Categories
ಕರಾವಳಿ

ಕರಾವಳಿ ದೇಶದಲ್ಲೇ ಅತ್ಯುತ್ತಮ ಹೆಲ್ತ್ ಹಬ್!

ಕರಾವಳಿ ದೇಶದಲ್ಲೇ ಅತ್ಯುತ್ತಮ ಹೆಲ್ತ್ ಹಬ್!
* ಹತ್ತಾರು ಬಹುದೊಡ್ಡ ಆಸ್ಪತ್ರೆಗಳೊಂದಿಗೆ ಕರ್ನಾಟಕದಲ್ಲೇ ಟಾಪ್
* ವೈದ್ಯಕೀಯ ಕ್ಷೇತ್ರದಲ್ಲಿ ದೇಶ ವಿದೇಶದಲ್ಲಿ ಹೆಸರುವಾಸಿ

ದಕ್ಷಿಣ ಕನ್ನಡ ಇರಲಿ ಅಥವಾ ಉಡುಪಿ ಜಿಲ್ಲೆ ಇರಲಿ.
ಕರಾವಳಿ ಭಾಗದ ವೈದ್ಯ ಸೇವೆ ಹಾಗೂ ಇಲ್ಲಿರುವ ಆಸ್ಪತ್ರೆಗಳ ಗುಣಮಟ್ಟ ಹಾಗೂ ನುರಿತ ಪರಿಣತ ವೈದ್ಯರ ತಂಡ ದೇಶ- ವಿದೇಶಗಳ ಗಮನಸೆಳೆದಿವೆ. ಈ ಕಾರಣದಿಂದಲೇ ಮಣಿಪಾಲ, ಮಂಗಳೂರು ನಗರ ಸೇರಿದಂತೆ ಕರಾವಳಿ ಭಾಗವು ಇತ್ತೀಚಿನ ದಿನಗಳಲ್ಲಿ ಹೆಲ್ತ್ ಟೂರಿಸಂನಿಂದಲೂ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಇಲ್ಲಿನ ಆಸ್ಪತ್ರೆಗಳು ಕರ್ನಾಟಕ ಸೇರಿ ದೇಶದ ವಿವಿಧಕಡೆ ತಮ್ಮ ಶಾಖೆ ತೆರೆಯುತ್ತಿವೆ.

ದೇಶದ ಎಲ್ಲೆಡೆ ಮಣಿಪಾಲ ಆಸ್ಪತ್ರೆ ಸೇವೆ

ಮಣಿಪಾಲ್‌ ಆಸ್ಪತ್ರೆ ಅಂದರೆ ಸಾಕು ತಕ್ಷಣಕ್ಕೆ ನೆನಪಿಗೆ ಬರುವುದು ಮಣಿಪಾಲ. ಮಣಿಪಾಲ ಆಸ್ಪತ್ರೆ ಸಮೂಹವು ಮಂಗಳೂರು, ಉಡುಪಿ ಅಥವಾ ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿಲ್ಲ. ಬದಲಿಗೆ ದೇಶದಲ್ಲೆಡೆ ಮಣಿಪಾಲ ಆಸ್ಪತ್ರೆಯು ಗುರುತಿಸಿಕೊಂಡಿದ್ದು, ದೇಶದ ಅತಿದೊಡ್ಡ ನೆಟ್ವರ್ಕ್‌ಗಳನ್ನು ಹೊಂದಿರುವ ಆಸ್ಪತ್ರೆಗಳ ಸಾಲಿನಲ್ಲಿ ಮಣಿಪಾಲ ಹಾಸ್ಪಿಟಲ್ಸ್ ಅಂಡ್ ಗ್ರೂಪ್ಸ್ ಕೂಡ ಸೇರಿದೆ.

ಯೆನೋಪೊಯಾ ಆಸ್ಪತ್ರೆಯೂ ಅತೀ ದೊಡ್ಡ ಆಸ್ಪತ್ರೆ

ಮಣಿಪಾಲ ಆಸ್ಪತ್ರೆ ಹೊರತಾಗಿ, ಯೆನೋಪೊಯಾ ಆಸ್ಪತ್ರೆ ಕೂಡ ಮಂಗಳೂರು ಅಥವಾ ಕರಾವಳಿ ಭಾಗದ ಅತಿದೊಡ್ಡ ಆಸ್ಪತ್ರೆಗಳ ಸಾಲಿನಲ್ಲಿ ಸೇರಿದ್ದು, ಬಹಳ ದೊಡ್ಡ ವೈದ್ಯ ಕಾಲೇಜು ಆಗಿಯೂ ಗುರುತಿಸಿಕೊಂಡಿದೆ. ಈ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿದ್ದು, ದೇಶ-ವಿದೇಶಗಳಿಂದ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುತ್ತಿದ್ದಾರೆ.

ಬಡವರ ಪಾಲಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸರೆ

ಬಡವರ ಪಾಲಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆಯನ್ನು ಖಾಸಗಿ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಆಸ್ಪತ್ರೆ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ. ಈ ಆಸ್ಪತ್ರೆಯು ಮಂಗಳೂರಿನ ಅತಿದೊಡ್ಡ ಖಾಸಗಿ ಆಸ್ಪತ್ರೆಗಳ ಪೈಕಿ ಒಂದಾಗಿದ್ದು, ವೈದ್ಯ ಕಾಲೇಜನ್ನು ಕೂಡ ಹೊಂದಿದೆ. ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ವಿಶೇಷ ಕಾರ್ಡ್ ಮಾಡಿಸುವ ಮೂಲಕ ಚಿಕಿತ್ಸೆಯಲ್ಲಿ ರಿಯಾಯಿತಿ ನೀಡುವ ವ್ಯವಸ್ಥೆ
ಇದೆ. ಈ ಆಸ್ಪತ್ರೆಗೆ ಹೆಚ್ಚಾಗಿ ಕೇರಳ ಭಾಗದಿಂದ ರೋಗಿಗಳು ಬರುತ್ತಾರೆ.

ಎ.ಜೆ ಕರಾವಳಿಯ ದೊಡ್ಡ ಆಸ್ಪತ್ರೆ

ಮಂಗಳೂರಿನಲ್ಲಿ ಹೆಸರು ಪಡೆದು ಕೊಂಡಿರುವ ಆಸ್ಪತ್ರೆ ಎ.ಜೆ ಹಾಸ್ಪಿಟಲ್. 2001ರಲ್ಲಿ ಸುಮಾರು 30 ಎಕರೆ ಜಾಗದಲ್ಲಿ ಸ್ಥಾಪನೆಗೊಂಡ ಈ ಆಸ್ಪತ್ರೆ ಅತ್ಯಂತ ಕಡಿಮೆ ಅವಧಿಯಲ್ಲಿ ಕರಾವಳಿಯ ಬಹುದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿ ಗುರುತಿಸಿ ಕೊಂಡಿದೆ.

ನರ ರೋಗಕ್ಕೆ ಹೆಸರುವಾಸಿ ಫಸ್ಟ್ ನ್ಯೂರೋ!

ಕೇವಲ ನರರೋಗಳಿಗೆ ಸಂಬಂಧಿಸಿದಂತೆ ಕರಾವಳಿ ಭಾಗದ ಅತಿದೊಡ್ಡ ಆಸ್ಪತ್ರೆ ಮಂಗಳೂರಿನ ಪಡೀಲ್ ಸಮೀಪವಿರುವ ಫಸ್ಟ್ ನ್ಯೂರೋ ಆಸ್ಪತ್ರೆ. ಈ ಆಸ್ಪತ್ರೆಯಲ್ಲಿ ಮೂರ್ಚೆರೋಗದಿಂದ ಹಿಡಿದು ಶಿಶುಗಳವರೆಗೆ ಎಲ್ಲ ವಯೋಮಾನದವರ ನ್ಯೂರೋ ಸಮಸ್ಯೆಗಳಿಗೆ ಇಲ್ಲಿ ವಿಶ್ವದರ್ಜೆಯ ಚಿಕಿತ್ಸಾ ವ್ಯವಸ್ಥೆಗಳಿವೆ. ಈ ಆಸ್ಪತ್ರೆಗಳ ಹೊರತಾಗಿ ಮಂಗಳೂರಿನಲ್ಲಿ ಸಿಟಿ ಆಸ್ಪತ್ರೆ, ಆರ್ಥೋಗೆ ಸಂಬಂಧಿಸಿದಂತೆ ತೇಜಸ್ವಿನಿ ಆಸ್ಪತ್ರೆ, ಮುಕ್ಕಾದ ಶ್ರೀನಿವಾಸ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು, ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆ ಹೀಗೆ ಇನ್ನೂ ಹತ್ತಾರು ಅತ್ಯುತ್ತಮ ಆಸ್ಪತ್ರೆಗಳು ಮಂಗಳೂರಿನಲ್ಲಿವೆ. ಜನಪ್ರಿಯ, ಆದರ್ಶ, ಹೈಟೆಕ್, ಮಿಯೋ ಸೇರಿ ಅನೇಕ ಆಸ್ಪತ್ರೆಗಳು ಟಾಪ್ ಪಟ್ಟಿಯಲ್ಲಿವೆ.

ಖಾಸಗಿ ಆಸ್ಪತ್ರೆ ಮೀರಿಸಿದ ವೆನ್‌ಲಾಕ್ ಸರ್ಕಾರಿ ಆಸ್ಪತ್ರೆ!

ಖಾಸಗಿ ಆಸ್ಪತ್ರೆಗಳ ಬಗ್ಗೆ ಹೇಳಬೇಕಾದರೆ, ಮಂಗಳೂರಿನಲ್ಲಿರುವ ಅತ್ಯಂತ ಹಳೆಯ ವೆನ್‌ಲಾಕ್ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಹೇಳಲೇ ಬೇಕು. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳು ಅಂದಾಗ ಅಲ್ಲಿ ಸರಿಯಾದ ವೈದ್ಯ ಸೌಲಭ್ಯಗಳು ಇರುವುದಿಲ್ಲ. ಆದರೆ, ವೆನ್‌ಲಾಕ್ ಆಸ್ಪತ್ರೆಯು ಯಾವುದೇ ಖಾಸಗಿ ಆಸ್ಪತ್ರೆಗಳನ್ನು ಮೀರಿಸುವ ರೀತಿಯ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದೆ. ಈ ಕಾರಣದಿಂದಲೇ ಈ ಜಿಲ್ಲಾ ಆಸ್ಪತ್ರೆಗೆ ಮಲೆನಾಡು ಸೇರಿದಂತೆ ಸುಮಾರು 8 ರಿಂದ 10 ಜಿಲ್ಲೆಗಳಿಂದ ದಿನನಿತ್ಯ ನೂರಾರು ರೋಗಿಗಳು ಬಂದು ಉಚಿತ ಚಿಕಿತ್ಸೆ ಪಡೆದುಕೊಂಡು ಹೋಗುತ್ತಿದ್ದಾರೆ.

ಉಡುಪಿಯಲ್ಲೂ ಈಗ ಆಸ್ಪತ್ರೆ ಫೇಮಸ್!

ಉಡುಪಿಯಲ್ಲಿ ಮಣಿಪಾಲ್ ಆಸ್ಪತ್ರೆ ಸೇರಿ ಆದರ್ಶ ಹಾಸ್ಪಿಟಲ್, ಡಾ. ಟಿ.ಎಂ.ಎ ಪೈ ಹಾಸ್ಪಿಟಲ್, ಹೈಟೆಕ್‌ ಹಾಸ್ಪಿಟಲ್ ಸೇರಿ ಕರಾವಳಿಯು ವಿಶ್ವದರ್ಜೆ ಚಿಕಿತ್ಸಾ ಸೌಲಭ್ಯಗಳೊಂದಿಗೆ ಕರ್ನಾಟಕದ ಹೆಲ್ತ್ ಹಬ್ ಆಗಿ ಗುರುತಿಸಿಕೊಂಡಿದೆ. ಜಿಲ್ಲಾ ಕೇಂದ್ರ ಮಾತ್ರವಲ್ಲದೆ ಈಗ ತಾಲೂಕು ಕೇಂದ್ರಗಳಲ್ಲೂ ಆಸ್ಪತ್ರೆಗಳು, ಉತ್ತಮ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.