ಕರಾವಳಿ ಟಾಪ್ ನ್ಯೂಸ್
ಮಂಗಳೂರಲ್ಲಿ ಭಾರೀ ದುರಂತ!
* ಅಮೋನಿಯಾ ಸೋರಿಕೆಯಿಂದ 25 ಮಂದಿ ಕಾರ್ಮಿಕರು ಅಸ್ವಸ್ಥ
* ಬಂಟ್ವಾಳ: ನಾಪತ್ತೆಯಾಗಿದ್ದ ಯುವಕ, ನದಿಯಲ್ಲಿ ಶವವಾಗಿ ಪತ್ತೆ.
* ಪುತ್ತೂರು: ಕೋರ್ಟ್ ಆದೇಶ ಉಲ್ಲಂಘಿನೆ: ಆರೋಪಿ ಅರೆಸ್ಟ್
* ಬೆಳ್ತಂಗಡಿ: ಎಸ್ಐ ಹೆದರಿಕೆ; ಹೊಸ ತಿರುವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಬೈಕಂಪಾಡಿಯ ಮೀನು ಸಂಸ್ಕರಣ ಘಟಕದಲ್ಲಿ ಅಮೋನಿಯಾ ಸೋರಿಕೆಯಾದ ಹಿನ್ನೆಲೆಯಲ್ಲಿ, ಇಪ್ಪತ್ತೈದಕ್ಕೂ ಹೆಚ್ಚು ಜನ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಪೈಪ್ ಲೈನ್ ಗೆ ಹಾನಿಯುಂಟಾದ ಪರಿಣಾಮವಾಗಿ, ಗುರುವಾರ ನಡೆದ ಈ ದುರಂತದಲ್ಲಿ ಕಾರ್ಮಿಕರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರು ಸಾಮಾನ್ಯ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಬ್ಬರು ಐಸಿಯುನಲ್ಲಿದ್ದರು. ಉಳಿದ ನಾಲ್ವರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನಿಬ್ಬರು ಬಿಡುಗಡೆಗೊಳ್ಳಲಿದ್ದಾರೆ ಎಂದು ಕಾರ್ಖಾನೆಯ ಬಾಯ್ಲರ್ಸ್ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಉಳಿದ ಕಾರ್ಮಿಕರ ಸಂಗತಿ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸರಿಯಾದ ವರದಿ ತಿಳಿದುಬಂದ ನಂತರ ಕಾರ್ಖಾನೆಯ ಕಾಯ್ದೆಯ ಪ್ರಕಾರ ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
* ಬಂಟ್ವಾಳ: ನಾಪತ್ತೆಯಾಗಿದ್ದ ಯುವಕ, ನದಿಯಲ್ಲಿ ಶವವಾಗಿ ಪತ್ತೆ
ಬಂಟ್ವಾಳ: ಕಳೆದ ಕೆಲವು ದಿನಗಳ ಹಿಂದೆ, ಕೆಲಸಕ್ಕೆ ತೆರಳಿದ್ದ ಯುವಕ ಹೇಮಂತ್ ಮರಳಿ ಮನೆಗೆ ಬಂದಿರಲಿಲ್ಲ. ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಬಳಿ ಆತನ ಸ್ಕೂಟರ್ ಮತ್ತು ಮೊಬೈಲ್ ಪತ್ತೆಯಾಗಿದ್ದರ ಹಿನ್ನೆಲೆಯಲ್ಲಿ, ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ನೀರಿನಲ್ಲಿ ಶೋಧನಾ ಕಾರ್ಯ ನಡೆಸಿದ್ದರು. ಆದರೂ ಯಾವುದೇ ಸುಳಿವು ದೊರೆತಿರಲಿಲ್ಲ. ನಿನ್ನೆಯ ದಿನ ಕಂಕನಾಡಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿರುವ ಬಜಾಜ್ ಮುಗೇರು ಎನ್ನುವಲ್ಲಿ, ನೇತ್ರಾವತಿ ನದಿಯ ಮಧ್ಯಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಹೇಮಂತ್ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನಗಳಿಂದಲೂ ಶೋಧನಾ ಕಾರ್ಯ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಹೀಗಾಗಿ ತುಂಬೆ ಅಣೆಕಟ್ಟಿನ ಕೆಳಭಾಗದಲ್ಲಿ ಮೂರು ತಂಡಗಳನ್ನು ಒಳಗೊಂಡು, ಡ್ರೋನ್ ಮೂಲಕ ಶೋಧನೆಯನ್ನು ಮುಂದುವರಿಸಲಾಯಿತು. ಸಂಜೆಯ ವೇಳೆ ತೇಲಾಡುತ್ತಿರುವ ಮೃತದೇಹ ಡ್ರೋನ್ ನಲ್ಲಿ ಪತ್ತೆಯಾಗಿದ್ದು, ಶವವನ್ನು ಮೇಲಕ್ಕೆ ತರಲಾಯಿತು ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.
* ಪುತ್ತೂರು: ನ್ಯಾಯಾಲಯದ ನಿಯಮ ಉಲ್ಲಂಘಿಸಿದ ಆರೋಪಿಯ ಬಂಧನ
ಪುತ್ತೂರು: ಸೋಮವಾರಪೇಟೆ ಮೂಲದ ಹನೀಫ್ ಎಂಬ ಆರೋಪಿಯು 2018ರಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡ ಬಳಿಕ, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ 35/ 2001, ಕಾಲಂ 379 ಹಾಗೂ 34 ಭಾರತೀಯ ದಂಡ ಸಂಹಿತೆ ಪ್ರಕರಣ ದಾಖಲಾಗಿತ್ತು. ಹನೀಫ್ ನನ್ನು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು, ಈತನ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಕಾಲಂ 269 ಪ್ರಕರಣವನ್ನು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಹನೀಫ್ ನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
* ಬೆಳ್ತಂಗಡಿ: ಎಸ್ಐ ಹೆದರಿಕೆ; ಹೊಸ ತಿರುವು
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಗೊಂಡಿರುವ ವಿಶೇಷ ತನಿಖಾ ದಳದಲ್ಲಿರುವ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಗೌಡ ಅವರು, ಅನಾಮಿಕನಿಗೆ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ವಕೀಲರು ವಿಶೇಷ ತನಿಖಾ ದಳದ ಮುಖ್ಯಸ್ಥರಾದ ಪ್ರಣಬ್ ಮೊಹಾಂತಿ ಅವರಿಗೆ ದೂರು ನೀಡಿದ್ದಾರೆ. ಹೀಗಾಗಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಗೌಡ ಅವರನ್ನು ವಿಶೇಷ ತನಿಖಾ ದಳದಿಂದ ಬಿಡುಗಡೆಗೊಳಿಸುವಂತೆ ವಕೀಲರು ಮನವಿ ಮಾಡಿಕೊಂಡಿದ್ದಾರೆ ಎನ್ನುವ ಸಂಗತಿ ಮೂಲಗಳಿಂದ ತಿಳಿದುಬಂದಿದೆ.