Categories
ಕರಾವಳಿ

ಭಟ್ಕಳ: ಇನ್ನು ಪತ್ತೆ ಆಗದ ಮೀನುಗಾರರು!

ಟಾಪ್ ನ್ಯೂಸ್ ಕರಾವಳಿ

ಭಟ್ಕಳ: ಇನ್ನು ಪತ್ತೆ ಆಗದ ಮೀನುಗಾರರು!

* ಮಂಗಳೂರು: ಷಡ್ಯಂತ್ರಕ್ಕೆ ತುತ್ತಾದ ಉಪ ನಿರ್ದೇಶಕಿ
* ಬೆಳ್ತಂಗಡಿ: ವಿಷಬೀಜ ಬಿತ್ತಿದ ದುಷ್ಕರ್ಮಿಯ ವಿರುದ್ಧ ತನಿಖೆ
* ಉಡುಪಿ: ಲಿಂಕ್ ಮೂಲಕ ಹಣ ಪಾವತಿಸಿದ ವ್ಯಕ್ತಿಗೆ ವಂಚನೆ
* ಬಂಟ್ವಾಳ: ಕಾಣಿಕೆ ಹುಂಡಿಯ ಹಣ ಕಳುವು; ಆರೋಪಿಗಳ ಬಂಧನ
* ಕುಂದಾಪುರ: ಹೆದ್ದಾರಿಯಲ್ಲಿ ಅಪಘಾತ: ಮಹಿಳೆ ಸಾವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಭಟ್ಕಳ: ಭಟ್ಕಳ ತಾಲೂಕಿನ ಶಿರಾಲಿ ಅಳ್ವೆಕೋಡಿ ಸಮುದ್ರದಲ್ಲಿ ದೋಣಿ ದುರಂತದಿಂದ ನೀರುಪಾಲಾಗಿದ್ದ ನಾಲ್ವರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದ ಇಬ್ಬರ ಸುಳಿವು ಪತ್ತೆ ಆಗಲಿಲ್ಲ.
ತೆಂಗಿನಗುಂಡಿ ಬಂದರಿನಿಂದ ಮಂಗಳವಾರ ಪಾತಿ ದೋಣಿ ಮೂಲಕ ಮೀನುಗಾಗಿಕೆಗೆ ತೆರಳಿದ್ದ ಜಾಲಿಕೋಡಿಯ ರಾಮಕೃಷ್ಣ ಮೊಗೇರ, ಅಳ್ವೆಕೋಡಿಯ ಮುಂಗ್ರಿಮನೆ ಗಣೇಶ ಮಂಜುನಾಥ ಮೊಗೇರ, ಅಳ್ವೆಕೋಡಿ ಸದ್ಬಾವಿಯ ಸತೀಶ ತಿಮ್ಮಪ್ಪ ಮೊಗೇರ, ಮುರ್ಡೇಶ್ವರ ಕನ್ನಡ ಶಾಲೆ ನಿವಾಸಿ ನಿಶ್ಚಯ ಮೊಗೇರ ಹಾಗೂ ಇನ್ನಿಬ್ಬರು ಸೇರಿದಂತೆ ಒಟ್ಟೂ 6 ಮಂದಿ ಮೀನುಗಾರಿಕೆಗೆ ತೆರಳಿದ್ದರು.
ಇವರಿದ್ದ ದೋಣಿ ಮಂಗಳವಾರ ಮಧ್ಯಾಹ್ನ ಅಳ್ವೆಕೋಡಿ-ತೆಂಗಿನಗುಂಡಿ ಹೊರಗಡೆಯ ಅರಬ್ಬಿ ಸಮುದ್ರದಲ್ಲಿ ಭಾರೀ ಅಲೆಯ ಹೊಡೆತಕ್ಕೆ ಸಿಲುಕಿ ಮುಗುಚಿದ ಪರಿಣಾಮ ಆರೂ ಜನ ನೀರು ಪಾಲಾಗಿದ್ದರು. ಆದರೆ ಅವರಲ್ಲಿ ಇಬ್ಬರು ಈಜಿ ದಡ ಸೇರಿದ್ದರು.
ನಾಪತ್ತೆಯಾದ ನಾಲ್ವರ ಪೈಕಿ ಗುರುವಾರ ಮಧ್ಯಾಹ್ನ ರಾಮಕೃಷ್ಣ ಮೊಗೇರ ಮೃತದೇಹ ಹೆಬಳೆ ಹೊನ್ನೆಗದ್ದೆ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಶನಿವಾರ ಗಣೇಶ ಮೊಗೇರ ಶವ ಪತ್ತೆಯಾಗಿದೆ. ಉಳಿದಂತೆ ಸತೀಶ ಮೊಗೇರ ಹಾಗೂ ನಿಶ್ಚಿತ ಮೊಗೇರ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಸ್ಥಳೀಯ ಮೀನುಗಾರರು, ಕರಾವಳಿ ಕಾವಲು ಪಡೆ ಸಿಬ್ಬಂದಿ, ಕೋಸ್ಟಲ್ ಗಾರ್ಡ್ ನವರು, ಪೊಲೀಸರು ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ. ಸಹಾಯಕ ಆಯುಕ್ತ ಕಾವ್ಯರಾಣಿ ಮತ್ತು ತಹಶೀಲ್ದಾ‌ರ್ ನಾಗೇಂದ್ರ ಕೋಳಶೆಟ್ಟಿ ಮತ್ತಿತರ ಅಧಿಕಾರಿಗಳು ಅಳ್ವೆಕೋಡಿ ಬಂದರಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಕಣ್ಮರೆಯಾದ ಮೀನುಗಾರರ ಕುರಿತು ಯಾವುದೇ ಸುಳಿವು ದೊರೆಯದ್ದರಿಂದ ಕುಟುಂಬಸ್ಥರಿಗಷ್ಟೇ ಅಲ್ಲ, ಮೀನುಗಾರರ ಸಮುದಾಯವೇ ಮರಗುತ್ತಿದೆ. ಇತ್ತೀಚಿನ ಗಂಗೊಳ್ಳಿ ದೋಣಿ ದುರಂತದ ನೆನಪು ಮಾಸುವ ಮುನ್ನವೇ ತೆಂಗಿನಗುಂಡಿ ಬಂದರಿನಲ್ಲಿ ಆದ ದೋಣಿ ದುರಂತ ಮೀನುಗಾರರನ್ನು ಕಂಗೆಡಿಸಿದ್ದು ಮಾತ್ರ ಸತ್ಯ.

* ಮಂಗಳೂರು: ಷಡ್ಯಂತ್ರಕ್ಕೆ ತುತ್ತಾದ ಉಪ ನಿರ್ದೇಶಕಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ ಎನ್ನುವವರು, ಸುಳ್ಳು ವದಂತಿಯ ಹಿನ್ನೆಲೆಯಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾದ ಘಟನೆ ಮಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ನಡೆದಿತ್ತು. ಮನೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ, ದೃಢೀಕರಣ ಪತ್ರ ನೀಡಲು ಲಂಚವನ್ನು ಕೇಳಿದ್ದಾರೆ ಎಂಬ ಆರೋಪವನ್ನು ಕೃಷ್ಣವೇಣಿಯ ಮೇಲೆ ಹೊರೆಸಲಾಗಿತ್ತು. ಆರೋಪದ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕೃಷ್ಣವೇಣಿ ಅವರನ್ನು ಬಂಧಿಸಲು ಪೊಲೀಸರಿಗೆ ಆದೇಶವನ್ನು ನೀಡಿದ್ದರು. ಈ ಸಂಗತಿಯನ್ನು ವಿರೋಧಿಸಿ ಕೃಷ್ಣವೇಣಿ ಅವರು ಉಚ್ಚನ್ಯಾಯಾಲಯಕ್ಕೆ ಕೆಲವು ದಾಖಲೆಗಳೊಂದಿಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಅಕ್ರಮ ಮರಳು ವ್ಯವಹಾರಕ್ಕೆ ಬೆಂಬಲ ನೀಡುತ್ತಿದ್ದ ಗಣಿ ಮತ್ತು ಭೂ ಇಲಾಖೆಯ ಅಧಿಕಾರಿಗಳ ಅಪರಾಧಗಳನ್ನು ಬಯಲಿಗೆ ತರಲು ಮತ್ತು ವ್ಯವಹಾರ ಪಾರದರ್ಶಕವಾಗಿರಬೇಕು ಎಂಬ ಉದ್ದೇಶದಿಂದ ಕೃಷ್ಣವೇಣಿ ಅವರು ತಮ್ಮ ಇಲಾಖೆಯಲ್ಲಿ ಜಿಪಿಎಸ್ ಸೇರಿದಂತೆ ಇನ್ನೂ ಹಲವಾರು ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದ್ದರು. ಇದರಿಂದ ತನ್ನ ಬಣ್ಣ ಬಯಲಾಗುತ್ತದೆ ಎಂಬುದನ್ನು ಅರಿತ ಅಧಿಕಾರಿಯೊಬ್ಬರು, ಕೃಷ್ಣವೇಣಿ ಅವರ ವಿರುದ್ಧ ಇಲ್ಲಸಲ್ಲದ ಅಪವಾದಗಳನ್ನು ಹೊರೆಸಿ, ಕೃಷ್ಣವೇಣಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಉಚ್ಚನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವಾಪರವನ್ನು ಪರಿಶೀಲಿಸಿ, ಕೃಷ್ಣವೇಣಿ ಅವರು ನಿರಪರಾಧಿ ಎಂದು ಘೋಷಿಸಿ, ಅಧಿಕಾರವನ್ನು ಅಮಾನತುಗೊಳಿಸಿದ್ದನ್ನು ಹಿಂಪಡೆದುಕೊಂಡು, ಅವರು ಉಪನಿರ್ದೇಶಕಿಯಾಗಿ ಮುಂದುವರೆಯಲು ಅವಕಾಶ ನೀಡುವಂತೆ ರಾಜ್ಯ ಗಣಿ ಮತ್ತು ಭೂ ಇಲಾಖೆಗೆ ಆದೇಶವನ್ನು ಹೊರಡಿಸಿದೆ.

* ಬೆಳ್ತಂಗಡಿ: ವಿಷಬೀಜ ಬಿತ್ತಿದ ದುಷ್ಕರ್ಮಿಯ ವಿರುದ್ಧ ತನಿಖೆ

ಬೆಳ್ತಂಗಡಿ: ಫೇಸ್ ಬುಕ್ ನ ಕುಲುಮೆ ಎಂಬ ಗುಂಪಿನಲ್ಲಿ ಅಯ್ಶುಅಯ್ಶಾ ಎಂಬ ಹೆಸರಿನ ಖಾತೆಯ ಮೂಲಕ, ಕೋಮುಗಲಭೆಯನ್ನು ಪ್ರೇರೇಪಿಸುವಂತಹ ಮತ್ತು ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುವಂತಹ ಸಂದೇಶಗಳನ್ನು ವ್ಯಕ್ತಿಯೊಬ್ಬರು ರವಾನಿಸುತ್ತಿದ್ದ ಹಿನ್ನೆಲೆಯಲ್ಲಿ, ಉಜಿರೆಯ ಪೊತ್ತುಮೋನು ಎನ್ನುವವರು ಆ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾರೆ.‌ ವ್ಯಕ್ತಿ ಯಾರು? ಅದರಲ್ಲಿ ಇರುವ ಹೆಸರು ನಿಜವಾದುದೆ ಅಥವಾ ಖಾತೆಗೆ ಬೇರೊಂದು ಹೆಸರು ನೀಡಲಾಗಿದೆಯೇ ಎಂಬಿತ್ಯಾದಿ ಸಂಗತಿಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

* ಉಡುಪಿ: ಲಿಂಕ್ ಮೂಲಕ ಹಣವನ್ನು ಪಾವತಿಸಿದ ವ್ಯಕ್ತಿಗೆ ವಂಚನೆ

ಉಡುಪಿ: ಹರಿಪ್ರಸಾದ್ ಎನ್ನುವವರು ಕಳೆದ ಹತ್ತು ವರ್ಷಗಳ ಹಿಂದೆ ಮನೆಯನ್ನು ಕಟ್ಟಿಸುವ ಸಲುವಾಗಿ ಖಾಸಗಿ ಬ್ಯಾಂಕ್ ವೊಂದರಲ್ಲಿ ಗೃಹಸಾಲವನ್ನು ಪಡೆದಿದ್ದರು. ಆಗ ಅದೇ ಬ್ಯಾಂಕಿನವರು ಹರಿಪ್ರಸಾದ್ ಗೆ ಎಚ್ ಡಿ ಎಫ್ ಸಿ ಲೈಫ್ ಇನ್ಶೂರೆನ್ಸ್ ಅನ್ನು ಸಹ ಮಾಡಿಸಿದ್ದರು. ಇದರಿಂದಾಗಿ ಹರಿಪ್ರಸಾದ್ ಅವರು ಒಂದೆರಡು ಕಂತುಗಳ ತನಕ ಹಣವನ್ನು ಪಾವತಿಸಿದ್ದರು. ನಂತರ ವಿಮಾ ಕಂಪನಿಯಿಂದ ಯಾವುದೇ ನೋಟಿಸ್ ಬಾರದ ಹಿನ್ನೆಲೆಯಲ್ಲಿ, ಹರಿಪ್ರಸಾದ್ ಅವರಿಗೆ ನೆನಪಿಲ್ಲದೆ ಕಂತಿನ ಹಣವನ್ನು ಪಾವತಿಸಿರಲಿಲ್ಲ. ಆಗ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಿಮ್ಮ ವಿಮಾ ಕಂತಿನ ಹಣ ಬಾಕಿ ಇದೆ, ಈ ಕೂಡಲೇ ಪಾವತಿಸಿ ಎಂದು ತಿಳಿಸಿದ್ದಾನೆ. ಆಗ ಹರಿಪ್ರಸಾದ್ ಅವರಿಗೆ ತಮ್ಮ ವಿಮಾ ಕಂತಿನ ಹಣ ಬಾಕಿ ಇರುವುದರ ನೆನಪಾಗಿ, ವ್ಯಕ್ತಿಯು ಕಳುಹಿಸಿದ ಲಿಂಕ್ ಒತ್ತಿ, ಗೂಗಲ್ ಪೇ ಮೂಲಕ ಸುಮಾರು ತೊಂಭತ್ತು ಸಾವಿರ ರೂಪಾಯಿ ಹಣವನ್ನು ಪಾವತಿಸಿದ್ದಾರೆ. ಬಳಿಕ ಎಚ್ ಡಿ ಎಫ್ ಸಿ ಇನ್ಸೂರೆನ್ಸ್ ಕಂಪನಿಯ ಬಳಿ ವಿಚಾರಿಸಿದಾಗ ಯಾವುದೇ ಹಣ ಜಮೆಯಾಗಿಲ್ಲ ಎಂದು ತಿಳಿಸಿದ್ದಾರೆ. ಆಗ ಹರಿಪ್ರಸಾದ್ ಅವರಿಗೆ ತಾನು ಮೋಸ ಹೋಗಿರುವ ಸಂಗತಿ ತಿಳಿದುಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.‌ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

* ಬಂಟ್ವಾಳ: ಹುಂಡಿಯ‌ ಹಣ ಕಳುವು; ಆರೋಪಿಗಳ ಬಂಧನ

ಬಂಟ್ವಾಳ: ಜುಲೈ 26ರಂದು ದೇಲಂತಬೆಟ್ಟುವಿನಲ್ಲಿ, ಚರ್ಚಿನ ಕೆಳರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಹುಂಡಿಯನ್ನು ಮೂವರು ಯುವಕರು ಒಡೆದು, ಹಣವನ್ನು ದೋಚಿದ್ದಾರೆ. ಹುಂಡಿಯಲ್ಲಿ ಸಂಗ್ರಹವಾಗಿದ್ದ ಸುಮಾರು 12 ರಿಂದ 15 ಸಾವಿರ ರೂಪಾಯಿಗಳನ್ನು ಲಪಟಾಯಿಸಿದ್ದಾರೆ. ಸ್ಥಳೀಯ ಧಾರ್ಮಿಕ ಕೇಂದ್ರದ ಅಧ್ಯಕ್ಷರಾದ ಡಿ ನಾರಾಯಣ ರಾವ್ ಅವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ನಿನ್ನೆಯ ದಿನ ಕಂಡುಹಿಡಿದು ಬಂಧನಕ್ಕೆ ಒಳಪಡಿಸಿದ್ದಾರೆ. ಆರೋಪಿಗಳನ್ನು ವಿಟ್ಲ ಕಸಬ ಗ್ರಾಮದ ನಿವಾಸಿಗಳಾದ ತ್ವಾಹಿದ್, ಉಮ್ಮದ್ ಫಾರೂಕ್ ಮತ್ತು ಮೊಹಮ್ಮದ್ ನಬೀಲ್ ಎಂದು ಗುರುತಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ

ಕುಂದಾಪುರ: ಸಂಗಮ್ ಜಂಕ್ಷನ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದುದರ ಪರಿಣಾಮವಾಗಿ, ಸ್ಕೂಟರ್ ನಲ್ಲಿ ಹಿಂಬದಿ ಕುಳಿತಿದ್ದ ಹೊಸಮಠ ಚಾರುಕೊಟ್ಟಿಗೆ ನಿವಾಸಿ ಜಲಜಾ ಎನ್ನುವವರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ.‌ ಸ್ಕೂಟರ್ ಚಲಾಯಿಸುತ್ತಿದ್ದ ಜಲಜ ಅವರ ಪತಿ ನಾರಾಯಣ ಎನ್ನುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.