ಕರಾವಳಿ ಟಾಪ್ ನ್ಯೂಸ್
• ಕುಂದಾಪುರ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
• ಉಡುಪಿ: ಬೇಟೆಗೆಂದು ಹೊಡೆದ ಗುಂಡು ತಾಗಿತು ಮನೆಗೆ
• ಮೂಡಬಿದರೆ: ಫೋಟೋಗ್ರಾಫರ್ ನಿಂದ ಯುವತಿಗೆ ವಂಚನೆ
• ಬಂಟ್ವಾಳ: ಪೊಲೀಸ್ ಇಲಾಖೆಯ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಆರೋಪಿ ಸೆರೆ
• ಮಂಗಳೂರು: ಸ್ಥಳೀಯರು ಮತ್ತು ಗುತ್ತಿಗೆದಾರರ ನಡುವೆ ಹೊಡೆದಾಟ
• ಕಡಬ: ಕೆಲಸವಿಲ್ಲದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಸಿವಿಲ್ ಇಂಜಿನಿಯರ್
• ಪುತ್ತೂರು: ಸರಕಾರಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ 10 ವರ್ಷಗಳ ಬಳಿಕ ಶಿಕ್ಷೆ
•ಕಾಪು: ಸ್ಕೂಟರ್ ಹತ್ತುವಾಗ ಬಿದ್ದು ಮಹಿಳೆ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಕುಂದಾಪುರ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಶರಣಾದ ವ್ಯಕ್ತಿ
ಕುಂದಾಪುರ: ಕಾಳವರ ಸೇತುವೆಯ ಕೆಳಗಡೆ ರೈಲಿಗೆ ತಲೆಕೊಟ್ಟು, ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಾಹಿತಿ ಲಭಿಸುತ್ತಿದ್ದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಲಕ್ಷ್ಮಣ್ ಪೂಜಾರಿ, ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ, ಆರ್ ಪಿ ಎಫ್ ಸಿಬ್ಬಂದಿಯಾದ ಸುಧೀರ್ ಶೆಟ್ಟಿ ಅವರು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆಯ ಮೂಲಕ ಕಾನೂನು ಪ್ರಕ್ರಿಯೆ ನಡೆಸಿದರು. ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಸ್ಥಳೀಯರ ನೆರವಿನೊಂದಿಗೆ ಮೃತದೇಹವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
• ಉಡುಪಿ: ಬೇಟೆಗೆಂದು ಹೊಡೆದ ಗುಂಡು ತಾಗಿತು ಮನೆಗೆ
ಉಡುಪಿ: ಸೆಪ್ಟೆಂಬರ್ ಒಂದರಂದು ಬೇಟೆಗೆಂದು ತೆರಳಿದ ವ್ಯಕ್ತಿಗಳಿಬ್ಬರು ಹಾರಿಸಿದ ಗುಂಡು, ಕಣಜಾರು ಗ್ರಾಮದ ಗುರುರಾಜ್ ಎನ್ನುವವರ ಮನೆಯ ಬಾಗಿಲು ಮತ್ತು ಕಾರಿನ ಗಾಜಿಗೆ ತಾಗಿದ್ದು, ಆರೋಪಿಗಳು ನಾಪತ್ತೆಯಾಗಿದ್ದರು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ಅವರ ಮಾರ್ಗದರ್ಶನದಲ್ಲಿ, ಹಿರಿಯಡ್ಕ ಉಪನಿರೀಕ್ಷಕರಾದ ಪುನೀತ್ ಕುಮಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿದರು. ಆರೋಪಿಗಳನ್ನು ಕುದಿ ಗ್ರಾಮದ ಪ್ರದೀಪ ಮತ್ತು ಹಿರಿಯಡ್ಕದ ಗುಡ್ಡೆಯಂಗಡಿಯ ಮನೋಜ್ ಎಂದು ಗುರುತಿಸಲಾಗಿದೆ. ಬಂಧಿಸುವ ಸಮಯದಲ್ಲಿ ಅವರ ಬಳಿಯಿದ್ದ ಪರವಾನಿಗೆರಹಿತ ತೋಟೆಕೋವಿ, ಏಳು ತೋಟೆಗಳು ಮತ್ತು 40,000 ರೂಪಾಯಿ ಮೌಲ್ಯದ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ.
• ಮೂಡಬಿದರೆ: ಫೋಟೋಗ್ರಾಫರ್ ನಿಂದ ಯುವತಿಗೆ ವಂಚನೆ
ಮೂಡಬಿದರೆ: ಇನ್ಸ್ಟಾಗ್ರಾಮ್ ನಲ್ಲಿ ಸಲುಗೆ ಬೆಳೆಸಿಕೊಂಡು, ಯುವತಿಯೊಬ್ಬಳನ್ನು ಸಂಕೇತ್ ಗಾಣಿಗ ಎನ್ನುವ ಫೋಟೋಗ್ರಾಫರ್ ಒಬ್ಬರು ವಂಚಿಸಿದ ಘಟನೆ ನಡೆದಿದೆ. ಉಪ್ಪಿನಂಗಡಿ ಮೂಲದ ಫೋಟೋಗ್ರಾಫರ್, ಕಲ್ಲಬೆಟ್ಟಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಯುವತಿಗೆ ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿ, ಬಳಿಕ ಜಾತಿಯ ನೆಪವೊಡ್ಡಿ ಮದುವೆಗೆ ನಿರಾಕರಿಸಲಾಯಿತು ಎನ್ನುವುದು ಯುವತಿಯ ದೂರಿನಿಂದ ತಿಳಿದುಬಂದಿದೆ. ಪೊಲೀಸ್ ನಿರೀಕ್ಷಕರಾದ ಸಂದೇಶ್ ಅವರು ಯುವತಿಯು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
• ಬಂಟ್ವಾಳ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ತಿಳಿದುಕೊಳ್ಳದೆ, ಪೊಲೀಸ್ ಇಲಾಖೆಯ ವಿರುದ್ಧ ಸುಳ್ಳು ಸುದ್ಧಿ ಹಬ್ಬಿಸಿದ್ದ ರಿಯಾಜ್ ಎನ್ನುವ ವ್ಯಕ್ತಿಯ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಕಳೆದ ತಿಂಗಳು ತನ್ನ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂದು ಸುಳ್ಳು ದೂರನ್ನು ನೀಡಿದ್ದ ಉಮ್ಮರ್ ಫಾರೂಕ್ ವಿರುದ್ಧ ಪೊಲೀಸರು ಕ್ರಮವನ್ನು ಕೈಗೊಂಡಿದ್ದರು. ಇದನ್ನು ವಿರೋಧಿಸಿ ಅಶ್ರಫ್ ಎನ್ನುವಾತ ಪೊಲೀಸರ ಮೇಲೆ ಸಾರ್ವಜನಿಕರಿಗೆ ಅನುಮಾನ ಮೂಡುವಂತೆ ಸುಳ್ಳು ಸುದ್ದಿಯೊಂದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ. ಹೀಗಾಗಿ ಪೊಲೀಸರು ಆತನ ವಿರುದ್ಧವೂ ಕ್ರಮವನ್ನು ಕೈಗೊಂಡಿದ್ದರು. ಇವುಗಳ ಪೂರ್ವಾಪರ ತಿಳಿಯದ ರಿಯಾಜ್ ಎರಡು ಘಟನೆಗೆ ಸಂಬಂಧಿಸಿದಂತೆ ತಳುಕು ಹಾಕಿ, ಕೋಮುಗಲಭೆಗೆ ಪ್ರಚೋದನೆ ನೀಡುವಂತಹ, ಜಾತಿ ಧರ್ಮದ ಆಧಾರದ ಮೇಲೆ ದ್ವೇಷ ಮೂಡಿಸುವಂತಹ ಪ್ರಯತ್ನವನ್ನು ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಿಯಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
• ಮಂಗಳೂರು: ಸ್ಥಳೀಯರು ಮತ್ತು ಗುತ್ತಿಗೆದಾರರ ನಡುವೆ ಹೊಡೆದಾಟ
ಮಂಗಳೂರು: ಮಂಗಳವಾರದಂದು ಹೊಂಡಕ್ಕೆ ಬಿದ್ದು, ಮಾಧವಿ ಎನ್ನುವ ಮಹಿಳೆಯು ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ, ಕೂಳೂರು ಮೇಲ್ಸೇತುವೆಯಲ್ಲಿದ್ದ ಕೊಟ್ಟಾರ ಚೌಕಿ ಬಳಿಯ ಹೊಂಡವನ್ನು ಮುಚ್ಚಲು ಗುತ್ತಿಗೆದಾರರ ಮೂಲಕ ಹೆದ್ದಾರಿ ಪ್ರಾಧಿಕಾರವು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಗುತ್ತಿಗೆದಾರರ ನಡುವೆ ಹೊಡೆದಾಟ ನಡೆದಿದೆ. ಈಗಾಗಲೇ ಮಹಿಳೆಯ ಸಾವಿನಿಂದ ತತ್ತರಿಸಿ ಹೋದ ಸಾರ್ವಜನಿಕರು, ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ, ಒಂದು ಜೀವವನ್ನು ಬಲಿ ಕೊಟ್ಟ ನಂತರ ಈ ಕೆಲಸಕ್ಕೆ ಕೈಹಾಕಿರುವುದನ್ನು ವಿರೋಧಿಸಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದೆ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಸ್ಥಳೀಯರು ಮತ್ತು ಗುತ್ತಿಗೆದಾರರನ್ನು ಠಾಣೆಗೆ ಕರೆಸಿಕೊಂಡು, ವಿಚಾರಣೆ ನಡೆಸಿದ್ದಾರೆ. ಬಳಿಕ ಎನ್ ಸಿ ಆರ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಯಿತು.
• ಕಡಬ: ಕೆಲಸವಿಲ್ಲದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಸಿವಿಲ್ ಇಂಜಿನಿಯರ್
ಕಡಬ: ಸುಜಯ್ ಎಂಬ ಯುವಕನು ಸಿವಿಲ್ ಇಂಜಿನಿಯರ್ ಆಗಿದ್ದು, ಸರಿಯಾದ ಕೆಲಸವಿಲ್ಲದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಐತ್ತೂರು ಗ್ರಾಮದಲ್ಲಿ ನಡೆದಿದೆ. ವಿದ್ಯಾಭ್ಯಾಸದ ಬಳಿಕ ಬೆಂಗಳೂರು ಮತ್ತು ಹಾಸನಗಳಲ್ಲಿ ಆರು ತಿಂಗಳ ಕಾಲ ಕಾರ್ಯನಿರ್ವಹಿಸಿದ್ದ. ಆದರೆ ಜೀವನ ನಿರ್ವಹಣೆಗೆ ಸಂಬಳ ಸಾಕಾಗುವುದಿಲ್ಲವೆಂದು, ಕೆಲಸವನ್ನು ತೊರೆದು ಮರಳಿ ಊರಿಗೆ ಬಂದು, ಕೃಷಿ ಕೆಲಸ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದ. ಆದರೆ ಅದರಿಂದಲೂ ತೃಪ್ತನಾಗದ ಸುಜಯ್ ಮನನೊಂದು, ಕಳೆದೆರಡು ದಿನಗಳ ಹಿಂದೆ, ಮನೆಯಲ್ಲಿ ಯಾರು ಇಲ್ಲದ ವೇಳೆ ರಾತ್ರಿ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸುಜಯ್ ಅವರ ತಂದೆ ಸುಂದರ್ ಗೌಡ ಅವರು ನೀಡಿದ ಹೇಳಿಕೆಯ ಆಧಾರದ ಮೇಲೆ, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
• ಪುತ್ತೂರು: ಸರಕಾರಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ 10 ವರ್ಷಗಳ ಬಳಿಕ ಶಿಕ್ಷೆ
ಪುತ್ತೂರು: 2015ರಲ್ಲಿ ಅಳಿಕೆ ಮಾರ್ಗವಾಗಿ ಸಾಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಮುರ ಎಂಬಲ್ಲಿಗೆ ತಲುಪುತ್ತಿದ್ದಂತೆ, ಬೈಕ್ ನಲ್ಲಿ ಬಂದ ಮೊಹಮ್ಮದ್ ಇರ್ಫಾನ್, ತೋಹಮನ್ ಎಂಬ ಇಬ್ಬರು ವ್ಯಕ್ತಿಗಳು ಬಸ್ ಅನ್ನು ಅಡ್ಡಗಟ್ಟಿ ನಿಲ್ಲಿಸಿ, ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಬಸ್ಸಿನ ಕನ್ನಡಿಯನ್ನು ಪುಡಿ ಮಾಡಿ 200 ರೂಪಾಯಿ ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಅಂದಿನ ತನಿಖಾಧಿಕಾರಿಗಳಾಗಿದ್ದ ಅಬ್ದುಲ್ ಅವರು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ ಅವರು ಆರೋಪಿಗಳ ಮೇಲಿನ ಪ್ರಕರಣ ಸಾಬೀತುಗೊಂಡ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ವಿಧಿಸಿದ್ದಾರೆ.
• ಕಾಪು: ಸ್ಕೂಟರ್ ಹತ್ತುವಾಗ ಬಿದ್ದು ಮಹಿಳೆ ಸಾವು
ಕಾಪು: ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಬೇಬಿ ಶೆಟ್ಟಿ ಎನ್ನುವ ಮಹಿಳೆಯು ಸ್ಕೂಟರ್ ಹತ್ತುವ ವೇಳೆ, ಆಯಾ ತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಕಟಪಾಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಸೋಮವಾರದಂದು ಮಧುಮೇಹ ಮತ್ತು ರಕ್ತದೊತ್ತಡದಲ್ಲಿ ಏರುಪೇರು ಉಂಟಾದ ಕಾರಣ, ನೆರೆಮನೆಯವರೊಂದಿಗೆ ಸ್ಕೂಟರ್ ನಲ್ಲಿ ಕಟಪಾಡಿ ಆಸ್ಪತ್ರೆಗೆ ತಪಾಸಣೆಗೆ ಹೊರಟ ಸಂದರ್ಭದಲ್ಲಿ ಈ ರೀತಿಯ ಪರಿಸ್ಥಿತಿ ಎದುರಾಗಿದೆ. ರಸ್ತೆಗೆ ಬಿದ್ದಿದ್ದರಿಂದ ತಲೆ ಮತ್ತು ಮುಖದ ಭಾಗದಲ್ಲಿ ಗಂಭೀರ ಗಾಯ ಉಂಟಾಗಿತ್ತು. ಕೂಡಲೇ ಅವರನ್ನು ಸ್ಥಳೀಯರು ಉಡುಪಿಯ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಗೆ ಕರೆತರಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಮೃತಪಟ್ಟರು ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.