Categories
ಮಾಹಿತಿ ಸುದ್ದಿ

ಸೀತಾಳೆ ಹೂವು ರಾಮಾಯಣಕ್ಕೂ ಇದೆ ನಂಟು!

ಸೀತಾಳೆ ಹೂವು ರಾಮಾಯಣಕ್ಕೂ ಇದೆ ನಂಟು!
– ಮಲೆನಾಡಲ್ಲಿ ಮನ ಸೆಳೆಯುವ ಸೀತಾಳೆ ಹೂವು
– ಕಾಡುಗಳು ಮಾಯ… ಹೂವಿನ ಸಂತತಿಯು ಮಾಯ!

NAMMUR EXPRESS NEWS
ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಬಹು ಆಕರ್ಷಕವಾಗಿ ಅರಳುವ ಸೀತಾಳೆ ಹೂ ಈಗ ಮಲೆನಾಡಿನ ಮರಗಳಲ್ಲಿ ಗೋಚರವಾಗುತ್ತಿದೆ. ಸ್ಥಳೀಯವಾಗಿ ಸೀತಾಳೆ ದಂಡೆ, ಸೀತಾಮಾಲೆ, ಸೀತಾಳಿ ಎಂದು ಕರೆಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಬೆಳವಣಿಗೆ ಆರಂಭಿಸುವ ಮೊದಲ ಹಂತದಲ್ಲಿ ಹಲವು ಸಸ್ಯಗಳು ಆಕರ್ಷಕ ಹೂವು ಗಳನ್ನು ಪರಿಸರದಲ್ಲಿ ಅನಾವರಣಗೊಳಿಸುತ್ತವೆ. ಅದರಲ್ಲಿ ಸೀತಾಳೆ ಕೂಡ ಒಂದು.
ಜೇಷ್ಠ-ಆಷಾಢ ಮಾಸದಲ್ಲಿ ಬೆಳೆಯುವ ಈ ಪರಾವಲಂಬಿ ಸಸ್ಯದ ಹೂವುಗಳನ್ನು ತೆಗೆದು ಬಾಳೆಯ ನಾರಿನಲ್ಲಿ ಅಂದವಾಗಿ ಕಟ್ಟಿ ಮಹಿಳೆಯರು ಮುಡಿಗೇರಿಸಿಕೊಳ್ಳುತ್ತಾರೆ. ಪ್ರಕೃತಿ ಕಟ್ಟಿದ ಸೀತಾಳೆ ದಂಡೆ ಆರ್ಕೆಡೇಸಿಯ ಕುಟುಂಬಕ್ಕೆ ಸೇರಿದೆ.

ಸೀತಾಳೆ ಹೂವು ರಾಮಾಯಣಕ್ಕೂ ಇದೆ ನಂಟು

ಇನ್ನು ಮಲೆನಾಡಿನಲ್ಲಿ ಇಂಥ ಮನಮೋಹಕ ಹೂವಿಗೆ ಸೀತಾಳೆ ಎಂದು ಹೆಸರಿಡಲು ರಾಮಾಯಣದ ನಂಟು ಬೆಸೆಯಲಾಗಿದೆ. ಸೀತೆ ವನವಾಸದ ಸಮಯದಲ್ಲಿ ಈ ಹೂವಿಗೆ ಆಕರ್ಷಿತಳಾಗಿ ಇಷ್ಟಪಟ್ಟಾಗ ರಾಮನು ಹೂವನ್ನು ತಂದು ಮುಡಿಗೇರಿಸಿದ ಕಾರಣದಿಂದ ಪುಷ್ಪದ ಹಿಂದೆ ಸೀತೆ ಸೇರಿ ಕೊಂಡಿದೆ ಎಂಬ ಪ್ರತೀತಿ ಇದೆ.

ಮತ್ತೊಂದು ಕಥೆ!

ಸೀತೆ ದಂಡೆ ಹೂವಿನಲ್ಲಿ 2 ಜಾತಿಯ ಹೂವುಗಳಿವೆ. ಒಂದು ಸೀತೆ ದಂಡೆ ಹೂವು ದೂರ ದೂರ, ಇನ್ನೊಂದು ಹತ್ತಿರ ಹತ್ತಿರ ಅರಳುವಂತಹ ಹೂವು. ಸೀತೆ ಗಂಡನ ಮನೆಯಿಂದ ತವರು ಮನೆಗೆ ಹೋಗುವಾಗ ಕಟ್ಟಿದ ಹೂವು ದೂರ ದೂರ ಇರುತ್ತದೆ. ಅಂದರೆ ತವರು ಮನೆಗೆ ಹೋಗುವಾಗ ಎಷ್ಟು ಹೊತ್ತಿಗೆ ಅಲ್ಲಿಗೆ ಹೋಗುತ್ತೇನೆಂಬ ಖುಷಿಯಿಂದ ಅವಸರವಾಗಿ ಕಟ್ಟಿದ ಹೂವು ದೂರ ದೂರ ಇದೆ. ಇನ್ನೊಂದು ತವರು ಮನೆಯಿಂದ ಗಂಡನ ಮನೆಗೆ ಬರಬೇಕಾದರೆ ಬೇಸರದಿಂದ ನಿಧಾನವಾಗಿ ಹತ್ತಿರ ಹತ್ತಿರ ಕಟ್ಟಿದ ಹೂಮಾಲೆ. ಈ ಕತೆ ಬಹಳ ಹಿಂದಿನಿಂದಲೂ ಇದೆ. ಇದೇನೇ ಕತೆಯಿದ್ದರೂ ಮಳೆಗಾಲದ ಆಕರ್ಷಕ ಹೂವು ಈಗ ಮಲೆನಾಡಿಗರ ಕಣ್ಮನ ಸೆಳೆಯುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.