ಟಾಪ್ ನ್ಯೂಸ್ ಕರಾವಳಿ
* ಸುಳ್ಯ: ಕೊಕ್ಕೋ ಬೆಳೆಗೆ ಕಪ್ಪು ಕಾಯಿ ರೋಗ
* ಕಾಪು: ಕಡಲ್ಗೊರೆತ ವೀಕ್ಷಣೆ ಮಾಡಿದ ಕಂದಾಯ ಸಚಿವರು
* ಬಂಟ್ವಾಳ: ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿ ನಾಪತ್ತೆ
* ಸುಳ್ಯ: ಕೊಕ್ಕೋ ಬೆಳೆಗೆ ಕಪ್ಪು ಕಾಯಿ ರೋಗ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸುಳ್ಯ: ಗಾಯದ ಮೇಲೆ ಬರೆ ಎಳೆದಂತೆ ಎಂಬ ಮಾತಿನಂತೆ ಮಳೆಯ ತೀವ್ರತೆಯಿಂದಾಗಿ ಅಡಿಕೆಗೆ ಕೊಳೆ ರೋಗ ಬಂದಂತೆ, ಇದೀಗ ಕೊಕ್ಕೋ ಬೆಳೆಗೆ ಕಪ್ಪು ಕಾಯಿ ರೋಗ ತಗಲುವ ಮೂಲಕ ಮತ್ತಷ್ಟು ನಷ್ಟ ಉಂಟಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಗೆ ಉತ್ತಮ ಬೆಲೆಯಿದ್ದು, ಬೆಳೆಗಾರರಿಗೆ ಆರ್ಥಿಕವಾಗಿ ಅನುಕೂಲಕರವಾಗಿತ್ತು. ಇದೀಗ ಕೊಕ್ಕೋ ಬೆಳೆಗೂ ಈ ರೀತಿ ರೋಗ ಹರಡುತ್ತಿರುವುದರಿಂದ ಅಪಾರ ಪ್ರಮಾಣದ ಹಾನಿಯುಂಟಾಗುತ್ತಿದೆ. ಎಷ್ಟೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡರೂ ರೋಗದ ಸಮಸ್ಯೆ ಇದ್ದಿದ್ದೆ. ಇದೀಗ ಮತ್ತಷ್ಟು ಉಲ್ಬಣಗೊಂಡಿದೆ ಎನ್ನುವುದು ಕೃಷಿಕರ ಅಳಲು. ಕೊಕ್ಕೋ ಬೆಳೆಯುವ ಪ್ರದೇಶಗಳಲ್ಲಿ ಈ ರೋಗವು ಸಾಮಾನ್ಯವಾಗಿ ಜುಲೈ ಆಗಸ್ಟ್ ತಿಂಗಳಿನಲ್ಲಿ, ಅಂದರೆ ಮಳೆಗಾಲದಲ್ಲಿ ತಗಲುತ್ತದೆ. ರೋಗ ತಗುಲಿರುವ ಕಾಯಿಗಳು ಹಸಿರು ಕಂದು ಬಣ್ಣದಿಂದ, ಕಪ್ಪು ಬಣ್ಣಕ್ಕೆ ತಿರುಗಿ ಕರಟುವುದರಿಂದ ಕಪ್ಪು ಕಾಯಿ ರೋಗ ಎಂದು ಕರೆಯುತ್ತಾರೆ. ಫೈಟೊ ಫ್ತೋರಾ ಪಾಲ್ಮಿವೋರಾ ಎಂಬ ಶಿಲ್ಲೀಂಧ್ರ ಈ ರೋಗವನ್ನು ಹರಡುತ್ತದೆ ಎನ್ನಲಾಗಿದೆ. ಸರಿಯಾದ ಕ್ರಮವನ್ನು ಅನುಸರಿಸುವ ಮೂಲಕ ಇದನ್ನು ನಿಯಂತ್ರಿಸಬಹುದು ಎಂದು ವಿಜ್ಞಾನಿಗಳಾದ ಡಾ. ವಿನಾಯಕ ಹೆಗ್ಡೆ ಅವರು ತಿಳಿಸಿದ್ದಾರೆ.
* ಕಾಪು: ಕಡಲ್ಗೊರೆತ ವೀಕ್ಷಣೆ ಮಾಡಿದ ಕಂದಾಯ ಸಚಿವರು
ಕಾಪು: ಉಡುಪಿ ಜಿಲ್ಲೆಗೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಡೆದ ಪ್ರಗತಿಯ ಪರಿಶೀಲನೆಗಾಗಿ ಆಗಮಿಸಿದ್ದ, ಕಂದಾಯ ಸಚಿವರಾದ ಕೃಷ್ಣಭೈರೇಗೌಡರು ಕಾಪು ತಾಲ್ಲೂಕಿಗೆ ಭೇಟಿ ನೀಡಿ, ಮೂಳೂರು ಗ್ರಾಮದ ತೊಟ್ಟಂನಲ್ಲಿ ಕಡಲ್ಗೊರೆತದಿಂದ ಹಾನಿಗೊಂಡ ಪ್ರದೇಶಗಳನ್ನು ವೀಕ್ಷಿಸಿದರು. ಬಳಿಕ ಅದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಈ ರೀತಿಯ ಸಮಸ್ಯೆಗಳು ತಲೆದೋರುತ್ತಿದ್ದು, ಇದಕ್ಕೆ ಶಾಶ್ವತವಾಗಿ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಮದರಾಸು ಐಐಟಿ ತಜ್ಞರಿಗೆ ಈಗಾಗಲೇ ವರದಿಯನ್ನು ಸಲ್ಲಿಸಲಾಗಿದೆ. ಪ್ರತಿ ನೂರು ಮೀಟರ್ ಗೆ ಹದಿನೈದು ಕೋಟಿ ವೆಚ್ಚ ತಗಲುತ್ತದೆ. ಹೀಗಾಗಿ ಪರಿಶೀಲನೆಯನ್ನು ನಡೆಸಿ, ಯೋಜನೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
* ಬಂಟ್ವಾಳ: ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿ ನಾಪತ್ತೆ
ಬಂಟ್ವಾಳ: ಕಡೇಶ್ವಾಲ್ಯ ಗ್ರಾಮದ ನಿವಾಸಿ, ನೀರು ಶುದ್ಧೀಕರಣ ಯಂತ್ರದ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೇಮಂತ್ ಎನ್ನುವ ವ್ಯಕ್ತಿ ಜುಲೈ ಇಪ್ಪತ್ತೇಳರಂದು ಕೆಲಸಕ್ಕೆಂದು ತೆರಳಿದವರು ಮನೆಗೆ ಮರಳಿ ಬಂದಿಲ್ಲ. ಅವರ ಹುಡುಕಾಟದಲ್ಲಿದ್ದ ಸಂದರ್ಭದಲ್ಲಿ, ಜುಲೈ ಇಪ್ಪತ್ತೆಂಟರಂದು ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಬಳಿ ಹೇಮಂತ್ ಅವರ ಸ್ಕೂಟರ್ ಮತ್ತು ಮೊಬೈಲ್ ಕಂಡುಬಂದ ಹಿನ್ನೆಲೆಯಲ್ಲಿ ನದಿಗೆ ಬಿದ್ದಿರಬಹುದು ಎಂದು ಅನುಮಾನ ವ್ಯಕ್ತಗೊಂಡಿದ್ದು, ನೇತ್ರಾವತಿ ನದಿಯಲ್ಲಿ ಪರಿಶೀಲನೆ ನಡೆಸಿದರು ಸಹ ಪತ್ತೆಯಾಗಲಿಲ್ಲ. ಅಗ್ನಿಶಾಮಕ ದಳದವರೊಂದಿಗೆ ಸ್ಥಳೀಯರು ಜೊತೆಗೂಡಿ ಎಲ್ಲೆಡೆ ಹುಡುಕಾಟ ನಡೆಸಿದರು ಹೇಮಂತ್ ಗೆ ಸಂಬಂಧಿಸಿದಂತೆ ಯಾವುದೇ ಸುಳಿವು ಇಂದಿಗೂ ಲಭ್ಯವಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಹೇಮಂತ್ ಯಾವುದೋ ವಿಚಾರವೊಂದಕ್ಕೆ ಬೇಸರ ಮಾಡಿಕೊಂಡು, ಮನೆಯಲ್ಲಿ ಯಾರೊಂದಿಗೂ ಸೇರದೆ ಒಬ್ಬಂಟಿಯಾಗಿ ಇರುತ್ತಿದ್ದ ಎನ್ನುವ ಸಂಗತಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಅಲ್ಲಿನ ಪೊಲೀಸರು ಮಂಗಳೂರು ನಗರದ ಪೊಲೀಸರಿಗೆ ನದಿಯಲ್ಲಿ ಯಾವುದೇ ಮೃತದೇಹ ಪತ್ತೆಯಾದರೆ ಮಾಹಿತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ.