ಶೃಂಗೇರಿ 100 ಬೆಡ್ ಆಸ್ಪತ್ರೆಗೆ ಶಂಕು ಸ್ಥಾಪನೆ!
– ತಾಲೂಕಿನ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತದ 37 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
* 5 ವರ್ಷಗಳ ಹೋರಾಟಕ್ಕೆ ಸಂದ ಜಯ: ಸಹಕರಿಸಿದ ಜನತೆ ಧನ್ಯವಾದ ತಿಳಿಸಿದ ಸಮಿತಿ
NAMMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಜನರ ಹಲವು ವರ್ಷಗಳ ಬೇಡಿಕೆ,ಅನೇಕ ಹೋರಾಟಗಳ ಫಲ ಕೊನೆಗೂ ಶೃಂಗೇರಿ 100 ಬೆಡ್ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗೆ ಶಂಕಸ್ಥಾಪನೆ ನರವೇರಿದೆ.
ರಾಜ್ಯಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಮಂಗಳವಾರ ಆಸ್ಪತ್ರೆಗೆ ನಿಗದಿಯಾದ ತಾಲೂಕಿನ ಅಡ್ಡಗದ್ದೆ ಗ್ರಾ ಪಂ ವ್ಯಾಪ್ತಿಯ ಬೆಳಂದೂರು ಗ್ರಾಮದ ಹೊನ್ನವಳ್ಳಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ತಾಲೂಕಿನ ಜನರ ಬಹು ದಿನಗಳ ಕನಸು ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಜೀವ ಬಂದಂತಾಗಿದೆ. 37 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯು ತಾಲೂಕಿನ ಇತಿಹಾಸದಲ್ಲೇ ಅತಿದೊಡ್ಡ ಯೋಜನೆಯಾಗಿದೆ. ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ,ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್,ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,ಕಾ ಡಾ ನಿಗಮದ ಅಧ್ಯಕ್ಷ ಡಾ ಅಂಶುಮಂತ್ ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಡಿ ಸಿ ಮೀನಾ ನಾಗರಾಜ್,ಎಸ್ ಪಿ ವಿಕ್ರಂ ಆಮ್ಟೆ,ಕಾಂಗ್ರೆಸ್ನ ತಾಲೂಕು ಅಧ್ಯಕ್ಷರಾದ ರಮೇಶ್ ಭಟ್,ಮುಖಂಡರಾದ ಮಾರನಕೊಡಿಗೆ ನಟರಾಜ್, ಹಲವು ಕಾಂಗ್ರೆಸ್ ಕಾರ್ಯಕರ್ತರು,ಸಾರ್ವಜನಿಕರು ಭಾಗವಹಿಸಿದ್ದರು.
* ಆದಷ್ಟು ಬೇಗ ಕಾಮಗಾರಿ ಪೂರ್ಣ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಶಂಕುಸ್ಥಾಪನೆ ನೆರವೇರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಲವಾರು ಕಾರಣಗಳಿಂದ ಆಸ್ಪತ್ರೆ ಕಾಮಗಾರಿ ಪ್ರಾರಂಭ ಬಹಳಷ್ಟು ವಿಳಂಭವಾಗಿದ್ದು ಆದಷ್ಟು ಬೇಗನೇ ಕಾಮಗಾರಿ ಪೂರ್ಣಗೊಳ್ಳಲಿದೆ. ಅರಣ್ಯ ಇಲಾಖೆ ಯೋಜನೆಗಳ ಕಾರಣದಿಂದ ಜಾಗ ಗುರುತಿಸುವಿಕೆ ವಿಳಂಬವಾಗಿದ್ದು ಇನ್ನೂ ವಿಳಂಬ ಆಗದಂತೆ ಕ್ರಮ ವಹಿಸಲು ಎಲ್ಲರಿಗೂ ಸೂಚಿಸಿದ್ದೇನೆ. ಹಾಗೆಯೇ ಬಾಳೆಹೊನ್ನೂರಿಗೆ 50 ಬೆಡ್ ಆಸ್ಪತ್ರೆ ಮಂಜೂರಾತಿಗೆ ಕೋರಿದ್ದಾರೆ ಆದರೆ ಈಗ ತಕ್ಷಣವೇ ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ಅವರ ಈ ಬೇಡಿಕೆಯನ್ನು ಸಹ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.
* ಇದು 100 ಆಸ್ಪತ್ರೆ ಹೋರಾಟ ಸಮಿತಿಯ ಕೊಡುಗೆ – ಶಾಸಕ ಟಿ ಡಿ ರಾಜೇಗೌಡ
ನೂರು ಬೆಡ್ ಆಸ್ಪತ್ರೆ ಇದು ಬಹಳ ವರ್ಷಗಳಿಂದ ಶೃಂಗೇರಿ ಜನರ ಬಹುಬೇಡಿಕೆಯ ಕೂಗಾಗಿತ್ತು, ಈಗ ಶಂಕುಸ್ಥಾಪನೆ ನೆರವೇರಿದ್ದು ಆದಷ್ಟು ಬೇಗನೇ ಆಸ್ಪತ್ರೆ ನಿರ್ಮಾಣ ಕಾರ್ಯ ಆಗಲಿದೆ. ಈ ಸಂಬಂಧ ಆರೋಗ್ಯ ಸಚಿವರು ಹಾಗೂ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಈ ಹೋರಾಟಕ್ಕೆ ಪ್ರಮುಖವಾಗಿ 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿಯವರ ಕೊಡುಗೆ ಇದ್ದು, ಸಮಿತಿಯ ಹಲವು ವರ್ಷಗಳ ನಿಷ್ಪಕ್ಷಪಾತ ಹೋರಾಟದಿಂದ ನಾವು ಸಹ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಅವರ ಹೋರಾಟಕ್ಕೆ ಇಂದು ಜಯ ಸಿಕ್ಕಿದ್ದು ಆಸ್ಪತ್ರೆ ಶಂಕುಸ್ಥಾಪನೆ ಪ್ರಾರಂಭವಾಗಿದೆ. ಅವರಿಗೂ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದು ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಹೇಳಿದರು.
* ಸೂಪರ್ ಫಾಸ್ಟ್ ಕಾಮಗಾರಿ ನಡೆಸಿ,ಈಗಿರುವ ಆಸ್ಪತ್ರೆಗೆ ಅಗತ್ಯ ವೈದ್ಯರನ್ನು ನೇಮಿಸಿ
ಇದೇ ಸಂದರ್ಭದಲ್ಲಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ವತಿಯಿಂದ, ಈಗಾಗಲೇ ಯೋಜನೆ ತೀವ್ರ ವಿಳಂಬವಾಗಿದ್ದು, ಅನಿವಾರ್ಯತೆಯನ್ನು ಮನಗಂಡು ಸೂಪರ್ ಫಾಸ್ಟ್ ಕಾಮಗಾರಿ ನಡೆಸಬೇಕು ಹಾಗೂ ಈಗಿರುವ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರು ಸಹಿತ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದು ತುರ್ತಾಗಿ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವರ ಬಳಿ ಮನವಿ ಮಾಡಲಾಯಿತು. ಮನವಿ ಸ್ವೀಕರಿಸಿದ ಆರೋಗ್ಯ ಸಚಿವರು ಕಾಮಗಾರಿ ತೀವ್ರಗತಿಗೆ ತಿಳಿಸಿದ್ದು ವೈದ್ಯರ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ರಂಜಿತ್ ಶೃಂಗೇರಿ, ಆದರ್ಶ ಕಾಂಚಿನಗರ, ಅಭಿಲಾಷ್ ಹೆಗ್ಗಡೆ, ಪ್ರವೀಣ್, ಚೇತನ್ ಗೌಡ, ದೇವರಾಜ್, ಅನಿರುದ್ಧ, ಸಾಯಿಪ್ರಕಾಶ್ ಹಾಗೂ ಇತರರು ಇದ್ದರು.
* 5 ವರ್ಷಗಳ ನಿರಂತರ ಹೋರಾಟ,ಸಹಕರಿಸಿದ ಜನತೆಗೆ ಧನ್ಯವಾದ – ಆಸ್ಪತ್ರೆ ಹೋರಾಟ ಸಮಿತಿ
ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಾಲೂಕಿನ ಜನರ ಹಲವು ವರ್ಷಗಳ ಬೇಡಿಯಾಗಿದ್ದ ಸುಸಜ್ಜಿತ 100 ಬೆಡ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಯೋಜನೆ ಜಾರಿಯಾದ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ, 13 ವರ್ಷಗಳಿಂದ ಧೂಳು ಹಿಡಿದು ಮೂಲೆಯಲ್ಲಿ ಬಿದ್ದಿದ್ದ ಫೈಲನ್ನು ಮತ್ತೆ ಮುನ್ನೆಲೆಗೆ ತಂದು ತಾಲೂಕಿನ ಜನತೆಗೆ ಅವಶ್ಯಕವಾಗಿರುವ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕೆಂದು ತಾಲೂಕಿನ ಸಮಾನ ಮನಸ್ಕ ಯುವಕರೆಲ್ಲರೂ ಸೇರಿ ಸುಸಜ್ಜಿತ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಎಂಬ ತಂಡವನ್ನು ರಚಿಸಿಕೊಂಡು ಕಳೆದ 5 ವರ್ಷಗಳಿಂದ ಪತ್ರ ಚಳುವಳಿ,ಶೃಂಗೇರಿ ಬಂದ್,ಅಹೋರಾತ್ರಿ ಧರಣಿ ಸತ್ಯಾಗ್ರಹ,ಕೊಪ್ಪ ಚಲೋ,ಬ್ಯಾನರ್ ಅಭಿಯಾನಗಳು,ಹತ್ತಾರು ಪ್ರತಿಭಟನೆಗಳು,ಮುತ್ತಿಗೆಗಳಂತಹ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬಂದು,ಸಮಿತಿಯ ಎಲ್ಲಾ ಹೋರಾಟಗಳಿಗೂ ತಾಲೂಕಿನ ಜನತೆ ಬೆಂಬಲ ನೀಡಿತ್ತು. ಈ ಎಲ್ಲಾ ಹೋರಾಟದ ಫಲವಾಗಿ ಹಿಂದಿನ ಬಸವರಾಜ್ ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್ನಲ್ಲಿ ಆಸ್ಪತ್ರೆ ನಿರ್ಮಾಣದ ಘೋಷಣೆಯಾಗಿ,ಅನುದಾನದ ಘೋಷಣೆ ಕೂಡ ಆಗಿತ್ತು. ನಂತರ ಫಾರೆಸ್ಟ್ ಹಾಗೂ ಕಂದಾಯ ಇಲಾಖೆಯ ಅನೇಕ ತೊಡಕುಗಳಿಂದ ಆಸ್ಪತ್ರೆ ನಿರ್ಮಾಣ ವಿಳಂಬವಾಗಿತ್ತು. ನಂತರ ಬದಲಾದ ಸರ್ಕಾರ ಜನಪ್ರತಿನಿಧಿಗಳು,ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ವಿಳಂಬ ಮುಂದುವರೆಯಿತು. ಇಷ್ಟೆಲ್ಲಾ ತೊಡಕುಗಳ ಮಧ್ಯೆ ತನ್ನ ನಿರಂತರ ಪ್ರಯತ್ನವನ್ನು ಮುಂದುವರೆಸಿದ ಆಸ್ಪತ್ರೆ ಹೋರಾಟ ಸಮಿತಿಯು ಬೆಂಬಿಡದೇ ಹೋರಾಟ ನಡೆಸಿ ಜನಪ್ರತಿನಿಧಿಗಳು,ಅಧಿಕಾರಿಗಳು,ಸರ್ಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಯಾದರು.ಇದರ ಪ್ರತಿಫಲವಾಗಿ ಆಸ್ಪತ್ರೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದೆ. ಇದಕ್ಕಾಗಿ 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿಯು ಸಹಕರಿಸಿದ ಜನತೆಗೆ ಧನ್ಯವಾದಗಳನ್ನು ತಿಳಿಸಿದೆ.
