Categories
ಕರಾವಳಿ

ಮಂಗಳೂರು ಮಾರ್ಗದ ರಸ್ತೆ ಸರಿಯಾಗೋದು ಯಾವಾಗ?

ಮಂಗಳೂರು ಮಾರ್ಗದ ರಸ್ತೆ ಸರಿಯಾಗೋದು ಯಾವಾಗ?

– ಜನರ ಪರದಾಟ: ಹೇಳೋರಿಲ್ಲ… ಕೇಳೋರಿಲ್ಲ..

* ಉಡುಪಿ: ಎರಡು ಬಸ್ ಗಳ‌ ನಡುವೆ ಡಿಕ್ಕಿ; ಹಲವರಿಗೆ ಗಾಯ!
* ಪುತ್ತೂರು: ಪುತ್ತೂರು ಎಕ್ಸ್ ಪ್ರೆಸ್ ಬಸ್ ಗೆ ಚಾಲನೆ
* ಹೆಬ್ರಿ: ಅಪಾಯಕಾರಿ ಮರಗಳ ತೆರವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮಾರ್ಗದಲ್ಲಿ ವಾಹನ ಮತ್ತು ಪ್ರಯಾಣಿಕರು ಓಡಾಡಲು ಹರಾಸಾಹಸ ಪಡಬೇಕಿದೆ.
ಇತ್ತೀಚಿನ ದಿನಗಳಲ್ಲಿ ಮಳೆಯ ಪರಿಣಾಮವಾಗಿ ರಸ್ತೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಒಂದೇ ಪ್ರದೇಶದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ರಸ್ತೆ ಕಾಮಗಾರಿ ಸಾಗುತ್ತಿದೆ. ಅಂದರೆ ಒಂದು ಮಾರ್ಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತೀವ್ರ ಗತಿಯಲ್ಲಿ ಸಾಗಿದರೆ, ಮತ್ತೊಂದು ಭಾಗದಲ್ಲಿ ಆಮೆ ನಡಿಗೆಯಾಗಿದೆ. ಗುರುಪುರ ಭಾಗದ ನೂತನ ಬೈಪಾಸ್ ಕೆಲಸವು ಮುಕ್ತಾಯವಾಗಿದ್ದರೂ, ಪೊಳಲಿ ಮತ್ತು ನೂಯಿಯ ನಡುವಿನ ಕಾಮಗಾರಿಯಲ್ಲಿ ನಿಶ್ಚಿತತೆ ಇಲ್ಲದಂತಾಗಿದೆ. ಪೊಳಲಿ ಮತ್ತು ನೂಯಿ ನಡುವೆ ರಾಜ್ಯ ಹೆದ್ದಾರಿ 101 ನಿರ್ಮಿಸಲು ಕೇವಲ ಮೂರು ಕಿಲೋಮೀಟರ್ ಮಾತ್ರ ಬಾಕಿ ಇದ್ದು, ಅದು ಪೂರ್ಣ ಪ್ರಮಾಣದ ಗುಡ್ಡ ಮತ್ತು ಇಳಿಜಾರು ಪ್ರದೇಶವಾಗಿರುವ ಕಾರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಪೊಳಲಿ ದ್ವಾರದಿಂದ ಪೊಳಲಿ ದೇವಸ್ಥಾನಕ್ಕೆ ಹೋಗುವ ಈ ರಾಜ್ಯ ಹೆದ್ದಾರಿಯೂ ದಟ್ಟ ಪೊದೆಗಳು ಮತ್ತು ಅಪಾಯಕಾರಿ ತಿರುವುಗಳನ್ನು ಹೊಂದಿರುವ ಕಾರಣ ಸ್ಥಳೀಯರು ಸಂಬಂಧಿತ ವ್ಯಕ್ತಿಗಳ ಗಮನಕ್ಕೆ ತರುತ್ತಿದ್ದರು. ಆದರೂ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆಯಲಿಲ್ಲ. ಪ್ರತಿ ದಿನ ಸಾವಿರಾರು ಜನರು ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದು, ತಿರುವು ಇರುವ ರಸ್ತೆಗಳನ್ನು ಬೇಗನೆ ಅಭಿವೃದ್ಧಿಪಡಿಸಿ ಎಂದು ಪೊಳಲಿ ಸುಜಿತ್ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ತಿಳಿಸಿದ್ದರು ಎನ್ನಲಾಗಿದೆ.

ಮಣಿಪಾಲದಲ್ಲಿ ಬಸ್ ಅಪಘಾತ

ಉಡುಪಿ: ಮಣಿಪಾಲದ ಎಂಜಿಎಂ ಕಾಲೇಜಿನ ಸಮೀಪ ಎರಡು ಎಕ್ಸ್ ಪ್ರೆಸ್ ಬಸ್ ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಘಟನೆ ನಡೆದಿದೆ. ಮಣಿಪಾಲದಿಂದ ಉಡುಪಿಗೆ ಹೋಗುತ್ತಿದ್ದ ಬಸ್ ಬ್ರೇಕ್ ಅನ್ನು ಕಳೆದುಕೊಂಡ ಪರಿಣಾಮವಾಗಿ ಎದುರಿಗೆ ಬರುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಎರಡು ವಾಹನಗಳು ತೀವ್ರ ಹಾನಿಗೊಳಗಾಗಿದ್ದು, ಇದರಿಂದ ಬಸ್ ಗಳಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಅಪಘಾತದಿಂದ ಸಂಚಾರಿ ದಟ್ಟಣೆ ತೀವ್ರವಾಗಿ ಪರಿಣಮಿಸಿತ್ತು. ಬಳಿಕ ಉಡುಪಿಯ ಪೊಲೀಸರು ಆಗಮಿಸಿ, ಉಳಿದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪುತ್ತೂರು ಎಕ್ಸ್ ಪ್ರೆಸ್ ಶುರುವಾಯ್ತು

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿಲ್ದಾಣದಲ್ಲಿ ಮಂಗಳೂರು ಮತ್ತು ಪುತ್ತೂರು ನಡುವೆ ತಡೆರಹಿತ ಬಸ್ ಗಳ ಓಡಾಟಕ್ಕೆ ಪುತ್ತೂರು ಎಕ್ಸ್ ಪ್ರೆಸ್ ಎನ್ನುವ ಹೆಸರಿನಲ್ಲಿ ಚಾಲನೆ ನೀಡಲಾಯಿತು. ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಅಶೋಕ್ ರೈ ಅವರು ಮಾತನಾಡಿ, ಪುತ್ತೂರು ಭಾಗದ ಡಿಪೋಗಳಲ್ಲಿ ಕಳೆದ ಮೂರು ವರ್ಷಗಳಿಂದ ನೇಮಕಾತಿ ಮಾಡದೆ ಸಿಬ್ಬಂದಿಗಳ ಕೊರತೆ ಇತ್ತು. ಇದೀಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು ಸುಮಾರು 380 ಜನ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇನ್ನು ಮುಂದೆ ಚಾಲನೆಗೊಂಡ ಎಕ್ಸ್ ಪ್ರೆಸ್ ಬಸ್ ಗಳು ಪ್ರತಿ 23 ನಿಮಿಷಕ್ಕೊಂದು ಸಂಚರಿಸುತ್ತದೆ ಮತ್ತು ದಿನಕ್ಕೆ 60 ಟ್ರಿಪ್ ಮಾಡಲಿದೆ. ಅಲ್ಲದೆ ಕೆಲವೊಂದು ಯೋಚನೆಗಳನ್ನು ರೂಪಿಸಿ, ಮುಂಬರುವ ದಿನಗಳಲ್ಲಿ ನಗರಗಳಿಗೆ ಸಿಟಿ ಬಸ್ ಮತ್ತು ಮಂಗಳೂರು, ಪುತ್ತೂರು, ಬೆಂಗಳೂರಿನ ನಡುವೆ ಹೆಚ್ಚುವರಿಯಾಗಿ ಐದು ಸ್ಲೀಪರ್ ಕೋಚ್ ಬಸ್ ಗಳನ್ನು ಆರಂಭಿಸಲಿದ್ದು, ಇದರಲ್ಲಿ ಒಂದು ವಿಟ್ಲದ ಮಾರ್ಗವಾಗಿ ಪುತ್ತೂರು ಮೂಲಕ ಬೆಂಗಳೂರಿಗೆ ತಲುಪುವಂತೆ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದರು.

ಹೆಬ್ರಿಯಲ್ಲಿ ಅಪಾಯಕಾರಿ ಮರಗಳು ತೆರವು

ಹೆಬ್ರಿ: ಮಳೆಯ ತೀವ್ರತೆಯಿಂದಾಗಿ ರಸ್ತೆಗೆ ಬೀಳುವಂತಿದ್ದ ಹೆಬ್ರಿ ಮತ್ತು ಸೋಮೇಶ್ವರ ನಡುವಿನ ಬಂಡಿಮಠ ಪ್ರದೇಶದಲ್ಲಿದ್ದ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಯಿತು. ಜೊತೆಗೆ ಕೆಲವು ಮರಗಳು ಈಗಾಗಲೇ ಗಾಳಿ ಮಳೆಗೆ ಬಿದ್ದು ವಿದ್ಯುತ್ ತಂತಿಗಳು ಹಾಳಾಗಿದ್ದರ ಪರಿಣಾಮ ಅವುಗಳ ಬದಲಾವಣೆಯನ್ನು ಸಹ ಮಾಡಲಾಯಿತು. ಈ ಕಾರಣದಿಂದ ಜುಲೈ 15ರಂದು ಈ ಮಾರ್ಗದ ಸಂಚಾರವನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಹೆಬ್ರಿಯಿಂದ ಕುಚ್ಚಾರುಮಂಡಿ, ಮೂರ್ ಕೈ ಮಡಾಮಕ್ಕಿ ಸೋಮೇಶ್ವರದ ಮೂಲಕ ಆಗುಂಬೆಗೆ ತೆರಳಲು ಹೇಳಲಾಗಿತ್ತು. ಇದೇ ರೀತಿ ಹೆಬ್ರಿಯ ಸುತ್ತಮುತ್ತಲಿನ ಕೆಳಭಾಗದಲ್ಲಿ ಕುಸಿತ ಕಂಡಿರುವ ಅಪಾಯಕಾರಿ ಮರಗಳನ್ನೆಲ್ಲ ತೆರವುಗೊಳಿಸಿ ಸಂಚರಿಸುವಾಗ ಉಂಟಾಗಬಹುದಾದ ಅಪಘಾತಗಳನ್ನು ತಡೆಗಟ್ಟಿ ಎಂದು ಸ್ಥಳೀಯರು ಸಂಬಂಧಿತ ವ್ಯಕ್ತಿಗಳಿಗೆ ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.