Categories
ಕಾರ್ಕಳ

ಪತ್ರಿಕೆ ಓದುವುದು ದೃಷ್ಟಿಕೋನ ವಿಸ್ತಾರಕ್ಕೆ ದಾರಿ” – ಡಾ. ಮಹಾಬಲೇಶ್ವರ ರಾವ್

ಪತ್ರಿಕೆ ಓದುವುದು ದೃಷ್ಟಿಕೋನ ವಿಸ್ತಾರಕ್ಕೆ ದಾರಿ” – ಡಾ. ಮಹಾಬಲೇಶ್ವರ ರಾವ್
* ವಿದ್ಯಾರ್ಥಿಗಳ ಬುದ್ಧಿವಿಕಾಸಕ್ಕೆ ಪತ್ರಿಕೆ ಓದುವ ಅಭ್ಯಾಸ ಅಗತ್ಯ
* ನೈತಿಕತೆ ಮತ್ತು ಜವಾಬ್ದಾರಿಯಿಂದ ಮಾಧ್ಯಮಗಳು ಸಮಾಜಕ್ಕೆ ಸೇವೆ ಸಲ್ಲಿಸಬೇಕು

NAMMUR EXPRESS NEWS
ಕಾರ್ಕಳ: ವಿದ್ಯಾರ್ಥಿಗಳು ಪ್ರತಿದಿನ ವಿವಿಧ ಪ್ರಕಾರದ ಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಬುದ್ಧಿವಿಕಾಸ ಹಾಗೂ ಸಮಾಜದ ವಿಷಯಗಳಲ್ಲಿ ಗಾಢ ಅರಿವು ಪಡೆದುಕೊಳ್ಳಬೇಕು ಎಂದು ಉಡುಪಿ ಟಿ.ಎಂ.ಎ. ಪೈ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಹೇಳಿದರು.
ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಕಾಲೇಜಿನ ‘ಸಪ್ತಸ್ವರ ವೇದಿಕೆ’ಯಲ್ಲಿ ಆಯೋಜಿತ 2025ರ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

“ಒಂದೇ ಪತ್ರಿಕೆಯಲ್ಲಿ ಸೀಮಿತವಾಗದೇ, ಐದು ಅಥವಾ ಹೆಚ್ಚು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪತ್ರಿಕೆಗಳನ್ನು ಓದಿದರೆ ದೈನಂದಿನ ಸುದ್ದಿಗಳನ್ನು ವಿವಿಧ ದೃಷ್ಟಿಕೋನಗಳಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೆ, ಕ್ರೀಡೆ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಕಲೆ-ಸಾಹಿತ್ಯ, ಪರಿಸರ ಮತ್ತು ಆರ್ಥಿಕ ವಿಷಯಗಳ ಅಧ್ಯಯನದ ಮೂಲಕ ವಿಶ್ಲೇಷಣಾತ್ಮಕ ಚಿಂತನೆಯು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಅವರು ಮುಂದುವರೆದು, “ಭಾವೋದ್ವೇಗಾತ್ಮಕ ಅಥವಾ ಸೆನ್ಸೇಷನಲ್ ಸುದ್ದಿಗಳಿಗಿಂತ, ನೈಜ, ಮೌಲ್ಯಾಧಾರಿತ ಮತ್ತು ವಿಶ್ಲೇಷಣಾತ್ಮಕ ಸುದ್ದಿಗಳತ್ತ ಗಮನ ಹರಿಸುವುದು ಜ್ಞಾನವರ್ಧನೆಗೆ ಸಹಕಾರಿಯಾಗಿದೆ” ಎಂದು ತಿಳಿಸಿದರು.
ಮಾಧ್ಯಮದ ನೈತಿಕ ಬದ್ಧತೆ ಕುರಿತು ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಅಶ್ವಥ್ ಎಸ್.ಎಲ್. ಮಾತನಾಡಿ, “ನೈತಿಕತೆ ಮತ್ತು ಸಮಾಜದ ಪರ ಬದ್ಧತೆಯನ್ನು ಹೊಂದಿದಾಗ ಮಾತ್ರ ಮಾಧ್ಯಮಗಳು ನ್ಯಾಯ, ಸತ್ಯ ಮತ್ತು ಸಮಾನತೆಯ ಸಾಧನಗಳಾಗಿ ಪರಿಣಮಿಸಬಲ್ಲವು,” ಎಂದರು.
“ಲೋಕಜಾಗೃತಿಗೆ ಮಾಧ್ಯಮಗಳು ಶಕ್ತಿಯಾಗಬೇಕು. ಭಯ ಹರಡುವ ಜಾಲ ಮಾಧ್ಯಮಗಳ ಪ್ರವೃತ್ತಿ ವಿರೋಧವಾಗಿದೆ,” ಎಂದು ಹೇಳಿದರು.

ಕಾರ್ಕಳ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಅವರು ಪತ್ರಿಕೆ ಓದುವುದರಿಂದ ಕನ್ನಡ ಭಾಷೆಯ ಬಳಕೆ ಮತ್ತು ಬರವಣಿಗೆಯ ಗುಣಮಟ್ಟ ಉತ್ತಮವಾಗುತ್ತದೆ ಎಂಬದೊಂದಿಗೆ “ಸಾಮಾಜಿಕ ಮಾಧ್ಯಮದಲ್ಲಿ ಬರುವ ಜಾಹೀರಾತುಗಳಿಗೆ ನಂಬಿಕೆ ಇಡುವ ಪರಿಣಾಮ, ಅಪರಾಧಗಳು ಹೆಚ್ಚಾಗುತ್ತಿರುವುದು ಗಂಭೀರ ವಿಷಯವಾಗಿದೆ. ಇಂತಹ ಸಮಯದಲ್ಲಿ ಪತ್ರಿಕೆಗಳು ಸಂಪೂರ್ಣ ಮಾಹಿತಿಯ ಮೂಲಕ ವಿದ್ಯಾರ್ಥಿಗಳ ಜೀವನ ರೂಪಿಸಬಹುದು,” ಎಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್, ಪತ್ರಿಕೆಗಳು ನಾಡು, ನುಡಿ ಮತ್ತು ಸಂಸ್ಕೃತಿಯ ಉಳಿವಿಗೆ ಮತ್ತು ಬೆಳವಣಿಗೆಗೆ ಪ್ರಭಾವ ಬೀರುತ್ತವೆ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕ ಸದಾನಂದ ಪಾಟ್ಕರ್ ತೆಳ್ಳಾರು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಹರೀಶ್ ಆಚಾರ್ಯ, ಕೋಶಾಧಿಕಾರಿ ಕೆ.ಎಂ. ಖಲೀಲ್, ಜಿಲ್ಲಾ ಪ್ರತಿನಿಧಿ ಉದಯ್ ಕುಮಾರ್ ಮುಂಡ್ಕೂರು, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಮೇಶ್ ಮಾರ್ಪಳ್ಳಿ ಹಾಜರಿದ್ದರು. ಹಿರಿಯ ಪತ್ರಕರ್ತ ವಾಸುದೇವ ಭಟ್ ಕಾರ್ಯಕ್ರಮಕ್ಕೆ ಸ್ವಾಗತ ಹೇಳಿದರು. ಉಪನ್ಯಾಸಕಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು ಮತ್ತು ಅವಿನ್ ಶೆಟ್ಟಿ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.