ಕರಾವಳಿ ಟಾಪ್ ನ್ಯೂಸ್
• ಬಂಟ್ವಾಳ: ಬಸ್ಸಿಗೆ ಕಾಯುತ್ತಿದ್ದಾಗ ಹಣ ಮಾಯ!
• ಉಳ್ಳಾಲ: ಮಹಿಳಾ ಪೊಲೀಸರ ಬಳಿ ಅಶ್ಲೀಲ ನಡವಳಿಕೆ
• ಉಡುಪಿ: ಕೆಂಪು ಕಲ್ಲು ಮಾರಾಟ; ಪೊಲೀಸರ ವಶ
• ಕಾಪು: ಹೊಟೇಲ್ ಕಾರ್ಮಿಕ ಆತ್ಮಹತ್ಯೆ
• ಕುಂದಾಪುರ: ಆನ್ ಲೈನ್ ಖರೀದಿಯಲ್ಲಿ ಹಣ ವಂಚನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ರಂಗನಾಥ್ ಎನ್ನುವ ವ್ಯಕ್ತಿಯು ಬಿ.ಸಿ.ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದು, ಬಸ್ ಹತ್ತಿದ ಬಳಿಕ ಜೇಬನ್ನು ತಡಕಾಡಿದಾಗ ಪ್ಯಾಂಟ್ ಜೇಬಿನಲ್ಲಿದ್ದ ಒಂದು ಲಕ್ಷ ರೂಪಾಯಿ ನಗದು ಹಣ ಕಳುವಾಗಿರುವುದು ತಿಳಿದುಬಂದಿದೆ. ಜೇಬಿನಲ್ಲಿ ಐವತ್ತು ಸಾವಿರ ರೂಪಾಯಿಗಳ ಮೂರು ಕಂತೆಗಳು ಮತ್ತು ಹತ್ತು ಸಾವಿರ ರೂಪಾಯಿಗಳ ಒಂದು ಕಂತೆಯನ್ನು ಇರಿಸಿದ್ದರು ಎನ್ನಲಾಗಿದೆ. ಅದರಲ್ಲಿ ಐವತ್ತು ಸಾವಿರ ರೂಪಾಯಿಗಳ ಎರಡು ಕಂತೆಗಳನ್ನು ಕಳ್ಳರು ಅಪಹರಿಸಿದ್ದಾರೆ ಎಂದು ತಿಳಿಸಿದ್ದಾರೆ. ತಮ್ಮ ಹಳೆಯ ಕಾರನ್ನು ಮಾರಿ, ಹೊಸ ಕಾರನ್ನು ಖರೀದಿಸಲು 1,60,000 ರೂಪಾಯಿಗಳನ್ನು ತೆಗೆದುಕೊಂಡು ಬಂದಿದ್ದರು. ಆದರೆ ಕೆಲವು ದಾಖಲಾತಿಗಳು ಸರಿ ಇಲ್ಲದ ಕಾರಣ ಕಾರನ್ನು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಂದು ಕೈಕಂಬದ ತಮ್ಮ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡು, ಮರುದಿನ ಕೊಟ್ಟಿಗೆಹಾರದಲ್ಲಿರುವ ತಮ್ಮ ಮನೆಗೆ ಹಿಂತಿರುಗುವ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಉಳ್ಳಾಲ: ಮಹಿಳಾ ಪೊಲೀಸರ ಬಳಿ ಅಶ್ಲೀಲ ನಡೆವಳಿಕೆ
ಉಳ್ಳಾಲ: ಕೃಷ್ಣಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವದಲ್ಲಿ ಕೆಲವು ದುಷ್ಕರ್ಮಿಗಳು ಮೆರವಣಿಗೆ ಮುಂದೆ ಹೋಗಲು ಅವಕಾಶ ನೀಡದೆ, ಜೋರಾಗಿ ಬ್ಯಾಂಡ್ ಅನ್ನು ಬಾರಿಸುತ್ತಾ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಮಹಿಳಾ ಪೊಲೀಸರು ಮುಂದೆ ಸಾಗುವಂತೆ ತಿಳಿಸಿದಾಗ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅಶ್ಲೀಲ ರೀತಿಯಲ್ಲಿ ಕೈ ಸನ್ನೆ ಮಾಡಿ ಉದ್ಧಟತನ ತೋರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ದೀಪಕ್ ಮತ್ತು ಕಿರಣ್ ಎನ್ನುವ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರವಾನಗಿ ರಹಿತ ಕೆಂಪು ಕಲ್ಲು ಮಾರಾಟ; ಪೊಲೀಸರ ವಶಕ
ಉಡುಪಿ: ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಾಲಯದ ಬಳಿ ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು, ಅಲೆವೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ವಾಹನವನ್ನು ಪರಿಶೀಲಿಸಿದ್ದಾರೆ. ಆಗ ವಾಹನದಲ್ಲಿ ಸುಮಾರು 15,750 ರೂಪಾಯಿಯಷ್ಟು ಬೆಲೆಬಾಳುವ 350 ಕೆಂಪು ಕಲ್ಲುಗಳನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದು ಬೆಳಕಿಗೆ ಬಂದಿದೆ. ಮಂಚಿಕೇರಿ ಕಡೆಯಿಂದ ಇವುಗಳನ್ನು ಕಳುವು ಮಾಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿತು. ಇದಕ್ಕೆ ಸಂಬಂಧಿಸಿದಂತೆ ವಾಹನ ಚಾಲಕರಾದ ಜಗದೀಶ್ ಲಕ್ಷ್ಮಣ್ ದಂಡಗಿ ಮತ್ತು ಶೌಕತ್ ಅಲಿ ವಿರುದ್ಧ ಉಡುಪಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
• ಕಾಪು: ಹೊಟೇಲ್ ಕಾರ್ಮಿಕ ಆತ್ಮಹತ್ಯೆ
ಕಾಪು: ಹೊಟೇಲ್ ವೊಂದರಲ್ಲಿ ವೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯೋಗೀಶ್ ಎನ್ನುವವರು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉದ್ಯಾವರದ ಮನೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಯೋಗೀಶ್ ಅವರು ಏಳೆಂಟು ತಿಂಗಳಿನಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಕಳೆದೆರಡು ದಿನಗಳ ಹಿಂದೆ ಮನೆಯಲ್ಲಿದ್ದ ಯಾವುದೋ ವಿಷ ಪದಾರ್ಥವೊಂದನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಯೋಗೀಶ್ ಅವರನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಯಿತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎನ್ನುವ ಸಂಗತಿ ತಿಳಿದುಬಂದಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಯೋಗೀಶ್ ಅವರ ಸಹೋದರಿ ಮಲ್ಲಿಕಾ ಉಮೇಶ್ ಪೂಜಾರಿಯವರು ಹೇಳಿಕೆ ನೀಡಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಕುಂದಾಪುರ: ಆನ್ ಲೈನ್ ಖರೀದಿಯಲ್ಲಿ ಹಣ ವಂಚನೆ
ಕುಂದಾಪುರ: ಗೇರು ಬೀಜದ ಎಣ್ಣೆ ಕಾರ್ಖಾನೆಯನ್ನು ನಡೆಸುತ್ತಿರುವ ವೀಣಾ ಎನ್ನುವ ಮಹಿಳೆಗೆ, ಖುನಾಲ್ ಚೌದರಿ ಎಂಬಾತ ಎಣ್ಣೆ ಖರೀದಿಸುವ ನೆಪದಲ್ಲಿ ಆನ್ ಲೈನ್ ಮೂಲಕ ಹಣದ ವಂಚನೆ ಮಾಡಿರುವ ಘಟನೆ ನಡೆದಿದೆ. ಆಗಸ್ಟ್ ಮೊದಲ ವಾರ ಖುನಾಲ್ ಚೌದರಿ ವೀಣಾ ಅವರಿಗೆ ಕರೆ ಮಾಡಿ, ತಾನು ಬೆಂಗಳೂರಿನ ಯಲಹಂಕದಲ್ಲಿರುವ ಪರ್ಚೆಸರ್ ಆಫೀಸರ್ ಆಗಿದ್ದು, ತನಗೆ ಮೂವತ್ತು ಟನ್ ಗೇರು ಬೀಜದ ಎಣ್ಣೆಯನ್ನು ಕಳಿಸಿಕೊಡಿ ಎಂದು ಕೇಳಿಕೊಂಡಿದ್ದಾನೆ. ಅದರಂತೆ ವೀಣಾ ಅವರು ಆಗಸ್ಟ್ 14ರಂದು ಖುನಾಲ್ ತಿಳಿಸಿದ ವಿಳಾಸಕ್ಕೆ ಎಣ್ಣೆಯನ್ನು ಕಳುಹಿಸಿದ್ದಾರೆ. ಪುನಃ ಕರೆ ಮಾಡಿ ಗೇಟ್ ಪಾಸ್ ಮಾಡಲು ಐದು ಸಾವಿರ ರೂಪಾಯಿ ಮತ್ತು ಭದ್ರತಾ ಠೇವಣಿಗಾಗಿ ಎರಡುವರೆ ಲಕ್ಷ ರೂಪಾಯಿ ಕಳುಹಿಸಿಕೊಡುವಂತೆ ಹೇಳಿದ್ದಾನೆ. ವೀಣಾ ಇದನ್ನು ನಿಜವೆಂದು ನಂಬಿ ಕಳಿಸಿಕೊಟ್ಟಿದ್ದಾರೆ. ನಂತರ ಯಾವುದೇ ಸುದ್ಧಿ ಇಲ್ಲದಿರುವುದನ್ನು ಗಮನಿಸಿದ ವೀಣಾ ಪರಿಶೀಲನೆ ನಡೆಸಿದಾಗ, ಆ ವಿಳಾಸದಲ್ಲಿ ಯಾವುದೇ ಖರೀದಿದಾರರು ಇಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವೀಣಾ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.