ಪುತ್ತೂರಿನ ಹುಲಿ ರಾಧಣ್ಣ ಇನ್ನಿಲ್ಲ..!
– ಹುಲಿ ಕುಣಿತದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದ ಕಲಾವಿದ
– ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಕರಾವಳಿ ಜನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಪುತ್ತೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಪಿಲಿ(ಹುಲಿ) ರಾಧಣ್ಣ ಎಂದೇ ಖ್ಯಾತರಾಗಿದ್ದ, ರಾಧಾಕೃಷ್ಣ ಶೆಟ್ಟಿ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಹುಲಿ ಕುಣಿತದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳ ಮೂಲಕ, ವಿಶಿಷ್ಟ ಶೈಲಿಯನ್ನು ತಂದುಕೊಟ್ಟ ಹೆಸರಿಗೆ ಇವರು ಖ್ಯಾತರಾಗಿದ್ದರು. ಯಾವುದೇ ವಿಶೇಷ ಆಚರಣೆಯ ಸಂದರ್ಭದಲ್ಲಿ, ಅದಕ್ಕೆ ಧಕ್ಕೆಬಾರದಂತೆ ವೇಷ ಹಾಕಿ ಕುಣಿಯುವುದು ಇವರ ವಿಶಿಷ್ಟತೆಯಾಗಿತ್ತು. ಸುಮಾರು 65 ವರ್ಷಗಳ ಹಿಂದೆ ಹುಲಿ ಕುಣಿತಕ್ಕೆ ಇದ್ದವರು ಇಬ್ಬರೇ ಹುಲಿಗಳು. ಒಬ್ಬರು ಹುಲಿ ಸಂಕಪ್ಪಣ್ಣ ಮತ್ತು ಹುಲಿ ಗಂಗಣ್ಣ. ಹುಲಿ ಸಂಕಪ್ಪಣ್ಣ ಅವರ ಮಗನೇ ಹುಲಿ ರಾಧಣ್ಣ. 30 ವರ್ಷಗಳ ಕಾಲ ಹುಲಿ ವೇಷದಲ್ಲಿ ಕುಣಿದಿದ್ದ ಸಂಕಪ್ಪಣ್ಣ ಅವರು, ತಮ್ಮ ಮಗ ರಾಧಾಕೃಷ್ಣನನ್ನು 9ನೇ ವಯಸ್ಸಿಗೆ ಹುಲಿಯ ವೇಷ ತೊಡಿಸಿ, ಕುಣಿಸಿದರು. ಹೀಗಾಗಿ ರಾಧಾಕೃಷ್ಣ ಅವರು ಮೊದಲ ಹುಲಿಮರಿ(ಕಿನ್ನಿ ಪಿಲಿ) ಎಂದು ಪುತ್ತೂರಿನ ಸುತ್ತಮುತ್ತಲ ಜನರಿಂದ ಕರೆಸಿಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ಖ್ಯಾತನಾಮರಾದರು. ಅವರ ನಿಧನಕ್ಕೆ ಎಲ್ಲೆಡೆ ಶ್ರದ್ಧಾಂಜಲಿ ಕೇಳಿ ಬರುತ್ತಿದೆ.