Categories
ತೀರ್ಥಹಳ್ಳಿ

ಮಲೆನಾಡು ಜನರ ನಂಬಿಕೆ ಹಬ್ಬ ದೊಂಬರ ಹಬ್ಬ.

ಮಲೆನಾಡು ಜನರ ನಂಬಿಕೆ ಹಬ್ಬ ದೊಂಬರ ಹಬ್ಬ.

*ದೊಂಬರ ಹಬ್ಬದ ವಿಶೇಷತೆ ನಿಮಗೆ ಗೊತ್ತಾ.?
*ಈ ಹಬ್ಬದ ಮೇಲೆ ಮಲೆನಾಡಿಗರಿಗೆ ಯಾಕೆ ಇಷ್ಟೊಂದು ಭಕ್ತಿ !
ವಿಶೇಷ ವರದಿ : ಉಮೇಶ್ ದೇಮ್ಲಾಪುರ
NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರೇಕಲ್ಲಹಳ್ಳಿ (ಕಲ್ಲಳ್ಳಿ) ಅಲ್ಲಿ ನಡೆಯುವ ದೊಂಬರ ಹಬ್ಬ.
ವಿಶೇಷವಾಗಿ ಮಲೆನಾಡಿನಲ್ಲಿಯೇ ಅನಾದಿಕಾಲದಿಂದಲೂ ನಡೆದು ಬಂದ ಈ ಹಬ್ಬದ ಹಿನ್ನೆಲೆ ಏನೆಂದರೆ. ಊರಿನಲ್ಲಿ ಬರಗಾಲ, ಕ್ಷಾಮ, ರೋಗ ರುಜಿನಗಳು, ಪ್ರಕೃತಿ ವಿಕೋಪ, ಮಳೆ ಬೆಳೆ ನಾಶ, ಪ್ರಾಣಿ ಪಕ್ಷಿಗಳ ಅಕಾಲಿಕ ಸಾವು ನೋವುಗಳನ್ನು ಕಂಡು. ಊರ ಕಾಯುವ ರಾಜನಂತೆ ಇದ್ದ ಕುಮಾರ ರಾಮನಿಗೆ ಸ್ಥಳೀಯ ಜನರು ಸಂಕಲ್ಪ ಮಾಡಿ ಬೇಡಿಕೆಯನಿಟ್ಟರು. ಸಕಲವೂ ಸಮೃದ್ಧಿಯಾಗಿ ರೋಗರುಜನೆಗಳು ದೂರವಾದರೆ ನಿನಗೆ ಹಬ್ಬವನ್ನು ಮಾಡುತ್ತೇವೆ ಎಂದು ಬೇಡಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಸಕಲವು ಸಮೃದ್ಧಿಯಾಗಿ ಎಲೆಮರೆಕಾಯಿಯಂತೆ ಇದ್ದ ಗ್ರಾಮ ಹಾಗೂ ಅಕ್ಕಪಕ್ಕದ ಊರುಗಳು ಸಮೃದ್ಧಿ ಆಗುತ್ತಾ ಬಂದವು.
ಈ ದೊಂಬರ ಹಬ್ಬಕ್ಕೆ 400 ರಿಂದ 500 ವರ್ಷಗಳ ಇತಿಹಾಸವಿದೆ. ಹಿರೇಕಲ್ಲಹಳ್ಳಿ ಗ್ರಾಮದಲ್ಲಿ ಸುಮಾರು 50ರಿಂದ 55 ಶಕ್ತಿಯುತ ದೇವರುಗಳನ್ನು ಹೊಂದಿರುವ ಗ್ರಾಮವಾಗಿದೆ, ದೊಂಬರ ಹಬ್ಬದಲ್ಲಿ ಪ್ರಧಾನದೇವರಾಗಿ ಕುಮಾರರಾಮ, ಶೀಲವಂತ ಚೌಡಿ, ಯಕ್ಷಿ, ಕುಣಿಚೌಡಿ, ದೇವರುಗಳಾಗಿ ಪೂಜಿಸಲಾಗುತ್ತದೆ. ಮೊದಲಿಗೆ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡಿ ವೀರೇಂದ್ರ ಹೆಗ್ಗಡೆ ಅವರ ಅನುಮತಿ ಪಡೆದು ಹಬ್ಬವನ್ನು ಆಚರಿಸುತ್ತಾರೆ. ದೊಂಬರ ಹಬ್ಬದ ಹಿಂದಿನ ದಿನ ಶೀಲವಂತ ಚೌಡಿಗೆ ವೇದೋಕ್ತ ಸಂಸ್ಕೃತ ಪಾಂಡಿತ್ಯ ಹೊಂದಿರುವ ಐನೋರರಿಂದ ಪೂಜಾ ವಿಧಿ ವಿಧಾನಗಳನ್ನು ನಡೆಸುತ್ತಾರೆ.
ಮೂರು ದಿನಗಳ ದೊಂಬರ ಹಬ್ಬ ಏಪ್ರಿಲ್ 4 ರಿಂದ 6 ರ ವರೆಗೆ ನಡೆಯಲಿದೆ. ದೊಂಬರು ಹಬ್ಬದ ಮೊದಲನೇ ದಿನ ಹರೆ. ಎರಡನೇ ದಿನ ಕುಮಾರನ ರಾಮನ ಹಬ್ಬ. ಮೂರನೇ ದಿನ ಮನೆ ದುಂಬುವುದು. ಹರೆಯ ದಿನ ಹೊಳೆಯಲ್ಲಿ ಮುಳುಗೆದ್ದು. ದೇವರ ವಸ್ತುಗಳಾದ ದೇವರ ಕಂಚಿನ ಮೂರ್ತಿ, ಕಂಚಿನ ಕಳಸ, ಬೆತ್ತ, ಚ್ವಾಣ ಗಳಾದ ಕಂಚಿನ ಕುದುರೆ ಮೇಲೆ ಕುಳಿತ ರಾಜ, ಒಂಟಿ ಕೊಂಬಿನ ಸಿಂಧೂ ನಾಗರಿಕತೆಯ ನಂದಿ, ಕುಮಾರನಮನ ಮುಖವಾಡಗಳನ್ನು ಶುದ್ಧಗೊಳಿಸಿ ಕಳಸಕ್ಕೆ ಬಂಗಲಿ ಹೂ ಮತ್ತು ಕಣಗಲೆ ಹೂ ಬೆಳ್ಳಿಯ ಛತ್ರಿ ಬೆಳ್ಳಿಯ ಗಿರಿ ಇನ್ನೂ ಹಲವಾರು ವಸ್ತುಗಳಿಂದ ಎರಡು ಕಳಸವನ್ನ ಅಲಂಕರಿಸುತ್ತಾರೆ. ಕಳಸವು ಸುಮಾರು 20 ರಿಂದ 25 ಕೆಜಿಗಳಷ್ಟು ತೂಕವಿರುತ್ತದೆ. ಇದನ್ನು ದೇವರ ಪಾತ್ರಿ ಗಳು ರಾತ್ರಿ ಇಡಿ ತಲೆ ಮೇಲೆ ಹೊತ್ತು ಡೊಳ್ಳು ಹಾಗೂ ನಾದಸ್ವರ ಮತ್ತು ಜನರು ಆಲ್ಡ್ರೋ ಆಲ್ಡ್ರೋ ಎಂದು ಕೂಗುವ ಶಬ್ದಕ್ಕೆ ದೇವರುಗಳು ನರ್ತನ ಮಾಡುತ್ತವೆ. ಮಧ್ಯ ಮಧ್ಯದಲ್ಲಿ ದೇವವೇಶ್ಯೆಯರು ಕಾಲಿಗೆ ಗೆಜ್ಜೆ ಕಟ್ಟಿ ದೇವರ ಗುಣಗಾನ ಮಾಡುತ್ತಾ ನಿಂತಲ್ಲಿಯೇ ನರ್ತನ ಮಾಡುತ್ತಾರೆ. ಈ ರೀತಿ ಮೂರು ದಿನ ಹಬ್ಬವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ಗ್ರಾಮದಿಂದ ಬೇರೆ ಗ್ರಾಮಕ್ಕೆ ವಲಸೆ ಹೋಗಿ ಜೀವನ ಮಾಡುತ್ತಿರುವ ಹಲವು ಕುಟುಂಬಗಳು ಈ ಹಬ್ಬದಲ್ಲಿ ಭಾಗಿಯಾಗುತ್ತಾರೆ. ತವರು ಮನೆ ಯಿಂದ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು ತಮ್ಮ ತವರು ಸುಖವಾಗಿರಲಿ ಎಂದು ಊರಿನ ದೇವರಲ್ಲಿ ಪ್ರಾರ್ಥನೆ ಇಟ್ಟು ಈ ಹಬ್ಬದಲ್ಲಿ ಭಾಗಿಯಾಗುತ್ತಾರೆ.5,000 ಕ್ಕೂ ಹೆಚ್ಚೇ ಜನರು ಇದನ್ನು ನೋಡಲು ವಿವಿಧ ಗ್ರಾಮಗಳಿಂದ ಜನರು ಬರುತ್ತಾರೆ.
ಇದಾದ 8 ರಿಂದ 10 ದಿನಗಳ ಬಳಿಕ ಊರಿನ ಸಮಸ್ತ ದೇವತೆಗಳಿಗೆ ಹಾಗೂ ದೇವಗಣಗಳಿಗೆ ಹಣ್ಣು,ಕಾಯಿ,ಹೂವು, ಹಾಲು, ತಾಂಬೂಲ, ಕುರಿ, ಕೋಳಿಗಳನ್ನು ಬಲಿಕೊಡುವುದು ಊರನ್ನು ಸಮೃದ್ಧಿಗೊಳಿಸು ದೇವಾ ಎಂದು ಹವಿಸ್ಸು ಅರ್ಪಿಸುತ್ತಾರೆ. ಗಣ ಪಾತ್ರಿ ಗಳು ಪದ್ಮನಾಭ. (ಕುಮಾರರಾಮ). ಯೋಗೇಂದ್ರ(ಶೀಲವಂತ ಚೌಡಿ). ಷಣ್ಮುಖ (ಯಕ್ಷಿ). ಪವನ (ಕುಣಿಚೌಡಿ). ಮುಖಂಡರು. ಹೆಚ್ ಈ ಸತ್ಯನಾರಾಯಣ. ಕೃಷ್ಣಮೂರ್ತಿ. ಹೆಚ್ ಎಂ ಜಗದೀಶ್.
ಕರಾವಳಿ ಭಾಗದಲ್ಲಿ ಕೋಲಾ, ಬೆಂಗಳೂರು ಭಾಗದಲ್ಲಿ ಕರಗ, ಉತ್ತರ ಕರ್ನಾಟಕ ಭಾಗದಲ್ಲಿ ವೀರಭದ್ರನ ಅವತಾರವಾದ ವೀರಗಾಸೆ ಹೇಗೋ ಮಲೆನಾಡಿನ ಭಾಗದಲ್ಲಿ ದೊಂಬರ ಹಬ್ಬ ಪ್ರಮುಖವಾಗಿರುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.