Categories
ಕುಂದಾಪುರ

ಕುಂದಾಪುರ: ಮೂವರು ನಕ್ಸಲರು ನ್ಯಾಯಾಲಯಕ್ಕೆ ಹಾಜರು!

* ಕುಂದಾಪುರ: ಮೂವರು ನಕ್ಸಲರು ನ್ಯಾಯಾಲಯಕ್ಕೆ ಹಾಜರು!
* ಬೈಂದೂರು: ಅಕ್ಕಿ ಮಿಲ್ ಶೆಡ್ ನಲ್ಲಿ ವ್ಯಕ್ತಿ ಶವ ಪತ್ತೆ
* ಉಡುಪಿ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ವ್ಯಕ್ತಿ ವಿರುದ್ಧ ಕೇಸ್
* ಕುಂದಾಪುರ: ಬಿದ್ಕಲ್ ಕಟ್ಟೆಯಲ್ಲಿ ರಾತ್ರಿ ಕಾರಲ್ಲಿ ದನ ಕಳ್ಳತನ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ಶಂಕರನಾರಾಯಣ, ಅಮಾಸೆಬೈಲು ಮತ್ತು ಕೊಲ್ಲೂರು ಪೊಲೀಸ್ ಠಾಣೆಯ ವ್ಯಾಪ್ತಿಗೆ ಸಂಬಂಧಿಸಿದ, ನಕ್ಸಲ್ ಚಟುವಟಿಕೆಗಳ ವಿಚಾರವಾಗಿ ಕೇರಳ ಮತ್ತು ಬೆಂಗಳೂರುಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೂವರು ನಕ್ಸಲರನ್ನು ಕುಂದಾಪುರ ನ್ಯಾಯಾಲಯವು ಖುದ್ದು ಹಾಜರಿಪಡಿಸುವಂತೆ ಹೇಳಿರುವ ಹಿನ್ನೆಲೆಯಲ್ಲಿ, ಕಳೆದೆರಡು ದಿನಗಳ ಹಿಂದೆ ಆಯಾ ಪೊಲೀಸ್ ಠಾಣೆಯ ಪೊಲೀಸರು ನಕ್ಸಲರನ್ನು ಹಾಜರುಪಡಿಸಿದರು. ನಕ್ಸಲರಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಇರುವ ಪ್ರಕರಣಗಳ ಕುರಿತು ವಿಚಾರಣೆ ನಡೆಯುತ್ತಿದ್ದು, ಕುಂದಾಪುರ ಉಪ ವಿಭಾಗ ವ್ಯಾಪ್ತಿಗೆ ಬರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಪ್ರಾಸಿಕ್ಯೂಷನ್ ಗೆ ಮುಂದಿನ ದಿನಾಂಕವನ್ನು ಸಹ ನಿಗದಿಪಡಿಸಲು ಸಂಬಂಧಿತ ವ್ಯಕ್ತಿಗಳಿಗೆ ನ್ಯಾಯಾಲಯ ಆದೇಶವನ್ನು ನೀಡಿದೆ ಎನ್ನಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಕೇರಳದ ವೀಯೂರು ಸೆರೆಮನೆಯಲ್ಲಿರುವ ಜಿ.ಬಿ.ಕೃಷ್ಣಮೂರ್ತಿ, ಸಾವಿತ್ರಿಯನ್ನು ಹಾಗೂ ಬೆಂಗಳೂರಿನ ಕಾರಾಗೃಹದಲ್ಲಿರುವ ವನಜಾಕ್ಷಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರ ಮುಂದೆ ಹಾಜರುಪಡಿಸಲಾಯಿತು. ಈಗಾಗಲೇ ಜೈಲಿನಲ್ಲಿದ್ದು, ವಿಚಾರಣೆಯನ್ನು ಎದುರಿಸುತ್ತಿರುವ ತೊಂಭಟ್ಟು ಲಕ್ಷ್ಮೀ ಕನ್ಯಾಕುಮಾರಿ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರೆ, ಜಾಮೀನು ಪಡೆದು ಹೊರಗಿರುವ ನೀಲಗುಳಿ ಪದ್ಮನಾಭ ವಿಚಾರಣೆಯ ವೇಳೆ ಸ್ವತಃ ನ್ಯಾಯಾಲಯದಲ್ಲಿ ಹಾಜರಿದ್ದರು ಎನ್ನಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್ ಅವರ ಮಾರ್ಗದರ್ಶನವನ್ನು ಪಡೆದು, ಕುಂದಾಪುರದ ಡಿವೈಎಸ್ ಪಿ ಎಚ್. ಡಿ. ಕುಲಕರ್ಣಿ ಅವರು ಈ ತನಿಖೆಯ ಉಸ್ತುವಾರಿಯನ್ನು ವಹಿಸಿದ್ದು, ನ್ಯಾಯಾಲಯದಲ್ಲಿನ ವಿಚಾರಣೆಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೂವರನ್ನೂ ಪುನಃ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಉಪ ವಿಭಾಗ ವ್ಯಾಪ್ತಿಯ ಪೊಲೀಸರು, ಕೇರಳ ಮತ್ತು ಬೆಂಗಳೂರು ಪೊಲೀಸರು, ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರದ ಅಭಿಯೋಜಕಿ ಇಂದಿರಾ ನಾಯ್ಕ ಅವರು ಪಾಲ್ಗೊಂಡಿದ್ದರು.

ಬೈಂದೂರು: ಭದ್ರಾವತಿಯ ಅರಳಹಳ್ಳಿ ಮೂಲದವರಾದ, ರಾಮಸ್ವಾಮಿ ಎಂಬ ಅರವತ್ತು ವರ್ಷದ ವ್ಯಕ್ತಿಯು ಕೊಲ್ಲೂರು ಸಮೀಪದ ಬೆಳ್ಳಾಲ ಗ್ರಾಮದ ನಿವಾಸಿಯಾಗಿದ್ದು, ಏಕಾಂಗಿಯಾಗಿದ್ದು ಕೂಲಿ ಕೆಲಸವನ್ನು ಮಾಡಿಕೊಂಡು, ಕೆಲಸವಿದ್ದ ಮನೆಗಳಲ್ಲೇ ಉಳಿದುಕೊಂಡು ಜೀವನ ಸಾಗಿಸುತ್ತಿದ್ದರು.‌ ಭಾನುವಾರದಂದು ಭಾಸ್ಕರ ಎನ್ನುವವರ ಅಂಗಡಿಗೆ ಬಂದು, ತಿಂಡಿ ತೆಗೆದುಕೊಂಡು ಹೋದವರು ಕೊನೆಗೆ ಯಾರ ಕಣ್ಣಿಗೂ ಕಾಣಿಸಲಿಲ್ಲ. ಈಗ ಅವರು ಮೂಡಮಂದ ಕಾಳಿಂಗ ಜಡ್ಡು ಗ್ರಾಮದ ದಿವಂಗತ ವಿನೋದ್ ಕುಮಾರ್ ಎನ್ನುವವರಿಗೆ ಸಂಬಂಧಿಸಿದ, ಪಾಳುಬಿದ್ದಿದ್ದ ಅಕ್ಕಿ ಮಿಲ್ ಶೆಡ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಲಗಿದಲ್ಲೇ ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕರಾದ ಹುಸೇನ್ ಸಾಬ ಕಾಶಿಮ ಸಾಬ ಚಪ್ಪರಕ್ಕರ ಅವರು ತಮ್ಮ ಸಿಬ್ಬಂದಿಗಳ ಜೊತೆಗೆ ಕರಾವಳಿಯ ಬೈಪಾಸ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ, ಅಂಬಲಪಾಡಿ ಕಡೆಯಿಂದ ಬರುತ್ತಿದ್ದ ಕುರಿಯನ್ ಎಂಬಾತ ಸೀಟ್ ಬೆಲ್ಟ್ ಹಾಕಿಕೊಳ್ಳದೆ, ವಾಹನವನ್ನು ಚಲಿಸುತ್ತಿದ್ದುದನ್ನು ಕಂಡ ಪೊಲೀಸರು ಆತನ ಕಾರನ್ನು ಅಡ್ಡಗಟ್ಟಿ ವಿಚಾರಿಸಿದ್ದಾರೆ. ಆಗ ಕುರಿಯನ್ ತಾನು ಸೀಟ್ ಬೆಲ್ಟ್ ಧರಿಸುವುದಿಲ್ಲ ಎಂದು ಉದ್ಧಟತನ ತೋರಿದ್ದಾನೆ. ಪೊಲೀಸರು ಕಾರನ್ನು ಮುಂದಕ್ಕೆ ಚಲಿಸಿದಂತೆ ತಡೆಹಿಡಿದು, ಕಾರಿನ ದಾಖಲಾತಿಯನ್ನು ತೋರಿಸುವಂತೆ, ಬಳಿಕ ಸಹಿ ಹಾಕುವಂತೆ ಪೊಲೀಸರು ಆದೇಶಿಸಿದಾಗ ಕುರಿಯನ್ ದಾಖಲಾತಿ ತೋರಿಸುವುದಿಲ್ಲ ಎಂದು ದರ್ಪದಿಂದ ವರ್ತಿಸಿದ್ದಾನೆ. ಆಗ ಪೊಲೀಸರು ತಾವೇ ಖುದ್ದಾಗಿ ಕಾರಿನೊಳಗೆ ಪರಿಶೀಲಿಸಿ, ಪ್ರಮಾಣ ಪತ್ರವನ್ನು ಕೈಗೆ ತೆಗೆದುಕೊಂಡಾಗ ಪ್ರಮಾಣ ಪತ್ರವನ್ನು ಕಿತ್ತುಕೊಳ್ಳಲು ಮತ್ತು ಪೊಲೀಸರ ಮೇಲೆ ದಾಳಿ ನಡೆಸಲು ಕುರಿಯನ್ ಪ್ರಯತ್ನಿಸಿದ್ದಾನೆ. ಕರ್ತವ್ಯಕ್ಕೆ ಅಡ್ಡಿಪಡಿಸಿದರ ಪರಿಣಾಮವಾಗಿ ಕುರಿಯನ್ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಬಿದ್ಕಲ್ ಕಟ್ಟೆಯಲ್ಲಿ ರಾತ್ರಿ ಕಾರಲ್ಲಿ ದನ ಕಳ್ಳತನ!

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರದ ಬಿದ್ಕಲ್ ಕಟ್ಟೆಯಲ್ಲಿ ಗೋ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿಗೆ ಕಾರಿನಲ್ಲಿ ದನ ಕಳ್ಳತನ ಹೆಚ್ಚಾಗುತ್ತಿದೆ. ಈ ಬಗ್ಗೆ ಪೊಲೀಸರು ಗಮನವಹಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.