Categories
ಮಲ್ನಾಡ್

ಮಳೆಗಾಗಿ ಆಕಾಶದತ್ತ ಮುಖ ಮಾಡುತ್ತಿರುವ ರೈತರು

ಮಳೆಗಾಗಿ ಆಕಾಶದತ್ತ ಮುಖ ಮಾಡುತ್ತಿರುವ ರೈತರು
– ಬಿಸಿಲಿನ ತಾಪಕ್ಕೆ ಒಣಗಿನಿಂತ ಭತ್ತದ ಗದ್ದೆ
– ನಷ್ಟದ ಸ್ಥಿತಿ: ಸಂಕಷ್ಟದಲ್ಲಿ ಮಲೆನಾಡಿನ ರೈತಾಪಿ ಜನತೆ

NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಮಳೆ ಬರದೆ ರೈತರು ಸಂಕಷ್ಟಕೀಡಾಗಿದ್ದಾರೆ. ಬೆಳೆದ ಬೆಳೆಗಳಿಗೆ ನೀರಿಲ್ಲದೆ ಭತ್ತದ ಗದ್ದೆಗಳು, ಕಾಫಿ ತೋಟಗಳು ಒಣಗುತ್ತಿವೆ. ಬರದ ಛಾಯೆ ಢಾಳಾಗಿಯೇ ಗೋಚರಿಸುತ್ತಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಶೇ 62ರಷ್ಟು ಮಳೆ ಕೊರತೆಯಾಗಿದ್ದರೆ, ಆಗಸ್ಟ್ ತಿಂಗಳಿನಲ್ಲಿ ಶೇ 88ರಷ್ಟು ಮಳೆಯೇ ಆಗಿಲ್ಲ. ಇದರಿಂದ ಮಲೆನಾಡಿನ ರೈತಾಪಿ ಜನತೆ ಕಂಗಾಲಾಗಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಮನೆಯಿಂದ ಹೊರಬಾರದಷ್ಟು ಮುಂಗಾರು ಮಳೆ ಬರುತ್ತಿತ್ತು ಆದರೆ ಈ ಬಾರಿ ಮಳೆ ಕೊರತೆಯಿದ್ದು ಬೇಸಿಗೆಯನ್ನು ಮೀರಿಸುವಂತಹ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಕೃಷಿಕರು ಇನ್ನಿಲ್ಲದಂತೆ ಹೈರಾಣಾಗುತ್ತಿದ್ದಾರೆ.

ರೈತರು ತಮ್ಮ ಗದ್ದೆಗಳಲ್ಲಿ ಭತ್ತ ಬಿತ್ತನೆ ಮಾಡಿದ್ದು ಮಳೆ ಇಲ್ಲದೇ ಭತ್ತದ ಗಿಡಗಳು ಒಣಗುತ್ತಿದೆ. ಇರುವ ಫಸಲನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬೆಳೆಗಾರರದ್ದು. ಇದರಿಂದ ಬಹುತೇಕ ಮಂದಿ ಸಾಲ ಮಾಡುವ ಸ್ಥಿತಿ ಎದುರಾಗಿದೆ.
‘ಮಳೆಯ ಕಣ್ಣಾಮುಚ್ಚಾಲೆಯಿಂದ ಯೋಜಿತ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲು ಸಾಧ್ಯವಾಗಿಲ್ಲ. ಜುಲೈ ತಿಂಗಳಿನಲ್ಲಿ ಒಂದು ವಾರ ಮಳೆ ಸುರಿದಿದ್ದನ್ನು ಹೊರತುಪಡಿಸಿದಂತೆ ಸರಿಯಾಗಿ ಮಳೆಯಾಗಲಿಲ್ಲ. ಇರುವ ನೀರಿನ ಸೌಲಭ್ಯದೊಂದಿಗೆ ಭತ್ತದ ಕೃಷಿ ಮಾಡಿದವರ ಗದ್ದೆ ಬಿಸಿಲಿನ ತಾಪಕ್ಕೆ ಒಣಗುತ್ತಿದೆ. ಲಾಭದಾಯಕ ದೃಷ್ಟಿಯಿಂದ ಭತ್ತದ ಕೃಷಿಯಿಂದ ಹಿಂದೆ ಸರಿಯುತ್ತಿರುವ ರೈತರಿಗೆ ಇಂತಹ ಪರಿಸ್ಥಿತಿಯಿಂದ ಇನ್ನೂ ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ.

ನಗರಕ್ಕೆ ಮಳೆ ಸಿಂಚನ: ತಾಲೂಕಲ್ಲಿ ಮಳೆ ಇಲ್ಲ!
– ಹೀಗೆ ಆದ್ರೆ ಕಥೆ ಏನು ಮಾರಾಯ್ರೆ?
– ಈ ವಾರ ಮಳೆ ಬರುತ್ತಾ?

ಶಿವಮೊಗ್ಗ: ನಗರದ ವಿವಿಧೆಡೆ ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಗಿದೆ. ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಮಳೆ ತುಸು ನಮ್ಮದಿ ನೀಡಿದೆ. ಮಳೆ ಇಲ್ಲದೆ ನೆತ್ತಿ ಸುಡುವ ಬಿಸಿಲಿನಿಂದಾಗಿ ಜನರು ಹೈರಾಣಾಗಿದ್ದರು. ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ನಗರದ ಹಲವು ಕಡೆ ಮಳೆಯಾಗಿದೆ. ಕೆಲವು ಕಡೆ ಚದುರಿದಂತೆ ಮಳೆಯಾಗಿದೆ. ಆದರೆ ತೀರ್ಥಹಳ್ಳಿ ತಾಲ್ಲೂಕಿನ ಕೆಲವೆಡೆ ಮೋಡ ಕವಿದ ವಾತಾವರಣ ವಿದ್ದರೂ ತಾಲೂಕಿನಾದ್ಯಂತ ಮಳೆಯಾಗಿಲ್ಲ. ಈ ವಾರ ಆದರೂ ಮಳೆ ಬರುತ್ತಾ ಎಂಬ ನಿರೀಕ್ಷೆಯಲ್ಲಿದ್ದಾರೆ ಜನ.

ಇದನ್ನೂ ಓದಿ : ಇಸ್ರೋದಿಂದ ‘ಸೂರ್ಯಯಾನ’ ಆದಿತ್ಯ ಎಲ್ -1 ಉಡಾವಣೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.