ಟಾಪ್ ನ್ಯೂಸ್ ಕರಾವಳಿ
• ಕಡಬ: ಆ್ಯಂಬುಲೆನ್ಸ್ ಚಾಲಕ ಶವವಾಗಿ ಪತ್ತೆ!
* ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ
* ಉಳ್ಳಾಲ: ಭಯೋತ್ಪಾದನಾ ಪ್ರಕರಣ ವಿಚಾರಣೆ ಮತ್ತೆ ಶುರು
* ಪುತ್ತೂರು: ಲಕ್ಷಾಂತರ ರೂಪಾಯಿ ವಂಚನೆ ಕೇಸ್
* ಉಡುಪಿ: ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಗೆ ಮೂರ್ಛೆ ಹೋದ!
ನಮ್ಮೂರ ಎಕ್ಸ್ ಪ್ರೆಸ್ ನ್ಯೂಸ್
ಕಡಬ: ಕಳೆದ ಮಂಗಳವಾರದಂದು ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ದೇವರಗದ್ದೆ ನಿವಾಸಿಯಾದ, ಆ್ಯಂಬುಲೆನ್ಸ್ ಚಾಲಕ ಹೊನ್ನಪ್ಪ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಮಂಗಳವಾರದಿಂದ ಕಾಣೆಯಾಗಿದ್ದ ಹೊನ್ನಪ್ಪ ಅವರನ್ನು ಪತ್ತೆ ಹಚ್ಚುತ್ತಿದ್ದ ಸಂದರ್ಭದಲ್ಲಿ, ಸಿಸಿ ಕ್ಯಾಮೆರಾದಲ್ಲಿ ಅವರು ಕುಮಾರ ಧಾರಾ ನದಿಯ ಕಡೆಗೆ ಓಡುತ್ತಿದ್ದ ದೃಶ್ಯ ಕಂಡು ಬಂದಿದೆ. ನೀರಿಗೆ ಹಾರಿರಬಹುದು ಎಂಬ ಸಂಶಯದಿಂದ ನದಿಯಲ್ಲಿ ಪರಿಶೀಲನೆ ನಡೆಸಿದಾಗ, ಶುಕ್ರವಾರದಂದು ಅವರ ಮೃತದೇಹ ಸಿಕ್ಕಿದೆ. ಎಸ್ ಡಿ ಆರ್ ಎಫ್ ತಂಡ, ಆ್ಯಂಬುಲೆನ್ಸ್ ಚಾಲಕರ ತಂಡ, ರವಿ ಕಕ್ಕೆಪದವು ತಂಡ, ಅಗ್ನಿಶಾಮಕ ದಳ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಹೊನ್ನಪ್ಪ ಅವರ ಶವ ಕುಮಾರಧಾರ ನದಿಯಲ್ಲಿ ಪತ್ತೆಯಾಯಿತು. ಪ್ರಕರಣವು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
* ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ
* ಕುಂದಾಪುರ: ಬೈಂದೂರು ಕಡೆಯಿಂದ ಆಗಮಿಸುತ್ತಿದ್ದ ಕಾರ್ ವೊಂದು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರ ಪರಿಣಾಮವಾಗಿ, ರಸ್ತೆಯ ಮೇಲೆ ಪಲ್ಟಿ ಹೊಡೆದು ಬಿದ್ದಿರುವ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಮುಳ್ಳಿಕಟ್ಟೆ ರಿಕ್ಷಾ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ತಾಜುದ್ದೀನ್ ಮತ್ತು ತಾಜ್ಮುಲ್ ಎಂಬ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದು, ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ: ಭಯೋತ್ಪಾದನಾ ಪ್ರಕರಣ ವಿಚಾರಣೆ ಮತ್ತೆ ಶುರು
ಉಳ್ಳಾಲ: 2008ರ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದ ಯಾಸಿನ್ ಭಟ್ಕಳ, ಶಾರುಖ್ ಮತ್ತು ಡಾಕ್ಟರ್ ಅರಾಜು ಎಂಬಾತನನ್ನು ಮೊದಲ ಬಾರಿಗೆ ವೀಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದರ ಮೂಲಕ ನ್ಯಾಯಾಲಯದಲ್ಲಿ ಹಲವಾರು ವರ್ಷಗಳಿಂದ ಬಾಕಿ ಇದ್ದ ವಿಚಾರಣೆಯನ್ನು ಪುನರಾರಂಭಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮುಖಚ್ಚೆರಿ ಮತ್ತು ಚೆಂಬುಗುಡ್ಡೆ ಪ್ರದೇಶಗಳಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿಯ ಆಧಾರದ ಮೇರೆಗೆ, ಡಿಸಿಐಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ, ಆರೋಪಿಗಳನ್ನು ಕಂಡುಹಿಡಿದು, 242/2008 ಕಾಯ್ದೆ ಅಡಿಯಲ್ಲಿ ಏಳು ಜನರನ್ನು ಬಂಧಿಸಿದ್ದು, ಐಎಫ್ಎಕ್ಸ್ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಲಾದ ಇತರ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮತ್ತು ಆರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
* ಪುತ್ತೂರು: ಲಕ್ಷಾಂತರ ರೂಪಾಯಿ ವಂಚನೆ ಕೇಸ್
ಪುತ್ತೂರು: ಚಿಕ್ಕಮುಟ್ನೂರು ಗ್ರಾಮದ ಊರಮಾಲಿನ, ಎಪ್ಪತ್ಮೂರು ವರ್ಷದ ಮಹಿಳೆಯೊಬ್ಬರಿಗೆ ಅಪರಿಚಿತರು ದೂರವಾಣಿ ಕರೆ ಮಾಡಿ, ಬ್ಯಾಂಕ್ ಖಾತೆ ತಡೆ ಹಿಡಿಯಲಾಗಿದ್ದು, ಅದನ್ನು ಸರಿಪಡಿಸಬೇಕೆಂದು ತಿಳಿಸಿದ್ದಾರೆ. ಆಗ ಮಹಿಳೆಯು ನಿಜವೆಂದು ನಂಬಿ, ಓಟಿಪಿ ಸಂಖ್ಯೆಯನ್ನು ಅಪರಿಚಿತರಿಗೆ ನೀಡಿದಾಗ ಲಕ್ಷಾಂತರ ರೂಪಾಯಿ ವಂಚನೆಯಾದ ಸಂಗತಿ ತಿಳಿದು ಬಂದಿದೆ. ಆ ದಿನ ಮಹಿಳೆಯು ತನ್ನ ಕೆನರಾ ಬ್ಯಾಂಕ್ ಖಾತೆಯಿಂದ ಹದಿನೈದು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಬಂದಿದ್ದರು. ಬಳಿಕ ಕೆನರಾ ಬ್ಯಾಂಕ್ ಹೆಸರು ಹೇಳಿ, ಕರೆಯೊಂದು ಬಂದಿದ್ದು ಮಹಿಳೆಯಿಂದ ಏಳು ಬಾರಿ ಓಟಿಪಿ ಸಂಖ್ಯೆಯನ್ನು ಪಡೆದುಕೊಂಡ ನಂತರ, ಆಕೆಯ ಖಾತೆಯಿಂದ ಸುಮಾರು 1.36.257 ರೂಪಾಯಿಗಳನ್ನು ಅಪರಿಚಿತರು ತಮ್ಮ ಖಾತೆಗೆ ವರ್ಗಾಯಿಸಿಕೊಂಡು, ವಂಚಿಸಿದ್ದಾರೆ ಎನ್ನಲಾಗಿದೆ. ಮಹಿಳೆಯ ದೂರಿನ ಅನ್ವಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಉಡುಪಿ: ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಗೆ ಮೂರ್ಛೆ ಹೋದ
ಉಡುಪಿ: ಕಡಿಯಾಳಿ ಮಹಿಷಾಸುರಮರ್ದಿನಿ ದೇವಾಲಯದಕ್ಕೆ ಕಳ್ಳತನ ಮಾಡಲು ಬಂದ ಘಟನೆ ಶುಕ್ರವಾರ ತಡರಾತ್ರಿ ಮೂರು ಗಂಟೆಯ ಸುಮಾರಿಗೆ ನಡೆದಿದೆ. ಹೆಬ್ಬಾಗಿಲಿನ ಬೀಗ ಮುರಿದು, ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಕಳ್ಳರನ್ನು ಗಮನಿಸಿದ ದೇವಸ್ಥಾನದ ಕಾವಲುಗಾರರು ಸುತ್ತಮುತ್ತಲಿನ ಜನರನ್ನು ಕರೆಯಲು ಕೂಗಿಕೊಂಡಾಗ, ಕಳ್ಳರು ಅವರಿಗೆ ಚಾಕುವನ್ನು ತೋರಿಸಿ, ಬೆದರಿಸಿ ಓಡಿ ಹೋಗಿದ್ದಾರೆ. ಬಳಿಕ ಸಿಸಿ ಟಿವಿಯನ್ನು ಪರಿಶೀಲಿಸಿ ನೋಡಿದಾಗ, ಇಬ್ಬರು ಕಳ್ಳರು ಯಾವ ದಾರಿಯಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸ್ಥಳೀಯರು ಕೂಡಲೇ ಪತ್ತೆ ಹಚ್ಚಿ, ಕಳ್ಳರನ್ನು ಹಿಡಿದಿದ್ದಾರೆ. ಈ ಸಮಯದಲ್ಲಿ ಓರ್ವ ಕಳ್ಳನಿಗೆ ಮೂರ್ಛೆ ಸಂಭವಿಸಿದ್ದು, ಆತನನ್ನು ಉಪಚರಿಸಲು ಮುಂದಾದ ಮತ್ತೊಬ್ಬ ಕಳ್ಳ ಸಿಕ್ಕಿಬಿದ್ದಿದ್ದಾನೆ. ಓಡಿ ಹೋಗಲು ಪ್ರಯತ್ನಿಸಿದರು ಜನರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರ್ಛೆ ಹೋಗಿದ್ದ ಕಳ್ಳನಿಗೆ ಸ್ಥಳೀಯರು ಕಬ್ಬಿಣದ ಸಲಕರಣೆಯನ್ನು ಕೈಗೆ ನೀಡಿ, ಪ್ರಾಥಮಿಕ ಚಿಕಿತ್ಸೆಯ ಮೂಲಕ ಉಪಚರಿಸಿದ್ದಾರೆ. ಬಳಿಕ ಆತನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೋರ್ವ ಕಳ್ಳನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳರು ಕೇರಳ ಮೂಲದವರೆಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಇನ್ನು ಲಭಿಸಬೇಕಿದೆ.