಟಿ, ಲಿಯೋನಾರ್ಡೋ ಎಐ, ಮಿಡ್ ಜರ್ನಿ, ಬಿಂಚ್ ಮುಂತಾದ ಯಾವುದಾದರೂ ಒಂದರಲ್ಲಿ ತಮ್ಮ ತಮ್ಮ ಭಾವಚಿತ್ರಗಳನ್ನು ನೀಡಿ ‘ಜನರೇಟ್ ಜಿಬ್ಲಿ ಸ್ಟೈಲ್ ಇಮೇಜ್ ಆಫ್ ದಿಸ್ ಪಿಚ್ಚರ್’ ಎಂದು ಕೇಳಿದರೆ ಮಾನವರ ಚಿತ್ರ ಬೊಂಬೆಗಳಂತೆ ಕಣ್ಣಮುಂದೆ ಮೂಡಿಬರುತ್ತದೆ. ಇಲ್ಲವೆ ಹೊಸ ಕಾಲ್ಪನಿಕ ಚಿತ್ರ ಬೇಕೆಂದಾದಲ್ಲಿ ಮಾನವರು ತಮ್ಮ ರೂಪವನ್ನು ವಿವರವಾಗಿ ತಿಳಿಸಿದರೆ ಅವರನ್ನೇ ಹೋಲುವ ಬೊಂಬೆಯ ಚಿತ್ರವೊಂದನ್ನು ರೂಪಿಸಿಕೊಡುತ್ತದೆ.

ಜಿಬ್ಲಿ ಈಗಿನದಲ್ಲ. 1970ರಲ್ಲಿ ಸೃಷ್ಟಿಯಾದದ್ದು…!

ಜಿಬ್ಲಿ ಈಗಿನದಲ್ಲ. 1970ರಲ್ಲಿ ಸೃಷ್ಟಿಯಾದದ್ದು. ಜಪಾನಿನ ಕಲಾಕಾರ, ಸಿನಿಮಾಕರ್ಮಿ ಹಯಾ ಮಿಯಾಝಾಕಿ ಅಂದಿನ ಆನಿಮೇಷನ್‌ ನಿಂದ ಬೇಸರಗೊಂಡು ಸೃಷ್ಟಿಸಿದ ಕೃತಕ ಕಲೆಯಾಗಿದೆ. ಇದು ಕಾರ್ಟೂನ್ ಮತ್ತು ಆನಿಮೇಷನ್‌ ನ ಹೊಸ ಶೈಲಿಯಾಗಿದೆ. ಹಿಂದೆ ಕಾರ್ಟೂನ್, ಆನಿಮೇಷನ್‌ ಮಕ್ಕಳು ಮತ್ತು ತರುಣರಿಗೆ ಮಾತ್ರ ಇಷ್ಟವಾಗುತ್ತಿತ್ತು. ಆದರೆ ಜಿಬ್ಲಿಯು ಮಾಗಿದ ಪಾತ್ರಗಳನ್ನೂ ಸಹ ಹೆಚ್ಚು ಪರಿಣಾಮಕಾರಿಯಾಗಿ ರೂಪಿಸುವುದರಿಂದ ವೃದ್ಧರಿಗೂ ಬಹಳ ಆಪ್ತವಾಗಿದೆ.
ಘಿಬ್ಲಿ ಅಥವಾ ಜಿಬ್ಲಿ ಎನ್ನುವುದು ಇಟಲಿಯ ಪದವಾಗಿದೆ. ಹೀಗೆಂದರೆ ಮರುಭೂಮಿಯ ಬಿಸಿಗಾಳಿ ಎಂದರ್ಥ. 1985ರಲ್ಲಿ ಮಿಯಾಝಾಕಿ ಮತ್ತು ತೊಶಿಯೋ ಸುಝುಕಿ ಒಟ್ಟಾಗಿ ಸ್ಟೂಡಿಯೋವೊಂದನ್ನು ಆರಂಭಿಸಿದಾಗ ‘ನಾವು ಆನಿಮೇಷನ್‌ ನಲ್ಲಿ ಹೊಸ ಅಲೆ ಎಬ್ಬಿಸಲಿದ್ದೇವೆ’ ಎಂದು ವಿಶ್ವಾಸದಿಂದ ನುಡಿದಿದ್ದರು. ಅದಕ್ಕೆ ಸ್ಟೂಡಿಯೋಗೆ ಜಿಬ್ಲಿ ಎಂದು ಹೆಸರಿಟ್ಟರು.‌
ಅತಿಯಾದ ಬಳಕೆಯಿಂದ ಕಲೆಯೊಂದು ಮುಂದೊಂದು ದಿನ ಕಸವಾಗಿ ಪರಿಣಮಿಸುತ್ತದೆ ಎನ್ನುವುದು ಬಲ್ಲವರ ಅಭಿಪ್ರಾಯ. ಅದೇ ರೀತಿ ಈ ಕಲೆಗೆ ಅನೇಕ ಕಡೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ‌. ಕೃತಕ ಕಲೆಯಿಂದಾಗಿ ನೈಜ ಕಲೆಗೆ ಅನ್ಯಾಯವಾಗುತ್ತಿದೆ. ಕಲೆಯನ್ನೇ ಬದುಕಾಗಿಸಿಕೊಂಡ ಚಿತ್ರಕಲಾವಿದರಿಗೆ, ದೇಸಿ ಶೈಲಿಯ ಚಿತ್ರಗಾರರ ಮೇಲೆ ಇದರಿಂದ ಪರಿಣಾಮಬೀರುತ್ತಿದೆ ಎನ್ನುವುದರ ಜೊತೆಗೆ, ಎಷ್ಟೇ ತಾಂತ್ರಿಕವಾಗಿ ಮಾಡಿದರೂ ಕುಂಚದಿಂದ ಮೂಡಿಸಿದಷ್ಟು ನೈಜವಾಗಿ ಮೂಡಿಬರಲು ಯಾವುದಕ್ಕೂ ಸಾಧ್ಯವಿಲ್ಲ ಎಂದು ‘ಪ್ರಕೃತಿಯೆಡೆಗೆ ಹಿಂತಿರುಗಿ’ ಎಂಬ ಮಾತಿನಂತೆ ಚರ್ಚೆಗಳು ನಡೆಯುತ್ತಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.