ಕರಾವಳಿ ಟಾಪ್ ನ್ಯೂಸ್
ತಿಮರೋಡಿ ಅರೆಸ್ಟ್: ಕಾರ್ಕಳದಲ್ಲಿ ಗಲಾಟೆ!
• ಪುತ್ತೂರು: ದೂರು ಹಿಂಪಡೆಯುವಂತೆ ಬೆದರಿಕೆ
• ಸುಳ್ಯ: ಖಾಸಗಿ ಬಸ್ ನಿರ್ವಾಹಕನ ಮೇಲೆ ಹಲ್ಲೆ
• ಬಂಟ್ವಾಳ: ಬಾವಿಯಲ್ಲಿ ಮೃತದೇಹ
• ಬೈಂದೂರು: ಚಾಕಲೇಟ್ ನೀಡಿ ಚಿನ್ನಾಭರಣ ಕಳುವು
• ಕಾರ್ಕಳ: ತಿಮರೋಡಿ ಬೆಂಬಲಿಗರಿಂದ ಎಸ್ ಪಿ ಕಾರ್ ಮೇಲೆ ದಾಳಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಪುತ್ತೂರು: ದೂರು ಹಿಂಪಡೆಯುವಂತೆ ಬೆದರಿಕೆ
ಪುತ್ತೂರು: ಕಲ್ಲಾರೆಯಲ್ಲಿ ಆರೋಪಿಗಳಾದ ರೇಷ್ಮಾ ಮೇರಿ ರೆಬೆಲ್ಲೊ ಮತ್ತು ಅವರ ಪತಿ ಕ್ಲಮೆಂಟ್ ಪಿಂಟೋ ತಮ್ಮ ವಿರುದ್ಧ ದೂರು ನೀಡಿದ ಗುರುಪ್ರಸಾದ್ ಎನ್ನುವವರ ಮನೆಗೆ ತೆರಳಿ, ದೂರನ್ನು ಹಿಂಪಡೆಯುವಂತೆ ಅವರಿಗೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗುರುಪ್ರಸಾದ್ ಅವರು ಪುತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗುರುಪ್ರಸಾದ್ ಅವರ ದೂರು ಮತ್ತು ಮಾಹಿತಿಯ ಆಧಾರದ ಮೇಲೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಕಾಲಂ 329 (3), 352, 351 (2) ಹಾಗೂ 3(5) ಬಿಎನ್ಎಸ್ 2023 (74/2025) ರ ಅನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
• ಸುಳ್ಯ: ಖಾಸಗಿ ಬಸ್ ನಿರ್ವಾಹಕನ ಮೇಲೆ ಹಲ್ಲೆ
ಸುಳ್ಯ: ನಂದಕಿಶೋರ್ ಎಂಬ ವ್ಯಕ್ತಿಯು ಬಂದಡ್ಕ ಸುಳ್ಯ ಖಾಸಗಿ ಬಸ್ ನಲ್ಲಿ ನಿರ್ವಾಹಕರಾಗಿದ್ದು, ಕಳೆದೆರಡು ದಿನಗಳ ಹಿಂದೆ ಸುಳ್ಯಕ್ಕೆ ಬಂದ ಸಂದರ್ಭದಲ್ಲಿ ನಾಗರಜ್ ಮತ್ತು ಇನ್ನಿಬ್ಬರು ವ್ಯಕ್ತಿಗಳು ಪಿಕಪ್ ವಾಹನವನ್ನು ಅಡ್ಡಗಟ್ಟಿ, ಬಸ್ ಅನ್ನು ನಿಲ್ಲಿಸಿ, ಕಾರ್ಯನಿರ್ವಹಿಸುತ್ತಿದ್ದ ನಂದಕಿಶೋರ್ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. ನಂದಕಿಶೋರ್ ಅವರ ಅಂಗಿಯ ಕತ್ತಿನಪಟ್ಟಿಯನ್ನು ಹಿಡಿದು, ಅವಾಚ್ಯ ಶಬ್ದಗಳಿಂದ ಬೈದು, ಬಸ್ ನಿಂದ ಕೆಳಗೆ ಹಾಕಿ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ.
• ಬಂಟ್ವಾಳ: ಬಾವಿಯಲ್ಲಿ ಮೃತದೇಹ
ಬಂಟ್ವಾಳ: ಪುಣಚ ಗ್ರಾಮದ ನಾರಾಯಣ ಪೂಜಾರಿ ಎನ್ನುವ ಸಹೋದರನ ಮನೆಯಲ್ಲಿ ವಾಸವಾಗಿದ್ದ, ತಿಮ್ಮಪ್ಪ ಪೂಜಾರಿ ಎಂಬ ವ್ಯಕ್ತಿಯು ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಕಳೆದೆರಡು ದಿನಗಳ ಹಿಂದೆ ಮನೆಯಿಂದ ತೆರಳಿದ್ದ ತಿಮ್ಮಪ್ಪ ಅವರು ಎಷ್ಟು ಗಂಟೆಗಳು ಕಳೆದರೂ ಹಿಂತಿರುಗಿ ಬರಲಿಲ್ಲ. ಆಗ ನಾರಾಯಣ ಪೂಜಾರಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ, ಪಕ್ಕದ ಮನೆಯವರು ಬಾವಿಯಲ್ಲಿ ಮೃತದೇಹ ಕಂಡುಬಂದಿರುವ ಕುರಿತು ಮಾಹಿತಿ ನೀಡಿದ್ದಾರೆ. ಮಾಹಿತಿಯ ಆಧಾರದ ಮೇಲೆ ಪರಿಶೀಲನೆ ನಡೆಸಲು ಹೋದಾಗ, ನಾರಾಯಣ ಪೂಜಾರಿ ಅವರು ಅದು ತಮ್ಮ ಸಹೋದರ ತಿಮ್ಮಪ್ಪ ಪೂಜಾರಿ ಅವರದೇ ಮೃತದೇಹ ಎಂಬುದನ್ನು ಗುರುತಿಸಿದ್ದಾರೆ.
• ಬೈಂದೂರು: ಚಾಕಲೇಟ್ ನೀಡಿ ಚಿನ್ನಾಭರಣ ಕಳುವು
ಬೈಂದೂರು: ಹರೀಶ್ ಎನ್ನುವವರು ರೈಲಿನಲ್ಲಿ ಕಾರವಾರದಿಂದ ಮಂಗಳೂರಿನತ್ತ ತೆರಳುತ್ತಿದ್ದ ಸಮಯದಲ್ಲಿ, ವ್ಯಕ್ತಿಯೊಬ್ಬ ಹರೀಶ್ ಅವರಿಗೆ ಮತ್ತಿನ ಅಂಶವುಳ್ಳ ಚಾಕಲೇಟ್ ಅನ್ನು ನೀಡಿ, ಕಳ್ಳತನ ಮಾಡಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯು ಭಟ್ಕಳದಿಂದ ಆಗಮಿಸಿದ್ದು, ಹರೀಶ್ ಅವರಲ್ಲಿ ತನ್ನ ಪರಿಚಯ ಮಾಡಿಕೊಂಡು, ಸ್ನೇಹಪೂರ್ವಕ ಎನ್ನುವಂತೆ ಚಾಕಲೇಟ್ ಅನ್ನು ನೀಡಿದ್ದಾನೆ. ಅದನ್ನು ತಿಂದ ಹರೀಶ್ ನಿದ್ದೆಗೆ ಜಾರಿದ್ದಾರೆ. ಬೆಳಿಗ್ಗೆ ಎದ್ದು ನೋಡಿದಾಗ ತಮ್ಮಲ್ಲಿದ್ದ ಹಣ ಮತ್ತು ಚಿನ್ನಾಭರಣ ಕಳುವಾಗಿರುವುದು ಬೆಳಕಿಗೆ ಬಂದಿದೆ. 2,35,000 ಬೆಲೆಬಾಳುವ ಕುತ್ತಿಗೆಯಲ್ಲಿದ್ದ 28 ಗ್ರಾಂ ತೂಕದ ಸರ, 70,000 ಬೆಲೆಬಾಳುವ 8 ಗ್ರಾಂ ತೂಕದ ಉಂಗುರ, 3500 ಫಾಸ್ಟ್ ಟ್ರ್ಯಾಕ್ ವಾಚ್, 28,000 ಮೌಲ್ಯದ ಮೊಬೈಲ್ ಜೊತೆಗೆ ಅಂಗಿಯ ಜೇಬಿನಲ್ಲಿದ್ದ 5,000 ಮತ್ತು ಬ್ಯಾಗಿನಲ್ಲಿದ್ದ 1,45,000 ಸೇರಿ ಒಟ್ಟು 4,86,500 ದಷ್ಟು ಬೆಲೆಬಾಳುವ ನಗದು ಹಣ ಮತ್ತು ವಸ್ತುಗಳನ್ನು ಅಪಹರಿಸಿದ್ದಾನೆ ಎನ್ನಲಾಗಿದೆ.
• ಕಾರ್ಕಳ: ತಿಮರೋಡಿ ಬೆಂಬಲಿಗರಿಂದ ಎಸ್ ಪಿ ಕಾರ್ ಮೇಲೆ ದಾಳಿ
ಕಾರ್ಕಳ: ಬಿ. ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ, ರಾಜೀವ್ ಕುಲಾಲ್ ನೀಡಿದ ದೂರಿನ ಆಧಾರದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಕರೆತೊಯ್ಯುತ್ತಿದ್ದ ವೇಳೆ, ತಿಮರೋಡಿ ಬೆಂಬಲಿಗರು ಎಸ್. ಪಿ. ಅವರ ಕಾರಿಗೆ ಢಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡಚಣೆಯನ್ನುಂಟು ಮಾಡಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಕಳದ ಪೊಲೀಸರು ಮೂವರನ್ನು ಬಂಧಿಸಿದ್ದು, ಆರೋಪಿಗಳನ್ನು ಸೃಜನ್, ಹಿತೇಶ್ ಶೆಟ್ಟಿ ಮತ್ತು ಸುಜಿತ್ ಮಡಿವಾಳ ಎಂದು ಗುರುತಿಸಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರದ ಸಂಚಾರಿ ಪೀಠಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ನ್ಯಾಯಾಲಯವು ಆದೇಶ ನೀಡಿದೆ.