ಕರಾವಳಿ ಟಾಪ್ ನ್ಯೂಸ್
ಮಂಗಳೂರು: ಅಪಾರ್ಟ್ ಮೆಂಟಲ್ಲಿ 9ನೇ ಕ್ಲಾಸ್ ಹುಡುಗಿ ಆತ್ಮಹತ್ಯೆ
• ಉಡುಪಿ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
• ಸುಳ್ಯ: ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
• ಬೆಳ್ತಂಗಡಿ: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೇಳಿಕೆ
• ಶಿರಸಿ: ಕಾಲು ಜಾರಿ ನೀರಿಗೆ ಬಿದ್ದು ವಿದ್ಯಾರ್ಥಿ ನಾಪತ್ತೆ
• ಬಂಟ್ವಾಳ: ಆಕಸ್ಮಿಕವಾಗಿ ಮನೆಗೆ ತಗುಲಿದ ಬೆಂಕಿ
• ಬ್ರಹ್ಮಾವರ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ವಾಹನ ಢಿಕ್ಕಿ
• ಯಲ್ಲಾಪುರ: ಮರ ಬಿದ್ದು ಗರ್ಭಿಣಿ ಮಹಿಳೆ ಮತ್ತು ಮಗಳ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಬಂದರು ಮುಖ್ಯಪ್ರಾಣ ದೇವಸ್ಥಾನದ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ, ಖುಷಿ ಎನ್ನುವ ಮಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮುಂದಿನ ವಾರ ಪರೀಕ್ಷೆ ಇದ್ದು, ರಾತ್ರಿ ಕೂಡ ಸರಿಯಾಗಿ ನಿದ್ದೆ ಮಾಡದೆ ಓದಿಕೊಳ್ಳುತ್ತಿದ್ದಳು, ಅಲ್ಲದೆ ಸ್ವಲ್ಪ ಖಿನ್ನತೆಯಿಂದ ಕೂಡ ಬಳಲುತ್ತಿದ್ದಳು ಎನ್ನುವ ಸಂಗತಿ ತಿಳಿದುಬಂದಿದೆ. ಟೆರೇಸ್ ಮೇಲಿನಿಂದ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಗಾಯಗಳಾಗಿದ್ದು ಉಸಿರಾಡುತಿದ್ದಳು. ಹೀಗಾಗಿ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಉಡುಪಿ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಉಡುಪಿ: ಸ್ನೇಹಿತರೊಂದಿಗೆ ಮಣಿಪಾಲ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ, ಹರಿಕೇಶ್ ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹರಿಕೇಶ್ ತನ್ನ ಕೊಠಡಿಯ ಬಾಗಿಲನ್ನು ತೆರೆಯದಿದ್ದ ವಿಚಾರವಾಗಿ ಮಾಹಿತಿ ಬಂದಿದ್ದರಿಂದ, ಅಪಾರ್ಟ್ ಮೆಂಟ್ ನ ಮಾಲೀಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಂದು, ಬಾಗಿಲನ್ನು ಒಡೆದು ನೋಡಿದಾಗ ಹರಿಕೇಶ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಸುಳ್ಯ: ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಸುಳ್ಯ: ರವೀಂದ್ರ ಎನ್ನುವ ವ್ಯಕ್ತಿಯು 115/2018, ಕಾಲಂ 5೦4, 354 (ಎ) ಐಪಿಸಿ ಪ್ರಕರಣವೊಂದರ ಆರೋಪಿಯಾಗಿದ್ದು, ಜಾಮೀನು ಆಧಾರದ ಮೇಲೆ ಹೊರಬಂದಿದ್ದನು. ಆದರೆ ಕಳೆದ ಏಳು ವರ್ಷಗಳಿಂದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಸುಳ್ಯ ಪೊಲೀಸರು ರವೀಂದ್ರನನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಬಂಧಿಸಿದ್ದಾರೆ. ಅಲ್ಲದೆ ನ್ಯಾಯಾಲಯಕ್ಕೆ ಹಾಜರಾಗದಿದ್ದ ಹಿನ್ನೆಲೆಯಲ್ಲಿ ಎಲ್ ಪಿಸಿ ನಂಬರ್ 04/2023 ರ ಅನ್ವಯ ನ್ಯಾಯಾಲಯ ವಾರೆಂಟ್ ಸಹ ಹೊರಡಿಸಿತ್ತು ಎನ್ನಲಾಗಿದೆ. ಸುಳ್ಯ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
• ಬೆಳ್ತಂಗಡಿ: ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೇಳಿಕೆ.
ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ತಿರುವು ದೊರೆತಿದೆ. ಸೋಮವಾರದಂದು ಇದರಲ್ಲಿ ಪ್ರವೇಶ ಮಾಡಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎನ್ನುವವರು ತಮ್ಮ ಹೇಳಿಕೆಯ ಮೂಲಕ ಸಾರ್ವಜನಿಕರಲ್ಲಿ ಕುತೂಹಲವನ್ನು ಕೆರಳಿಸಿದ್ದಾರೆ. 2012ರ ಆಗಸ್ಟ್ 9 ರಂದು ಸೌಜನ್ಯಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಅವಳ ಮಾವ ವಿಠ್ಠಲ ಗೌಡ ಎಂದು ಹೇಳುವ ಮುಖಾಂತರ ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದ್ದಾರೆ. “ಈ ಪ್ರಕರಣಕ್ಕೆ ಪೂರಕವಾದ ಸಾಕ್ಷಿಗಳನ್ನು ನಾನು ಸಂಗ್ರಹಿಸಿದ್ದು, ಅವುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಅವರಿಗೆ ನೀಡಿ, ದೂರನ್ನು ಸಲ್ಲಿಸುತ್ತೇನೆ” ಎಂದು ಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
• ಶಿರಸಿ: ಕಾಲು ಜಾರಿ ನೀರಿಗೆ ಬಿದ್ದು ವಿದ್ಯಾರ್ಥಿ ನಾಪತ್ತೆ
ಶಿರಸಿ: ಬೆಣ್ಣೆ ಹೊಳೆ ಜಲಪಾತದಲ್ಲಿ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಅರಣ್ಯ ಮಹಾ ವಿದ್ಯಾಲಯದ ರಾಹುಲ್ ಎನ್ನುವ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಶಿರಸಿಯಲ್ಲಿ ನಡೆದಿದೆ. ಇನ್ನೊಬ್ಬ ವಿದ್ಯಾರ್ಥಿಯಾದ ಶ್ರೀನಿವಾಸ್ ಎನ್ನುವವನು ಅದೃಷ್ಟವಶದಿಂದ ಬದುಕುಳಿದಿದ್ದು, ಆತನನ್ನು ರಕ್ಷಿಸಲಾಗಿದೆ. ಆದರೆ ರಾಹುಲ್ ನ ಯಾವುದೇ ಸುಳಿವು ಲಭಿಸಿಲ್ಲ ಎನ್ನಲಾಗಿದೆ.
• ಬಂಟ್ವಾಳ: ಆಕಸ್ಮಿಕವಾಗಿ ಮನೆಗೆ ತಗುಲಿದ ಬೆಂಕಿ.
ಬಂಟ್ವಾಳ: ರಮೇಶ್ ಎನ್ನುವವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ ಘಟನೆ, ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ನರಿಕೊಂಬಿನ ಬೋರುಗುಡ್ಡೆಯಲ್ಲಿ ನಡೆದಿದೆ. ಮಲಗಿದ್ದ ಮನೆಯ ಸದಸ್ಯರು ಸುಳಿವು ದೊರೆಯುತ್ತಿದ್ದಂತೆ, ಹೊರಬಂದಿದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಬಂಟ್ವಾಳದ ಅಗ್ನಿಶಾಮಕ ದಳದವರು ಬೆಂಕಿಯನ್ನು ಆರಿಸುವ ಕಾರ್ಯವನ್ನು ಎಸಗಿದರೂ ಸಹ, ಆರ್ ಸಿ ಸಿ ಮನೆಯಾಗಿರುವ ಕಾರಣ ಬೆಂಕಿಯು ಎಲ್ಲೆಡೆ ಹಬ್ಬಿ, ವಿದ್ಯುತ್ ಪರಿಕರಗಳು ಮತ್ತು ಇತರ ವಸ್ತುಗಳು ಸಂಪೂರ್ಣವಾಗಿ ಬೂದಿಯಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
• ಬ್ರಹ್ಮಾವರ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ವಾಹನ ಢಿಕ್ಕಿ
ಬ್ರಹ್ಮಾವರ: ವಿಜಯ್ ಎನ್ನುವ ಹಂದಾಡಿ ಗ್ರಾಮದ ವ್ಯಕ್ತಿಯೊಬ್ಬರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ, ಎದುರಿನಿಂದ ಬಂದ ಬೊಲೆರೋ ಗಾಡಿ ಢಿಕ್ಕಿ ಹೊಡೆದಿದೆ. ಅಪಘಾತದಿಂದ ಕಾಲಿಗೆ ಗಾಯವಾಗಿರುವ ವಿಜಯ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಯಲ್ಲಾಪುರ: ಮರ ಬಿದ್ದು ಗರ್ಭಿಣಿ ಮಹಿಳೆ ಮತ್ತು ಮಗಳ ಸಾವು
ಯಲ್ಲಾಪುರ: ಅಂಗನವಾಡಿಯಿಂದ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ, ಮರವೊಂದು ಬಿದ್ದುದರ ಪರಿಣಾಮವಾಗಿ ಗರ್ಭಿಣಿ ಮಹಿಳೆ ಮತ್ತು ಆಕೆಯ ಮಗಳು ಮೃತಪಟ್ಟ ಘಟನೆ ಡೋಮಗೆರೆಯಲ್ಲಿ ನಡೆದಿದೆ. ಸಾವಿತ್ರಿ ಎಂಬ ಗರ್ಭಿಣಿ ಮಹಿಳೆಯು ಮರದ ಮಧ್ಯದಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಮಗಳು ಸ್ವಾತಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಲಾಯಿತಾದರೂ, ಆಸ್ಪತ್ರೆಗೆ ಸಾಗಿಸುವ ಮೊದಲೇ ಮಾರ್ಗಮಧ್ಯದಲ್ಲಿ ಅಸುನೀಗಿದ್ದಾಳೆ. ಈ ಸಂದರ್ಭದಲ್ಲಿ ಶ್ರಾವಣಿ, ಘಾಟು ಲಕ್ಕು, ಶಾಂಬವಿ ಎನ್ನುವ ಮಕ್ಕಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಸಾನವಿ, ವಿನಯ ಮತ್ತು ಅನುಶ್ರೀ ಎನ್ನುವ ಪುಟಾಣಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಸಿಪಿಐ ರಮೇಶ್ ಹಾನಾಪುರ, ಪೊಲೀಸ್ ಸಿಬ್ಬಂದಿಗಳು ಮತ್ತು ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಕ್ಕಳು ಮತ್ತು ಗರ್ಭಿಣಿ ಮಹಿಳೆ ಎಲ್ಲರೂ ಗೌಳಿ ಸಮುದಾಯಕ್ಕೆ ಸೇರಿದವರು ಎನ್ನುವುದು ತಿಳಿದುಬಂದಿದೆ.