ಕರಾವಳಿ ಟಾಪ್ ನ್ಯೂಸ್
• ಕಾರ್ಕಳ: ಬಸ್ ಗಳಿಗಾಗಿ ಸಾರ್ವಜನಿಕರ ಆಗ್ರಹ
• ಬೈಂದೂರು: ಪ್ಲಾಸ್ಟಿಕ್ ನಿರ್ಮೂಲನೆಗಾಗಿ ವಿಶ್ವಬ್ಯಾಂಕ್ ನಿಂದ 840 ಕೋಟಿ ರೂಪಾಯಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಕಾರ್ಕಳ: ಬಸ್ ಗಳಿಗಾಗಿ ಸಾರ್ವಜನಿಕರ ಆಗ್ರಹ
ಕಾರ್ಕಳ: ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ಅಧಿಕ ಸಂಖ್ಯೆಯಲ್ಲಿ ಸಂಚರಿಸುವ, ಪಡುಬಿದ್ರಿ ಮತ್ತು ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಬಸ್ ಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಇರುವ ಕೆಲವೇ ಬಸ್ ಗಳಲ್ಲಿ ತುದಿಯಲ್ಲಿ ನಿಂತು ನೇತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ನಿಟ್ಟೆ ಇಂಜಿನಿಯರಿಂಗ್ ಕಾಲೇಜ್, ಡಿಪ್ಲೋಮಾ ಕಾಲೇಜ್ ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ತುಸು ಹೆಚ್ಚೆಂದೇ ಹೇಳಬಹುದು. ಬೇರೆ ಬೇರೆ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಕೂಡ ಪಡುಬಿದ್ರಿಯಲ್ಲೇ ನಿಟ್ಟೆ ಕಡೆಗೆ ತೆರಳುವ ಬಸ್ ಗಳನ್ನು ಹಿಡಿಯುತ್ತಾರೆ. ಇರುವ ಕೆಲವೇ ಬಸ್ ಗಳಲ್ಲಿ ಜನರು ತುಂಬಿರುವುದರಿಂದ, ಅನಿವಾರ್ಯವಾಗಿ ಅದರಲ್ಲಿ ತುರುಕಿಕೊಂಡೋ, ಫುಟ್ ಬೊರ್ಡಿನಲ್ಲಿ ನೇತಾಡಿಕೊಂಡೋ ಹೋಗುವ ಸಮಸ್ಯೆ ತಲೆದೋರುತ್ತದೆ. ಕೆಲವು ಕಡೆ ತಿರುವುಗಳಿರುವಾಗ ವಿದ್ಯಾರ್ಥಿಗಳು ಕೆಳಗೆ ಬೀಳುವ ಸಾಧ್ಯತೆ ಕೂಡ ಇದೆ ಎನ್ನುವುದನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಸಾರ್ವಜನಿಕರು ಖಾಸಗಿ ಬಸ್ ಗಳನ್ನೇ ಹೆಚ್ಚಿಸಿ ಇಲ್ಲವೇ ಸರ್ಕಾರಿ ಬಸ್ ಗಳನ್ನು ಹೆಚ್ಚುವರಿಯಾಗಿ ಪ್ರಾರಂಭಿಸಿ ಎಂದು ಆಗ್ರಹಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಭಾಸ್ಕರ್ ಪಡುಬಿದ್ರಿ ಅವರು “ಈಗಾಗಲೇ ಈ ಮಾರ್ಗವಾಗಿ ಹೆಚ್ಚುವರಿ ಬಸ್ ಗಳಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ನಷ್ಟದ ಕಾರಣಕ್ಕಾಗಿ ಖಾಸಗಿ ಬಸ್ ಮಾಲೀಕರು ಯಾರೂ ತಮ್ಮ ಕಂಪನಿಯಿಂದ ಹೆಚ್ಚುವರಿ ಬಸ್ ಗಳನ್ನು ಬಿಡಲು ಮುಂದಾಗುತ್ತಿಲ್ಲ. ಶಾಲೆ ಕಾಲೇಜು ಮತ್ತು ಕಚೇರಿಗಳು ಪ್ರಾರಂಭವಾಗುವ ಸಮಯದಲ್ಲಿ ಹಾಗೂ ಬಿಡುವ ಸಮಯದಲ್ಲಿ ಮಾತ್ರ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುತ್ತದೆ. ಅದನ್ನು ಹೊರತುಪಡಿಸಿದರೆ ಉಳಿದ ಸಮಯಗಳಲ್ಲಿ ಬಸ್ ಗಳಲ್ಲಿ ಜನಗಳೇ ಇರುವುದಿಲ್ಲ. ಅಲ್ಲದೆ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವುದರಿಂದ ಟಿಕೆಟ್ ಗೆ ಅರ್ಧ ಹಣವನ್ನು ತೆರುವುದರಿಂದ ಪೂರ್ಣ ಪ್ರಮಾಣದ ಕಲೆಕ್ಷನ್ ಕೂಡ ಆಗುವುದಿಲ್ಲ. ಇದರೊಂದಿಗೆ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುತ್ತಿದ್ದರೆ, ಅದನ್ನು ಗಮನಿಸುವ ಪೊಲೀಸರು ಕೇಸನ್ನು ಸಹ ಹಾಕುತ್ತಿದ್ದಾರೆ. ಅಲ್ಲೊಂದಿಷ್ಟು ಹಣ ವ್ಯಯವಾಗುತ್ತಿದೆ. ಇರುವ ಬಸ್ ಗಳ ಕಡಿಮೆ ಸಂಖ್ಯೆಯಿಂದಲೇ ಇಷ್ಟೊಂದು ಸಮಸ್ಯೆಗಳು ತಲೆದೋರುತ್ತಿರುವಾಗ, ಇನ್ನು ಉಳಿದ ಸಮಯದಲ್ಲಿ ಹೆಚ್ಚುವರಿ ಬಸ್ ಗಳನ್ನು ಆರಂಭಿಸಿದರೆ ಮತ್ತಷ್ಟು ನಷ್ಟಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಖಾಸಗಿ ಬಸ್ ಮಾಲೀಕರ ಅಭಿಪ್ರಾಯವಾಗಿದೆ” ಎಂದು ತಿಳಿಸಿದ್ದಾರೆ. ಇದರ ಕುರಿತು ಸಾರ್ವಜನಿಕರು ಖಾಸಗಿ ಬಸ್ ಗಳನ್ನು ಆರಂಭಿಸಲು ಈ ರೀತಿಯ ಸಮಸ್ಯೆಗಳಾದರೆ ಸರ್ಕಾರಿ ಬಸ್ ಗಳನ್ನಾದರೂ ಪ್ರಾರಂಭಿಸಿ, ವಿದ್ಯಾರ್ಥಿಗಳ ಸುರಕ್ಷತೆಯತ್ತ ಗಮನಹರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
• ಬೈಂದೂರು: ಪ್ಲಾಸ್ಟಿಕ್ ನಿರ್ಮೂಲನೆಗಾಗಿ ವಿಶ್ವಬ್ಯಾಂಕ್ ನಿಂದ 840 ಕೋಟಿ ರೂಪಾಯಿ.
ಬೈಂದೂರು: 320 ಕಿಲೋಮೀಟರ್ ಕರಾವಳಿ ವ್ಯಾಪ್ತಿಯನ್ನು ಹೊಂದಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕ ಸ್ಟ್ರೆಂಥನಿಂಗ್ ಆಫ್ ಕೋಸ್ಟಲ್ ರೆಸಿಲಿಯನ್ಸ್ ಎಕನಾಮಿ ಯೋಜನೆಗೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯು ಅನುಮೋದನೆ ನೀಡಿದ್ದು, ಇದರೊಂದಿಗೆ ದಕ್ಷಿಣ ಏಷ್ಯಾದಲ್ಲಿ ಪ್ಲಾಸ್ಟಿಕ್ ಮುಕ್ತ ನದಿಗಳು ಮತ್ತು ಸಮುದ್ರಗಳ ಯೋಜನೆಗಾಗಿ ವಿಶ್ವ ಬ್ಯಾಂಕ್ ಕೂಡ ನೆರವು ನೀಡಲು ಮುಂದಾಗಿದೆ. ಇದು ಕರ್ನಾಟಕ ಸೇರಿದಂತೆ ಭಾರತದ ಎಂಟು ರಾಜ್ಯಗಳು, ಮೂರು ಕರಾವಳಿ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಪ್ರಾದೇಶಿಕ ಯೋಜನೆಯಾಗಿದೆ. ಈ ಯೋಜನೆಯ ಮೂಲ ಉದ್ದೇಶ ಕರಾವಳಿ ಭಾಗದಲ್ಲಿ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸುವುದು, ಪ್ಲಾಸ್ಟಿಕ್ ರಹಿತವಾದ ಕರಾವಳಿ ತೀರ ಪ್ರದೇಶಗಳನ್ನು ನಿರ್ಮಿಸುವುದು, ಕಡಲ್ಕೊರೆತ ಸಮಸ್ಯೆಯನ್ನು ಬಗೆಹರಿಸುವುದು, ಸಮುದ್ರದ ಸಂರಕ್ಷಣೆಯಾಗಿದೆ. ಇದರಿಂದಾಗಿ ಆಲಿವ್ ರಿಡ್ಲೆ ಆಮೆಗಳು ಮತ್ತು ಡಾಲ್ಫಿನ್ ಗಳ ಸಂರಕ್ಷಣೆ ಕೂಡ ಸಾಧ್ಯವಾಗುತ್ತದೆ. ಈಗಾಗಲೇ ನಿಟ್ಟೆ, ಬಡಗುಬೆಟ್ಟು, ಬೈಂದೂರಿನ ಹೊಸಾಡು, ಹೆಬ್ರಿಯಲ್ಲಿ ಎಂಆರ್ ಎಫ್ ಘಟಕಗಳಿದ್ದು, ಇದರೊಂದಿಗೆ ಹನ್ನೊಂದು ಹೊಸ ಎಂಆರ್ ಎಫ್ ಘಟಕಗಳನ್ನು ರಚಿಸಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಪ್ರತಿ ಘಟಕಕ್ಕೂ ಒಂದರಿಂದ ಐದು ಕೋಟಿ ರೂಪಾಯಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ದೇವಾಲಯ ಸೇರಿದಂತೆ ಇತರೆ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಇತರ ತ್ಯಾಜ್ಯಗಳನ್ನು ಆಗಮನ ಮತ್ತು ನಿರ್ಗಮನ ಸ್ಥಳಗಳಲ್ಲಿ ಸಂಗ್ರಹಿಸಿಡುವುದು. ಇದಕ್ಕಾಗಿ ಸುತ್ತಮುತ್ತಲ್ಲ ಸ್ಥಳಗಳಲ್ಲಿ ಡಬ್ಬಗಳನ್ನು ಇರಿಸುವುದು. ಬಳಿಕ ಸಂಗ್ರಹಗೊಂಡ ತ್ಯಾಜ್ಯಗಳನ್ನು ಎಂಆರ್ ಎಫ್ ಘಟಕಗಳಿಗೆ ತಲುಪಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವ ಸಂಗತಿ ತಿಳಿದುಬಂದಿದೆ. ವಿಶ್ವಬ್ಯಾಂಕ್ ನೀಡುವ 840 ಕೋಟಿ ರೂಪಾಯಿಯನ್ನು ಐದು ಇಲಾಖೆಗಳ ಸಮನ್ವಯದಲ್ಲಿ, ಮೂರು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಉಡುಪಿ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ತಿಳಿಸಿದ್ದಾರೆ.