ಉಡುಪಿ: ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಾದ್ಯಂತ ಬಿಜೆಪಿ ಪ್ರತಿಭಟನೆ , ಆಕ್ರೋಶ!
NAMMUR EXPRESS NEWS
ಉಡುಪಿ: ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಗ್ರಾಮೀಣ ಪ್ರದೇಶಗಳಲ್ಲಿ ಜನರ ಆಕ್ರೋಶ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 399 ಗ್ರಾಮ ಪಂಚಾಯಿತಿಗಳಲ್ಲಿ ಏಕಕಾಲದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡುತ್ತಾ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಇನ್ನೂ ಜನಹಿತದ ಬಗ್ಗೆ ಸ್ಪಷ್ಟ ನಿಲುವು ತೋರಿಸಿಲ್ಲ ಎಂದು ಟೀಕಿಸಿದರು.
ಜೂನ್ 23ರಂದು ಕುಕ್ಕುಂದೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಕಳ ತಾಲೂಕಿನಾದ್ಯಂತ 3,000 ವೃದ್ಧಾಪ್ಯ ವೇತನ ಮತ್ತು 3,600 ಸಂಧ್ಯಾ ಸುರಕ್ಷಾ ಫಲಾನುಭವಿಗಳ ಹೆಸರನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ ಸರ್ಕಾರ, ಇಂದಿನ ಸ್ಥಿತಿಯಲ್ಲಿ ಜನರ ಹಿತವಿರೋಧಿ ನಿಲುವುಗಳನ್ನು ಅನುಸರಿಸುತ್ತಿದೆ. ಹಾಲು, ಮನೆ ತೆರಿಗೆ, ಸ್ಟಾಂಪ್ ಡ್ಯೂಟಿ, ವಿದ್ಯುತ್, ಅಬಕಾರಿ ಸುಂಕ, ಪೆಟ್ರೋಲ್, ಡಿಸೇಲ್, ಕಂದಾಯ ಪತ್ರಗಳ ಬೆಲೆ ಎಲ್ಲವೂ ಹೆಚ್ಚಿಸಿರುವ ಸರ್ಕಾರ, ಈಗ ವೃದ್ಧಾಪ್ಯ ವೇತನಕ್ಕೂ ಕೈ ಹಾಕುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಆಶ್ರಯ ಮನೆ ಯೋಜನೆಗಾಗಿ ಯಾವುದೇ ನಿಶ್ಚಿತತೆ ನೀಡದೆ, ಮನೆ ಪಡೆಯಬೇಕಾದವರಿಗೆ ಲಂಚ ಕೊಡುವ ಪರಿಸ್ಥಿತಿ ಎದುರಾಗುತ್ತಿದೆ. ಇದನ್ನು ಕಾಂಗ್ರೆಸ್ ಶಾಸಕರೇ ಒಪ್ಪಿಕೊಳ್ಳುತ್ತಿದ್ದಾರೆ ಎಂದು ಸುನಿಲ್ ಕುಮಾರ್ ಲೇವಡಿ ಮಾಡಿದರು. ಅವರು ಮುಂದುವರಿಸಿ, ಬಿಜೆಪಿಯ ಆಡಳಿತದಲ್ಲಿ ಗ್ರಾಮ ಪಂಚಾಯಿತಿಗೆ ನೀಡಲಾಗಿದ್ದ 9-11ನ ಅಧಿಕಾರವನ್ನು ಈಗ ಸರ್ಕಾರ ಕಾಪು ಪ್ರಾಧಿಕಾರಕ್ಕೆ ವರ್ಗಾಯಿಸಿದ್ದು, ಇದರ ಪರಿಣಾಮವಾಗಿ ಯಾವುದೇ ಮನೆ ನಿರ್ಮಾಣಕ್ಕಾಗಿ ಪ್ರಾಧಿಕಾರದ ಅನುಮತಿ ಅಗತ್ಯವಿದೆ. ಇದರಿಂದಾಗಿ ಗಣಿ ಪದಾರ್ಥಗಳ ಕೊರತೆಯಿಂದ ಕಾರ್ಮಿಕರು ನಿರುದ್ಯೋಗಿಯಾಗುತ್ತಿದ್ದಾರೆ ಎಂದರು.
ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ, ಅಬಕಾರಿ ಹಗರಣ, ಆಶ್ರಯ ಮನೆ ಹಗರಣ ಇತ್ಯಾದಿ ಹಗರಣಗಳು ಸತತವಾಗಿ ನಡೆಯುತ್ತಿದ್ರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿಲ್ಲ. ಇದರ ಹಿಂದೆ 60% ಕಮೀಷನ್ ಹಂಚಿಕೆ ಇದೆ ಎಂದು ಆರೋಪಿಸಿದ ಸುನಿಲ್ ಕುಮಾರ್, ಈ ಸರ್ಕಾರವನ್ನು “60% ಸರ್ಕಾರ”ವೆಂದು ಕರೆದರು. ಈ ಹೋರಾಟವು ನಮ್ಮ ಬೇಡಿಕೆ ಈಡೇರುವವರೆಗೆ ನಿರಂತರವಾಗಿ ನಡೆಯಬೇಕೆಂದು ಅವರು ಕರೆ ನೀಡಿದರು.