ಕರಾವಳಿ ಟಾಪ್ ನ್ಯೂಸ್
* ಉಡುಪಿ: ಉಸ್ತುವಾರಿ ಕಾರ್ಯದರ್ಶಿಯಾಗಿ ರೋಹಿಣಿ ಸಿಂಧೂರಿ
* ಮಂಗಳೂರು: ಧರ್ಮಸ್ಥಳ ಮಂಗಳೂರಿಗೆ ಇಂದಿನಿಂದ ರಾಜಹಂಸ
* ಬಂಟ್ವಾಳ: ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಪಟ್ಟು
* ಪುತ್ತೂರು: ವೇಶ್ಯಾವಾಟಿಕೆ ಪ್ರಕರಣ ಬಯಲು: ಏನಿದು ಕೇಸ್..?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ರಾಜ್ಯ ಸರ್ಕಾರವು ರಾಜ್ಯದ ಅಭಿವೃದ್ಧಿ ಯೋಜನೆಗಳ ಜಾರಿ ಮತ್ತು ಪರಿಶೀಲನೆಗೆ, ಅನಿರೀಕ್ಷಿತ ತಪಾಸಣೆ ಮತ್ತು ಅದರ ಕುರಿತ ಪರಿಶೀಲನೆ ಹೀಗೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿತ್ತು. ಇದೀಗ ರೋಹಿಣಿ ಸಿಂಧೂರಿ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಈ ಕ್ಷಣದಿಂದ ಅಧಿಕಾರವನ್ನು ವಹಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿದೆ. ಈ ಹಿಂದೆ ರೋಹಿಣಿ ಸಿಂಧೂರಿ ಅವರು ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರದ ಕಾರ್ಯದರ್ಶಿ ಆಗಿದ್ದರು.
ಮಂಗಳೂರು: ಧರ್ಮಸ್ಥಳ ಮಂಗಳೂರಿಗೆ ಇಂದಿನಿಂದ ರಾಜಹಂಸ
ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಂಗಳೂರು ವಿಭಾಗದ ಎರಡನೇ ಘಟಕದಿಂದ ಧರ್ಮಸ್ಥಳ ಮತ್ತು ಮಂಗಳೂರಿಗೆ ರಾಜಹಂಸ ಬಸ್ಸಿಗೆ ಇಂದಿನಿಂದ ಚಾಲನೆ ನೀಡಿದೆ. ಪ್ರಯಾಣದ ದರ 110ರೂಪಾಯಿ ನಿಗದಿಯಾಗಿದ್ದು. ಬಿ.ಸಿ.ರಸ್ತೆ, ಬಂಟ್ವಾಳ, ಕಾರಿಂಜ ಕ್ರಾಸ್, ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗದ ಮೂಲಕ ಸಂಚರಿಸುತ್ತದೆ. ರಾಜಹಂಸವು ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬೆಳಿಗ್ಗೆ ಆರುವರೆ, ಏಳು, ಎಂಟುವರೆ, ಒಂಭತ್ತು, ಹನ್ನೊಂದುಕಾಲು ಮಧ್ಯಾಹ್ನ ಹನ್ನೆರಡುಕಾಲು, ಎರಡುವರೆ, ಮೂರುವರೆ ಸಂಜೆ ಐದುವರೆ ಮತ್ತು ಆರುವರೆಗೆ ಹೊರಡಲಿದೆ. ಅದೇ ರೀತಿ ಧರ್ಮಸ್ಥಳದಿಂದ ಮಂಗಳೂರಿಗೆ ಬೆಳಿಗ್ಗೆ ಆರುವರೆ, ಏಳು, ಒಂಭತ್ತು, ಒಂಭತ್ತುಕಾಲು, ಹನ್ನೊಂದುವರೆ, ಮಧ್ಯಾಹ್ನ ಹನ್ನೆರಡು, ಎರಡುಮುಕ್ಕಾಲು, ಮೂರುವರೆ, ನಾಲ್ಕುವರೆ ಮತ್ತು ಸಂಜೆ ಐದುವರೆಗೆ ಹೊರಡುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಬಂಟ್ವಾಳ: ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಪಟ್ಟು
ಬಂಟ್ವಾಳ: ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಗ್ರಾಮದ ಬಳಿಯ ಬೆಂಜನಪದವು ಸರ್ಕಾರಿ ಪ್ರೌಢಶಾಲೆಯ ಸಮೀಪದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಲು ಮಂಜೂರಾದ ಹತ್ತು ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಕೋರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಪತ್ರ ಬರೆದಿದ್ದಾರೆ. ಶಾಲೆಯ ಸಮೀಪದಲ್ಲಿ ಒಟ್ಟು 5. 25 ಎಕರೆ ಸ್ಥಳದಲ್ಲಿ ಆಟದ ಮೈದಾನ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಹತ್ತು ಕೋಟಿ ಅನುದಾನವನ್ನು ರಾಜ್ಯ ಸರ್ಕಾರವು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅನುದಾನ ಮಾಡಿತ್ತು. ಆದರೆ ಈ ಮೊತ್ತವನ್ನು ಇನ್ನೂ ಬಿಡುಗಡೆಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು, ತಾಲ್ಲೂಕು ಮಟ್ಟದ ವಿದ್ಯಾರ್ಥಿಗಳ ಆಟ ಮತ್ತು ಶಾರೀರಿಕ ತರಬೇತಿ ಸಂಬಂಧಿತ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿಚಾರವನ್ನು ಸಂಬಂಧಿತ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಹಣವನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಪುತ್ತೂರು: ವೇಶ್ಯಾವಾಟಿಕೆ ಪ್ರಕರಣ ಬಯಲು: ಏನಿದು ಕೇಸ್..?
ಪುತ್ತೂರು: ಸಾಮೆತ್ತಡ್ಕ ನಿವಾಸಿ ವಿಲ್ಫ್ರೆಡ್ ಎಂಬ ವ್ಯಕ್ತಿಯು ತನ್ನ ಮನೆಯ ಸಮೀಪದ ಕಟ್ಟಡವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ದೊರೆತ ಆಧಾರದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ನಿರೀಕ್ಷಕರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಾಲಂ 143(2) ಮತ್ತು ಅನೈತಿಕ ಸಾಗಾಣಿಕೆ ತಡೆ ಕಾಯ್ದೆ 1956ರ ಕಾಲಂ 3,4 ಮತ್ತು 5(3)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯವು ಜುಲೈ ಹದಿನೈದರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.