ಬೆಳ್ತಂಗಡಿ: ಉರುಳಿಬಿದ್ದ ಮರ: ಮೂರು ವಾಹನ ಜಖಂ..!
– ಇಬ್ಬರಿಗೆ ಗಾಯ: ಮಳೆಗಾಲ ಎಚ್ಚರ ಎಚ್ಚರ
– ಕುಂದಾಪುರ: ಇಬ್ಬರು ದನ ಕಳ್ಳರು ಅರೆಸ್ಟ್!
– ಉಳ್ಳಾಲ: ಬೈಕ್ ಎಗರಿಸಿದ್ದ ಕಳ್ಳರಿಬ್ಬರ ಬಂಧನ!
NAMMUR EXPRESS NEWS
ಉಜಿರೆ: ಉಜಿರೆ ಪೇಟೆಯ ಸಮೀಪ ಮರವೊಂದು ಬುಡ ಸಮೇತ ಹೆದ್ದಾರಿಗೆ ಉರುಳಿ ಬಿದ್ದ ಪರಿಣಾಮ ಮೂರು ವಾಹನಗಳು ಜಖಂಗೊಂಡು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಸೋಮವಾರ ನಡೆದಿದೆ.
ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸಂಧರ್ಭ ಆಸ್ಟೋ ರಿಕ್ಷಾದ ಮೇಲೆಯೇ ಮರ ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣ ರಜ್ಜು ಗುಜ್ಜಾಗಿದ್ದು ರಿಕ್ಷಾ ಚಾಲಕ ಉಜಿರೆ ಹಳೆಪೇಟೆಯ ರತ್ನಾಕರ(50) ಹಾಗೂ ಪ್ರಯಾಣಿಕ ಹಳೆಪೇಟೆಯ ಸಾಂತಪ್ಪ(47) ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಎರಡು ಕಾರುಗಳಿಗೂ ಹಾನಿಯಾಗಿದೆ. ಘಟನೆಯಿಂದ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯ ಉಂಟಾಗಿ ಇಕ್ಕೆಲಗಳಲ್ಲಿ ಮೂರು ಕಿಮೀ.ಗಿಂತ ಅಧಿಕ ದೂರದವರೆಗೆಟ್ರಾಫಿಕ್ ಜಾಮ್ ಉಂಟಾಗಿತ್ತು.
ಉಜಿರೆ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಮೆಸ್ಕಾಂ,ಚಾಲಕರು ಹಾಗೂ ಸ್ಥಳೀಯರು ಮರ ತೆರವಿಗೆ ಸಹಕರಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಉಳ್ಳಾಲ: ಬೈಕ್ ಎಗರಿಸಿದ್ದ ಕಳ್ಳರಿಬ್ಬರ ಬಂಧನ
ಉಳ್ಳಾಲ: ಬೈಕ್ ಕಳ್ಳತನ ನಡೆಸಿದ ಆರೋಪಿಗಳಿಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು
ಮುಕ್ಕಚ್ಚೇರಿ ಕಡಪ್ಪುರ ನಿವಾಸಿ ಅಬ್ದುಲ್ ಸವಾದ್ (26) ಮತ್ತು ಧರ್ಮನಗರ ನಿವಾಸಿ ಯಶ್ಬಿತ್ ( 22) ಎಂದು ಗುರುತಿಸಲಾಗಿದೆ. ಉಳ್ಳಾಲದಲ್ಲಿ ಆರೋಪಿಗಳನ್ನು ಬಂಧಿಸಿದ್ದು ಇವರಿಂದ ತೊಕ್ಕೊಟ್ಟುವಿನಿಂದ ಕಳವು ನಡೆಸಿದ ಆಕ್ಟಿವಾ ಸ್ಕೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇಬ್ಬರು ಕೆಲ ದಿನಗಳ ಹಿಂದೆ ತೊಕ್ಕೊಟ್ಟು ಕೀರ್ತಿ ಹೊಟೇಲ್ ಮುಂದೆ ಪಾರ್ಖ್ ಮಾಡಿದ್ದ ಆಕ್ಟಿವಾ ಸ್ಕೂಟರನ್ನು ಕಳವು ನಡೆಸಿದ್ದರು. ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಇಬ್ಬರನ್ನು ಉಳ್ಳಾಲದಿಂದ ಬಂಧಿಸಿದ್ದಾರೆ. ಆರೋಪಿಗಳಲ್ಲಿ ಅಬ್ದುಲ್ ಸವಾದ್ ವಿರುದ್ಧ ಗಾಂಜಾ ಹಾಗೂ ಕಳವು ಪ್ರಕರಣಗಳು ಮಂಗಳೂರಿನ ವಿವಿಧ ಠಾಣೆಗಳಲ್ಲಿದೆ. ಯಶ್ಬಿತ್ ಉಳ್ಳಾಲ – ಸ್ಟೇಟ್ ಬ್ಯಾಂಕ್ ಬಸ್ಸಿನಲ್ಲಿ ನಿರ್ವಾಹಕನಾಗಿದ್ದಾನೆ. ಠಾಣಾಧಿಕಾರಿ ಬಾಲಕೃಷ್ಣ ಹೆಚ್.ಎನ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ರೂ. 80,000 ಬೆಲೆ ಬಾಳುವ ಆಕ್ಟಿವಾ ಸ್ಕೂಟರನ್ನು ವಶಕ್ಕೆ ಪಡೆಯಲಾಗಿದೆ.
ಕುಂದಾಪುರ: ಇಬ್ಬರು ದನ ಕಳ್ಳರ ಬಂಧನ
ಕುಂದಾಪುರ: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 7ರ ರಾತ್ರಿ ಶಿರೂರು ಪೇಟೆಯ ಹೊಟೇಲ್ ಮುಂದೆ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದೊಯ್ದ ಪ್ರಕರಣದ ಸಂಬಂಧಿಸಿದಂತೆ ಬೈಂದೂರು ಪೊಲೀಸರು ಎರಡು ವಾಹನಗಳನ್ನು ವಶಪಡಿಸಿಕೊಂಡು ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಎಂ.ಕೋಡಿ ನಿವಾಸಿ ಸಮದ್ಮಂಜಿಲ್ನ ಅಬ್ದುಲ್ ಸಮಾದ್ (27) ಹಾಗೂ ಕೋಡಿಯ ಬಿ ಫಾತಿಮಾ ಕಟೇಜ್ ನಿವಾಸಿ ಅಬ್ದುಲ್ ರೆಹಮಾನ್ (25) ಎಂದು ಗುರುತಿಸಲಾಗಿದೆ.ಹಾಲಾಡಿ ರಸ್ತೆಯ ಕೊಟೇಶ್ವರ ಸನ್ ರೈಸ್ ಫ್ಯಾಕ್ಟರಿ ಬಳಿ ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣಾ ಸರಹದ್ದಿನ ಶಿರೂರು ಪೇಟೆಯ ಹೊಟೇಲ್ ಮುಂದಿದ್ದ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದು ಒಯ್ದಿದ್ದಾರೆ ಎಂದು ಬೈಂದೂರು ನಮೋ ಬಳಗದ ಅಧ್ಯಕ್ಷ ಶ್ರೀಧರ್ ಬಿಜೂರು ಪೊಲೀಸರಿಗೆ ಸಿಸಿಟಿವಿ ವಿಡಿಯೋ ಸಹಿತ ದೂರು ನೀಡಿದ್ದರು.
ಈ ಬಗ್ಗೆ ಕಾರ್ಯಾಚರಣೆಗಿಳಿದ ಪೊಲೀಸರು, ಉಡುಪಿ ಎಸ್ಪಿ ಅರುಣ್ ಮಾರ್ಗದರ್ಶನದಲ್ಲಿ, ಎಡಿಷನಲ್ ಎಸ್.ಟಿ.ಸಿದ್ದಲಿಂಗಪ್ಪ ಮತ್ತು ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಬೈಂದೂರು ಸರ್ಕಲ್ ಇನ್ ಸ್ಪೆಕ್ಟರ್ ಸವೀತ್ರ ತೇಜ್ ನೇತೃತ್ವದಲ್ಲಿ ಎಸೈ ಮ್ಮೇಶ್ ಬಿಎನ್ ತಂಡವನ್ನು ರಚಿಸಿ, ಜಿಲ್ಲಾ ಸಿ.ಡಿ.ಆರ್ ವಿಭಾಗದ ತಾಂತ್ರಿಕ ಸಿಬ್ಬಂದಿ ಯವರ ಸಹಾಯವನ್ನು ಪಡೆದು ಆರೋಪಿಗಳಾದ ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದಾರೆ ಎನ್ನಲಾದ ಮಹೇಂದ್ರ XUV 500 ಕಾರು ಮತ್ತು Eco Sport Ford ಕಾರು, ಎರಡು ಮೊಬೈಲ್ ಸೇರಿದಂತೆ ಒಟ್ಟು ಅಂದಾಜು ಒಂಭತ್ತು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
