Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

ಮಂಗಳೂರಲ್ಲಿ ಕಳ್ಳರ ಕಾಟ.. ಜನರಿಗೆ ಸಂಕಟ!
• ಮಂಗಳೂರು: ಒಂದೇ ಕೇರಿಯಲ್ಲಿ, 8 ಮನೆ ಕಳ್ಳತನಕ್ಕೆ ಯತ್ನ

• ಕಾಪು: ದನಗಳ್ಳತನ: ಆರೋಪಿಗಳು ಪೊಲೀಸರ ವಶಕ್ಕೆ
• ಕುಂದಾಪುರ: ಯುವತಿಯೊಂದಿಗೆ ಅಸಭ್ಯ ವರ್ತನೆ
• ಉಳ್ಳಾಲ: ಎಟಿಎಂನಲ್ಲಿ ಕಳ್ಳತನಕ್ಕೆ ಪ್ರಯತ್ನ; ಆರೋಪಿ ಬಂಧನ
• ಬ್ರಹ್ಮಾವರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್, ಕರಾವಳಿ
ಮಂಗಳೂರು: ಪದ್ಮಶ್ರೀ ಲೇಔಟ್ ಎಂಬ ಬಡಾವಣೆಯಲ್ಲಿ, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗುರುತಿಸಿಕೊಂಡು, ಏಳೆಂಟು ಮನೆಗಳಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ ಘಟನೆ ಸೂರತ್ಕಲ್ ನಲ್ಲಿ ನಡೆದಿದೆ. ನಾಲ್ಕು ಮನೆಗಳ ಬಾಗಿಲುಗಳನ್ನು ಮುರಿದು, ಒಂದು ಮನೆಯಲ್ಲಿ ಬೆಳ್ಳಿ ದೀಪ ಸಹಿತ,ಸುಮಾರು ಐವತ್ತು ಸಾವಿರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕಳ್ಳರ ಚಲನವಲನಗಳು ಬಡಾವಣೆಯ ಮನೆಗಳಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಕೇವಲ ಇಬ್ಬರು ಕಳ್ಳರ ಕೆಲಸವಾಗಿದ್ದು, ಮನೆಯ ಬಾಗಿಲನ್ನು ತೆರೆಯಲು ಚೂಪಾದ ಆಯುಧಗಳನ್ನು ಬಳಸಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ಕಳ್ಳರನ್ನು ಸೆರೆಹಿಡಿಯುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

• ಬೈಂದೂರು: ಅನಾರೋಗ್ಯದ ಸಲುವಾಗಿ ಮನನೊಂದು ಆತ್ಮಹತ್ಯೆ

ಬೈಂದೂರು: ಭಾಸ್ಕರ್ ಎನ್ನುವ ವ್ಯಕ್ತಿಯು ಕಳೆದ ವರ್ಷ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ದೈಹಿಕ ಸಮಸ್ಯೆ ಕಾಡುತ್ತಿರುವುದರಿಂದ, ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಜಡ್ಕಲ್ ನಲ್ಲಿ ನಡೆದಿದೆ. ಮನೆಯವರೆಲ್ಲ ಸಂಜೆ ದೇಗುಲಕ್ಕೆ ತೆರಳಿದಾಗ ಭಾಸ್ಕರ್ ಅವರು ಮನೆಯಲ್ಲಿಯೇ ಉಳಿದುಕೊಂಡಿದ್ದರು. ಆಗ ಈ ರೀತಿ ಮಾಡಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಮನೆಯವರೆಲ್ಲ ದೇವಾಲಯದಿಂದ ರಾತ್ರಿ ಮನೆಗೆ ಮರಳಿದಾಗ ಬಾಗಿಲು ಮುಚ್ಚಿತ್ತು, ಎಷ್ಟೇ ಕರೆದರು ಭಾಸ್ಕರ್ ಅವರು ಬಾಗಿಲು ತೆರೆಯಲಿಲ್ಲ. ಬಳಿಕ ಮನೆಯವರೆಲ್ಲ ಸೇರಿ ಪಕ್ಕದಲ್ಲಿದ್ದ ಅಂಗಡಿ, ಗದ್ದೆ ತೋಟಗಳಲ್ಲೆಲ್ಲ ಹುಡುಕಾಡಿದರು. ಆಗ ಮನೆಯ ಸಮೀಪದ ಹಾಡಿಯೊಂದರಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಭಾಸ್ಕರ್ ಕಂಡುಬಂದಿದ್ದಾರೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಕಾಪು: ದನಗಳ್ಳತನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ಪೊಲೀಸರ ವಶಕ್ಕೆ.

ಕಾಪು: ಹಿಂದೆ ದನಗಳ್ಳತನ ಮಾಡಿ, ಪ್ರಕರಣ ದಾಖಲಾಗಿದ್ದ ಆರೋಪಿಗಳು ತಮಿಳುನಾಡು ಮತ್ತು ಕೇರಳ ಸೇರಿದಂತೆ ವಿವಿಧ ಕಡೆ ತಲೆಮರೆಸಿಕೊಂಡಿದ್ದರು. ಅವರು ಮಂಗಳೂರಿನ ಬಜ್ಪೆಗೆ ಬಂದ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ನಿರೀಕ್ಷಕರಾದ ಸುಧಾಕರ್ ನಾಯ್ಕ್ ಮತ್ತು ಕಾರ್ಕಳದ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದ ಅವರ ಮಾರ್ಗದರ್ಶನದಲ್ಲಿ, ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಮಾನೆ ಅವರ ನೇತೃತ್ವದಲ್ಲಿ, ಪಡುಬಿದ್ರಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಕ್ತಿವೇಲು, ಅನಿಲ್ ಕುಮಾರ್ ಹಾಗೂ ಸಿಬ್ಬಂದಿಗಳಾದ ರಾಜೇಶ್, ನಾಗರಾಜ, ಕೃಷ್ಣರಾಜ ಹೆಗಡೆ, ಸಂದೇಶ್ ಮತ್ತು ರುಕ್ಮಿಣಿ ಅವರು ಪ್ರಯತ್ನ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದೆ ಗಂಗೊಳ್ಳಿಯಲ್ಲಿ ಪಿಎಸ್ಐ ಆರೋಪಿಗಳನ್ನು ಹಿಡಿಯುವ ಸಂದರ್ಭದಲ್ಲಿ, ದಾಳಿ ನಡೆಸಿ ಪರಾರಿಯಾಗಿದ್ದರು ಎಂದು ಹೇಳಲಾಗಿದೆ. ಅವರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರಿನ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಇದೀಗ ಆರೋಪಿಗಳಾದ ಸಫ್ವಾನ್ ಕಾಪು, ಅಜೀಂ ಕಾಪು ಮತ್ತು ರಾಜಿಕ್ ಬಜ್ಪೆ ಅವರನ್ನು ಸೆರೆಹಿಡಿದಿದ್ದಾರೆ. ಶನಿವಾರದಂದು ಆರೋಪಿಗಳನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ. ಈ ಹಿಂದೆ ಈ ಮೂವರು ಆರೋಪಿಗಳ ಮೇಲೂ ಅಕ್ರಮ ಗೋಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ.

• ಕುಂದಾಪುರ: ಯುವತಿಯೊಂದಿಗೆ ಅಸಭ್ಯ ವರ್ತನೆ.

ಕುಂದಾಪುರ: ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಯುವತಿಯೊಬ್ಬಳು, ಧರ್ಮಸ್ಥಳ ಧರ್ಮ ಯಾತ್ರಾ ಸಭೆಯ ಕುರಿತು ರಟ್ಟಾಡಿಯ ಶ್ರೀರಟ್ಟೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಮುಖ್ಯಸ್ಥರಾದ ನವೀನ್ ಚಂದ್ರ ಶೆಟ್ಟಿ ಅವರಿಗೆ ಆಹ್ವಾನ ನೀಡಲು ಹೋದ ಸಂದರ್ಭದಲ್ಲಿ, ಅಸಭ್ಯವಾಗಿ ವರ್ತಿಸಿದ ಘಟನೆ ಅಮಾಸೆಬೈಲು ವ್ಯಾಪ್ತಿಯಲ್ಲಿ ನಡೆದಿದೆ. ಆಹ್ವಾಪತ್ರಿಕೆಯನ್ನು ನೀಡುವಾಗ ಆತ ಯುವತಿಯ ಕೈಯನ್ನು ಸ್ಪರ್ಶಿಸಿದ್ದಾನೆ. ಗಾಬರಿಗೊಂಡ ಯುವತಿ ಹೊರಡಲು ಸಿದ್ಧಳಾದಾಗ ಒಂದು ನಿಮಿಷ ನಿಲ್ಲು ಎಂದು, ಆಕೆಯನ್ನು ಹತ್ತಿರಕ್ಕೆ ಎಳೆದುಕೊಂಡು, ಕೆನ್ನೆಗೆ ಮುತ್ತಿಟ್ಟಿದ್ದಾನೆ. ಬಾಗಿಲ ತನಕ ಯುವತಿ ಹೋದರೂ ಮನೆಗೆ ಬಾ ಎಂದು ಕರೆಯುತ್ತ, ಆಕೆಯನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಯುವತಿಯು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಉಳ್ಳಾಲ: ಕೊಪ್ಪಳ ಮೂಲದ ನಾಗಪ್ಪ ಕಿರಾಲಟ್ಟಿ ಎನ್ನುವ ವ್ಯಕ್ತಿಯು ಎಟಿಎಂ ಗೆ ನುಗ್ಗಿ, ಕಳ್ಳತನ ಮಾಡಲು ಪ್ರಯತ್ನಿಸಿದ ಘಟನೆ ಉಳ್ಳಾಲದ ಕೋಟೆಕಾರುವಿನಲ್ಲಿ ನಡೆದಿದೆ. ತಡರಾತ್ರಿ 2:42ರ ಸುಮಾರಿಗೆ ಎಸ್ ಬಿಐ ಬ್ಯಾಂಕಿಗೆ ಸೇರಿದ ಎಟಿಎಂ ಗೆ ನುಗ್ಗಿ, ತನ್ನ ಬಳಿ ಇದ್ದ ಆಯುಧಗಳಿಂದ ಕ್ಯಾಶ್ ಬಾಕ್ಸ್ ಅನ್ನು ತೆರೆದು, ಹಾನಿಗೊಳಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಎಟಿಎಂ ಉಸ್ತುವಾರಿಯನ್ನು ನೋಡಿಕೊಳ್ಳುವ ಗಣಕಯಂತ್ರಕ್ಕೆ ಸಂದೇಶ ರವಾನೆಯಾಗಿದೆ. ತಕ್ಷಣ ರಂಜಿತ್ ಎನ್ನುವ ಅದರ ಸಿಬ್ಬಂದಿಯು, ಕೋಟೆಕಾರು ಎಟಿಎಂ ನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ದೀಪಕ್ ಅಮೀನ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಆಗ ದೀಪಕ್ ಅಮೀನ್ ಸಿಸಿಟಿವಿಯಿಂದ ಪರಿಶೀಲನೆ ನಡೆಸಿ, ಕಳ್ಳತನ ಮಾಡಲು ಪ್ರಯತ್ನಿಸಿರುವುದನ್ನು ಖಚಿತಪಡಿಸಿದ್ದಾರೆ. ಕೂಡಲೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

• ಬ್ರಹ್ಮಾವರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ

ಬ್ರಹ್ಮಾವರ: ದೇವಸ್ಥಾನದ ಸಮೀಪದಲ್ಲಿರುವ ಮನೆಯೊಂದರಲ್ಲಿ, ಹಣವನ್ನು ಪಣವಾಗಿಟ್ಟು ಇಸ್ಪೀಟ್ ಆಟ ಆಡುತಿದ್ದ ಹನ್ನೊಂದು ಜನ ಆರೋಪಿಗಳನ್ನು ಬಂಧಿಸಿದ ಘಟನೆ ನೀಲಾವರ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ಸದಾಶಿವ ದೇವಾಡಿಗ, ಪ್ರಸನ್ನ, ರಜಾಕ್, ಭಾಸ್ಕರ, ಅಶೋಕ್, ಹರೀಶ್ ನಾಯ್ಕ, ಚಂದ್ರಹಾಸ, ರವಿಕುಮಾರ್, ಶಶಿಕಾಂತ, ಆನಂದ್, ಸಂಪತ್ ಎಂದು ಗುರುತಿಸಲಾಗಿದೆ. ಬಂಧನಕ್ಕೆ ಒಳಪಡುತ್ತಿದ್ದಂತೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಬಂಧನದ ಸಂದರ್ಭದಲ್ಲಿ ಆಟಕ್ಕೆ ಬಳಸಿದ 20, 900 ರೂಪಾಯಿ ನಗದು, 52 ಇಸ್ಪೀಟ್ ಎಲೆಗಳು, ಒಂದು ಮೇಜು, 12 ಕುರ್ಚಿಗಳು, ಮೂರು ಕಾರುಗಳು ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 183/2025 ಕಾಲಂ 79, 80 ಕೆಪಿ ಆ್ಯಕ್ಟ್ ನಂತೆ ಪ್ರಕರಣವನ್ನು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.