ಕರಾವಳಿ ಟಾಪ್ ನ್ಯೂಸ್
• ಮಂಗಳೂರು: ಕಂಪನಿಯಲ್ಲಿ ಅಗ್ನಿ ಅವಘಡ
• ಉಡುಪಿ: ಅಕ್ರಮ ಮರಳುಗಾರಿಕೆ ಪ್ರದೇಶದಲ್ಲಿ ಪೊಲೀಸರ ದಾಳಿ
• ಯಲ್ಲಾಪುರ: ವಿಷಕಾರಿ ಹಾವು ಕಚ್ಚಿ ವ್ಯಕ್ತಿ ಸಾವು
• ಕಾರ್ಕಳ: ಬಟ್ಟೆ ಖರೀದಿಸಲು ಐದು ಲಕ್ಷ ಮೌಲ್ಯದ ಅಡಿಕೆ ಕದ್ದ ವಿದ್ಯಾರ್ಥಿಗಳು
• ಸುಳ್ಯ: ಸಾಲ ಬಾಧೆಯಿಂದ ವಿಷ ಸೇವಿಸಿದ ವ್ಯಕ್ತಿ
• ಪುತ್ತೂರು: ಅತ್ತೆ ಮನೆಯಲ್ಲಿ ಅಳಿಯ ಆತ್ಮಹತ್ಯೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಮಂಗಳೂರು ಕಂಪನಿಯಲ್ಲಿ ಅಗ್ನಿ ಅವಘಡ
ಮಂಗಳೂರು: ಆರೋಮಾಜೆನ್ ಸುಗಂಧ ದ್ರವ್ಯ ತಯಾರಿಸುವ ಕಂಪನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ, ಬುಧವಾರ ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ನಡೆದಿದೆ. ಇದರ ಪರಿಣಾಮವಾಗಿ ಅಪಾರ ನಷ್ಟ ಉಂಟಾಗಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸದಿರುವುದು ಸಮಾಧಾನಕರ ಸಂಗತಿಯಾಗಿದೆ. ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಆಗಮಿಸಿದ ಎಂಸಿಎಫ್, ಎನ್ಎಂಪಿಎ ಮತ್ತು ಕದ್ರಿಯ ಅಗ್ನಿಶಾಮಕದಳವು ಬೆಂಕಿಯನ್ನು ಆರಿಸಿದೆ. ಬೆಂಕಿ ಅವಘಡ ಸಂಭವಿಸಲು ಕಾರಣವೇನೆಂಬುದನ್ನು ಪರಿಶೀಲನೆಯ ಮೂಲಕ ತಿಳಿದುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಉಡುಪಿ: ಅಕ್ರಮ ಮರಳುಗಾರಿಕೆ ಪ್ರದೇಶದಲ್ಲಿ ಪೊಲೀಸರ ದಾಳಿ
ಉಡುಪಿ: ಮೂಲ್ಕಿ ಮೂಲದ ಪ್ರಜ್ವಲ್ ಎನ್ನುವ ವ್ಯಕ್ತಿಯು, ಹಿಟಾಚಿ ಬಳಸಿ, ಪಾಪನಾಶಿನಿ ಹೊಳೆಯ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ವಿಚಾರ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ, ಶಿರ್ವ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಒಂದುವರೆ ವರ್ಷದ ಹಿಂದೆ, ವ್ಯಕ್ತಿಯೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದ ಕಾರಣ, ಇಲ್ಲಿ ಮರಳುಗಾರಿಕೆ ಸ್ದಗಿತಗೊಂಡಿತ್ತು. ಆದರೆ, ಮರಳು ಸಾಗಾಟ ಮಾಡುವ ರಸ್ತೆ ಕಾರ್ಕಳ ತಾಲ್ಲೂಕಿನ ಸೂಡ ಗ್ರಾಮಕ್ಕೆ ಸೇರಿರುವುದರಿಂದ, ಕಾರ್ಕಳ ಮತ್ತು ಕಾಪು ತಾಲ್ಲೂಕಿನ ಗಡಿ ಪ್ರದೇಶಗಳು ಅಕ್ರಮ ಮರಳುಗಾರಿಕೆಗೆ ಉತ್ತೇಜನ ನೀಡುತ್ತಿದೆ ಎನ್ನುವ ಸಂಗತಿ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ, ಕಾರ್ಕಳದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಮತ್ತು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಅವರ ಮಾರ್ಗದರ್ಶನದಲ್ಲಿ, ಶಿರ್ವ ಠಾಣಾಧಿಕಾರಿಗಳಾದ ಮಂಜುನಾಥ ಮರಬದ ಅವರ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಿ, ಆರೋಪಿಯನ್ನು ಬಂಧಿಸುವುದರ ಜೊತೆಗೆ, ಪರವಾನಿಗೆ ಪಡೆಯದೆ ಕಳ್ಳತನದಿಂದ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಮರಳನ್ನು ಮತ್ತು ಹಿಟಾಚಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
• ಯಲ್ಲಾಪುರ: ವಿಷಕಾರಿ ಹಾವು ಕಚ್ಚಿ ವ್ಯಕ್ತಿ ಸಾವು
ಯಲ್ಲಾಪುರ: ಮೂಡಬೈಲು ಗ್ರಾಮದ ನಿವಾಸಿ ಮತ್ತು ಬಸ್ ನಿಲ್ದಾಣದ ಚೌಡೇಶ್ವರಿ ದೇವಾಲಯದ ಅರ್ಚಕರಾದ ಶಂಕರ ಭಟ್ಟ ಎನ್ನುವವರು, ತಮ್ಮ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ವಿಷಕಾರಿ ಹಾವು ಕಚ್ಚಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಪಕ್ಕದ ಮನೆಯವರು ಶಂಕರ ಭಟ್ಟರನ್ನು ಆಸ್ಪತ್ರೆಗೆ ಸೇರಿಸಲು ಕರೆತರುವಷ್ಟರಲ್ಲಿ ಮಾರ್ಗ ಮಧ್ಯದಲ್ಲೇ ಮೃತಪಟ್ಟರು ಎನ್ನಲಾಗಿದೆ.
• ಕಾರ್ಕಳ: ಬಟ್ಟೆ ಖರೀದಿಸಲು ಐದು ಲಕ್ಷ ಮೌಲ್ಯದ ಅಡಿಕೆ ಕದ್ದ ವಿದ್ಯಾರ್ಥಿಗಳು
ಕಾರ್ಕಳ: ಕಳೆದ ತಿಂಗಳು ಮುಂಡ್ಕೂರು ತೋಟದ ಮನೆಯಲ್ಲಿ ಅಡಿಕೆ ಕದ್ದ ಹನ್ನೆರಡು ಜನ ಆರೋಪಿಗಳನ್ನು ಪತ್ತೆ ಹಚ್ಚಿ, ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ, ನಿರೀಕ್ಷಕ ಮಂಜಪ್ಪ ಅವರ ನೇತೃತ್ವದಲ್ಲಿ, ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್ಐಗಳಾದ ಪ್ರಸನ್ನ, ಸುಂದರ್, ಎಎಸ್ಐಗಳಾದ ಪ್ರಕಾಶ್, ಸುಂದರ್ ಗೌಡ, ಸಿಬ್ಬಂದಿಗಳಾದ ರುದ್ರೇಶ್, ಚಂದ್ರಶೇಖರ್, ಮಹಾಂತೇಶ್, ಜಿಲ್ಲಾ ಪೊಲೀಸ್ ಕಛೇರಿಯ ಸಿಡಿಆರ್ ಸಿಬ್ಬಂದಿಗಳಾದ ದಿನೇಶ್, ನಿತಿನ್ ಅವರು ಕಾರ್ಯಾಚರಣೆ ನಡೆಸಿದರು. ಅಚ್ಚರಿಯ ಸಂಗತಿ ಎಂದರೆ, ಐದು ಲಕ್ಷದಷ್ಟು ಬೆಲೆ ಬಾಳುವ ಅಡಿಕೆಯನ್ನು ಕಳ್ಳತನ ಮಾಡಿದವರು ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು. ವಿಚಾರಣೆ ನಡೆಸಿದ ಸಂದರ್ಭದಲ್ಲಿ ಬಟ್ಟೆ ಖರೀದಿಸಲು ಮತ್ತು ಮೋಜು ಮಾಡಲು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಕಳ್ಳತನ ಮಾಡಿರುವ ಹನ್ನೆರಡು ಜನ ವಿದ್ಯಾರ್ಥಿಗಳನ್ನು ಬಂಧಿಸಿ, 1100 ಕೆಜಿ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಅಪ್ರಾಪ್ತರಾದ ಆರೋಪಿಗಳನ್ನು ಪೊಲೀಸರು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಿದ್ದಾರೆ.
• ಸುಳ್ಯ: ಸಾಲ ಬಾಧೆಯಿಂದ ವಿಷ ಸೇವಿಸಿದ ವ್ಯಕ್ತಿ
ಸುಳ್ಯ: ಕೆಂಪು ಕಲ್ಲು ಸಾಗಿಸಲೆಂದು ಹೊಸ ಲಾರಿಯೊಂದನ್ನು ಖರೀದಿಸಿದ ವ್ಯಕ್ತಿಯು, ಇದೀಗ ಸರ್ಕಾರ ಕೆಂಪು ಕಲ್ಲು ಸಾಗಾಟವನ್ನು ನಿಷೇಧಿಸಿರುವುದರಿಂದ, ಕೆಲಸವಿಲ್ಲದೆ ಲಾರಿ ಖರೀದಿಗೆ ತೆಗೆದುಕೊಂಡ ಸಾಲವನ್ನು ತೀರಿಸಲಾಗದೆ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ. ಈತನನ್ನು ಎಲಿಮಲೆಯ ಭಾನುಪ್ರಕಾಶ್ ಎಂದು ಗುರುತಿಸಲಾಗಿದ್ದು, ಲಾರಿಗೆ ಬಾಡಿಗೆ ಇಲ್ಲದೆ ಸಾಲದ ಕಂತನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ, ಫೈನಾನ್ಸ್ ಕಂಪನಿಯವರು ಮನೆಗೆ ಬಂದು ಕಿರುಕುಳ ನೀಡುತ್ತಿರುವುದು ಆತ್ಮಹತ್ಯೆಗೆ ಮುಂದಾಗಿರಲು ಕಾರಣವಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ವಿಷಯ ತಿಳಿದ ಕೂಡಲೇ ಪಕ್ಕದ ಮನೆಯವರು ಭಾನುಪ್ರಕಾಶ್ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂಬುದನ್ನು ಚೀಟಿಯಲ್ಲಿ ಬರೆದಿದ್ದು, ಅದು ಅವರ ಮನೆಯವರಿಗೆ ದೊರೆಯಿತು ಎನ್ನಲಾಗಿದೆ.
• ಪುತ್ತೂರು: ಅತ್ತೆ ಮನೆಯಲ್ಲಿ ಅಳಿಯ ಆತ್ಮಹತ್ಯೆ
ಪುತ್ತೂರು: ಕುರಿಯ ನಿವಾಸಿ ಸೂರಜ್ ಎನ್ನುವ ವ್ಯಕ್ತಿಯು ತನ್ನ ಅತ್ತೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಕಳೆದೆರಡು ದಿನಗಳ ಹಿಂದೆ ಕುವೆಟ್ಟು ಗ್ರಾಮದ ಸಮೀಪ ಬದ್ರಕಜೆ ಎನ್ನುವಲ್ಲಿ ನಡೆದಿದೆ. ಸೂರಜ್ ಅವರು 12 ವರ್ಷಗಳ ಹಿಂದೆ ಲೀಲಾವತಿ ಎನ್ನುವವರ ಪುತ್ರಿ ಚಂದ್ರಿಕಾ ಅವರನ್ನು ವಿವಾಹವಾಗಿದ್ದು, ಹನ್ನೊಂದು ಮತ್ತು ನಾಲ್ಕು ವರ್ಷದ ಇಬ್ಬರು ಪುತ್ರರಿದ್ದಾರೆ. ಮೊದಲಿಗೆ ಅತ್ತೆ ಲೀಲಾವತಿ ಅವರಿಗೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ, ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಒಳಗಿನಿಂದ ಬೀಗ ಹಾಕಿಕೊಂಡು, ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅತ್ತೆಯ ಮೇಲೆ ಹಲ್ಲೆ ನಡೆಸಲು ಮತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂಬುದು ತಿಳಿದುಬಂದಿಲ್ಲ.