ಕರಾವಳಿ ಟಾಪ್ ನ್ಯೂಸ್
• ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಪಘಾತ; ಪಾದಾಚಾರಿ ಸಾವು
• ಮಂಗಳೂರು: ಕೋಮುಗಲಭೆ ಪ್ರಕರಣದ ಬಳಿಕ ನಾಪತ್ತೆಯಾಗಿದ್ದ ಆರೋಪಿಗಳ ಸೆರೆ
• ಉಡುಪಿ: ಆಭರಣ ಅಂಗಡಿಯಲ್ಲಿ ಕಳವು
• ಮೂಡಬಿದರೆ: ಲಾಟರಿ ಹೆಸರಿನಲ್ಲಿ ವಂಚನೆ
• ಬ್ರಹ್ಮಾವರ: ಟ್ಯಾಂಕರ್ ಮತ್ತು ಬೈಕ್ ನಡುವೆ ಅಪಘಾತ; ಬೈಕ್ ಸವಾರನ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಪಾದಾಚಾರಿ ಸಾವು.
ಮೂಲ್ಕಿ: ಕಳೆದೆರಡು ದಿನಗಳ ಹಿಂದೆ ಕಾರು ಢಿಕ್ಕಿ ಹೊಡೆದ ಪರಿಣಾಮವಾಗಿ, ಪಾದಾಚಾರಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಹಳೆಯಂಗಡಿಯ ಮುಬಾರಕ್ ಎಂದು ಗುರುತಿಸಲಾಗಿದ್ದು, ಮಂಗಳೂರು ಕಡೆಗೆ ಹೋಗುವ ಬಸ್ ನಿಲ್ದಾಣದ ಬಳಿ ಬಟ್ಟೆ ಹೊಲಿಯುವ ಅಂಗಡಿಯನ್ನು ಇಟ್ಟುಕೊಂಡಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಕಾರು ಢಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ, ಆಸ್ಪತ್ರೆಗೆ ತಲುಪುವ ಮೊದಲೇ ಮುಬಾರಕ್ ಮೃತಪಟ್ಟರು ಎನ್ನಲಾಗಿದೆ. ಮಂಗಳೂರು ಉತ್ತರ ವಿಭಾಗದ ಟ್ರಾಫಿಕ್ ಪೊಲೀಸರು, ಅಪಘಾತ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿ, ಕಾರು ಚಾಲಕನನ್ನು ಸೆರೆ ಹಿಡಿದಿದ್ದಾರೆ.
• ಮಂಗಳೂರು: ಕೋಮುಗಲಭೆ ಪ್ರಕರಣದ ಬಳಿಕ ನಾಪತ್ತೆಯಾಗಿದ್ದ ಆರೋಪಿಗಳ ಸೆರೆ
ಮಂಗಳೂರು: 1998ರಲ್ಲಿ ಕೋಮುಗಲಭೆ ನಡೆಸಿ, ಗಲಾಟೆ ಎಬ್ಬಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ, ಲೀಲಾಧರ್ ಮತ್ತು ಚಂದ್ರಹಾಸ ಕೇಶವ ಶೆಟ್ಟಿ ನಾಪತ್ತೆಯಾಗಿದ್ದರು. ಇದನ್ನು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಲೀಲಾಧರ್ ಅಂದು ದುಬೈಗೆ ಪರಾರಿಯಾಗಿದ್ದು, ಇತ್ತೀಚಿಗಷ್ಟೇ ಮರಳಿ ಬಂದು, ಪಕ್ಷಿಕೆರೆ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎಂಬ ಮಾಹಿತಿ ಲಭಿಸುತ್ತಿದ್ದಂತೆ, ಪೊಲೀಸರು ಆತನನ್ನು ಸೆರೆಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅದೇ ರೀತಿ ಚಂದ್ರಹಾಸ್ ಕೇಶವ ಶೆಟ್ಟಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶ ನೀಡಿದೆ. ಇಬ್ಬರೂ ತಮ್ಮ 25ನೇ ವಯಸ್ಸಿನಲ್ಲಿ ಮಾಡಿದ ತಪ್ಪಿಗೆ, 50ನೇ ವರ್ಷದಲ್ಲಿ ಕಂಬಿ ಎಣಿಸುವಂತಾಗಿದೆ.
• ಉಡುಪಿ: ಆಭರಣ ಅಂಗಡಿಯಲ್ಲಿ ಕಳುವು
ಉಡುಪಿ: ಚಿತ್ತರಂಜನ್ ವೃತ್ತದ ಬಳಿ ಇರುವ ವೈಭವ್ ರಿಫೈನರ್ ಎಂಬ ಅಂಗಡಿಯಲ್ಲಿ ಕಳ್ಳರು ನಕಲಿ ಬೀಗವನ್ನು ಬಳಸಿ, ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಮಯದಲ್ಲಿ 600ಗ್ರಾಂ ತೂಕದ ಚಿನ್ನದ ಗಟ್ಟಿ ಮತ್ತು ಇತರೆ ಬಂಗಾರದ ದ್ರವ್ಯ ಸೇರಿದಂತೆ, ಹೆಚ್ಚು ಬೆಲೆಬಾಳುವ ವಸ್ತುಗಳನ್ನು ಕಳುವು ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರೇ ಕಳ್ಳತನ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಉಡುಪಿಯ ಡಿವೈಎಸ್ ಪಿ ಪ್ರಭು, ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಅವರು ತನಿಖೆಯನ್ನು ನಡೆಸಿದ್ದಾರೆ.
• ಮೂಡಬಿದರೆ: ಲಾಟರಿ ಹೆಸರಿನಲ್ಲಿ ವಂಚನೆ
ಮೂಡಬಿದರೆ: ಇತ್ತೀಚಿನ ದಿನಗಳಲ್ಲಿ, ಮೂಡಬಿದರೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಲಾಟರಿ ಹೆಸರಿನಲ್ಲಿ ವಂಚನೆಗಳು ನಡೆಯುತ್ತಿದ್ದು, ಹಲವು ಸ್ಥಳೀಯರು ತಮ್ಮ ಹಣವನ್ನು ಕಳೆದುಕೊಂಡ ಸಂಗತಿ ನಿಧಾನವಾಗಿ ಬೆಳಕಿಗೆ ಬರುತ್ತಿದೆ. ಕೇರಳ ಲಾಟರಿ ಎಂಬ ಹೆಸರಿನಲ್ಲಿ ಎಲ್ಲೆಡೆ ತನ್ನ ಬಲೆಯನ್ನು ಬೀಸಿದೆ. “ಮೊಬೈಲ್ ಸಂಖ್ಯೆಗೆ ಮೊದಲಿಗೆ ಯಾವ ನಂಬರ್ ಬೇಕು ಎಂದು ಮೆಸೇಜ್ ಹಾಕುವ ವಂಚಕರು, ಜನರು ಸಂಖ್ಯೆಯನ್ನು ಆರಿಸಿಕೊಂಡ ಬಳಿಕ 40 ರುಪಾಯಿ ಕಟ್ಟಲು ಹೇಳುತ್ತಾರೆ. ನಂತರ ಲಿಂಕ್ ವೊಂದನ್ನು ಕಳುಹಿಸಿ, ಅದರಲ್ಲಿ ಆಯ್ಕೆ ಮಾಡಿದ ಸಂಖ್ಯೆಯನ್ನು ದಾಖಲಿಸಲು ಹೇಳುತ್ತಾರೆ. ಲಾಟರಿ ಸಂಖ್ಯೆ ಗೆದ್ದಿದೆ ಎಂದು ಮೆಸೇಜ್ ಹಾಕಿ, ಮತ್ತೊಮ್ಮೆ ಲಾಟರಿ ಸಂಖ್ಯೆಯನ್ನು ಸ್ಕ್ರೀನ್ ಶಾಟ್ ಮಾಡಿ ಕಳುಹಿಸಲು ತಿಳಿಸುತ್ತಾರೆ. ಪುನಃ ಅಭಿನಂದನೆ ಪ್ರತಿಕ್ರಿಯೆಗಾಗಿ ಎಂಟು ಸಾವಿರ ಹಣವನ್ನು ಕಟ್ಟಲು ತಿಳಿಸುತ್ತಾರೆ. ನಾವು ಎಷ್ಟು ಹಣವನ್ನು ಪಾವತಿಸುತ್ತೇವೋ ಅಷ್ಟನ್ನು ಲಪಟಾಯಿಸಿ ಸಂಪರ್ಕ ಕಡಿತಗೊಳಿಸುತ್ತಾರೆ” ಎಂದು ಹಣವನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.
• ಬ್ರಹ್ಮಾವರ: ಟ್ಯಾಂಕರ್ ಮತ್ತು ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸಾವು
ಬ್ರಹ್ಮಾವರ: ಉಪ್ಪಿನಕೋಟೆ ನಿವಾಸಿ ಸುರೇಶ್ ಎನ್ನುವವರು, ಬ್ರಹ್ಮಾವರ ವರ್ಕ್ ಶಾಪ್ ಎಂಬ ಹೆಸರಿನ ಅಂಗಡಿಯನ್ನು ಹೊಂದಿದ್ದು, ಕೆಲಸದ ನಿಮಿತ್ತ ತಮ್ಮ ಬೈಕ್ ನಲ್ಲಿ ಬ್ರಹ್ಮಾವರಕ್ಕೆ ಹೋಗಿ, ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬಲೈಪಾದೆ ಜಂಕ್ಷನ್ ಬಳಿ ನಡೆದಿದೆ. ಕಟಪಾಡಿ ಕಡೆಯಿಂದ ಉಡುಪಿಯ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ವೊಂದು ಬೈಕ್ ಗೆ ಢಿಕ್ಕಿ ಹೊಡೆದಿದೆ. ಹೊಡೆದ ರಭಸಕ್ಕೆ ಸುರೇಶ್ ಅವರು ಬೈಕ್ ಸಮೇತ ಮುಖ್ಯ ರಸ್ತೆಯಲ್ಲಿ ಬಿದ್ದುದರ ಪರಿಣಾಮವಾಗಿ, ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸುತ್ತಮುತ್ತ ನೆರೆದಿದ್ದ ಜನರು, ಅವರನ್ನು ಆಸ್ಪತ್ರೆಗೆ ಸೇರಿಸುವ ಹೊತ್ತಿಗಾಗಲೇ ಕೊನೆಯುಸಿರೆಳೆದಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.