ಕರಾವಳಿಗೂ ಕೇಂದ್ರದ ಶಾಕ್..!
ಉಳ್ಳಾಲ ದ ಹೂ ವ್ಯಾಪಾರಿಗೆ 2 ಲಕ್ಷ ತೆರಿಗೆ ನೋಟಿಸ್
* ಕುಂದಾಪುರ: ಶಟರ್ ಮುರಿದು ಅಂಗಡಿ ಕಳವು: ಕೆಲವೇ ಗಂಟೆಗಳಲ್ಲಿ ಕಳ್ಳರು ಅರೆಸ್ಟ್!
* ಉಡುಪಿ: ರಸ್ತೆಗೆ ಡಿವೈಡರ್ ಗುದ್ದಿದ ಆಂಬುಲೆನ್ಸ್: ಒಳಗಿದ್ದ ರೋಗಿ ಸಾವು!
* ಬ್ರಹ್ಮಾವರ: ಜುಗಾರಿ ಅಡ್ಡೆ ಮೇಲೆ ಪೊಲೀಸರ ದಾಳಿ
* ಬಂಟ್ವಾಳ: ಮಳೆಯಬ್ಬರ ; ಹಲವು ಮನೆಗಳಿಗೆ ಹಾನಿ
* ಪುತ್ತೂರು: ರಸ್ತೆಯಲ್ಲಿ ಸಿಕ್ಕ ಮೊಬೈಲ್, ಹಣ ವಾಪಾಸ್ ಕೊಟ್ಟು ಪ್ರಾಮಾಣಿಕತೆ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಳ್ಳಾಲ: ಕೇಂದ್ರ ಸರ್ಕಾರದ ತೆರಿಗೆ ಇಲಾಖೆ ನೋಟಿಸ್ ಇದೀಗ ಕರಾವಳಿಗೂ ತಲುಪಿದೆ. ಅದರಲ್ಲೂ ಅಚ್ಚರಿ ಎಂದರೆ ಹೂವು ಮಾರುವ ವ್ಯಕ್ತಿಗೆ ಲಕ್ಷ ಲಕ್ಷ ತೆರಿಗೆ ಕಟ್ಟುವಂತೆ ನೋಟಿಸ್ ಕೊಡಲಾಗಿದೆ.
ಯುಪಿಐ ಮುಖಾಂತರ 40 ಲಕ್ಷ ಮೇಲ್ಪಟ್ಟು ವ್ಯಾಪಾರ ವಹಿವಾಟು ನಡೆಸಿದ, ಎಲ್ಲಾ ದೊಡ್ಡ ಅಂಗಡಿಗಳಿಂದ ಹಿಡಿದು ಬೀಡಾ ಮಾರುವಂತಹ ಸಣ್ಣ ಪುಟ್ಟ ಅಂಗಡಿಗಳಿಗೂ ಸಹ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿರುವುದು ಎಲ್ಲರಲ್ಲೂ ಆತಂಕವನ್ನು ಮೂಡಿಸಿದೆ. ಇದರ ಬಿಸಿ ಗಾಡಿಯ ಮೇಲೆ ಹೂ ಮಾರುತ್ತಿರುವ ವ್ಯಕ್ತಿಗೂ ತಟ್ಟಿದೆ.
ಉಳ್ಳಾಲದ ಹೂವಿನ ವ್ಯಾಪಾರಿ ಸೋಮೇಗೌಡ ಎನ್ನುವವರಿಗೆ ಐವತ್ತೆರಡು ಲಕ್ಷ ರೂಪಾಯಿ ತೆರಿಗೆ ಪಾವತಿಸುವಂತೆ ಎರಡು ಬಾರಿ ನೋಟಿಸ್ ಅನ್ನು ಕಳುಹಿಸಲಾಗಿದೆ. ಇದು ಆತನಲ್ಲಿ ಭಯದ ಜೊತೆಗೆ ಆಶ್ಚರ್ಯವನ್ನು ಉಂಟುಮಾಡಿದೆ. ಸುಮಾರು ಹತ್ತು ವರ್ಷಗಳಿಂದ ಹೂವಿನ ವ್ಯಾಪಾರ ಮಾಡಿಕೊಂಡಿರುವ ಸೋಮೇಗೌಡ ” ಬಡ ವ್ಯಾಪಾರಿಯಾದ ನನ್ನಲ್ಲಿ ಅಷ್ಟೊಂದು ಹಣ ಎಲ್ಲಿದೆ? ಇಷ್ಟು ದೊಡ್ಡ
ಮೊತ್ತವನ್ನು ಎಲ್ಲಿಂದ ತಂದು, ಹೊಂದಿಸಿ, ತೆರಿಗೆ ಪಾವತಿಸಲಿ ಒಂದೂ ತೋಚುತ್ತಿಲ್ಲ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕುಂದಾಪುರ: ಶಟರ್ ಮುರಿದು ಅಂಗಡಿ ಕಳವು!
ಕುಂದಾಪುರ: ಸಂತೆ ಮಾರುಕಟ್ಟೆ ಬಳಿಯ ಅಂಗಡಿಯೊಂದಕ್ಕೆ ತಡರಾತ್ರಿಯಲ್ಲಿ ನುಗ್ಗಿ, ಸುಮಾರು ತೊಂಭತ್ತೈದು ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದಿದ್ದಾರೆ. ಕಳವು ನಡೆದ ಕೆಲವೇ ಗಂಟೆಗಳಲ್ಲಿ ಸಂತೆಕಟ್ಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಸರ್ಫರಾಜ್, ಜಾಕಿರ್, ಮಹಮ್ಮದ್ ಅಲ್ವಾಜ್, ಮಹಮ್ಮದ್ ರಿಯಾಜ್ ಎನ್ನುವ ಆರೋಪಿಗಳಿಂದ ಐವತ್ತು ಕೆಜಿ ತೂಕದ ತಾಮ್ರದ ಸರಿಗೆ, ಅರವತ್ತನಾಲ್ಕು ಕೆಜಿ ಹಿತ್ತಾಳೆಯ ವಸ್ತು, ಇಪ್ಪತ್ತು ಕೆಜಿ ತೂಕ ಹೊಂದಿರುವ ಅಲ್ಯೂಮಿನಿಯಂ ವಸ್ತು, ನಲವತ್ತೈದು ಹಳೆಯ ಮೊಬೈಲ್ ಗಳು, ಫ್ರಿಡ್ಜ್, ಕಂಪ್ರೆಸರ್ ಮತ್ತು ಕದಿಯಲು ಬಳಸಿದ್ದ, ಆರೋಪಿಗಳ ಬಳಿಯಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕುಂದಾಪುರ ನಗರ ಠಾಣೆಯ ಎಸ್ ಐ ನಂಜ ನಾಯ್ಕ ಅವರನ್ನು ಒಳಗೊಂಡಂತೆ ಇತರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.
ರಸ್ತೆಗೆ ಡಿವೈಡರ್ ಗುದ್ದಿದ ಆಂಬುಲೆನ್ಸ್: ಒಳಗಿದ್ದ ರೋಗಿ ಸಾವು!
•ಉಡುಪಿ: ಕೋಟೇಶ್ವರದ ರೋಗಿಯೊಬ್ಬರನ್ನು ಮಣಿಪಾಲಿಗೆ ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್, ರಸ್ತೆಯ ಡಿವೈಡರ್ ಗೆ ಢಿಕ್ಕಿ ಹೊಡೆದುದರ ಪರಿಣಾಮವಾಗಿ ಆಂಬುಲೆನ್ಸ್ ನಲ್ಲಿದ್ದ ರೋಗಿಯು ಮೃತಪಟ್ಟಿರುವ ಘಟನೆ ಎಂಜಿಎಂ ಕಾಲೇಜ್ ಎದುರಿಗೆ ನಡೆದಿದೆ. ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ಡಿವೈಡರ್, ಬಳಿಕ ಬ್ಯಾರಿಕೇಡ್ ಗಳಿಗೂ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ರೋಗಿಯನ್ನು ಮತ್ತೊಂದು ಆಂಬುಲೆನ್ಸ್ ಗೆ ಹಾಕಿ ಆಸ್ಪತ್ರೆಗೆ ಕಳುಹಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬ್ರಹ್ಮಾವರ ಕೋಳಿ ಅಂಕದ ಅಡ್ಡೆ ಮೇಲೆ ಪೊಲೀಸರ ದಾಳಿ
ಬ್ರಹ್ಮಾವರ: ಜುಗಾರಿ ಆಡುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಡ್ಡೆಗೆ ಆಗಮಿಸಿದ ಪೊಲೀಸರು, ಆರು ಮಂದಿ ತಪ್ಪಿತಸ್ಥರನ್ನು ಬಂಧಿಸಿದ್ದಾರೆ. ಗರಿಕೆಮಠ ನಿವಾಸಿ ರಾಜು ಶೆಟ್ಟಿ, ಮೊಗೆಬೆಟ್ಟುವಿನ ರಾಜು, ಬಾರ್ಕೂರು ಹನೆಹಳ್ಳಿಯ ರಮಾನಂದ ಶೆಟ್ಟಿ, ವಾರಂಬಳ್ಳಿಯ ಸಂತೋಷ್, ಅಚ್ಲಾಡಿಯ ರಾಜೀವ ಶೆಟ್ಟಿ ಮತ್ತು ಪಡುಮುಂಡುವಿನ ಕೃಷ್ಣ ಎನ್ನುವವರು ಗರಿಕೆಮಠದ ರಾಜು ಶೆಟ್ಟಿ ಮನೆಯ ಬಳಿಯಲ್ಲಿ ಜುಗಾರಿ ಆಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಇಸ್ಪೀಟ್ ಆಟಕ್ಕೆ ಬಳಸಿದ್ದ ಒಟ್ಟು ರೂಪಾಯಿ 15.450, ಮೂರು ಕಾರ್, ಎರಡು ಸ್ಕೂಟರ್, ಒಂದು ಟೇಬಲ್, ಆರು ಪ್ಲಾಸ್ಟಿಕ್ ಕುರ್ಚಿಗಳು, ಐವತ್ತೆರಡು ಇಸ್ಪೀಟ್ ಎಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬಂಟ್ವಾಳ: ಮಳೆಯಬ್ಬರ ; ಹಲವು ಮನೆಗಳಿಗೆ ಹಾನಿ
ಬಂಟ್ವಾಳ: ತೀವ್ರ ಮಳೆಯ ಪ್ರಭಾವದಿಂದ ಇದೀಗ ಬಂಟ್ವಾಳ ತಾಲ್ಲೂಕಿಗೂ ಸಮಸ್ಯೆ ತಲೆದೋರಿದೆ. ಗೋಳ್ತಮಜಲು ಗ್ರಾಮದ ಅಂಗನತ್ತಾಯ ದೇವಸ್ಥಾನದ ಬಳಿಯ ತಡೆಗೋಡೆಯೊಂದು ಕುಸಿದಿದೆ. ಅದೇ ರೀತಿ ಬಡಗಬೆಳ್ಳೂರು ಗ್ರಾಮದ ಸೀತಾ ಎನ್ನುವವರ ಮನೆ, ಕಡೇಶ್ವಾಲ್ಯ ಗ್ರಾಮದ ಕುಶಾಲಪ್ಪ ನಾಯ್ಕ್, ರಾಯಿ ಗ್ರಾಮ, ಕೊಯಿಲ ಗ್ರಾಮದ ಕೆಲವು ಮನೆಗಳಿಗೆ ಹಾನಿ ಸಂಭವಿಸಿದೆ ಎನ್ನಲಾಗಿದೆ.
ರಸ್ತೆಯಲ್ಲಿ ಸಿಕ್ಕ ಮೊಬೈಲ್, ಹಣ ವಾಪಾಸ್ ಕೊಟ್ಟು ಪ್ರಾಮಾಣಿಕತೆ!
ಪುತ್ತೂರು: ನೆಲ್ಯಾಡಿನ ಸಿದ್ದಿಕ್ ಗಂಡಿಬಾಗಿಲು ಎನ್ನುವ ವ್ಯಕ್ತಿಗೆ ಕಲ್ಲೇರಿಯಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಸಮಯದಲ್ಲಿ, ಕರಾಯ ಪೆಟ್ರೋಲ್ ಪಂಪ್ ಬಳಿ ರಸ್ತೆಯಲ್ಲಿ ಮೊಬೈಲ್ ಮತ್ತು ಅದರ ಕವರ್ ಒಳಗೆ ಇರಿಸಿದ್ದ ಐನೂರು ರೂಪಾಯಿ ಲಭಿಸಿದೆ. ತಕ್ಷಣ ಸಿದ್ದಿಕ್ ಅವರು ಅದನ್ನು ತೆಗೆದುಕೊಂಡು ಹೋಗಿ, ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ತನಿಖೆ ನಡೆಸಿ, ಸಂಬಂಧಿಸಿದ ವ್ಯಕ್ತಿಯಾದ ಶ್ರೀಶಕುಮಾರ ಅವರಿಗೆ ಮೊಬೈಲ್ ಮತ್ತು ಅದರಲ್ಲಿದ್ದ ಐನೂರು ರೂಪಾಯಿಯನ್ನು ಹಿಂತಿರುಗಿಸಿದ್ದಾರೆ. ಸಿದ್ದಿಕ್ ಅವರ ಪ್ರಾಮಾಣಿಕತೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.