Categories
Uncategorized

ಮಲ್ನಾಡ್ ಟಾಪ್ 4 ನ್ಯೂಸ್ ಹುಂಚ : ಎರಡು ಕಾಡುಕೋಣಗಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ..!!

ಮಲ್ನಾಡ್ ಟಾಪ್ 4 ನ್ಯೂಸ್

ಹುಂಚ : ಎರಡು ಕಾಡುಕೋಣಗಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ..!!
– ಸೊರಬ: ಮೀನು ಹಿಡಿಯಲು ಹೋಗಿ ಕಾಲು ಜಾರಿ ನದಿಗೆ ಬಿದ್ದು ಸಾವು..!!
– ಸಾಗರ: ಕೊಟ್ಟಿಗೆಗೆ ದರಗು ತರಲು ಕಾಡಿಗೆ ಹೋದಾಗ ಕಾಡು ಹಂದಿ ದಾಳಿ..!!
– ಹೊಸನಗರ: ಹೊಳೆ ದಾಟುವಾಗ ತೆಪ್ಪ ಮಗುಚಿ ಯುವಕ ಸಾವು..!!

NAMMUR EXPRESS NEWS
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸರ್ವೆ ನಂಬರ 52 /2 ರ ರಾಮಪ್ಪ ಬಿನ್ ಮರಿಯಪ್ಪ ಎಂಬುವವರ ಅಡಿಕೆ ತೋಟದ ಹೊಂಡವೊಂದರಲ್ಲಿ ಎರಡು ಕಾಡುಕೋಣಗಳ ಮೃತದೇಹ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಕಾಡುಕೋಣ ಮೃತಪಟ್ಟು ನಾಲ್ಕೈದು ದಿನಗಳಾಗಿರಬಹುದು ಎನ್ನಲಾಗುತಿದ್ದು , ವಿಷಪ್ರಾಶನ ಮಾಡಿದ್ದರಿಂದ ಕಾಡುಕೋಣಗಳು ಮೃತಪಟ್ಟಿರಬಹುದು ಎನ್ನಲಾಗುತಿದ್ದು ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ಸಾವಿನ ನಿಖರವಾದ ಕಾರಣ ತಿಳಿದುಬರಲಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳ ಪ್ರಕಾರ ಕಾಡುಕೋಣಗಳು ಮೇವನ್ನು ಅರಸಿ ತೋಟಕ್ಕೆ ಬಂದು ನೀರು ಕುಡಿಯಲು 20 ಅಡಿ ಆಳವಿರುವ ಹೊಂಡದಲ್ಲಿ ನೀರಿಗಾಗಿ ಇಳಿದು ಮೇಲಕ್ಕೆ ಏಳಲು ಆಗದೇ ಮುಳುಗಿ‌ ಮೃತಪಟ್ಟಿರಬಹುದು ಎಂದು ಹೇಳುತಿದ್ದು ಮರಣೋತ್ತರ ಪರೀಕ್ಷೆಯ ನಂತರ ನೈಜ ಸತ್ಯ ಹೊರಬೀಳಲಿದೆ.

– ಸೊರಬ: ಮೀನು ಹಿಡಿಯಲು ಹೋಗಿ ಕಾಲು ಜಾರಿ ನದಿಗೆ ಬಿದ್ದು ಸಾವು..!!

ಸೊರಬ: ದಂಡಾವತಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಪಟ್ಟಣದ ಕಾನುಕೇರಿ ಗ್ರಾಮದ ಕುಮಾರ್(40) ಎಂಬುವವರು ಕಾಲು ಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನೀರಿನಲ್ಲಿ ಮುಳುಗಿದ ಕುಮಾರ್‌ ಅವರನ್ನು ಜನರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆಗಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಸಾಗರ: ಕೊಟ್ಟಿಗೆಗೆ ದರಗು ತರಲು ಕಾಡಿಗೆ ಹೋದಾಗ ಕಾಡು ಹಂದಿ ದಾಳಿ..!!

ಸಾಗರ: ತಾಲೂಕಿನ ಬಾರಂಗಿ ಹೋಬಳಿಯ ಕಾನೂರು ಗ್ರಾಮದಲ್ಲಿ ಕೃಷಿಕ ರಾಮಪ್ಪ ಜಟ್ಟನಾಯಕ (60) ಎಂಬುವವರ ಮೇಲೆ ಕಾಡು ಹಂದಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಕೊಟ್ಟಿಗೆಗೆ ದರಗು ತರಲು ಕಾಡಿಗೆ ತೆರಳಿದ್ದಾಗ ಹಂದಿಯು ನಾಯಿ ಮೇಲೆ ದಾಳಿಗೆ ಯತ್ನಿಸಿದೆ. ನಾಯಿ ಓಡಿ ಹೋಗುತ್ತಿದ್ದಂತೆ ರಾಮಪ್ಪ ಅವರ ಮೇಲೆ ಎರಗಿ, ಹೊಟ್ಟೆಗೆ ತಿವಿದು, ಕಚ್ಚಿ ಗಾಯಗೊಳಿಸಿದೆ. ಸ್ಥಳೀಯರು ಅವರನ್ನು ರಕ್ಷಿಸಿ ಸಾಗರ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ

– ಹೊಸನಗರ: ಹೊಳೆ ದಾಟುವಾಗ ತೆಪ್ಪ ಮಗುಚಿ ಯುವಕ ಸಾವು..!!

ಹೊಸನಗರ: ಹೊಳೆ ದಾಟುವಾಗ ತೆಪ್ಪ ಮಗುಚಿ ಯುವಕ ಸಾವನ್ನಪ್ಪಿದ ಘಟನೆ ಹೊಸನಗರದ ಹೊಸೂರು ಗ್ರಾಪಂ ವ್ಯಾಪ್ತಿಯ ಬಂಟೋಡಿ ಎಂಬಲ್ಲಿ ನಡೆದಿದೆ. ಮೃತನನ್ನು ಪೂರ್ಣೇಶ್ (22) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಜೊತೆಯಲ್ಲಿದ್ದ ಶರತ್ ಮತ್ತು ರಂಜನ್ ಎಂಬ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಳುಗು ತಜ್ಞ ಈಶ್ವ‌ರ್ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪೂರ್ಣೇಶ್ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಮುಳುಗು ತಜ್ಞ ಈಶ್ವರ್ ಮಲ್ಪೆ, 40 ಅಡಿ ಆಳದ ನೀರಿನಲ್ಲಿ ಈ ಯುವಕನ ಮೃತದೇಹ ದೊರೆತಿದೆ. ದೋಣಿ ತೆಪ್ಪದಲ್ಲಿ ಸಾಗುವಾಗ ಲೈಫ್ ಜಾಕೆಟ್ ಇಟ್ಟುಕೊಳ್ಳುವಂತೆ ಅವರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.