ಕರಾವಳಿ ಟಾಪ್ ನ್ಯೂಸ್
ಬಂಟ್ವಾಳ: ಅಡಿಕೆ ವ್ಯಾಪಾರಿಯಿಂದ ಕೋಟ್ಯಾಂತರ ರೂಪಾಯಿ ವಂಚನೆ, ಕೃಷಿಕರಿಂದ ದೂರು
* ಕಾರ್ಕಳ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತಿನ ಕೋಣ ನಿಧನ!
* ನಾಯಿಗೆ ವಿಷ ಉಣಿಸಿದ ನರರಾಕ್ಷಸರು, ಮಾಹಿತಿ ಕೊಟ್ಟರೆ 50 ಸಾವಿರ ರೂ. ಬಹುಮಾನ!
* ಉಡುಪಿ: ಕುಂದಾಪುರದಲ್ಲಿ ನಾಪತ್ತೆಯಾದ ಮಹಿಳೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
NAMMUR EXPRESS NEWS
ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಂದ ವಿಶ್ವಾಸ ಗಳಿಸಿ, ಕೋಟ್ಯಾಂತರ ರೂಪಾಯಿ ವಂಚಿಸಿ ಪಾರಾರಿಯಾಗಿದ್ದು ಇದೀಗ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಸುಮಾರು 50ಕ್ಕೂ ಅಧಿಕ ಕೃಷಿಕರು ಬಂಟ್ವಾಳ ನಗರ ಪೋಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ವಂಚನೆಗೆ ಒಳಗಾದ ಕೃಷಿಕರು ಹಣ ನೀಡದೆ ವಂಚಿಸಿದ ವ್ಯಕ್ತಿಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಸ್ಥಳೀಯ ಕೃಷಿಕ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಸಾಲದ ಮೊತ್ತ ಪಾವತಿಯ ಹಿನ್ನಲೆಯಲ್ಲಿ ವ್ಯಾಪಾರಿಯ ಬಳಿ ಹಣಕ್ಕಾಗಿ ಹೋದಾಗ ಆತ ಪರಾರಿಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಕೃಷಿಕರೆಲ್ಲರು ಒಂದಾಗಿ ಆತನ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಕಳೆದ ಎರಡು ಮೂರು ದಶಕಗಳಿಂದ ಆತ ಯಾವುದೇ ರೀತಿಯಲ್ಲಿ ವಂಚಿಸದೆ ಕೃಷಿಕರ ಅಗತ್ಯಕ್ಕೆ ತಕ್ಕಂತೆ ಹಣ ನೀಡುತ್ತಿದ್ದ ಎನ್ನಲಾಗಿದೆ. ಆದರೆ ಈ ಬಾರಿ ಒಬ್ಬೊಬ್ಬ ಕೃಷಿಕನಿಗೆ ಲಕ್ಷಾಂತರ ರೂ ಹಣ ವಂಚನೆ ಮಾಡಿದ್ದು ಒಟ್ಟು ಮೊತ್ತ 10 ಕೋಟಿ ಆಗಬಹುದೆಂದು ಕೃಷಿಕರು ಆರೋಪಿಸಿದ್ದಾರೆ.
* ಕಾರ್ಕಳ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತಿನ ಕೋಣ ನಿಧನ!
ಕಾರ್ಕಳ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಹಲವು ಕಂಬಳ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ ಅವರು ಐದು ವರ್ಷ ಪ್ರಾಯದ ಕೋಣ ಚೀಂಕ್ರ ಜ್ವರದಿಂದ ಜೂ.10ರಂದು ನಿಧನ ಹೊಂದಿದೆ.
ಕೌಶಿಕ್ ದಿನಕರ್ ಶೆಟ್ಟಿ ಅವರೊಂದಿಗೆ ʼಶೇಕ್ ಹ್ಯಾಂಡ್ʼ ನೀಡುವ ವಿಡಿಯೋ ವೈರಲ್ ಆಗಿತ್ತು. ಕಂಬಳ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಚೀಂಕ್ರ ತನ್ನ ಛಾಪು ಮೂಡಿಸಿತ್ತು. ಕಾರ್ಕಳದ ಮಖೇಶ ಕೋಣದ ಜೊತೆಗೆ ಜೂನಿಯರ್ ಹಗ್ಗ ವಿಭಾಗದಲ್ಲಿ ತನ್ನ ಮೊದಲ ಪದಕ ಗೆದ್ದು, ಹಲವು ಪ್ರಶಸ್ತಿಗಳನ್ನು ತನ್ನ ಮುಡಿಪುಗೇರಿಸಿಕೊಂಡಿತ್ತು. ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.
* ನಾಯಿಗೆ ವಿಷ ಉಣಿಸಿದ ನರರಾಕ್ಷಸರು, ಮಾಹಿತಿ ಕೊಟ್ಟರೆ 50 ಸಾವಿರ ರೂ. ಬಹುಮಾನ!
ಅಜೆಕಾರು: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಣೆಯ ವಿಷ್ಣುಮೂರ್ತಿ ದೇವಸ್ಥಾನ ಪರಿಸರದಲ್ಲಿ ಜೂ. 6ರಂದು ನಾಯಿ ಮೃತಪಟ್ಟ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ನಾಯಿಗೆ ವಿಷ ಉಣಿಸಿರುವುದು ತಿಳಿದುಬಂದಿದೆ.
ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೇಟ್‌ಮೆಂಟ್ ಆಫ್ ಎನಿಮಲ್ಸ್ – ಪ್ರಾಣಿ ದಯಾ ಸಂಘ) ಸಂಸ್ಥೆ ಆರೋಪಿಗಳ ಸುಳಿವು ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಅಲ್ಲದೆ ಈ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
* ಉಡುಪಿ: ಕುಂದಾಪುರದಲ್ಲಿ ನಾಪತ್ತೆಯಾದ ಮಹಿಳೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಉಡುಪಿ: ಕುಂದಾಪುರದ ವಿಠ್ಠಲವಾಡಿಯಿಂದ ನಾಪತ್ತೆಯಾಗಿದ್ದ ಮಹಿಳೆ ಬಗ್ಗೆ ಇದೀಗ ಸುಳಿವು ದೊರೆತಿದೆ.
ಕೋಡಿ ಸಮೀಪ ಸ್ಕೂಟಿ, ಚಪ್ಪಲಿ ಇಟ್ಟು ನದಿಗೆ ಹಾರುವ ನಾಟಕ ಆಡಿ ಮಹಿಳೆ ಯುವಕನೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಕುಂದಾಪುರದ ಫುಡ್ ಮಾರ್ಕ್ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿರುವ ಸಾಹಿಲ್ (27) ಜೊತೆ ಎರಡು ಮಕ್ಕಳ ತಾಯಿ ಹೀನಾ ಕೌಶರ್ (33) ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆಯ ಪತಿ ವಿದೇಶದಲ್ಲಿದ್ದು, ತನ್ನ ಎರಡು ಮಕ್ಕಳು ಮತ್ತು ತಾಯಿಯೊಂದಿಗೆ ಮಹಿಳೆ ವಾಸವಾಗಿದ್ದಳು. ಯುವಕ ಸಾಹಿಲ್ ಕೂಡ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.