ಬಾಯಲ್ಲಿ ನೀರುಣಿಸುವ ಹಲಸು, ಮಾವು ಸೀಸನ್!
– ಎಲ್ಲೆಲ್ಲೂ ಈಗ ಮಾವು, ಹಲಸಿನ ಖಾದ್ಯ
– ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ
ಹಸಿದಾಗ ಹಲಸು ಉಂಡಾಗ ಮಾವು ಎಂಬ ಉಕ್ತಿ ಕೇಳದ ಜನರಿಲ್ಲ. ಇದು ಕೇವಲ ಅನುಭವದ ನುಡಿಯಾಗದೆ, ಆರೋಗ್ಯದ ದೃಷ್ಟಿಯಿಂದಲೂ ಬಹಳ ಅರ್ಥಪೂರ್ಣವಾಗಿದೆ. ಬೇಸಿಗೆಯ ಧಗೆಗೆ ಆಯಾಸ ಪಡುವ ಜನ ಈ ಕಾಲ ಬರಲೆಂದು ಹಂಬಲಿಸುತ್ತಾರೆ. ಇದಕ್ಕೆ ಕಾರಣ ಈ ಸಮಯದಲ್ಲಿ ದೊರಕುವ ಹಣ್ಣುಗಳು. ಅದರಲ್ಲೂ ಬಗೆಬಗೆಯ ತಿನಿಸುಗಳನ್ನು ಸಹ ತಯಾರಿಸಲು ಸಾಧ್ಯವಾಗುವಂತಹ ಹಣ್ಣುಗಳು.
ಹಣ್ಣುಗಳ ರಾಜ ಮಾವು ತನ್ನ ಬರುವಿಕೆಗೆ ಸಿದ್ಧತೆ ಮಾಡಿಕೊಂಡರೆ, ಕೆಲವು ವ್ಯಕ್ತಿಗಳಂತೆ ಮೇಲೆ ನೋಡಲು ಒರಟಾಗಿ ಕಂಡರೂ ಒಳಗೆ ಸಿಹಿಯನ್ನೇ ನೀಡುವ, ಒಳ್ಳೆಯ ಅಂಶಗಳನ್ನು ಒಳಗೊಂಡ ಹಲಸು ಕೂಡ ಈ ಸಮಯದಲ್ಲೇ ಆಗಮಿಸುತ್ತದೆ.
ಎರಡೂ ಹಣ್ಣುಗಳ ಮತ್ತೊಂದು ವೈಶಿಷ್ಟ್ಯವೆಂದರೆ ಇವುಗಳು ಕಾಯಿಯಾಗಿದ್ದಾಗಲೂ, ಹಣ್ಣಾದಾಗಲೂ ಬಳಸಬಹುದಾಗಿದೆ. ಹಿಂದೆ ನಮ್ಮ ಹಿರಿಯರು ಮಳೆಗಾಲದ ಆರಂಭಕ್ಕೂ ಮೊದಲು, ಬೇಸಿಗೆ ಕಾಲದಲ್ಲಿ, ಮಕ್ಕಳ ರಜಾ ಸಮಯದಲ್ಲಿ ಈ ಹಣ್ಣು ಮತ್ತು ಅವುಗಳ ಕಾಯಿಗಳನ್ನು ಬಳಸಿಕೊಂಡು ವೈವಿಧ್ಯ ಖಾದ್ಯಗಳನ್ನು ತಯಾರಿಸುತ್ತಿದ್ದರು. ಇದು ಮಕ್ಕಳಿಗೆ ರಜೆಯ ವೇಳೆ ಕಾಯಕದ ಮಹತ್ವ ಅರಿಯಲು, ಸಮಯ ಕಳೆಯಲು, ಚೆನ್ನಾಗಿ ಹಣ್ಣುಗಳನ್ನು ಸೇವಿಸಿ ಖುಷಿಪಡಲು ನೆರವಾಗುತ್ತಿತ್ತು. ಇಂತಹ ಕ್ಷಣಗಳು ಮಕ್ಕಳಿಗೆ ಮುದ ನೀಡುತ್ತಿದ್ದವು. ಬಳಿಕ ತಯಾರಿಸಿದ ಖಾದ್ಯಗಳನ್ನು ಶೇಖರಿಸಿಟ್ಟು, ಮಳೆಗಾಲದಲ್ಲಿ ಚಳಿಗೆ ಬಿಸಿಬಿಸಿ ಚಹ ಅಥವಾ ಕಾಫಿಯೊಂದಿಗೆ ಸೇವಿಸಲು ಅಣಿಗೊಳಿಸುತ್ತಿದ್ದರು.
ಈಗ ಕಾಲ ಬದಲಾಗಿದೆ ಎಲ್ಲಾ ಕಾಲದಲ್ಲೂ,ಎಲ್ಲಾ ಪ್ರದೇಶಗಳಲ್ಲೂ, ಎಲ್ಲವೂ ಲಭಿಸುತ್ತದೆ. ಆದರೆ ಸಹಜತೆ ಲಭ್ಯವಾಗುವುದಿಲ್ಲ. ಹೆಚ್ಚು ಕಾಲ ಸಂಗ್ರಹಿಸಿಡಲು ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಇದು ಆರೋಗ್ಯಕ್ಕೆ ಮಾರಕವಾದ ವಿಧಾನ. ಮತ್ತು ಅಧಿಕ ಬೆಲೆಗೆ ಕಡಿಮೆ ಪ್ರಮಾಣದಲ್ಲಿ ಮಾರಾಟ ಮಾಡಿ ಗ್ರಾಹಕರನ್ನು ಮೋಸಗೊಳಿಸುವ ವ್ಯಾಪಾರಿಗಳಿದ್ದಾರೆ, ಹಣ ಮಾತ್ರ ವ್ಯರ್ಥವಾಗುತ್ತದೆ. ಗ್ರಾಹಕ ಬಯಸುವ ರುಚಿಯಾಗಲಿ, ನೈಸರ್ಗಿಕ ಅಂಶಗಳಾಗಲಿ ಲಭಿಸುವುದಿಲ್ಲ.
ಪಟ್ಟಣಿಗರಿಗೆ ಹಣ್ಣುಗಳು, ಅವುಗಳ ಕಾಯಿಗಳಿಂದ ತಯಾರಿಸಿದ ಉಪ್ಪಿನಕಾಯಿ, ಹಪ್ಪಳ ಮೊದಲಾದ ತರಹೇವಾರಿ ಪದಾರ್ಥಗಳನ್ನು ಸೇವಿಸುವ ಬಯಕೆ ಉಂಟಾದಾಗ ಬಂಧುಗಳಿಂದಲೋ, ಸ್ನೇಹಿತರಿಂದಲೋ, ಪರಿಚಿತರಿಂದಲೋ ತರಿಸಿಕೊಂಡು, ಆಸ್ವಾದಿಸುವುದು ವಾಡಿಕೆ. ಈ ಕಾಲದಲ್ಲಿ ತಮ್ಮ ಬಾಲ್ಯದ ದಿನಗಳು ನೆನಪಾಗಿ,ಬಾಯಲ್ಲಿ ನೀರೂರಿ ಕೊಂಚ ಬೇಸರವಾಗದೇ ಇರದು.
