ಕರಾವಳಿ ಟಾಪ್ ನ್ಯೂಸ್
ಬೈಕ್ ಮೇಲೆ ಹಾರಿದ ಕಡವೆ ಜೀವ ತೆಗೆಯಿತು!
* ಕಡವೆಯೂ ಸಾವು… ಮತ್ತೊಬ್ಬನಿಗೆ ಗಾಯ: ಕಮಲಶಿಲೆ ಬಳಿ ಘಟನೆ
• ಬೈಂದೂರು: ಸ್ನೇಹಿತರ ಜಗಳ ಕೊಲೆಯೊಂದಿಗೆ ಅಂತ್ಯ
• ಕಾರ್ಕಳ : ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಬಾಲಕ ಲಾಕ್
• ಸುಳ್ಯ: ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ
• ಬಂಟ್ವಾಳ: ಕೆಂಪುಕಲ್ಲು ಗಣಿಗಾರಿಕೆ; ಪ್ರಕರಣ ದಾಖಲು
• ಮಂಗಳೂರು: ಉದ್ಯೋಗ ಅರಸಿ ಹೋದ ಮಹಿಳೆ ನಾಪತ್ತೆ
• ಕಾಪು: ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ಬೈಕ್ ಮೇಲೆ ಹಾರಿದ ಕಡವೆ ಬೈಕ್ ಸವಾರನ ಜೀವ ತೆಗೆದಿದ್ದಲ್ಲದೆ ಕಡವೆಯೂ ಮೃತಪಟ್ಟ ಘಟನೆ ಕಮಲಶಿಲೆ ಬಳಿ ಘಟನೆ ನಡೆದಿದೆ.
ದ್ವಿಚಕ್ರವಾಹನದಲ್ಲಿ ಸ್ನೇಹಿತರಿಬ್ಬರು ಕಮಲಶಿಲೆ ದೇವಾಲಯದಿಂದ, ಮರಳಿ ತಮ್ಮ ಊರಾದ ನೆಲ್ಲಿಕಟ್ಟೆಗೆ ಬರುತ್ತಿದ್ದ ಸಂದರ್ಭದಲ್ಲಿ, ಕಡವೆಯೊಂದು ಅಡ್ಡ ಬಂದು ಬೈಕ್ ನಿಯಂತ್ರಣ ತಪ್ಪಿದ ಪರಿಣಾಮವಾಗಿ, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಮಲಶಿಲೆ ಸಮೀಪದ ತಾರೆಕುಡ್ಲುವಿನಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಶ್ರೇಯಸ್ ಮೊಗವೀರ್ ಎಂದು ಗುರುತಿಸಲಾಗಿದೆ. ಅವರೊಂದಿಗೆ ಇದ್ದ ವಿಘ್ನೇಶ್ ಎನ್ನುವ ಸಹಸವಾರನಿಗೆ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
• ಬೈಂದೂರು: ಸ್ನೇಹಿತರ ಜಗಳ ಕೊಲೆಯೊಂದಿಗೆ ಅಂತ್ಯ
ಬೈಂದೂರು: ಬಿನೋ ಫಿಲಿಪ್ ಮತ್ತು ಉದಯ್ ಎಂಬ ಇಬ್ಬರು ವ್ಯಕ್ತಿಗಳು, ಕಳೆದ ಎರಡು ವರ್ಷಗಳಿಂದ ಥೋಮಸ್ ಎನ್ನುವವರಿಗೆ ಸೇರಿದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಕಲಹ ಉಂಟಾಗಿ, ಅದು ಕೊಲೆಯಲ್ಲಿ ಸಮಾಪ್ತಿಯಾದ ಘಟನೆ, ಯಡ್ತರೆ ಗ್ರಾಮದ ದೇವರಗದ್ದೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಇಬ್ಬರು ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಆಗ ಉದಯ್ ಕೇರಳ ಮೂಲದ ಬಿನೋ ಫಿಲಿಪ್ ನನ್ನು ಕೊಲೆ ಮಾಡಿದ್ದಾನೆ. ಮದ್ಯಪಾನದ ಮತ್ತಿನಲ್ಲಿ ಇಬ್ಬರ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು ಎನ್ನುವುದು ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಬೈಂದೂರು ಠಾಣೆಯ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಕುಲಕರ್ಣಿ ಅವರು ಪರಿಶೀಲನೆ ನಡೆಸಿದರು. ಕೊಲೆಗೆ ಸಂಬಂಧಿಸಿದಂತೆ ತನಿಖೆಯನ್ನು ಮುಂದುವರಿಸಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಕಾರ್ಕಳ: ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಬಾಲಕ ಲಾಕ್
ಕಾರ್ಕಳ: ಹರ್ಷವರ್ಧನ್ ಎಂಬ ಎರಡು ವರ್ಷದ ಬಾಲಕ ಪೊಲೀಸ್ ಕ್ವಾರ್ಟರ್ಸ್ ನ ಮನೆಯೊಳಗೆ ಸಿಲುಕಿಕೊಂಡ ಘಟನೆ, ಕಾರ್ಕಳದ ಪೊಲೀಸ್ ಕ್ವಾರ್ಟರ್ಸ್ ನ ಸಿ ಬ್ಲಾಕ್ ನಲ್ಲಿ ಭಾನುವಾರ ನಡೆದಿದೆ. ಮಗು ಆಟವಾಡಿಕೊಂಡು ಮನೆಯೊಳಗೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಗಿಲು ಲಾಕ್ ಆಗಿದ್ದು, ಪೋಷಕರು ಆತಂಕಗೊಂಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ತಕ್ಷಣ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಲೀಡಿಂಗ್ ಫೈರ್ ಮನ್ ಅಚ್ಯುತ್ ಕರ್ಕೇರ, ಲೀಡಿಂಗ್ ಫೈರ್ ಮನ್ ಹರಿಪ್ರಸಾದ್, ಜಯಮೂಲ್ಯ, ದಿನೇಶ್ ಹಾಗೂ ಬಸವರಾಜ್ ಅವರ ತಂಡ ಕಾರ್ಯಾಚರಣೆ ನಡೆಸಿ, ಮೇಲ್ಚಾವಣಿಯಿಂದ ಹಗ್ಗದ ಸಹಾಯದಿಂದ ಜಾರಿಕೊಂಡು ಹಿಂಬದಿಯ ಬಾಲ್ಕನಿಗೆ ಇಳಿದು, ಬಾಗಿಲನ್ನು ತೆರೆದಿದ್ದಾರೆ. ಕೇವಲ ಹದಿನೈದು ನಿಮಿಷಗಳ ಒಳಗಾಗಿ, ಮಗುವನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
• ಸುಳ್ಯ: ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ
ಸುಳ್ಯ: ರಾಧಾಕೃಷ್ಣ ಎನ್ನುವವರಿಗೆ ಸೇರಿದ್ದ ರಬ್ಬರ್ ಸ್ಮೋಕ್ ಹೌಸ್ ಗೆ, ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಭಾನುವಾರ ನಸುಕಿನ ಜಾವ ಅರಂತೋಡು ಗ್ರಾಮದ ಪಿಂಡಿಮನೆ ಎಂಬಲ್ಲಿ ನಡೆದಿದೆ. ಸುಳ್ಯ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿಯಾದ ಕಿರಣ್ ಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದರು. ಆದರೂ ಸುಮಾರು ಒಂದು ಲಕ್ಷ ಮೌಲ್ಯದ ಅಡಿಕೆ ಮತ್ತು ರಬ್ಬರ್ ಶೀಟುಗಳು ಸುಟ್ಟು ಬೂದಿಯಾಗಿದೆ ಎಂದು ಅಂದಾಜಿಸಲಾಗಿದೆ.
• ಬಂಟ್ವಾಳ: ಪರವಾನಿಗೆರಹಿತ ಕಲ್ಲು ಮಾರಾಟ; ಪ್ರಕರಣ ದಾಖಲು
ಬಂಟ್ವಾಳ: ಪರವಾನಿಗೆ ರಹಿತವಾಗಿ ಕಲ್ಲು ಗಣಿಗಾರಿಕೆಯನ್ನು ನಡೆಸುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪಿಎಸ್ಐ ಆದ ಮಂಜುನಾಥ್ ಅವರು ಸಿಬ್ಬಂದಿಗಳೊಡನೆ ದಾಳಿ ನಡೆಸಿದ ಘಟನೆ ನಾವೂರು ಗ್ರಾಮದ ಮಲೆಕೋಡಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ, ಇಬ್ಬರು ವ್ಯಕ್ತಿಗಳು ಯಂತ್ರದ ಸಹಾಯದಿಂದ ಕೆಂಪು ಕಲ್ಲನ್ನು ಕತ್ತರಿಸುತ್ತಿದ್ದು, ಮತ್ತೊಬ್ಬ ವ್ಯಕ್ತಿ ಲಾರಿಗೆ ತುಂಬಿಸುತ್ತಿರುವುದು ಕಂಡು ಬಂದಿದೆ. ಪೊಲೀಸರು ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಂಪು ಕಲ್ಲು ಸಾಗಾಟ ಮಾಡಲು ಸಿದ್ಧಪಡಿಸಿದ್ದ ಲಾರಿಗೂ ಪರವಾನಿಗೆ ಇರಲಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಮಂಗಳೂರು: ಉದ್ಯೋಗ ಅರಸಿ ಹೋದ ಮಹಿಳೆ ನಾಪತ್ತೆ.
ಮಂಗಳೂರು: ಉದ್ಯೋಗಕ್ಕಾಗಿ ಹಂಬಲಿಸುತ್ತಿದ್ದ ಅಶ್ವಿನಿ ಎಂಬ ಮಹಿಳೆಯು, ಸಂದರ್ಶನ ಇರುವುದಾಗಿ ಪತಿಗೆ ತಿಳಿಸಿ ಹೋದವರು, ಮನೆಗೆ ಮರಳಿ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಅಶ್ವಿನಿ ಅವರು ತಮ್ಮ ಪತಿಯ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ, ಶುಭ ಎನ್ನುವವರ ಪರಿಚಯದ ವ್ಯಕ್ತಿಯಾದ ನಿತ್ಯಾಧರ ಅಲಿಯಾಸ್ ವಿನು ಎನ್ನುವವರಿಗೆ ಕೆಲಸದ ವಿಚಾರಕ್ಕಾಗಿ ತಮ್ಮ ವೈಯಕ್ತಿಕ ವಿವರಗಳನ್ನು ನೀಡಿದ್ದರು. ಬಳಿಕ ಕೆಲಸದ ಸಂದರ್ಶನಕ್ಕಾಗಿ ಕೆಲವು ಕಡೆ ನಿತ್ಯಾಧರ್ ಅವರೊಂದಿಗೆ ತೆರಳಿದ್ದರು. ಹತ್ತನೇ ತಾರೀಖಿನಂದು ಅದೇ ರೀತಿ ಸಂದರ್ಶನಕ್ಕಾಗಿ ಆತನೊಂದಿಗೆ ಕಾರಿನಲ್ಲಿ ಅಶ್ವಿನಿ ಹೋಗಿರುವುದನ್ನು ಪತಿ ನೋಡಿದ್ದರು. ಅಂದು ಸಂಜೆ ಮನೆಗೆ ಮರಳಿದ್ದರು. ಆದರೆ ಮರುದಿನ ಮತ್ತೊಂದು ಕಡೆ ಸಂದರ್ಶನಕ್ಕಾಗಿ ಆತನೊಂದಿಗೆ ತೆರಳಿದವರು, ಮರಳಿ ಮನೆಗೆ ಬರಲಿಲ್ಲ. ಅಶ್ವಿನಿ ಅವರ ಪತಿ ಬಹುಶಃ ಆಕೆ ನಿತ್ಯಾಧರ್ ಅವರೊಂದಿಗೆ ತೆರಳಿರಬಹುದು ಎಂದು ಪೊಲೀಸರ ಬಳಿ ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ.
• ಕಾಪು : ಬೈಕ್ ಮತ್ತು ಕಾರಿನ ನಡುವೆ ಢಿಕ್ಕಿ
ಕಾಪು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾಜೇಶ್ ಎನ್ನುವ ವ್ಯಕ್ತಿಯು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮೇಲ್ಸೇತುವೆಯ ಬಳಿ ಅಪಘಾತ ಸಂಭವಿಸಿದೆ. ರಾಜೇಶ್ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಹಿಂದಿನಿಂದ ಬಂದ ಕಾರೊಂದು ಢಿಕ್ಕಿ ಹೊಡೆದುದರ ಪರಿಣಾಮವಾಗಿ, ರಾಜೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಮೊದಲಿಗೆ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಗೆ ಕಳುಹಿಸಲಾಯಿತು ಎನ್ನಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
